Homeಕರ್ನಾಟಕಕೆಪಿಸಿಸಿಯಲ್ಲಿ ಸರಣಿ ಸಭೆಗಳು; ಸಂಘಟನೆ ಬಲವರ್ಧನೆ, ಮತದಾನದ ಹಕ್ಕಿನ ರಕ್ಷಣೆಗೆ ಹರಿಪ್ರಸಾದ್ ಚುರುಕು

ಕೆಪಿಸಿಸಿಯಲ್ಲಿ ಸರಣಿ ಸಭೆಗಳು; ಸಂಘಟನೆ ಬಲವರ್ಧನೆ, ಮತದಾನದ ಹಕ್ಕಿನ ರಕ್ಷಣೆಗೆ ಹರಿಪ್ರಸಾದ್ ಚುರುಕು

ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯಲ್ಲಿ ಸಂಘಟನಾತ್ಮಕ ಚಟುವಟಿಕೆಗಳು ಮತ್ತಷ್ಟು ಚುರುಕುಗೊಂಡಿದ್ದು, ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಅವರ ನೇತೃತ್ವದಲ್ಲಿ ಗುರುವಾರ ಬಿಡುವಿಲ್ಲದೆ ಸರಣಿ ಸಭೆಗಳು ನಡೆದವು.

ಪಕ್ಷದ ಸಂಘಟನೆಯನ್ನು ತಳಮಟ್ಟದಿಂದ ಬಲಪಡಿಸುವುದು, ಬ್ಲಾಕ್ ಹಾಗೂ ಮಂಡಲ ಕಾಂಗ್ರೆಸ್ ಸಮಿತಿಗಳನ್ನು ಪುನರ್‌ರಚಿಸುವುದು ಹಾಗೂ ಮತದಾನದ ಹಕ್ಕಿನ ರಕ್ಷಣೆಗಾಗಿ ರಾಜ್ಯವ್ಯಾಪಿ ಹೋರಾಟವನ್ನು ತೀವ್ರಗೊಳಿಸುವ ಕುರಿತು ಸಭೆಗಳಲ್ಲಿ ವಿಸ್ತೃತ ಚರ್ಚೆ ನಡೆಯಿತು.

‘ಸಂಘಟನಾ ಸೃಜನ್ ಅಭಿಯಾನ್–2’ ಅಡಿಯಲ್ಲಿ ಬ್ಲಾಕ್ ಕಾಂಗ್ರೆಸ್ ಹಾಗೂ ಮಂಡಲ ಕಾಂಗ್ರೆಸ್ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆಗೆ ನೇಮಕಗೊಂಡಿರುವ ವೀಕ್ಷಕರೊಂದಿಗೆ ಹರಿಪ್ರಸಾದ್ ಸಭೆ ನಡೆಸಿದರು. ಸ್ಥಳೀಯ ಮಟ್ಟದಲ್ಲಿ ಪಕ್ಷದ ಸಂಘಟನೆಯನ್ನು ಮತ್ತಷ್ಟು ಬಲಪಡಿಸುವುದು, ಸಮರ್ಥ ಹಾಗೂ ಕ್ರಿಯಾಶೀಲ ಕಾರ್ಯಕರ್ತರನ್ನು ಗುರುತಿಸುವುದು ಮತ್ತು ಹೊಸ ನಾಯಕತ್ವಕ್ಕೆ ಅವಕಾಶ ಕಲ್ಪಿಸುವ ಕುರಿತು ಚರ್ಚಿಸಲಾಯಿತು. ಅಧ್ಯಕ್ಷರ ಆಯ್ಕೆ ಪ್ರಕ್ರಿಯೆಯಲ್ಲಿ ಪಾರದರ್ಶಕತೆ, ಪಕ್ಷನಿಷ್ಠೆ ಹಾಗೂ ಸಂಘಟನಾ ಸಾಮರ್ಥ್ಯಕ್ಕೆ ಆದ್ಯತೆ ನೀಡುವಂತೆ ಸೂಚಿಸಲಾಯಿತು.

ಇದೇ ವೇಳೆ ‘ಮತ ಉಳಿಸಿ–ದೇಶ ಉಳಿಸಿ’ ಆಂದೋಲನವನ್ನು ರಾಜ್ಯಾದ್ಯಂತ ತೀವ್ರಗೊಳಿಸುವ ಸಂಬಂಧವೂ ಸಭೆ ನಡೆಯಿತು. ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಅರ್ಹ ಮತದಾರರು ಮತದಾನದ ಹಕ್ಕಿನಿಂದ ವಂಚಿತರಾಗದಂತೆ ಕ್ರಮವಹಿಸುವುದು ಹಾಗೂ ಪ್ರಜಾಪ್ರಭುತ್ವ ಮತ್ತು ಸಂವಿಧಾನಬದ್ಧ ಹಕ್ಕುಗಳ ರಕ್ಷಣೆಯ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಬಗ್ಗೆ ಚರ್ಚಿಸಲಾಯಿತು.

ಆಂದೋಲನದ ಭಾಗವಾಗಿ ರಾಜ್ಯದ ಪ್ರತಿಯೊಂದು ಜಿಲ್ಲೆಯಲ್ಲಿ ಐದು ಕಿಲೋಮೀಟರ್ ಪಾದಯಾತ್ರೆ ನಡೆಸಲು ನಿರ್ಧರಿಸಲಾಯಿತು. ಮಹಾತ್ಮ ಗಾಂಧಿ ಅಥವಾ ಡಾ. ಬಿ.ಆರ್. ಅಂಬೇಡ್ಕರ್ ಅವರ ಪ್ರತಿಮೆಗೆ ಗೌರವ ಸಲ್ಲಿಸುವ ಮೂಲಕ ಪಾದಯಾತ್ರೆ ಆರಂಭಿಸುವ ಕುರಿತು ತೀರ್ಮಾನಿಸಲಾಯಿತು. ಮತದಾನದ ಹಕ್ಕಿನ ರಕ್ಷಣೆ, ಚುನಾವಣಾ ವ್ಯವಸ್ಥೆಯಲ್ಲಿ ಪಾರದರ್ಶಕತೆ ಹಾಗೂ ಚುನಾವಣಾ ಆಯೋಗದ ನಿಷ್ಪಕ್ಷಪಾತ ಕಾರ್ಯನಿರ್ವಹಣೆಯ ಅಗತ್ಯವನ್ನು ಜನರಿಗೆ ಮನವರಿಕೆ ಮಾಡಿಕೊಡುವುದು ಆಂದೋಲನದ ಉದ್ದೇಶವಾಗಿದೆ.

ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ರಾಜೀನಾಮೆ ನೀಡುವವರೆಗೂ ಹೋರಾಟ ಮುಂದುವರಿಸಬೇಕು ಎಂಬ ನಿಲುವನ್ನು ಸಭೆಯಲ್ಲಿ ವ್ಯಕ್ತಪಡಿಸಲಾಯಿತು. ಜಿಲ್ಲೆ, ಬ್ಲಾಕ್ ಹಾಗೂ ಮಂಡಲ ಮಟ್ಟದಲ್ಲಿ ಪಕ್ಷದ ಪದಾಧಿಕಾರಿಗಳು, ಜನಪ್ರತಿನಿಧಿಗಳು ಮತ್ತು ಕಾರ್ಯಕರ್ತರನ್ನು ಸಂಘಟಿಸಿ ಪ್ರತಿಭಟನೆಗಳನ್ನು ನಡೆಸುವ ಬಗ್ಗೆಯೂ ಚರ್ಚಿಸಲಾಯಿತು.

