Homeಕರ್ನಾಟಕದಲಿತರ ಮೇಲಿನ ದೌರ್ಜನ್ಯ ತಡೆಗೆ ಗೃಹ ಸಚಿವರು ಗಮನಹರಿಸಲಿ: ಛಲವಾದಿ ನಾರಾಯಣಸ್ವಾಮಿ

ದಲಿತರ ಮೇಲಿನ ದೌರ್ಜನ್ಯ ತಡೆಗೆ ಗೃಹ ಸಚಿವರು ಗಮನಹರಿಸಲಿ: ಛಲವಾದಿ ನಾರಾಯಣಸ್ವಾಮಿ

ರಾಜ್ಯದಲ್ಲಿ ದಲಿತರ ಮೇಲಿನ ದೌರ್ಜನ್ಯ, ಕೊಲೆ ಹಾಗೂ ಅತ್ಯಾಚಾರ ಪ್ರಕರಣಗಳ ಬಗ್ಗೆ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರು ಗಂಭೀರವಾಗಿ ಗಮನಹರಿಸಬೇಕು ಎಂದು ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಆಗ್ರಹಿಸಿದರು.

ಶನಿವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪ್ರಿಯಾಂಕ್ ಖರ್ಗೆ ಅವರನ್ನು ಸಹೋದರನಂತೆ ಭಾವಿಸುತ್ತೇನೆ. ಆದರೆ, ರಾಜ್ಯದಲ್ಲಿ ದಲಿತರಿಗೆ ಅನ್ಯಾಯವಾಗುತ್ತಿದೆ. ಸುಮಾರು 17 ಕಡೆಗಳಲ್ಲಿ ಕೊಲೆಗಳು ನಡೆದಿದ್ದರೂ ಈ ವಿಚಾರಗಳ ಬಗ್ಗೆ ಗೃಹ ಸಚಿವರು ಗಮನಹರಿಸಿಲ್ಲ ಎಂದು ಆರೋಪಿಸಿದರು.

ಪ್ರಿಯಾಂಕ್ ಖರ್ಗೆ ಅವರಿಗೆ ಆಡಳಿತದ ಅನುಭವದ ಕೊರತೆಯಿದೆ ಎಂದು ಟೀಕಿಸಿದ ಅವರು, ರಾಜಕೀಯ ಮಾಡುವುದಷ್ಟೇ ಅಲ್ಲ, ಅಧಿಕಾರದಲ್ಲಿರುವಾಗ ಜನರಿಗೆ ಉತ್ತಮ ಆಡಳಿತ ನೀಡುವ ಜವಾಬ್ದಾರಿಯನ್ನೂ ಅರಿತುಕೊಳ್ಳಬೇಕು. ತಮ್ಮ ತಂದೆಯ ಹೆಸರಿನ ಬದಲಿಗೆ ಸ್ವಂತ ಅನುಭವ ಮತ್ತು ವಿವೇಚನೆಯ ಆಧಾರದ ಮೇಲೆ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.

ಕೇಂದ್ರ ಸರ್ಕಾರ ಹೋರಾಟಗಳಿಗೆ ಹೆದರಿಲ್ಲ

ದೆಹಲಿಯಲ್ಲಿ ನಡೆಯುತ್ತಿರುವ ಪ್ರತಿಭಟನೆಗಳ ಕುರಿತು ಪ್ರತಿಕ್ರಿಯಿಸಿದ ಅವರು, ಕೇಂದ್ರ ಸರ್ಕಾರ ಪ್ರತಿಭಟನೆಗಳಿಗೆ ಹೆದರಿದೆ ಎಂದು ಅರ್ಥೈಸುವುದು ಸರಿಯಲ್ಲ. ದೇಶದಲ್ಲಿ ಅರಾಜಕತೆ ಸೃಷ್ಟಿಸಲು ಕೆಲವರು ಪ್ರಯತ್ನಿಸುತ್ತಿದ್ದಾರೆ ಎಂಬುದು ಸರ್ಕಾರದ ಗಮನದಲ್ಲಿದೆ ಎಂದು ಹೇಳಿದರು.

ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಿದ್ದಾರೆ ಎಂಬ ಕಾರಣಕ್ಕೆ ಕೇಂದ್ರ ಸರ್ಕಾರ ಒತ್ತಡಕ್ಕೆ ಮಣಿಯುತ್ತದೆ ಎಂದು ಭಾವಿಸಬಾರದು. ಮುಖ್ಯ ಚುನಾವಣಾ ಆಯುಕ್ತರ ರಾಜೀನಾಮೆಗೆ ಒತ್ತಾಯಿಸುವವರು, ಅವರು ಮಾಡಿದ ತಪ್ಪೇನು ಎಂಬುದನ್ನು ಸ್ಪಷ್ಟವಾಗಿ ತೋರಿಸಬೇಕು. ಆಕ್ಷೇಪಗಳಿದ್ದರೆ ನ್ಯಾಯಾಲಯದ ಮೊರೆ ಹೋಗಬಹುದು ಎಂದು ಹೇಳಿದರು.

ಫಾರಂ-7 ಹಾಗೂ ಎಸ್‌ಐಆರ್‌ ವಿಚಾರವಾಗಿ ಮಾತನಾಡಿದ ಅವರು, ಚುನಾವಣಾ ಆಯೋಗವು ಯಾರ ಶಿಫಾರಸಿನ ಆಧಾರದ ಮೇಲೂ ಮತದಾರರ ಹೆಸರನ್ನು ಕೈಬಿಟ್ಟಿಲ್ಲ ಎಂಬುದು ತಮ್ಮ ನಿಲುವು ಎಂದರು. ಮೃತಪಟ್ಟವರು, ಸ್ಥಳಾಂತರಗೊಂಡವರು ಹಾಗೂ ದೇಶದ ಪ್ರಜೆಗಳಲ್ಲದವರ ಹೆಸರುಗಳು ಮತದಾರರ ಪಟ್ಟಿಯಲ್ಲಿ ಇರಬೇಕೇ ಎಂದು ಪ್ರಶ್ನಿಸಿದರು.

ಬೀದಿ ಪ್ರತಿಭಟನೆಗಿಂತ ನ್ಯಾಯಾಲಯದ ಮೊರೆ ಹೋಗಲಿ

ಮುಖ್ಯ ಚುನಾವಣಾ ಆಯುಕ್ತರ ವಿರುದ್ಧ ಆರೋಪ ಮಾಡುವವರು ಸೂಕ್ತ ದಾಖಲೆಗಳೊಂದಿಗೆ ತಮ್ಮ ಆಕ್ಷೇಪಗಳನ್ನು ಮಂಡಿಸಬೇಕು. ಸುಮ್ಮನೆ ಗಾಳಿಯಲ್ಲಿ ಗುಂಡು ಹಾರಿಸುವ ರೀತಿಯಲ್ಲಿ ಆರೋಪ ಮಾಡಬಾರದು. ನ್ಯಾಯಾಲಯದ ಮೂಲಕ ನ್ಯಾಯ ಪಡೆಯುವ ಬದಲು ಬೀದಿ ಪ್ರತಿಭಟನೆಗಳ ಮೂಲಕ ದೇಶಕ್ಕೆ ಕೆಟ್ಟ ಹೆಸರು ತರುವ ಪ್ರಯತ್ನ ಮಾಡುವುದು ಸರಿಯಲ್ಲ ಎಂದು ಟೀಕಿಸಿದರು.

ಡಾ. ಬಿ.ಆರ್. ಅಂಬೇಡ್ಕರ್ ಅವರು ರೂಪಿಸಿದ ಸಂವಿಧಾನ ನೀಡಿರುವ ಹಕ್ಕುಗಳನ್ನು ಬಿಜೆಪಿ ಅಥವಾ ಎನ್‌ಡಿಎ ಸರ್ಕಾರ ಕಿತ್ತುಕೊಳ್ಳುವುದಿಲ್ಲ ಎಂದು ಅವರು ಪ್ರತಿಪಾದಿಸಿದರು.

ಕರ್ನಾಟಕದಲ್ಲೂ ಕಾಂಗ್ರೆಸ್ ಅಸ್ತಿತ್ವ ಕಳೆದುಕೊಳ್ಳಲಿದೆ

ಕಾಂಗ್ರೆಸ್ ನಾಯಕತ್ವದ ವಿರುದ್ಧ ವಾಗ್ದಾಳಿ ನಡೆಸಿದ ಛಲವಾದಿ ನಾರಾಯಣಸ್ವಾಮಿ, ರಾಷ್ಟ್ರಮಟ್ಟದಲ್ಲಿ ಕಾಂಗ್ರೆಸ್‌ಗೆ ಸಮರ್ಥ ನಾಯಕತ್ವದ ಕೊರತೆಯಿದೆ ಎಂದು ಟೀಕಿಸಿದರು. ಕರ್ನಾಟಕದಲ್ಲಿ ಸಿದ್ದರಾಮಯ್ಯ ಅವರ ಅಹಿಂದ ನಾಯಕತ್ವದಿಂದ ಕಾಂಗ್ರೆಸ್ ತನ್ನ ಅಸ್ತಿತ್ವ ಉಳಿಸಿಕೊಂಡಿದೆ. ಆದರೆ, ಅವರನ್ನೂ ಮೂಲೆಗುಂಪು ಮಾಡಲಾಗುತ್ತಿದೆ. ಹೀಗಾಗಿ ರಾಜ್ಯದಲ್ಲೂ ಕಾಂಗ್ರೆಸ್ ತನ್ನ ನೆಲೆಯನ್ನು ಕಳೆದುಕೊಳ್ಳಲಿದೆ ಎಂದು ಭವಿಷ್ಯ ನುಡಿದರು.

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಸೋನಿಯಾ ಗಾಂಧಿ ಅವರ ವಯಸ್ಸನ್ನು ಉಲ್ಲೇಖಿಸಿದ ಅವರು, ರಾಹುಲ್ ಗಾಂಧಿ ಅವರಿಂದ ಕಾಂಗ್ರೆಸ್‌ಗೆ ರಾಜಕೀಯವಾಗಿ ಪ್ರಯೋಜನವಾಗುತ್ತಿಲ್ಲ; ಅವರು ಬಿಜೆಪಿಗೆ ಅನುಕೂಲವಾಗುವ ರೀತಿಯಲ್ಲಿ ನಡೆದುಕೊಳ್ಳುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು. ಮುಂದಿನ ಚುನಾವಣೆಯವರೆಗೆ ಕಾಂಗ್ರೆಸ್ ತನ್ನ ಅಸ್ತಿತ್ವ ಉಳಿಸಿಕೊಳ್ಳುತ್ತದೆಯೇ ಎಂಬ ಅನುಮಾನವಿದೆ ಎಂದರು.

ಗೃಹ ಸಚಿವರಿಗೆ ಕಾನೂನಿನ ಅರಿವು ಇರಬೇಕು

ಸ್ಟಿಂಗ್ ಆಪರೇಷನ್ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಗೃಹ ಸಚಿವರಿಗೆ ಕಾನೂನಿನ ಅರಿವು ಇರಬೇಕು. ಪೊಲೀಸ್ ಇಲಾಖೆಗೆ ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸುವ ಅಧಿಕಾರವಿದೆ. ಸರ್ಕಾರದ ಅಧಿಕಾರ ಮತ್ತು ಜವಾಬ್ದಾರಿಗಳ ಬಗ್ಗೆ ಸಚಿವರು ತಿಳಿದುಕೊಳ್ಳಬೇಕು ಎಂದರು.

ಮಾಧ್ಯಮಗಳು ತಮ್ಮ ಕರ್ತವ್ಯದ ಭಾಗವಾಗಿ ಸ್ಟಿಂಗ್ ಆಪರೇಷನ್ ನಡೆಸುತ್ತವೆ. ಭ್ರಷ್ಟಾಚಾರ ಮಾಡದಿದ್ದರೆ ಯಾರೂ ಭಯಪಡುವ ಅಗತ್ಯವಿಲ್ಲ. ಕಾಂಗ್ರೆಸ್ ನಾಯಕರ ವರ್ತನೆ ಕುಂಬಳಕಾಯಿ ಕಳ್ಳ ಎಂದಾಕ್ಷಣ ಹೆಗಲು ಮುಟ್ಟಿಕೊಂಡಂತಿದೆ ಎಂದು ಟೀಕಿಸಿದರು.

ಸ್ಟಿಂಗ್ ಆಪರೇಷನ್ ವಿಚಾರದಲ್ಲಿ ಸಿಎಂ ಬ್ಲ್ಯಾಕ್‌ಮೇಲ್ ಆರೋಪ

ಸ್ಟಿಂಗ್ ಆಪರೇಷನ್ ವಿಚಾರವನ್ನು ಮುಖ್ಯಮಂತ್ರಿ ಅವರೇ ಏಕೆ ಬಹಿರಂಗಪಡಿಸಿದರು ಎಂದು ಪ್ರಶ್ನಿಸಿದ ಛಲವಾದಿ ನಾರಾಯಣಸ್ವಾಮಿ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವ ಬದಲು ತಮ್ಮದೇ ಪಕ್ಷದ ಶಾಸಕರು ಹಾಗೂ ಸಚಿವರನ್ನು ಬ್ಲ್ಯಾಕ್‌ಮೇಲ್ ಮಾಡುತ್ತಿದ್ದಾರೆ ಎಂದು ಆರೋಪಿಸಿದರು. ಇದು ಕಾಂಗ್ರೆಸ್‌ನ ಹಳೆಯ ರಾಜಕೀಯ ನೀತಿ ಎಂದು ಟೀಕಿಸಿದರು.

ಮಹಿಷಿ ದಸರಾ ಹೆಸರಿನಲ್ಲಿ ಅಶಾಂತಿ ಸೃಷ್ಟಿಸಬಾರದು

ಮಹಿಷಿ ದಸರಾ ಆಚರಣೆ ಕುರಿತು ಮಾತನಾಡಿದ ಅವರು, ಕೆಲವರು ಪ್ರಚಾರಕ್ಕಾಗಿ ಇಂತಹ ಕಾರ್ಯಕ್ರಮಗಳನ್ನು ನಡೆಸುತ್ತಾರೆ. ಇಂತಹ ಆಚರಣೆಗಳು ಮುಂದಿನ ದಿನಗಳಲ್ಲಿ ಸಾಮಾಜಿಕವಾಗಿ ಸಮಸ್ಯೆಗಳಿಗೆ ಕಾರಣವಾಗದಂತೆ ಸರ್ಕಾರ ಎಚ್ಚರಿಕೆ ವಹಿಸಬೇಕು. ಸಮಾಜದಲ್ಲಿ ಅಶಾಂತಿ ಸೃಷ್ಟಿಸುವ ಕೆಲಸಕ್ಕೆ ಅವಕಾಶ ನೀಡಬಾರದು ಎಂದು ಹೇಳಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments