Homeಕರ್ನಾಟಕಬೊಕ್ಕಸ ಭರ್ತಿಗೆ ಇಡೀ KMF ಅನ್ನೇ ಗುತ್ತಿಗೆ ಹಿಡಿದಿದೆ ಕಾಂಗ್ರೆಸ್ ಸರ್ಕಾರ :ಕೇಂದ್ರ ಸಚಿವ ಪ್ರಲ್ಹಾದ...

ಬೊಕ್ಕಸ ಭರ್ತಿಗೆ ಇಡೀ KMF ಅನ್ನೇ ಗುತ್ತಿಗೆ ಹಿಡಿದಿದೆ ಕಾಂಗ್ರೆಸ್ ಸರ್ಕಾರ :ಕೇಂದ್ರ ಸಚಿವ ಪ್ರಲ್ಹಾದ ಜೋಶಿ ತೀವ್ರ ಆಕ್ರೋಶ

ರಾಜ್ಯ ಕಾಂಗ್ರೆಸ್ ಸರ್ಕಾರ ತನ್ನ ದುರಾಡಳಿತದಿಂದ ಬರಿದಾಗಿಸಿದ ಬೊಕ್ಕಸ ಭರ್ತಿಗೆ ಇಡೀ KMF ಅನ್ನೇ ಗುತ್ತಿಗೆ ಪಡೆದುಕೊಂಡಿದೆ ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಲ್ಹಾದ ಜೋಶಿ ಕಿಡಿ ಕಾರಿದ್ದಾರೆ.

ನಿನ್ನೆಯಷ್ಟೇ ರೈತರ ಹೆಸರೇಳಿ ನಂದಿನಿ ಹಾಲಿನ ದರ ಏರಿಕೆ ಮಾಡಿದ್ದ ಸರ್ಕಾರ ಇದೀಗ ನಂದಿನಿ ಮೊಸರಿನ ಬೆಲೆಯನ್ನೂ ಗಗನಕ್ಕೇರಿಸಿದೆ. ಹಾಲು, ಮೊಸರು, ತುಪ್ಪ ಹೀಗೆ ಇಡೀ KMF ಉತ್ಪನ್ನಗಳ ಬೆಲೆಯನ್ನು ದುಪ್ಪಟ್ಟು ಅಧಿಕಗೊಳಿಸಿ ಶ್ರೀಸಾಮಾನ್ಯರ ಜೇಬನ್ನು ಖಾಲಿ ಮಾಡುತ್ತಿದೆ ಎಂದು ಕಿಡಿ ಕಾರಿದ್ದಾರೆ.

ಬೆಲೆ ಏರಿಕೆಯಲ್ಲಿ ಇತಿಹಾಸ ಸೃಷ್ಟಿ:

ರಾಜ್ಯ ಕಾಂಗ್ರೆಸ್ ಸರ್ಕಾರ ಬೆಲೆ ಏರಿಕೆಯಲ್ಲಿ ಹೊಸ ಇತಿಹಾಸ ಸೃಷ್ಟಿಸಿದೆ. ಕರ್ನಾಟಕದ ಇತಿಹಾಸದಲ್ಲೇ ಮೊದಲೆನ್ನುವಂತೆ ಭಾರೀ ಬೆಲೆ ಏರಿಕೆ ಮಾಡುವ ಮೂಲಕ ಕಾಂಗ್ರೆಸ್ ಸರ್ಕಾರ ಜನಸಾಮಾನ್ಯರ ಜೇಬಿಗೆ ಕನ್ನ ಹಾಕಿದೆ ಎಂದು ಸಚಿವರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಿಎಂ ಡಿಕೆಶಿ ನೇತೃತ್ವದ ಸರ್ಕಾರ, ತನ್ನ ಆರ್ಥಿಕ ದುರಾಡಳಿತ ಹಾಗೂ ಖಾಲಿ ಬೊಕ್ಕಸವನ್ನು ಮುಚ್ಚಿಕೊಳ್ಳಲು ಕೆಎಂಎಫ್ ಮೂಲಕ ಮೊಸರಿನ ದರವನ್ನು ಅತಿರೇಕ ಎನ್ನುವಂತೆ ಏರಿಸಿದೆ. ಈ ಸರ್ಕಾರಕ್ಕೆ ನಿಜಕ್ಕೂ ಶ್ರೀಸಾಮಾನ್ಯರ ಬಗ್ಗೆ ಕಾಳಜಿಯೇ ಇಲ್ಲವಾಗಿದೆ ಎಂದು ದೂರಿದ್ದಾರೆ.

ಪ್ರಸ್ತುತ ಅರ್ಧ ಲೀಟರ್ ಮೊಸರಿನ ಬೆಲೆಯನ್ನು ₹28ರಿಂದ ₹34ಕ್ಕೆ ಏರಿಸಿದ್ದು, ಶೇ.21.43ರಷ್ಟು ಅಂದರೆ ₹6 ಹೆಚ್ಚಿಸಿದೆ. ಒಂದು ಲೀಟರ್ ಮೊಸರು ಅನ್ನು ₹54ರಿಂದ ₹68ಕ್ಕೆ ಅಂದರೆ ಶೇ.25.93ರಷ್ಟು ಲೀಟರ್ ಗೆ ಬರೋಬ್ಬರಿ ₹14 ಭಾರೀ ಏರಿಕೆ ಮಾಡಿದ್ದು, ಜನರಿಗೆ ಮೊಸರು ಕೊಟ್ಟು ತಾನು ಬೆಣ್ಣೆ ತಿನ್ನುತ್ತಿದೆ ಕಾಂಗ್ರೆಸ್ ಸರ್ಕಾರ ಎಂದು ಜೋಶಿ ಹರಿ ಹಾಯ್ಡಿದ್ದಾರೆ.

ನಿನ್ನೆಯಷ್ಟೇ ಹಾಲಿನ ದರವನ್ನು ಲೀಟರ್‌ಗೆ ₹8 ಹೆಚ್ಚಿಸಿದ್ದ ಸರ್ಕಾರ, ಈಗ ಒಂದೇ ಬಾರಿಗೆ ಶೇ.21ರಿಂದ 26% ರಷ್ಟು ಮೊಸರಿನ ಬೆಲೆಯನ್ನೂ ಏರಿಸಿ ಬಡ ಹಾಗೂ ಮಧ್ಯಮ ವರ್ಗದವರ ಹೊಟ್ಟೆ ಮೇಲೆ ಹೊಡೆಯುವ ಕೆಲಸ ಮಾಡಿದೆ ಎಂದು ಕೇಂದ್ರ ಸಚಿವರು ತೀವ್ರವಾಗಿ ಖಂಡಿಸಿದ್ದಾರೆ.

ರಾಜ್ಯದಲ್ಲಿ ಅಭಿವೃದ್ಧಿಯನ್ನು ಮರೀಚಿಕೆಯಾಗಿಸಿದ ಕಾಂಗ್ರೆಸ್ ಸರ್ಕಾರ, ತನ್ನ ತಪ್ಪು ನಡೆ-ನಿರ್ಣಯ, ಯೋಜನೆಗಳಿಂದಾಗಿ ಈಗ KMF ಉತ್ಪನ್ನಗಳ ಬೆಲೆ ಏರಿಕೆ ಮೂಲಕ ರಾಜ್ಯದ ಕಡುಬಡವರಿಂದ ಸುಂಕ ವಸೂಲಿ ಮಾಡುತ್ತಿದ್ದು, ಇದು ಸರ್ಕಾರದ ಸಂಪೂರ್ಣ ಜನವಿರೋಧಿ ಹಾಗೂ ದುಬಾರಿ ನೀತಿಗೆ ಹಿಡಿದ ಕೈಗನ್ನಡಿ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ವಾಗ್ದಾಳಿ ನಡೆಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments