ಹಿಂದಿ ಹಾಗೂ ಮರಾಠಿ ಚಿತ್ರರಂಗದ ಹಿರಿಯ ನಟ, ನಿರ್ದೇಶಕ ಹಾಗೂ ಸಮಾಜಮುಖಿ ನಾನಾ ಪಾಟೇಕರ್ (75) ಅವರು ಗುರುವಾರ ಮುಂಜಾನೆ ಗೋವಾದ ಡೋನಾ ಪೌಲಾದಲ್ಲಿರುವ ತಮ್ಮ ನಿವಾಸದಲ್ಲಿ ಹೃದಯ ಸ್ತಂಭನದಿಂದ ನಿಧನರಾದರು. ಅವರ ನಿಧನದ ಸುದ್ದಿಯನ್ನು ಅವರ ಪುತ್ರ ಮಲ್ಹಾರ್ ಪಾಟೇಕರ್ ದೃಢಪಡಿಸಿದ್ದಾರೆ.
ಮುಂಜಾನೆ ಸುಮಾರು 2.30ರ ವೇಳೆಗೆ ನಾನಾ ಪಾಟೇಕರ್ ಅವರು ಅಸ್ವಸ್ಥರಾಗಿರುವುದಾಗಿ ಸ್ನೇಹಿತರೊಬ್ಬರಿಗೆ ಸಂದೇಶ ಕಳುಹಿಸಿದ್ದರು ಎನ್ನಲಾಗಿದೆ. ಬೆಳಗಿನ ಜಾವ ಅವರ ಸ್ನೇಹಿತರು ಮನೆಗೆ ತಲುಪಿದಾಗ ಅವರು ತೀವ್ರ ಅಸ್ವಸ್ಥ ಸ್ಥಿತಿಯಲ್ಲಿದ್ದರು. ತುರ್ತು ವೈದ್ಯಕೀಯ ನೆರವು ಹಾಗೂ ಸುಮಾರು 45 ನಿಮಿಷಗಳ ಕಾಲ ಸಿಪಿಆರ್ ನೀಡಿದರೂ ಚಿಕಿತ್ಸೆ ಫಲಕಾರಿಯಾಗದೆ ಬೆಳಗ್ಗೆ 5.20ರ ಸುಮಾರಿಗೆ ಅವರು ಮೃತಪಟ್ಟಿದ್ದಾರೆ. ಸಾವಿನ ನಿಖರ ಕಾರಣಕ್ಕಾಗಿ ಮರಣೋತ್ತರ ಪರೀಕ್ಷೆ ನಡೆಸಲಾಗುತ್ತಿದೆ.
ಸುಮಾರು ಐದು ದಶಕಗಳಿಗೂ ಹೆಚ್ಚು ಕಾಲ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದ ನಾನಾ ಪಾಟೇಕರ್, ತಮ್ಮ ವಿಭಿನ್ನ ಹಾಗೂ ಶಕ್ತಿಯುತ ಅಭಿನಯದಿಂದ ಭಾರತೀಯ ಚಿತ್ರರಂಗದಲ್ಲಿ ವಿಶಿಷ್ಟ ಛಾಪು ಮೂಡಿಸಿದ್ದರು. 1978ರಲ್ಲಿ ‘ಗಮನ್’ ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದ ಅವರು, ‘ಪರಿಂಧಾ’, ‘ಕ್ರಾಂತಿವೀರ್’, ‘ಅಗ್ನಿಸಾಕ್ಷಿ’, ‘ಖಾಮೋಶಿ’, ‘ಅಬ್ ತಕ್ ಛಪ್ಪನ್’, ‘ಅಪಹರಣ’, ‘ವೆಲ್ಕಮ್’, ‘ನಟಸಮ್ರಾಟ್’ ಸೇರಿದಂತೆ ಹಲವು ಚಿತ್ರಗಳಲ್ಲಿ ಸ್ಮರಣೀಯ ಪಾತ್ರಗಳನ್ನು ನಿರ್ವಹಿಸಿದ್ದರು.
ಅಭಿನಯದ ಜೊತೆಗೆ ನಿರ್ದೇಶನ ಹಾಗೂ ಬರವಣಿಗೆಯಲ್ಲಿಯೂ ತಮ್ಮ ಪ್ರತಿಭೆ ಮೆರೆದಿದ್ದ ಅವರು ‘ಪ್ರಹಾರ್: ದಿ ಫೈನಲ್ ಅಟ್ಯಾಕ್’ ಚಿತ್ರವನ್ನು ನಿರ್ದೇಶಿಸಿ, ನಟಿಸಿದ್ದರು. ಅತ್ಯುತ್ತಮ ಅಭಿನಯಕ್ಕಾಗಿ ಮೂರು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಪಡೆದಿರುವ ನಾನಾ ಪಾಟೇಕರ್ ಅವರಿಗೆ 2013ರಲ್ಲಿ ಪದ್ಮಶ್ರೀ ಪ್ರಶಸ್ತಿಯೂ ಲಭಿಸಿತ್ತು.
ಚಿತ್ರರಂಗದ ಹೊರತಾಗಿಯೂ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದ ಅವರು, ನಟ ಮಕರಂದ್ ಅನಾಸ್ಪುರೆ ಅವರೊಂದಿಗೆ ನಾಮ್ ಫೌಂಡೇಶನ್ ಮೂಲಕ ಬರಪೀಡಿತ ರೈತರು ಹಾಗೂ ಗ್ರಾಮೀಣ ಜನರ ನೆರವಿಗೆ ನಿಂತಿದ್ದರು. ಅವರ ನಿಧನಕ್ಕೆ ಚಿತ್ರರಂಗ, ರಾಜಕೀಯ ಹಾಗೂ ವಿವಿಧ ಕ್ಷೇತ್ರಗಳ ಗಣ್ಯರು ಸಂತಾಪ ಸೂಚಿಸಿದ್ದಾರೆ. ನಾನಾ ಪಾಟೇಕರ್ ಅವರ ನಿಧನದಿಂದ ಭಾರತೀಯ ಚಿತ್ರರಂಗವು ಅಪರೂಪದ ಪ್ರತಿಭೆಯೊಂದನ್ನು ಕಳೆದುಕೊಂಡಂತಾಗಿದೆ. ಅವರ ವಿಶಿಷ್ಟ ಧ್ವನಿ, ಶಕ್ತಿಯುತ ಅಭಿನಯ ಮತ್ತು ಮರೆಯಲಾಗದ ಪಾತ್ರಗಳು ಸದಾ ಪ್ರೇಕ್ಷಕರ ನೆನಪಿನಲ್ಲಿ ಉಳಿಯಲಿವೆ ಎಂದು ಹೇಳಿದ್ದಾರೆ.
ಬಹುಭಾಷಾ ನಟ, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಮತ್ತು ಸಹಜ ಅಭಿನಯಕ್ಕೆ ಹೆಸರಾಗಿದ್ದ ಹಿರಿಯ ಕಲಾವಿದ ನಾನಾ ಪಾಟೇಕರ್ ಅವರ ನಿಧನದ ಸುದ್ದಿ ಅಪಾರ ದುಃಖ ತಂದಿದೆ. ಅವರ ವೈವಿಧ್ಯಮಯ ಮತ್ತು ಆಕರ್ಷಕ ಅಭಿನಯದ ಮೂಲಕ, ಅವರು ಭಾರತೀಯ ಚಲನಚಿತ್ರೋದ್ಯಮದ ಮೇಲೆ ಅಳಿಸಲಾಗದ ಛಾಪನ್ನು ಮೂಡಿಸಿದ್ದರು ಮತ್ತು ಕನ್ನಡ ಚಲನಚಿತ್ರ ‘ಯಕ್ಷ’ದಲ್ಲಿಯೂ ನಟಿಸಿದ್ದರು.
ಅವರ ಅಗಲಿಕೆಯು ಭಾರತೀಯ ಚಲನಚಿತ್ರೋದ್ಯಮಕ್ಕೆ ತುಂಬಲಾಗದ ನಷ್ಟವನ್ನುಂಟುಮಾಡಿದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ. ಅವರ ಕುಟುಂಬ, ಸಂಬಂಧಿಕರು ಮತ್ತು ಅಭಿಮಾನಿಗಳಿಗೆ ಈ ದುಃಖವನ್ನು ಭರಿಸುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸಂತಾಪ ಸೂಚಿಸಿದ್ದಾರೆ.


