Homeಕರ್ನಾಟಕಹರಿಪ್ರಸಾದ್ ಮಾತಿಗೆ ಕವಡೆಕಾಸಿನ ಕಿಮ್ಮತ್ತಿಲ್ಲ: ಛಲವಾದಿ ನಾರಾಯಣಸ್ವಾಮಿ

ಹರಿಪ್ರಸಾದ್ ಮಾತಿಗೆ ಕವಡೆಕಾಸಿನ ಕಿಮ್ಮತ್ತಿಲ್ಲ: ಛಲವಾದಿ ನಾರಾಯಣಸ್ವಾಮಿ

ಆರ್‌ಎಸ್‌ಎಸ್‌ ವಿರುದ್ಧ ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಮಾಡುತ್ತಿರುವ ಟೀಕೆಗಳಿಗೆ ಯಾವುದೇ ಮಹತ್ವವಿಲ್ಲ. ಅವರ ಮಾತಿಗೆ ಕವಡೆಕಾಸಿನ ಕಿಮ್ಮತ್ತಿದೆಯೇ ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಪ್ರಶ್ನಿಸಿದ್ದಾರೆ.

ನಗರದಲ್ಲಿ ಸೋಮವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಆರ್‌ಎಸ್‌ಎಸ್‌ನವರ ಕೈಯಲ್ಲಿರುವುದು ದೊಣ್ಣೆಯಲ್ಲ, ಅದು ಪಥಸಂಚಲನದ ಗಣವೇಷದ ಭಾಗವಾಗಿದೆ. ಕಳೆದ 100 ವರ್ಷಗಳಲ್ಲಿ ಆರ್‌ಎಸ್‌ಎಸ್‌ ಗಣವೇಷದ ಭಾಗವಾಗಿ ದೊಣ್ಣೆ ಹಿಡಿದುಕೊಂಡು ಯಾರಿಗೂ ಮೋಸ, ಅನ್ಯಾಯ ಅಥವಾ ವಂಚನೆ ಮಾಡಿಲ್ಲ. ಯಾರನ್ನೂ ಥಳಿಸಿಲ್ಲ ಎಂದು ಹೇಳಿದರು.

ಬೆಂಗಳೂರು ಬಿಟ್ಟು ಯಾರನ್ನಾದರೂ ಓಡಿಸಲು ಸಾಧ್ಯವೇ ಎಂದು ಪ್ರಶ್ನಿಸಿದ ಅವರು, ಒಂದು ಕಾಲದಲ್ಲಿ ತಳವಾರು ಹಿಡಿದು ಓಡಾಡುತ್ತಿದ್ದವರ ಕಾಲವಿತ್ತು. ಈಗ ಅದನ್ನು ಹಿಡಿದು ಓಡಾಡಲು ಸಾಧ್ಯವಿಲ್ಲ ಎಂದು ವ್ಯಂಗ್ಯವಾಡಿದರು.

ಆರ್‌ಎಸ್‌ಎಸ್‌ ವಿರುದ್ಧ ಕಾಂಗ್ರೆಸ್‌ನವರು ಕಪೋಲಕಲ್ಪಿತ ಆರೋಪಗಳನ್ನು ಮಾಡುತ್ತಿದ್ದಾರೆಯೇ ಹೊರತು, ಯಾವುದೇ ಪ್ರಕರಣಗಳಿಲ್ಲ. ಆರ್‌ಎಸ್‌ಎಸ್‌ ಅನ್ನು ತೀವ್ರವಾಗಿ ವಿರೋಧಿಸುವವರೇ ಈಗ ಗೃಹ ಸಚಿವರಾಗಿದ್ದಾರೆ. ಆರ್‌ಎಸ್‌ಎಸ್‌ ವಿರುದ್ಧ ಯಾವುದೇ ಪ್ರಕರಣ ಬಾಕಿ ಇಲ್ಲ ಎಂದು ಅವರೇ ಹೇಳಿದ್ದಾರೆ. ಹೀಗಿರುವಾಗ ಹರಿಪ್ರಸಾದ್ ಅವರ ಹೇಳಿಕೆಗಳಿಗೆ ಏನು ಬೆಲೆ ಎಂದು ಪ್ರಶ್ನಿಸಿದರು.

ಇದು ತಳವಾರು ಕಾಲವಲ್ಲ, ವಂದೇ ಮಾತರಂ ಕಾಲ

ಇದು ತಳವಾರು ಹಿಡಿದು ಓಡಾಡುವ ಕಾಲವಲ್ಲ, ಈಗ ವಂದೇ ಮಾತರಂ ಹಾಡುವ ಕಾಲ. ವಿಧಾನಮಂಡಲದ ಅಧಿವೇಶನದಲ್ಲಿ ಪೂರ್ಣ ವಂದೇ ಮಾತರಂ ಹಾಡುತ್ತಿದ್ದೆವು. ಅದನ್ನು ಕಾಂಗ್ರೆಸ್ ನಿಲ್ಲಿಸಿದ್ದೇಕೆ ಎಂದು ಪ್ರಶ್ನಿಸಿದ ಅವರು, ಈ ವಿಚಾರದಲ್ಲಿ ಕಾಂಗ್ರೆಸ್ ತನ್ನ ಭಂಡತನ ಪ್ರದರ್ಶಿಸಿದೆ ಎಂದು ಟೀಕಿಸಿದರು.

ಕಲ್ಲೆಸೆಯಲು ಕಾರ್ಯಕರ್ತರನ್ನು ಕಳುಹಿಸಿದ್ದಾರೆ

ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಅವರಿಂದ ಒಳ್ಳೆಯದನ್ನು ನಿರೀಕ್ಷಿಸಲು ಸಾಧ್ಯವಿಲ್ಲ. ಹೊಡಿ, ಬಡಿ, ಕಡಿ ಸಂಸ್ಕೃತಿ ಅವರದ್ದಾಗಿದೆ ಎಂದು ಆರೋಪಿಸಿದರು.

ನಾನು ನಿನ್ನೆ ಎಸ್‌ಐಆರ್‌ (ವಿಶೇಷ ತೀವ್ರ ಪರಿಷ್ಕರಣೆ) ಕುರಿತು ನೀಡಿದ್ದ ಹೇಳಿಕೆಗೆ ಪ್ರತಿಯಾಗಿ, ನನ್ನ ಮನೆಗೆ ಕಲ್ಲೆಸೆಯಲು ಪುಡಿ ಕಾಂಗ್ರೆಸ್ ಕಾರ್ಯಕರ್ತರನ್ನು ಕಳುಹಿಸಿದ್ದಾರೆ ಎಂದು ಛಲವಾದಿ ನಾರಾಯಣಸ್ವಾಮಿ ದೂರಿದರು.

ಬಾಂಗ್ಲಾದೇಶೀಯರಿಗೆ ಕಾಂಗ್ರೆಸ್ ಆಶ್ರಯ: ಆರೋಪ

ಪಶ್ಚಿಮ ಬಂಗಾಳದ ನಂತರ ಕರ್ನಾಟಕದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಬಾಂಗ್ಲಾದೇಶೀಯರಿದ್ದಾರೆ ಎಂದು ಆರೋಪಿಸಿದ ಅವರು, ಕಾಂಗ್ರೆಸ್‌ನವರು ಅವರಿಗೆ ಅಡಗಿಕೊಳ್ಳಲು ಅವಕಾಶ ನೀಡುತ್ತಿದ್ದಾರೆ ಎಂದು ದೂರಿದರು.

ಕಾಫಿ ಎಸ್ಟೇಟ್‌ಗಳಲ್ಲಿ ಕೆಲಸ ಮಾಡುವವರು ಹಾಗೂ ಹೋಟೆಲ್ ಕಾರ್ಮಿಕರಾಗಿ ಕಾರ್ಯನಿರ್ವಹಿಸುವ ಬಾಂಗ್ಲಾದೇಶೀಯರು ಬೆಂಗಳೂರು, ಶಿವಮೊಗ್ಗ, ಧಾರವಾಡ, ಕಲಬುರಗಿ ಸೇರಿದಂತೆ ವಿವಿಧ ಪ್ರದೇಶಗಳಲ್ಲಿದ್ದಾರೆ. ಇವರೆಲ್ಲ ಕಾಂಗ್ರೆಸ್‌ಗೆ ಅಚ್ಚುಮೆಚ್ಚಿನವರಾಗಿದ್ದಾರೆ ಎಂದು ಟೀಕಿಸಿದರು.

ಕೇರಳದಲ್ಲಿ ಮತಗಳ್ಳತನದ ಆರೋಪವೇಕಿಲ್ಲ?

ಕೇರಳದಲ್ಲಿ ಎಸ್‌ಐಆರ್‌ನಿಂದ ಅನುಕೂಲವಾಗಿದೆ ಎಂದು ಕಾಂಗ್ರೆಸ್ ನಾಯಕ ರಮೇಶ್ ಚೆನ್ನಿತ್ತಲ ಹೇಳಿದ್ದಾರೆ. ಅಲ್ಲಿ ಕಮ್ಯುನಿಸ್ಟರ ನಕಲಿ ಮತದಾನಕ್ಕೆ ತಡೆ ಬಿದ್ದಿದ್ದು, ಪ್ರಕ್ರಿಯೆ ಅನುಕೂಲಕರವಾಗಿದೆ ಎಂದಿದ್ದಾರೆ. ಹಾಗಾದರೆ, ಕೇರಳದಲ್ಲಿ ಕಾಂಗ್ರೆಸ್‌ನವರು ಮತಗಳ್ಳತನದ ಆರೋಪ ಮಾಡದಿರುವುದೇಕೆ ಎಂದು ಪ್ರಶ್ನಿಸಿದರು.

ಕರ್ನಾಟಕದಲ್ಲಿ ಕಾಂಗ್ರೆಸ್ 136 ಸ್ಥಾನಗಳನ್ನು ಗೆದ್ದಾಗ ಮತಗಳ್ಳತನದ ಆರೋಪ ಮಾಡಿರಲಿಲ್ಲ. ತೆಲಂಗಾಣದಲ್ಲಿ ಕಾಂಗ್ರೆಸ್ ಗೆದ್ದಾಗಲೂ ಇಂತಹ ಆರೋಪ ಕೇಳಿಬಂದಿರಲಿಲ್ಲ. ದೇಶದಲ್ಲಿ ಮತಗಳ್ಳತನ ನಡೆದಿಲ್ಲ. ಕಾಂಗ್ರೆಸ್‌ಗೆ ಮತದಾರರು ಮತ ಹಾಕಿಲ್ಲ ಎಂಬ ಕಾರಣಕ್ಕೆ ಆ ಪಕ್ಷದ ನಾಯಕರು ಇಂತಹ ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ಛಲವಾದಿ ನಾರಾಯಣಸ್ವಾಮಿ ಟೀಕಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments