Homeಕರ್ನಾಟಕಝೆಕ್ ಕಂಪನಿಗಳಿಗೆ ಕರ್ನಾಟಕದಲ್ಲಿ ಹೂಡಿಕೆ ಮಾಡಲು ಸಿಎಂ ಡಿ.ಕೆ. ಶಿವಕುಮಾರ್ ಆಹ್ವಾನ

ಝೆಕ್ ಕಂಪನಿಗಳಿಗೆ ಕರ್ನಾಟಕದಲ್ಲಿ ಹೂಡಿಕೆ ಮಾಡಲು ಸಿಎಂ ಡಿ.ಕೆ. ಶಿವಕುಮಾರ್ ಆಹ್ವಾನ

ಝೆಕ್ ಗಣರಾಜ್ಯದ ಉಪಪ್ರಧಾನಿ ನೇತೃತ್ವದ ನಿಯೋಗದೊಂದಿಗೆ ಮಾತುಕತೆ | ಆಟೋಮೊಬೈಲ್, ಇಂಧನ, ಬಾಹ್ಯಾಕಾಶ, ರಕ್ಷಣಾ ಕ್ಷೇತ್ರಗಳಲ್ಲಿ ಸಹಕಾರಕ್ಕೆ ಆಹ್ವಾನ 

ಝೆಕ್ ಗಣರಾಜ್ಯದ ಕಂಪನಿಗಳು ಬೆಂಗಳೂರಿಗೆ ಮಾತ್ರ ಸೀಮಿತವಾಗದೆ ಕರ್ನಾಟಕದ ಇತರೆ ಜಿಲ್ಲೆಗಳಲ್ಲೂ ಹೂಡಿಕೆ ಮಾಡುವಂತೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮನವಿ ಮಾಡಿದರು.

ವಿಧಾನಸೌಧದಲ್ಲಿ ಬುಧವಾರ ಝೆಕ್ ಗಣರಾಜ್ಯದ ಉಪಪ್ರಧಾನಿ ಕಾರೆಲ್ ಹಾವ್ಲಿಕ್ ನೇತೃತ್ವದ ನಿಯೋಗವನ್ನು ಭೇಟಿ ಮಾಡಿ ಮಾತುಕತೆ ನಡೆಸಿದ ಅವರು, ಕರ್ನಾಟಕವು ಝೆಕ್ ಗಣರಾಜ್ಯದ ದೀರ್ಘಾವಧಿಯ ಪಾಲುದಾರನಾಗಲು ಸಿದ್ಧವಿದೆ. ರಾಜ್ಯದ ವಿವಿಧ ವಲಯಗಳಲ್ಲಿ ಹೂಡಿಕೆ ಮತ್ತು ಕೈಗಾರಿಕಾ ಸಹಕಾರಕ್ಕೆ ವಿಫುಲ ಅವಕಾಶಗಳಿವೆ ಎಂದು ತಿಳಿಸಿದರು.

ಕೃಷಿ, ಅರಣ್ಯ, ತೋಟಗಾರಿಕೆ ಹಾಗೂ ಪುಷ್ಪಕೃಷಿಯಲ್ಲಿ ಕರ್ನಾಟಕವು ಗಮನಾರ್ಹ ಸಾಮರ್ಥ್ಯ ಹೊಂದಿದೆ. ಹೀಗಾಗಿ ರಾಜ್ಯವನ್ನು ಪ್ರಮುಖ ಹೂಡಿಕೆ ತಾಣವಾಗಿ ಪರಿಗಣಿಸಬೇಕು ಎಂದು ನಿಯೋಗಕ್ಕೆ ಮನವಿ ಮಾಡಿದರು.

ಇಂಧನ ಕ್ಷೇತ್ರದಲ್ಲಿ ಹೂಡಿಕೆಗೆ ವಿಫುಲ ಅವಕಾಶ

ಕರ್ನಾಟಕವು ಬೃಹತ್ ಇಂಧನ ಬೇಡಿಕೆಯನ್ನು ಹೊಂದಿದ್ದು, ದೇಶದ ಪ್ರಮುಖ ಸೌರ ವಿದ್ಯುತ್ ಸ್ಥಾವರಗಳು ಹಾಗೂ ಹಳೆಯ ಜಲವಿದ್ಯುತ್ ಸ್ಥಾವರಗಳಿಗೆ ನೆಲೆಯಾಗಿದೆ. ಇಂಧನ ಕ್ಷೇತ್ರದಲ್ಲಿ ಹೂಡಿಕೆ ಮಾಡಲು ರಾಜ್ಯದಲ್ಲಿ ಸಾಕಷ್ಟು ಅವಕಾಶಗಳಿವೆ. ಈ ನಿಟ್ಟಿನಲ್ಲಿ ಝೆಕ್ ಕಂಪನಿಗಳು ಕರ್ನಾಟಕದಲ್ಲಿ ಹೂಡಿಕೆ ಮಾಡುವಂತೆ ಆಹ್ವಾನಿಸಿದರು.

ಆಟೋಮೊಬೈಲ್, ಇವಿ, ಬಾಹ್ಯಾಕಾಶ ಕ್ಷೇತ್ರಗಳಿಗೆ ಆದ್ಯತೆ

ಆಟೋಮೊಬೈಲ್ ಬಿಡಿಭಾಗಗಳ ಉತ್ಪಾದನೆ, ವಿದ್ಯುತ್ ವಾಹನಗಳು (ಇವಿ), ಮುಂದಿನ ಪೀಳಿಗೆಯ ವಾಹನ ತಂತ್ರಜ್ಞಾನ, ಪರೀಕ್ಷೆ ಹಾಗೂ ವಿಶೇಷ ಉತ್ಪಾದನಾ ಕ್ಷೇತ್ರಗಳಲ್ಲಿ ಝೆಕ್ ಕಂಪನಿಗಳು ಕರ್ನಾಟಕದೊಂದಿಗೆ ಸಹಕರಿಸಬಹುದು. ವೈಮಾನಿಕ ಮತ್ತು ಬಾಹ್ಯಾಕಾಶ ಕ್ಷೇತ್ರಗಳಲ್ಲಿಯೂ ಹೂಡಿಕೆ ಹಾಗೂ ತಾಂತ್ರಿಕ ಸಹಕಾರಕ್ಕೆ ಅವಕಾಶಗಳಿವೆ ಎಂದು ಹೇಳಿದರು.

ಕರ್ನಾಟಕದ ಉತ್ಪಾದನೆ, ವೈಮಾನಿಕ, ಎಲೆಕ್ಟ್ರಾನಿಕ್ಸ್ ಮತ್ತು ತಂತ್ರಜ್ಞಾನ ಕ್ಷೇತ್ರಗಳ ಸಾಮರ್ಥ್ಯಕ್ಕೆ ಝೆಕ್ ಗಣರಾಜ್ಯದ ನಿಖರ ಎಂಜಿನಿಯರಿಂಗ್, ಯಂತ್ರೋಪಕರಣ, ಆಟೋಮೊಬೈಲ್ ಬಿಡಿಭಾಗ ಹಾಗೂ ಸಾರಿಗೆ ತಂತ್ರಜ್ಞಾನಗಳ ಪರಿಣತಿ ಪೂರಕವಾಗಲಿದೆ ಎಂದು ಅಭಿಪ್ರಾಯಪಟ್ಟರು.

ಹೂಡಿಕೆದಾರರಿಗೆ ಸರ್ಕಾರದಿಂದ ಅಗತ್ಯ ನೆರವು

ರಾಜ್ಯದಲ್ಲಿ ಹೂಡಿಕೆ ಮಾಡಲು ಆಸಕ್ತಿ ಹೊಂದಿರುವ ಕಂಪನಿಗಳಿಗೆ ಸೂಕ್ತ ಸ್ಥಳಗಳ ಆಯ್ಕೆ, ಅಗತ್ಯ ಅನುಮೋದನೆಗಳು ಹಾಗೂ ಸಂಬಂಧಿತ ಇಲಾಖೆಗಳೊಂದಿಗೆ ಸಮನ್ವಯ ಸಾಧಿಸಲು ಇನ್ವೆಸ್ಟ್ ಕರ್ನಾಟಕ, ಕರ್ನಾಟಕ ಉದ್ಯೋಗ ಮಿತ್ರ, ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (ಕೆಐಎಡಿಬಿ) ಮತ್ತು ಏಕಗವಾಕ್ಷಿ ವ್ಯವಸ್ಥೆಯ ಮೂಲಕ ನೆರವು ನೀಡಲಾಗುತ್ತಿದೆ ಎಂದು ತಿಳಿಸಿದರು.

ತಂತ್ರಜ್ಞಾನ ವರ್ಗಾವಣೆ, ಸ್ಥಳೀಯ ಉದ್ಯಮಗಳ ಬಲವರ್ಧನೆ, ಗುಣಮಟ್ಟದ ಉದ್ಯೋಗ ಸೃಷ್ಟಿ ಮತ್ತು ರಫ್ತು ವೃದ್ಧಿಗೆ ನೆರವಾಗುವ ಹೂಡಿಕೆಗಳನ್ನು ಆಕರ್ಷಿಸುವುದು ಸರ್ಕಾರದ ಆದ್ಯತೆಯಾಗಿದೆ. ಝೆಕ್ ಉದ್ಯಮ ಸಮುದಾಯ ಮತ್ತು ಝೆಕ್‌ಟ್ರೇಡ್ ಸಂಸ್ಥೆಗಳು ಕರ್ನಾಟಕ ಸರ್ಕಾರದೊಂದಿಗೆ ಸಂಪರ್ಕ ಸೇತುವೆಯಾಗಿ ಕಾರ್ಯನಿರ್ವಹಿಸಬಹುದು ಎಂದು ಹೇಳಿದರು.

ಶೈಕ್ಷಣಿಕ, ಸಂಶೋಧನಾ ಕ್ಷೇತ್ರಗಳಲ್ಲೂ ಸಹಕಾರಕ್ಕೆ ಒತ್ತು

ಕರ್ನಾಟಕ ಮತ್ತು ಝೆಕ್ ಗಣರಾಜ್ಯದ ನಡುವಿನ ಸಂಬಂಧ ವ್ಯಾಪಾರಕ್ಕೆ ಮಾತ್ರ ಸೀಮಿತವಾಗದೆ ಶಿಕ್ಷಣ, ಸಂಶೋಧನೆ ಮತ್ತು ಕೌಶಲ್ಯಾಭಿವೃದ್ಧಿ ಕ್ಷೇತ್ರಗಳಿಗೂ ವಿಸ್ತರಿಸಬೇಕು. ಎರಡೂ ದೇಶಗಳ ವಿಶ್ವವಿದ್ಯಾಲಯಗಳು, ಸಂಶೋಧನಾ ಸಂಸ್ಥೆಗಳು ಹಾಗೂ ಕೈಗಾರಿಕೆಗಳ ನಡುವಿನ ಸಹಭಾಗಿತ್ವವು ಅನ್ವಯಿಕ ಸಂಶೋಧನೆ, ಹೊಸ ತಂತ್ರಜ್ಞಾನಗಳ ಅಭಿವೃದ್ಧಿ ಮತ್ತು ಅವುಗಳ ವಾಣಿಜ್ಯ ಬಳಕೆಗೆ ನೆರವಾಗಲಿದೆ ಎಂದು ಹೇಳಿದರು.

ಭಾರತ ಮತ್ತು ಝೆಕ್ ಗಣರಾಜ್ಯ 2024ರ ಜನವರಿಯಲ್ಲಿ ನಾವೀನ್ಯತೆ ಕ್ಷೇತ್ರದಲ್ಲಿ ಕಾರ್ಯತಂತ್ರದ ಪಾಲುದಾರಿಕೆಗೆ ಒಪ್ಪಿಕೊಂಡಿದ್ದು, ಸಂಶೋಧನೆ, ಉದಯೋನ್ಮುಖ ತಂತ್ರಜ್ಞಾನಗಳು, ಕೈಗಾರಿಕಾ ಆವಿಷ್ಕಾರಗಳು ಹಾಗೂ ಸ್ಟಾರ್ಟ್‌ಅಪ್‌ಗಳ ನಡುವಿನ ಸಹಕಾರಕ್ಕೆ ಇದು ಅವಕಾಶ ಕಲ್ಪಿಸಿದೆ ಎಂದು ತಿಳಿಸಿದರು.

ಝೆಕ್ ಕಂಪನಿಗಳ ಪರಿಣತಿ ಕರ್ನಾಟಕಕ್ಕೆ ಪೂರಕ

ಬೆಂಗಳೂರು ಭಾರತದ ಪ್ರಮುಖ ತಂತ್ರಜ್ಞಾನ, ಸಂಶೋಧನೆ ಮತ್ತು ಉದ್ಯಮಶೀಲತಾ ಕೇಂದ್ರವಾಗಿದ್ದು, ಇಲ್ಲಿನ ಎಂಜಿನಿಯರಿಂಗ್ ಪ್ರತಿಭೆ, ಕೈಗಾರಿಕಾ ನೆಲೆ ಹಾಗೂ ಸ್ಟಾರ್ಟ್‌ಅಪ್ ಪರಿಸರವು ಭಾರತದಲ್ಲಿ ವಿಸ್ತರಿಸಲು ಬಯಸುವ ಝೆಕ್ ಕಂಪನಿಗಳಿಗೆ ಅನುಕೂಲಕರವಾಗಿದೆ ಎಂದು ಹೇಳಿದರು.

ಸ್ಕೋಡಾ, ಬಾಟಾ ಸೇರಿದಂತೆ ಝೆಕ್ ಕಂಪನಿಗಳು ಭಾರತದ ವಿವಿಧ ಕ್ಷೇತ್ರಗಳಲ್ಲಿ ಹೊಂದಿರುವ ಉದ್ಯಮ ಅನುಭವವನ್ನು ಕರ್ನಾಟಕಕ್ಕೂ ವಿಸ್ತರಿಸುವ ಸಾಧ್ಯತೆಗಳನ್ನು ಪರಿಶೀಲಿಸಬೇಕು. ಸ್ಕೋಡಾ ಆಟೋ ಮತ್ತು ಡೂಸನ್ ಸ್ಕೋಡಾ ಪವರ್‌ನಂತಹ ಕಂಪನಿಗಳೊಂದಿಗೆ ಉತ್ಪಾದನೆ, ಎಂಜಿನಿಯರಿಂಗ್, ಸಂಶೋಧನೆ ಹಾಗೂ ಸ್ಥಳೀಯ ಸಂಸ್ಥೆಗಳ ಸಹಭಾಗಿತ್ವಕ್ಕೆ ಅವಕಾಶಗಳಿವೆ ಎಂದರು.

ರೈಲ್ವೆ ಬಿಡಿಭಾಗಗಳ ಕ್ಷೇತ್ರದಲ್ಲಿ ಟಾಟಾ ಆಟೋಕಾಂಪ್ ಮತ್ತು ಸ್ಕೋಡಾ ಗ್ರೂಪ್ ನಡುವಿನ ಪಾಲುದಾರಿಕೆಯ ಮಾದರಿಯಲ್ಲಿ ಕರ್ನಾಟಕದ ಕಂಪನಿಗಳೊಂದಿಗೂ ಸಹಭಾಗಿತ್ವ ರೂಪಿಸಿಕೊಳ್ಳುವ ಅಗತ್ಯವಿದೆ ಎಂದು ಸಿಎಂ ಡಿ.ಕೆ. ಶಿವಕುಮಾರ್ ಹೇಳಿದರು.

ಈ ಸಂದರ್ಭದಲ್ಲಿ ಡಿಸಿಎಂ ಜಿ ಪರಮೇಶ್ವರ, ಸಚಿವ ಎಂ ಬಿ ಪಾಟೀಲ್, ಸಂಸದ ಹಾಗೂ ಸಿಎಂ ಮುಖ್ಯ ಸಲಹೆಗಾರ ಡಾ ಜಿ ಸಿ ಚಂದ್ರಶೇಖರ್, ನಿಯೋಗದ ಪ್ರತಿನಿಧಿಗಳಾದ ಝೆಕ್ ಗಣರಾಜ್ಯದ ವಿದೇಶಾಂಗ ಸಚಿವೆ ಮರಿಯಾ ಚಟರ್ಡೋವ, ಮಾರೆಟ್ ಲಿಬ್ರರ್ಕಿ, ಕ್ಯಾತರಿನ ಗಜುರ್ನೋವಾ, ರಿಚರ್ಡ್ ಲಾವರ್ಟಿ, ಮಿರೋಸ್ಲಾವ್ ಒಕ್ರೂಲಿ, ಕ್ಯಾತರಿನ ಪೀಟರ್ಸನ್, ಕ್ಯಾತರಿನ ವವ್ಕೊವಾ, ಜನ್ ರಾಫಾಜ್, ಗುನ್ನತ್ ಚೌಧರಿ, ರಾಜ್ಯದ ಅಪರ ಮುಖ್ಯ ಕಾರ್ಯದರ್ಶಿ ತುಷಾರ್ ಗಿರಿನಾಥ್ ಮತ್ತಿತರರು ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments