ಗೃಹ ಇಲಾಖೆಯನ್ನು ನಡೆಸಲು ಪ್ರಿಯಾಂಕ್ ಖರ್ಗೆ Unfit ಎಂದು ಕೇಂದ್ರ ಸಚಿವ ಹಾಗೂ ಜೆಡಿಎಸ್ ಪಕ್ಷದ ರಾಜ್ಯಾಧ್ಯಕ್ಷ ಹೆಚ್.ಡಿ. ಕುಮಾರಸ್ವಾಮಿ ಅವರು ಆಕ್ರೋಶ ವ್ಯಕ್ತಪಡಿಸಿದರು.
ಪಕ್ಷದ ಕೇಂದ್ರ ಕಚೇರಿ ಜೆಪಿ ಭವನದಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಅವರು; ಗೃಹ ಇಲಾಖೆ ಅವರ ಕೈಯಲ್ಲಿದೆ. ಅಧಿಕಾರ ಅವರ ಕೈಯಲ್ಲೇ ಇದೆ. ಗುಪ್ತದಳವೂ ಅವರ ಬಳಿಯೇ ಇದೆ. ಆದರೆ ಪ್ರಿಯಾಂಕ್ ಖರ್ಗೆ ಸಾಕ್ಷ್ಯ ಕೊಡಿ ಎಂದು ನನ್ನನ್ನು ಕೇಳುತ್ತಿದ್ದಾರೆ. ಇಂತಹ ವ್ಯಕ್ತಿಯನ್ನು ಗೃಹ ಸಚಿವ ಎನ್ನಲು ಆಗುತ್ತದೆಯೇ? ಈ ಮನುಷ್ಯನಿಗೆ ಗೃಹ ಸಚಿವನಾಗುವುದಕ್ಕೆ ಹಾಗೂ ಅಂತಹ ಜವಾಬ್ದಾರಿಯುತ ಖಾತೆ ನಿರ್ವಹಣೆ ಮಾಡುವ ಯೋಗ್ಯತೆ ಇಲ್ಲ ಎಂದು ಕುಮಾರಸ್ವಾಮಿ ಅವರು ಹರಿಹಾಯ್ದರು.
ಸ್ಟಿಂಗ್ ಆಪರೇಷನ್ ತನಿಖೆಯ ಬಗ್ಗೆ ತಮ್ಮ ವಾಗ್ದಾಳಿಯನ್ನು ಮುಂದುವರಿಸಿದ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು; ಕೊಲೆ ನಡೆದಿದೆ, ಕೊಲೆಗಾರರನ್ನು ಬಿಟ್ಟರು, ಅದನ್ನು ಚಿತ್ರೀಕರಣ ಮಾಡಿದವರನ್ನು ಕೂಡ ಬಿಟ್ಟರು, ಕೊಲೆ ಆಗಿದೆ ಎಂದು ಕಿರುಚಿಕೊಂಡವರ ವಿರುದ್ಧ ಪೊಲೀಸರು ಪ್ರತಾಪ ತೋರಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಪ್ರಕರಣದ ಸಂತ್ರಸ್ತೆ ಕೃಪಾ ಆಳ್ವ ಅಧ್ಯಕ್ಷರಾಗಿದ್ದಾಗ ಮಕ್ಕಳ ಹಕ್ಕು ಆಯೋಗಕ್ಕೆ ಕಳಿಸಿರುವ ಈ ಮೇಲ್ ಎಲ್ಲಿ ಹೋಯಿತು? ಅದನ್ನು ಇಟ್ಟುಕೊಂಡಿದೀರಾ? ಅಥವಾ ಅಳಿಸಿ ಹಾಕಿದ್ದೀರಾ? ಈ ಮೇಲ್ ಗೂ ತನಿಖೆಗೆ ಏನು ಸಂಬಂಧ ಎಂದು ಅವರು ಕೇಳುತ್ತಿದ್ದಾರೆ. ಆಗ ಪ್ರಿಯಾಂಕ್ ಖರ್ಗೆ ಖಾತೆ ಬೇರೆ ಇತ್ತು. ಈಗ ಅವರಿಗೆ ಗೃಹ ಖಾತೆ ಕೊಡಲಾಗಿದೆ. ಆಗ ಬಂದಿದ್ದ ಈ ಮೇಲ್ ನೋಡಿದ್ದವರನ್ನೇ ತನಿಖೆ ಮಾಡಲು ಹೇಳಿ. ಅದು ನನ್ನ ಯಾವುದು ವ್ಯಾಪ್ತಿಗೆ ಬರಲ್ಲ ಎಂದರೆ ಏನರ್ಥ? ಯಾಕೆ ಬರಲ್ಲ? ಮತ್ತೆ ಇದು ಯಾರಿಗೆ ಬರುತ್ತೆ? ಆ ವ್ಯಾಪ್ತಿ ಈ ವ್ಯಾಪ್ತಿ ಯಾಕಪ್ಪಾ ಬರುತ್ತೆ? ಎಂದು ಸಚಿವರು ಪ್ರಶ್ನಿಸಿದರು.
ಈಗಾಗಲೇ ಹಲವು ಬಾರಿ ಸ್ಟಿಂಗ್ ಸೂತ್ರಧಾರರನ್ನ ಬಂಧಿಸಬೇಕು ಎಂದು ಸಿದ್ದರಾಮಯ್ಯ ಒತ್ತಾಯ ಮಾಡುತ್ತಲೇ ಇದ್ದಾರೆ. ಈ ಬಗ್ಗೆ ಅವರು ಹೈಕಮಾಂಡ್ ಮೇಲೆಯೂ ಒತ್ತಡ ಹೇರಿದ್ದಾರೆ. ಸಿದ್ದರಾಮಯ್ಯ ಅವರು ಹೇಳುತ್ತಿರುವುದನ್ನೇ ನಾನು ಕೂಡ ಹೇಳುತ್ತಿದ್ದೇನೆ. ಆದರೆ ಮುಖ್ಯಮಂತ್ರಿ ಮತ್ತು ಗೃಹ ಸಚಿವರ ಒತ್ತಡದಿಂದ ತನಿಖೆಯ ದಾರಿ ತಪ್ಪುತ್ತಿದೆ. ಪೊಲೀಸರು ಅವರ ತಾಳಕ್ಕೆ ತಕ್ಕಂತೆ ಕುಣಿಯುತ್ತಿದ್ದಾರೆ ಎಂದು ಕಿಡಿಕಾರಿದರು.
ತನಿಖೆಯ ದಾರಿ ತಪ್ಪುವುದು ಬೇಡ. ಅದನ್ನು ಸರಿ ಮಾಡಿಕೊಳ್ಳಿ ಎಂದಷ್ಟೇ ಹೇಳುತ್ತಿದ್ದೇನೆ. ಕೇರಳಕ್ಕೆ ಹೋಗಿ ಶೂಟಿಂಗ್ ಮಾಡಿಕೊಂಡು ಬಂದರಲ್ಲಾ, ಅದೇನು? ಕೊಲೆ ಮಾಡಿ ಶೂಟ್ ಮಾಡಿದ್ದಾರೆ. ಆದರೆ ಕೊಲೆ ಮಾಡಿದವನ ಬಗ್ಗೆ ಚರ್ಚೆ ಇಲ್ಲ. ಅಯ್ಯೋ.. ಅಯ್ಯೋ.., ಅಲ್ಲೆಲ್ಲೋ ಕೊಲೆ ಆಗ್ತಿದೆ ನೋಡಿ ಅಂದರಲ್ಲಾ.. ಅವರ ಹಿಂದೆ ಪೊಲೀಸರು ಓಡುತ್ತಿದ್ದಾರೆ. ಆ ರೀತಿಯಲ್ಲಿ ತನಿಖೆ ನಡೆಯುತ್ತಿದೆ ಎಂದು ಸಚಿವರು ಕಿಡಿಕಾರಿದರು.
ಸಿದ್ದರಾಮಯ್ಯ ಅವರು ಹೈಕಮಾಡ್ ಗೆ ಎಚ್ಚರಿಕೆ ನೀಡಿದ್ದಾರಂತೆ ಎಂದು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಕೇಂದ್ರ ಸಚಿವ ಕುಮಾರಸ್ವಾಮಿ ಅವರು; ಅವರು ವರಿಷ್ಠರಿಗೆ ಗಟ್ಟಿಯಾಗಿಯೇ ಎಚ್ಚರಿಕೆ ನೀಡಿದ್ದಾರೆ ಎಂಬ ಮಾಹಿತಿ ಬಂದಿದೆ. 2028ಕ್ಕೆ ನಾನು ಇರಬೇಕೋ ಬೇಡವೋ ನೀವೇ ಹೇಳಿ ಎಂದು ಅವರು ರಾಹುಲ್ ಗಾಂಧಿ ಅವರನ್ನು ಕೇಳಿದ್ದಾರೆ ಅಂತ ವರದಿಯಾಗಿದೆ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರ ನೀಡಿದರು.
ಸಿದ್ದರಾಮಯ್ಯ ಅವರ ವಿರುದ್ಧ ನಾನು ಹೋರಾಟ ಮಾಡಿಕೊಂಡು ಬಂದವನು. ಇಲ್ಲಿ ಸಿದ್ದರಾಮಯ್ಯನವರ ಮೇಲಿನ ಅನುಕಂಪಕ್ಕೆ ನಾನು ಮಾತಾಡಿಲ್ಲ. ರಾಜ್ಯದ ಜನತೆಗೆ ಹೇಳಲು ಬಯಸುತ್ತೇನೆ. ಇವತ್ತು ನಮ್ಮ ಸಮಾಜ ವ್ಯಕ್ತಿ ಸಿಎಂ ಆಗಿದ್ದಾರೆ, ಅವರ ಮೇಲಿನ ಅಸೂಯೆಗೆ ಹೊಟ್ಟೆ ಕಿವುಚಿಕೊಂಡು ಇದನ್ನೆಲ್ಲ ಹೇಳುತ್ತಿಲ್ಲ ನಾನು. ಎಂತಹ ದಾರಿದ್ರ್ಯ ರಾಜ್ಯಕ್ಕೆ ಬಂತು ಎಂಬ ನೋವಿನಿಂದ ಹೇಳಿದ್ದೇನೆ. ಇದೇನಾದರೂ ಮುಂದುವರೆದರೆ ಈ ರಾಜ್ಯ ಏನಾಗುತ್ತದೆ? ಅರ್ಥ ಮಾಡಿಕೊಳ್ಳಿ ಎಂದು ಹೇಳುತ್ತಿದ್ದೇನೆ ಅಷ್ಟೇ ಎಂದರು ಕುಮಾರಸ್ವಾಮಿ ಅವರು.
ಕಾಂಗ್ರೆಸ್ ಪಕ್ಷದ ಕೆಲವರು ಇವತ್ತು ಸಿದ್ದರಾಮಯ್ಯ ಅವರನ್ನು ಮುಗಿಸಿ, ಈಗ ಹೊಸ ರಾಜಕೀಯ ಮಾಡೋಕೆ ಹೊರಟಿದ್ದಾರೆ. ಅದರ ಫಲವಾಗಿ2028ಕ್ಕೆ ಜನ ತೀರ್ಮಾನ ತೆಗೆದುಕೊಳ್ಳುತ್ತಾರೆ ಎಂದು ಸಚಿವರು ಎಚ್ಚರಿಕೆ ನೀಡಿದರು.


