ಗುರುಗಳು ಹಾಗೂ ಗುರುಮಠಗಳು ಸಮಾಜಕ್ಕೆ ನೀಡುತ್ತಿರುವ ಕೊಡುಗೆ ಪ್ರಶಂಸನೀಯವಾಗಿದ್ದು, ಅಕ್ಷರ, ಅನ್ನ ಮತ್ತು ಧರ್ಮ ದಾಸೋಹದ ಮೂಲಕ ಮಠಗಳು ಜನಸೇವೆಯಲ್ಲಿ ತೊಡಗಿವೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.
ಗದಗ ಜಿಲ್ಲೆಯ ಶಿರಹಟ್ಟಿಯ ಭಾವೈಕ್ಯತಾ ಫಕೀರೇಶ್ವರ ಮಠದ ಶ್ರೀ ದಿಂಗಾಲೇಶ್ವರ ಸ್ವಾಮೀಜಿ ನೇತೃತ್ವದಲ್ಲಿ ಉತ್ತರ ಕರ್ನಾಟಕ ಹಾಗೂ ಕಲ್ಯಾಣ ಕರ್ನಾಟಕ ಭಾಗದ 25ಕ್ಕೂ ಹೆಚ್ಚು ಮಠಗಳ ಸ್ವಾಮೀಜಿಗಳ ನಿಯೋಗವು ಶನಿವಾರ ಬೆಂಗಳೂರಿನ ಗೃಹ ಕಚೇರಿ ಕೃಷ್ಣಾದಲ್ಲಿ ಭೇಟಿ ನೀಡಿದ ಸಂದರ್ಭದಲ್ಲಿ ಅವರು ಮಾತನಾಡಿದರು.
ಗುರುಗಳ ಮಾರ್ಗದರ್ಶನವಿಲ್ಲದೆ ಬದುಕಿನಲ್ಲಿ ಒಂದು ಹೆಜ್ಜೆಯನ್ನೂ ಮುಂದಿಡಲು ಸಾಧ್ಯವಿಲ್ಲ. ಸರ್ಕಾರ ಏನೇ ಮಾಡಬಹುದು, ಆದರೆ ಗುರುಗಳು ಹಾಗೂ ಗುರುಮಠಗಳು ಸಮಾಜಕ್ಕೆ ನೀಡುತ್ತಿರುವ ಸೇವೆ ಅಪಾರ. ಮಠಾಧೀಶರು ಅಕ್ಷರ, ಅನ್ನ ಹಾಗೂ ಧರ್ಮ ದಾಸೋಹದ ಮೂಲಕ ಸಮಾಜದ ಏಳಿಗೆಗೆ ಶ್ರಮಿಸುತ್ತಿರುವುದು ಶ್ಲಾಘನೀಯ ಎಂದು ತಿಳಿಸಿದರು.
ಸಮಾಜವನ್ನು ಒಗ್ಗೂಡಿಸುವುದೇ ಧರ್ಮದ ಉದ್ದೇಶ
ಈ ಹಿಂದೆ ವೀರಶೈವ ಮತ್ತು ಲಿಂಗಾಯತ ಸಮುದಾಯಗಳನ್ನು ಪ್ರತ್ಯೇಕಿಸುವ ವಿಚಾರ ಬಂದಾಗ ಸಮುದಾಯದ ಗುರುಗಳಲ್ಲಿ ಕ್ಷಮೆ ಕೇಳಿದ್ದೆ. ನಾವು ಸೂಜಿಯಂತೆ ಸಮಾಜವನ್ನು ಹೊಲಿಯುವ ಕೆಲಸ ಮಾಡಬೇಕೇ ಹೊರತು, ಕತ್ತರಿಯಂತೆ ಕತ್ತರಿಸುವ ಕೆಲಸ ಮಾಡಬಾರದು. ನಮ್ಮ ಧರ್ಮ ಸಮಾಜವನ್ನು ಒಗ್ಗೂಡಿಸುವುದೇ ಹೊರತು ವಿಭಜಿಸುವುದಲ್ಲ. ಒಗ್ಗಟ್ಟಿನಲ್ಲಿ ಶಕ್ತಿಯಿದೆ ಎಂದು ಹೇಳಿದರು.
ಬಾಳೆಹೊನ್ನೂರು ಸೇರಿದಂತೆ ಅನೇಕ ಮಠಗಳಿಗೆ ಭೇಟಿ ನೀಡಿ ಅಲ್ಲಿನ ಆಚಾರ-ವಿಚಾರಗಳನ್ನು ಗಮನಿಸಿದ್ದೇನೆ. ವೀರ ಗಂಗಾಧರ ಅಜ್ಜಯ್ಯನವರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದ್ದೆ. ಈ ವಿಚಾರ ದೇಶದ ಅನೇಕ ನಾಯಕರಲ್ಲೂ ಅಚ್ಚರಿ ಮೂಡಿಸಿತ್ತು ಎಂದು ಸ್ಮರಿಸಿದರು.
ಚೆನ್ನೈನ ಆಸ್ಪತ್ರೆಯಲ್ಲಿ ಸಿದ್ದಗಂಗಾ ಶ್ರೀಗಳಿಗೆ ಮುಸ್ಲಿಂ ವೈದ್ಯರು ಶಸ್ತ್ರಚಿಕಿತ್ಸೆ ನಡೆಸಿದ ಸಂದರ್ಭದಲ್ಲಿ, ಧರ್ಮ ಮತ್ತು ಜಾತಿಗಿಂತ ಮಾನವೀಯತೆ ಮುಖ್ಯ; ಎಲ್ಲರೂ ಒಂದೇ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದೆ. ಆಗ ಅನೇಕರು ಟೀಕಿಸಿದರೂ ಅದಕ್ಕೆ ತಲೆಕೆಡಿಸಿಕೊಳ್ಳಲಿಲ್ಲ ಎಂದು ಹೇಳಿದರು.
ದಸರಾ ಉದ್ಘಾಟನೆ ವಿಚಾರದಲ್ಲಿ ಸುಳ್ಳುಸುದ್ದಿ
ಮೈಸೂರು ದಸರಾ ಉದ್ಘಾಟನೆಯನ್ನು ಕೊಪ್ಪಳದ ಗವಿಮಠದ ಶ್ರೀಗಳು ನೆರವೇರಿಸಲಿದ್ದಾರೆ. ಗವಿಮಠದ ಕಾರ್ಯಗಳನ್ನು ನಾನು ಗಮನಿಸಿದ್ದೇನೆ. ಅಲ್ಲಿನ ಶ್ರೀಗಳ ವ್ಯಕ್ತಿತ್ವ ದೊಡ್ಡದು. ಅವರನ್ನು ಇಡೀ ರಾಜ್ಯವೇ ಗೌರವಿಸುತ್ತದೆ. ದಸರಾ ಉದ್ಘಾಟನೆಗೆ ಶ್ರೀಗಳು ಒಪ್ಪಿಗೆ ನೀಡಿದ ಬಳಿಕವೇ ಅವರ ಹೆಸರನ್ನು ಅಂತಿಮಗೊಳಿಸಲಾಗಿದೆ. ಆದರೆ ಕೆಲವರು ಈ ವಿಚಾರದಲ್ಲಿಯೂ ರಾಜಕೀಯ ಮಾಡಲು ಪ್ರಯತ್ನಿಸಿ, ಶ್ರೀಗಳು ಒಪ್ಪಿಲ್ಲ ಎಂದು ಸುಳ್ಳುಸುದ್ದಿ ಹರಡಿದರು ಎಂದು ಮುಖ್ಯಮಂತ್ರಿ ಆರೋಪಿಸಿದರು.
ನನಗೆ ದೊರೆತಿರುವ ಅವಕಾಶದಲ್ಲಿ ಜನರ ಹೃದಯ ಗೆದ್ದು, ಜನಪರ ಕೆಲಸಗಳನ್ನು ಮಾಡುವುದು ನನ್ನ ಗುರಿ. ಮಠಾಧೀಶರು ನೀಡಿರುವ ಆಶೀರ್ವಾದ ನನಗೆ ಮಾತ್ರವಲ್ಲ, ಇಡೀ ಸರ್ಕಾರಕ್ಕೂ ಸಲ್ಲುತ್ತದೆ. ತಮ್ಮ ಸಹಕಾರ ಹಾಗೂ ಆಶೀರ್ವಾದ ಇದೇ ರೀತಿ ಮುಂದುವರಿಯಲಿ ಎಂದು ಸ್ವಾಮೀಜಿಗಳಿಗೆ ಧನ್ಯವಾದ ಅರ್ಪಿಸಿದರು.


