ವಿದ್ಯಾರ್ಥಿನಿಯರು ಎಸ್‌ಎಸ್‌ಎಲ್‌ಸಿ ಹಾಗೂ ಪಿಯು ಶಿಕ್ಷಣದಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿ, ನೀಟ್ ಹಾಗೂ ಸಿಇಟಿ ಮೂಲಕ ವೈದ್ಯಕೀಯ ಮತ್ತು ಎಂಜಿನಿಯರಿಂಗ್ ಪ್ರವೇಶ ಪಡೆಯುವ ಗುರಿ ಹೊಂದಬೇಕು. ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಿ ಐಎಎಸ್, ಐಪಿಎಸ್ ಹಾಗೂ ಕೆಎಎಸ್ ಅಧಿಕಾರಿಗಳಾಗಿ ಸೇವೆ ಸಲ್ಲಿಸುವ ಕನಸು ಕಾಣಬೇಕು ಎಂದು ಸಮಾಜ ಕಲ್ಯಾಣ ಸಚಿವ ಕೆ.ಎಚ್. ಮುನಿಯಪ್ಪ ವಿದ್ಯಾರ್ಥಿನಿಯರಿಗೆ ಕರೆ ನೀಡಿದರು.
ಹಿರಿಯೂರು ತಾಲ್ಲೂಕಿನ ಐಮಂಗಲ ಗ್ರಾಮದ ಸಮೀಪದ ಕಿತ್ತೂರು ರಾಣಿ ಚೆನ್ನಮ್ಮ ವಸತಿಶಾಲೆಗೆ ಶನಿವಾರ ಭೇಟಿ ನೀಡಿ ಪರಿಶೀಲನೆ ನಡೆಸಿದ ಅವರು, ಎಸ್‌ಎಸ್‌ಎಲ್‌ಸಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನಿಯರೊಂದಿಗೆ ಸಂವಾದ ನಡೆಸಿ, ಶೈಕ್ಷಣಿಕ ಸಾಧನೆಗೆ ಪ್ರೇರಣೆ ನೀಡಿದರು.
ಬಡತನದ ಹಿನ್ನೆಲೆಯಿಂದ ಬರುವ ಮಕ್ಕಳಿಗೆ ಉತ್ತಮ ಶಿಕ್ಷಣ ಒದಗಿಸುವ ಉದ್ದೇಶದಿಂದ ಇಲಾಖೆಯ ವಸತಿಶಾಲೆಗಳನ್ನು ನಡೆಸಲಾಗುತ್ತಿದೆ. ಪೋಷಕರಿಗೆ ಲಕ್ಷಾಂತರ ರೂಪಾಯಿ ಖರ್ಚು ಮಾಡುವ ಆರ್ಥಿಕ ಸಾಮರ್ಥ್ಯ ಇಲ್ಲದಿರಬಹುದು. ಹೀಗಾಗಿ ಲಭ್ಯವಿರುವ ಶೈಕ್ಷಣಿಕ ಅವಕಾಶಗಳನ್ನು ಸಮರ್ಪಕವಾಗಿ ಬಳಸಿಕೊಂಡು ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಸಚಿವರು ಕಿವಿಮಾತು ಹೇಳಿದರು.
ವಸತಿಶಾಲೆಯಲ್ಲಿ ಪಿಯು ಶಿಕ್ಷಣ ಆರಂಭಕ್ಕೆ ಪ್ರಸ್ತಾವನೆ
ಕಿತ್ತೂರು ರಾಣಿ ಚೆನ್ನಮ್ಮ ವಸತಿಶಾಲೆಯಲ್ಲಿಯೇ ಪಿಯು ಶಿಕ್ಷಣ ಆರಂಭಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವ ಕೆ.ಎಚ್. ಮುನಿಯಪ್ಪ ಭರವಸೆ ನೀಡಿದರು.
ಈಗಿರುವ ಕಟ್ಟಡದ ಮೇಲ್ಭಾಗದಲ್ಲಿ ಹೆಚ್ಚುವರಿ ಕೊಠಡಿಗಳನ್ನು ನಿರ್ಮಿಸಿ ಪಿಯು ಶಿಕ್ಷಣ ಆರಂಭಿಸುವ ಕುರಿತು ಯೋಜನೆ ಸಿದ್ಧಪಡಿಸಿ ಇಲಾಖೆಗೆ ಪ್ರಸ್ತಾವನೆ ಸಲ್ಲಿಸುವಂತೆ ವಸತಿಶಾಲೆಯ ಪ್ರಾಂಶುಪಾಲರಿಗೆ ಸೂಚಿಸಿದರು.
ವಸತಿಶಾಲೆಯ ಕಾರ್ಯವೈಖರಿಗೆ ಮೆಚ್ಚುಗೆ ವ್ಯಕ್ತಪಡಿಸಿದ ಅವರು, ಎಲ್ಲ ವಿದ್ಯಾರ್ಥಿನಿಯರೂ ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗುವಂತೆ ಗುರಿ ನಿಗದಿಪಡಿಸಿ ಕಾರ್ಯನಿರ್ವಹಿಸುವಂತೆ ಪ್ರಾಂಶುಪಾಲರಿಗೆ ಸೂಚಿಸಿದರು.
ವಸತಿಶಾಲೆ, ನಿಲಯಗಳಿಗೆ ಅನಿರೀಕ್ಷಿತ ಭೇಟಿ ನೀಡಿ
ಅಧಿಕಾರಿಗಳು ಕಚೇರಿ ಕೆಲಸಕ್ಕೆ ಮಾತ್ರ ಸೀಮಿತವಾಗದೆ ವಸತಿಶಾಲೆಗಳು ಹಾಗೂ ನಿಲಯಗಳಿಗೆ ನಿಯಮಿತವಾಗಿ ಭೇಟಿ ನೀಡಿ ಅಲ್ಲಿನ ವ್ಯವಸ್ಥೆಗಳನ್ನು ಪರಿಶೀಲಿಸಬೇಕು ಎಂದು ಸಚಿವರು ಅಧಿಕಾರಿಗಳಿಗೆ ಸೂಚಿಸಿದರು.
ಪ್ರತಿದಿನ ಕನಿಷ್ಠ ಒಂದು ವಸತಿಶಾಲೆ ಅಥವಾ ನಿಲಯಕ್ಕೆ ಭೇಟಿ ನೀಡಿ ಪರಿಶೀಲನಾ ವರದಿ ಸಲ್ಲಿಸುವಂತೆ ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಮಲ್ಲಿಕಾರ್ಜುನ್ ಅವರಿಗೆ ತಾಕೀತು ಮಾಡಿದರು. ಈ ಕುರಿತು ಇಲಾಖೆ ಆಯುಕ್ತರಿಂದ ಸುತ್ತೋಲೆ ಹೊರಡಿಸಲಾಗುವುದು. ಅಧಿಕಾರಿಗಳು ಪರಿಶೀಲಿಸಬೇಕಾದ ಅಂಶಗಳ ತಪಸೀಲು ಪಟ್ಟಿಯನ್ನೂ ಸುತ್ತೋಲೆಯೊಂದಿಗೆ ನೀಡಲಾಗುವುದು ಎಂದರು.
ವಸತಿಶಾಲೆ ಅಥವಾ ನಿಲಯದ ಮುಖ್ಯಸ್ಥರಿಗೆ ಯಾವುದೇ ಮುನ್ಸೂಚನೆ ನೀಡದೆ ಅನಿರೀಕ್ಷಿತವಾಗಿ ಭೇಟಿ ನೀಡಿ ಪರಿಶೀಲನೆ ನಡೆಸಬೇಕು. ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಕೂಡ ವಾರಕ್ಕೆ ಕನಿಷ್ಠ ಒಂದು ದಿನ ವಸತಿಶಾಲೆ ಹಾಗೂ ನಿಲಯಗಳನ್ನು ಪರಿಶೀಲಿಸಬೇಕು ಎಂದು ನಿರ್ದೇಶಿಸಿದರು.
ಕುಡಿಯುವ ನೀರಿಗೆ ಅನುದಾನ
ಐಮಂಗಲ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಿಂದ ವಸತಿಶಾಲೆಗೆ ನೀರು ಪೂರೈಸುವಂತೆ ವಿದ್ಯಾರ್ಥಿನಿಯರು ಸಚಿವರಲ್ಲಿ ಮನವಿ ಮಾಡಿದರು.
ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಸಚಿವರು, ಪೈಪ್‌ಲೈನ್ ಕಾಮಗಾರಿಗೆ ಅಗತ್ಯವಾದ ಯೋಜನಾ ವರದಿ ಸಿದ್ಧಪಡಿಸುವಂತೆ ಜಿಲ್ಲಾ ಪಂಚಾಯಿತಿ ಸಿಇಒಗೆ ಸೂಚಿಸಿದರು. ಕಾಮಗಾರಿಗೆ ತಗಲುವ ವೆಚ್ಚಕ್ಕೆ ಇಲಾಖೆಯಿಂದ ಅನುದಾನ ಒದಗಿಸುವುದಾಗಿ ಭರವಸೆ ನೀಡಿದರು.
ಬೋಧನಾ ಕೊಠಡಿಗಳು, ಪ್ರಯೋಗಾಲಯ, ಡಾರ್ಮಿಟರಿ ಹಾಗೂ ಭೋಜನಾಲಯ ಸೇರಿದಂತೆ ವಸತಿಶಾಲೆಯ ವಿವಿಧ ವಿಭಾಗಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.
ಮಕ್ಕಳಿಗೆ ಪೌಷ್ಠಿಕ ಆಹಾರ ನೀಡಲು ಸೂಚನೆ
ವಸತಿಶಾಲೆಯ ಅಡುಗೆ ಸಿಬ್ಬಂದಿಯೊಂದಿಗೆ ಸಂವಾದ ನಡೆಸಿದ ಸಚಿವರು, ಸೊಪ್ಪು ಮತ್ತು ತರಕಾರಿಗಳನ್ನು ಸ್ವಚ್ಛವಾಗಿ ನೀರಿನಲ್ಲಿ ತೊಳೆದು ಅಡುಗೆಗೆ ಬಳಸಬೇಕು. ನಿಗದಿತ ಮೆನುವಿನಂತೆ ಮಕ್ಕಳಿಗೆ ಪೌಷ್ಠಿಕ ಆಹಾರ ಒದಗಿಸಬೇಕು. ಮೊಟ್ಟೆ ಹಾಗೂ ಬಾಳೆಹಣ್ಣುಗಳನ್ನು ತಪ್ಪದೇ ವಿತರಿಸುವಂತೆ ಸೂಚಿಸಿದರು.
ಈ ಸಂದರ್ಭದಲ್ಲಿ ಹಲವು ವರ್ಷಗಳಿಂದ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿರುವ ಅಡುಗೆ ಸಿಬ್ಬಂದಿ ತಮ್ಮನ್ನು ಖಾಯಂಗೊಳಿಸುವಂತೆ ಸಚಿವರಲ್ಲಿ ಮನವಿ ಮಾಡಿದರು.
ಇಲಾಖೆಯ ಖಾಯಂ ಅಡುಗೆ ಸಿಬ್ಬಂದಿಗೆ ಸೇವಾ ಹಿರಿತನದ ಆಧಾರದ ಮೇಲೆ ಬಡ್ತಿ ನೀಡಲಾಗುತ್ತದೆ. ಮುಂದಿನ ದಿನಗಳಲ್ಲಿ ಖಾಲಿಯಾಗುವ ಹುದ್ದೆಗಳಲ್ಲಿ ಕ್ರೈಸ್ ಅಡಿಯಲ್ಲಿ ಈಗಾಗಲೇ ಕಾರ್ಯನಿರ್ವಹಿಸುತ್ತಿರುವ ಅಡುಗೆ ಸಿಬ್ಬಂದಿಗೆ ಆದ್ಯತೆ ನೀಡುವ ಕುರಿತು ಪ್ರಯತ್ನಿಸಲಾಗುವುದು ಎಂದು ಸಚಿವರು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಮಾಜಿ ಸಚಿವ ಎಚ್. ಆಂಜನೇಯ, ಮಾಜಿ ಸಂಸದ ಬಿ.ಎನ್. ಚಂದ್ರಪ್ಪ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಎಸ್. ಆಕಾಶ್, ಅಪರ ಜಿಲ್ಲಾಧಿಕಾರಿ ಬಿ.ಟಿ. ಕುಮಾರಸ್ವಾಮಿ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಮಲ್ಲಿಕಾರ್ಜುನ್, ವಸತಿಶಾಲೆ ಪ್ರಾಂಶುಪಾಲ ಆರ್. ರಮೇಶ್ ಸೇರಿದಂತೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.