‘ವೋಟ್ ಬಚಾವೋ–ದೇಶ ಬಚಾವೋ’ ಕಾರ್ಯಕ್ರಮದ ಸಿದ್ಧತೆ, ಬೂತ್ ಮಟ್ಟದಲ್ಲಿ ಕಾರ್ಯಕರ್ತರನ್ನು ಸಕ್ರಿಯಗೊಳಿಸುವುದು ಹಾಗೂ ಮತದಾರರ ಪಟ್ಟಿಯ ಪರಿಶೀಲನೆ ಕುರಿತು ಸಭೆಯಲ್ಲಿ ಸಮಾಲೋಚನೆ ನಡೆಯಿತು. ಅರ್ಹ ಮತದಾರರ ಹೆಸರುಗಳು ಮತದಾರರ ಪಟ್ಟಿಯಿಂದ ಕೈಬಿಡದಂತೆ ಎಚ್ಚರಿಕೆ ವಹಿಸುವುದು ಮತ್ತು ಬೂತ್ ಮಟ್ಟದ ಏಜೆಂಟರ ಕಾರ್ಯನಿರ್ವಹಣೆಯನ್ನು ಪರಿಣಾಮಕಾರಿಗೊಳಿಸುವ ಅಗತ್ಯವನ್ನು ಒತ್ತಿ ಹೇಳಲಾಯಿತು.

ಮುಂಬರುವ ಗ್ರಾಮ ಪಂಚಾಯಿತಿ ಮಟ್ಟದ ಸಂಘಟನಾತ್ಮಕ ಚಟುವಟಿಕೆಗಳು ಹಾಗೂ ಜನಸಂಪರ್ಕ ಕಾರ್ಯಕ್ರಮಗಳ ಬಗ್ಗೆಯೂ ಸಭೆಯಲ್ಲಿ ಚರ್ಚಿಸಲಾಯಿತು.

ಒಟ್ಟಾರೆ, ಪಕ್ಷದ ಸಂಘಟನೆಯನ್ನು ತಳಮಟ್ಟದಿಂದ ಪುನಶ್ಚೇತನಗೊಳಿಸುವುದರ ಜೊತೆಗೆ ಮತದಾನದ ಹಕ್ಕಿನ ರಕ್ಷಣೆಗಾಗಿ ಜನಾಂದೋಲನವನ್ನು ತೀವ್ರಗೊಳಿಸುವ ದ್ವಿಮುಖ ಕಾರ್ಯತಂತ್ರವನ್ನು ಕೆಪಿಸಿಸಿ ರೂಪಿಸುತ್ತಿದೆ. ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಬಳಿಕ ಸಂಘಟನಾ ಚಟುವಟಿಕೆಗಳಿಗೆ ವೇಗ ನೀಡಿರುವ ಬಿ.ಕೆ. ಹರಿಪ್ರಸಾದ್, ನಿರಂತರ ಸಭೆಗಳು ಮತ್ತು ರಾಜ್ಯವ್ಯಾಪಿ ಕಾರ್ಯಕ್ರಮಗಳ ಮೂಲಕ ಕಾಂಗ್ರೆಸ್ ಸಂಘಟನೆಗೆ ಹೊಸ ಚೈತನ್ಯ ತುಂಬುವ ಪ್ರಯತ್ನ ನಡೆಸುತ್ತಿದ್ದಾರೆ.

ಸಭೆಯಲ್ಲಿ ಎಐಸಿಸಿ ಕಾರ್ಯದರ್ಶಿ ಗೋಪಿನಾಥ್ ಪಳನಿಯಪ್ಪನ್, ಸಚಿವ ಸತೀಶ್ ಜಾರಕಿಹೊಳಿ, ಡಿಸಿಸಿ ಅಧ್ಯಕ್ಷರು, ಕೆಪಿಸಿಸಿ ಪದಾಧಿಕಾರಿಗಳು ಹಾಗೂ ವೀಕ್ಷಕರು ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments