ಪರಿಸರ ಸಂರಕ್ಷಣೆಯ ಹೆಸರಿನಲ್ಲಿ ಮಲೆನಾಡಿನ ಜನರ ಬದುಕು, ಕೃಷಿ ಹಾಗೂ ಭವಿಷ್ಯಕ್ಕೆ ಧಕ್ಕೆ ತರುವ ಯಾವುದೇ ಕ್ರಮಕ್ಕೆ ರಾಜ್ಯ ಸರ್ಕಾರ ಅವಕಾಶ ನೀಡುವುದಿಲ್ಲ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಹಾಗೂ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಹೇಳಿದರು.
ಸೋಮವಾರ ಶಿವಮೊಗ್ಗದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಶ್ಚಿಮ ಘಟ್ಟ ರಾಜ್ಯದ ಹೆಮ್ಮೆ ಮತ್ತು ಅಮೂಲ್ಯ ಸಂಪತ್ತಾಗಿದ್ದು, ಅದರ ಸಂರಕ್ಷಣೆಗೆ ಸರ್ಕಾರ ಬದ್ಧವಾಗಿದೆ. ಆದರೆ, ಪರಿಸರದೊಂದಿಗೆ ಬದುಕುತ್ತಿರುವ ಮಲೆನಾಡಿನ ಜನರನ್ನೇ ಸಂಕಷ್ಟಕ್ಕೆ ಸಿಲುಕಿಸುವ ಯಾವುದೇ ಕ್ರಮವನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದರು.
ಕಸ್ತೂರಿ ರಂಗನ್ ವರದಿ ಜಾರಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಪದೇಪದೇ ಕರಡು ಅಧಿಸೂಚನೆ ಹೊರಡಿಸುತ್ತಿರುವುದನ್ನು ಪ್ರಶ್ನಿಸಿದ ಅವರು, ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ನಾಯಕರು ಮೊದಲು ತಮ್ಮ ಸರ್ಕಾರದ ನಿಲುವನ್ನು ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದರು.
ರಾಜ್ಯ ಸರ್ಕಾರ ಈಗಾಗಲೇ ಕಸ್ತೂರಿ ರಂಗನ್ ವರದಿಯ ಕರಡು ಅಧಿಸೂಚನೆಯನ್ನು ಆರು ಬಾರಿ ತಿರಸ್ಕರಿಸಿದೆ. ವಿಧಾನಸಭೆಯಲ್ಲಿಯೂ ವರದಿಯನ್ನು ವಿರೋಧಿಸಿ ನಿರ್ಣಯ ಕೈಗೊಂಡು ಕೇಂದ್ರಕ್ಕೆ ಕಳುಹಿಸಲಾಗಿದೆ. ಆದರೂ ಇದೀಗ ಏಳನೇ ಬಾರಿಗೆ ಕರಡು ಅಧಿಸೂಚನೆ ಹೊರಡಿಸಿರುವುದು ಏಕೆ ಎಂದು ಅವರು ಪ್ರಶ್ನಿಸಿದರು.
ವರದಿ ಜಾರಿ ವಿಚಾರವಾಗಿ ಚರ್ಚಿಸಲು ವಿಶೇಷ ಅಧಿವೇಶನ ಕರೆಯುವ ತೀರ್ಮಾನವನ್ನು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಕೈಗೊಂಡಿದ್ದಾರೆ. ಅಗತ್ಯವಿದ್ದರೆ ನ್ಯಾಯಾಲಯದ ಮೊರೆ ಹೋಗಿಯಾದರೂ ಮಲೆನಾಡಿನ ಜನರನ್ನು ರಕ್ಷಿಸಲಾಗುವುದು ಎಂದು ಮಧು ಬಂಗಾರಪ್ಪ ತಿಳಿಸಿದರು.
ಸಂಸದರು ಸಭೆಗೆ ಏಕೆ ಹಾಜರಾಗಿರಲಿಲ್ಲ?
2016ರ ಆಗಸ್ಟ್ 11ರಂದು ಕೇಂದ್ರ ಸರ್ಕಾರ ಕರೆದಿದ್ದ ಮಹತ್ವದ ಸಭೆಗೆ ಶಿವಮೊಗ್ಗದ ಸಂಸದ ಬಿ.ವೈ. ರಾಘವೇಂದ್ರ ಹಾಗೂ ಅಂದಿನ ಉಡುಪಿ-ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಭಾಗವಹಿಸದೇ ಇದ್ದುದನ್ನು ಸಚಿವರು ಪ್ರಶ್ನಿಸಿದರು.
ಮಲೆನಾಡಿನ ಜನರ ಬದುಕಿನ ಮೇಲೆ ಪರಿಣಾಮ ಬೀರುವ ಇಂತಹ ಮಹತ್ವದ ಸಭೆಗೆ ಸಂಸದರು ಗೈರಾಗಿದ್ದು ಏಕೆ? ಅಂದು ಜನರ ಪರವಾಗಿ ತಮ್ಮ ಜವಾಬ್ದಾರಿ ನಿರ್ವಹಿಸಿದ್ದಾರೆಯೇ? ಎಂದು ಅವರು ಪ್ರಶ್ನಿಸಿದರು.
ತೀರ್ಥಹಳ್ಳಿಯಲ್ಲಿ ಗ್ರಾಮಗಳ ಸಂಖ್ಯೆ ಹೆಚ್ಚಳ
ಕಸ್ತೂರಿ ರಂಗನ್ ವರದಿಯ ಮೊದಲ ಆರು ಕರಡು ಅಧಿಸೂಚನೆಗಳಲ್ಲಿ ತೀರ್ಥಹಳ್ಳಿ ತಾಲ್ಲೂಕಿನ 139 ಗ್ರಾಮಗಳನ್ನು ಸೇರಿಸಲಾಗಿತ್ತು. ಇದನ್ನು ಸ್ಥಳೀಯರು ಹಾಗೂ ರಾಜ್ಯ ಸರ್ಕಾರ ವಿರೋಧಿಸಿದ್ದರು. ಇದೀಗ ಅಂತಿಮ ಅಧಿಸೂಚನೆಯ ಹೆಸರಿನಲ್ಲಿ ಗ್ರಾಮಗಳ ಸಂಖ್ಯೆಯನ್ನು 154ಕ್ಕೆ ಹೆಚ್ಚಿಸುವ ಪ್ರಯತ್ನ ನಡೆಯುತ್ತಿದೆ ಎಂದು ಮಧು ಬಂಗಾರಪ್ಪ ಆರೋಪಿಸಿದರು.
ಮಲೆನಾಡಿನ ನೆಲ, ಕೃಷಿ, ಬದುಕು ಮತ್ತು ಭವಿಷ್ಯವನ್ನು ರಕ್ಷಿಸಲು ಸರ್ಕಾರ ನಿರಂತರವಾಗಿ ಹೋರಾಟ ನಡೆಸುತ್ತಿದೆ. ಇದೇ ಹಿನ್ನೆಲೆಯಲ್ಲಿ ತೀರ್ಥಹಳ್ಳಿಯಲ್ಲಿ ಪಾದಯಾತ್ರೆ ನಡೆಸಲಾಗುತ್ತಿದೆ ಎಂದು ತಿಳಿಸಿದರು.
‘ಮಲೆನಾಡಿನ ಜನರು ಪ್ರಕೃತಿಯ ಶತ್ರುಗಳಲ್ಲ’
ಮಲೆನಾಡಿನ ಜನರು ಸಾವಿರಾರು ವರ್ಷಗಳಿಂದ ಪಶ್ಚಿಮ ಘಟ್ಟದಲ್ಲಿ ಪ್ರಕೃತಿಯೊಂದಿಗೆ ಬದುಕುತ್ತಿದ್ದಾರೆ. ಅಡಿಕೆ, ಭತ್ತ, ಕಾಫಿ, ಮೆಣಸು ಸೇರಿದಂತೆ ವಿವಿಧ ಬೆಳೆಗಳನ್ನು ಬೆಳೆಯುತ್ತಾ ಪರಿಸರವನ್ನು ಕಾಪಾಡಿಕೊಂಡು ಬಂದಿದ್ದಾರೆ. ಹೀಗಾಗಿ ಮಲೆನಾಡಿನ ಜನರು ಪ್ರಕೃತಿಯ ಶತ್ರುಗಳಲ್ಲ ಎಂದು ಸಚಿವರು ಹೇಳಿದರು.
ಉಪಗ್ರಹ ಆಧಾರಿತ ನಕ್ಷೆಗಳ ಮೂಲಕ ಪ್ರದೇಶಗಳನ್ನು ಗುರುತಿಸುವಾಗ ಅಲ್ಲಿನ ಜನರ ಬದುಕು, ಕೃಷಿ ಹಾಗೂ ಸ್ಥಳೀಯ ವಾಸ್ತವಾಂಶಗಳನ್ನು ಸಮರ್ಪಕವಾಗಿ ಪರಿಗಣಿಸಲಾಗಿದೆಯೇ ಎಂಬುದನ್ನು ಪರಿಶೀಲಿಸಬೇಕು. ಕಚೇರಿಯಲ್ಲಿ ಕುಳಿತು ನಕ್ಷೆ ನೋಡಿ ಮಲೆನಾಡಿನ ಜನಜೀವನವನ್ನು ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ ಎಂದರು.
ಬಂಗಾರಪ್ಪ ಅವರ ಹಾದಿಯಲ್ಲಿ ಮುಖ್ಯಮಂತ್ರಿ
ನನ್ನ ತಂದೆ ಎಸ್. ಬಂಗಾರಪ್ಪ ಅವರು ಕಾವೇರಿ ನೀರಿನ ವಿಚಾರದಲ್ಲಿ ವಿಶೇಷ ಅಧಿವೇಶನ ಕರೆದಿದ್ದರು. ಅದೇ ಹಾದಿಯಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಕಸ್ತೂರಿ ರಂಗನ್ ವರದಿ ಕುರಿತು ವಿಶೇಷ ಅಧಿವೇಶನ ಕರೆಯುತ್ತಿರುವುದು ಸ್ವಾಗತಾರ್ಹ ಎಂದು ಮಧು ಬಂಗಾರಪ್ಪ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾಜಿ ಸಂಸದ ಆಯನೂರು ಮಂಜುನಾಥ್ ಸೇರಿದಂತೆ ಕಾಂಗ್ರೆಸ್ ಮುಖಂಡರು ಉಪಸ್ಥಿತರಿದ್ದರು.
ಶಿಕಾರಿಪುರದಲ್ಲಿ ಇಂದು ಜಿಲ್ಲಾಮಟ್ಟದ ಪ್ರಜಾಸೇವೆ ಕಾರ್ಯಕ್ರಮ
ಸರ್ಕಾರದ ವಿವಿಧ ಸೇವೆ ಹಾಗೂ ಸೌಲಭ್ಯಗಳನ್ನು ಜನರ ಮನೆ ಬಾಗಿಲಿಗೆ ತಲುಪಿಸುವ ಉದ್ದೇಶದಿಂದ ಪ್ರಜಾಸೇವೆ ಇಲಾಖೆಯನ್ನು ರೂಪಿಸಲಾಗಿದೆ ಎಂದು ಸಚಿವ ಮಧು ಬಂಗಾರಪ್ಪ ತಿಳಿಸಿದರು. ಸರ್ಕಾರಿ ಕಚೇರಿಗಳಿಗೆ ಜನರು ಪದೇಪದೇ ಅಲೆದಾಡುವುದನ್ನು ತಪ್ಪಿಸಿ, ಸೇವೆಗಳನ್ನು ತ್ವರಿತವಾಗಿ ಒದಗಿಸುವುದು ಇಲಾಖೆಯ ಪ್ರಮುಖ ಉದ್ದೇಶವಾಗಿದೆ ಎಂದರು.
ಶಿಕಾರಿಪುರದಲ್ಲಿ ಜಿಲ್ಲಾಮಟ್ಟದ ಕಾರ್ಯಕ್ರಮ ಆಯೋಜಿಸಿರುವ ಕುರಿತು ಮಾತನಾಡಿದ ಅವರು, “ಶಿವಮೊಗ್ಗ ಜಿಲ್ಲೆಯಲ್ಲಿ ಸೂರ್ಯ ಮೊದಲು ಕಾಣಿಸಿಕೊಳ್ಳುವುದು ಶಿಕಾರಿಪುರದಲ್ಲಿ. ಹೀಗಾಗಿ ಇಲ್ಲಿಂದಲೇ ಕಾರ್ಯಕ್ರಮಕ್ಕೆ ಚಾಲನೆ ನೀಡುತ್ತಿದ್ದೇವೆ” ಎಂದು ಹೇಳಿದರು.
ಶಿಕ್ಷಕರು ‘Tr.’ ಬಳಸುವುದಕ್ಕೆ ವಿರೋಧ ಸರಿಯಲ್ಲ
ರಾಜ್ಯದ ಶಿಕ್ಷಕರು ತಮ್ಮ ಹೆಸರಿನ ಹಿಂದೆ ‘Tr.’ (Teacher) ಎಂಬ ಪೂರ್ವಪ್ರತ್ಯಯ ಬಳಸಲು ಅಧಿಕೃತ ಅನುಮತಿ ನೀಡಲಾಗಿದೆ. ಶಿಕ್ಷಕರಿಗೆ ಗೌರವ ಸೂಚಿಸುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದ್ದು, ಇದನ್ನು ಟೀಕಿಸುವುದು ಸರಿಯಲ್ಲ ಎಂದು ಸಚಿವರು ಹೇಳಿದರು.
ಪ್ರಾಧ್ಯಾಪಕರಿಗೆ ಗೌರವ ನೀಡುವಂತೆ ಜ್ಞಾನವನ್ನು ಧಾರೆ ಎರೆಯುವ ಶಿಕ್ಷಕರಿಗೂ ಗೌರವ ನೀಡಬೇಕು ಎಂಬ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ. ಇದನ್ನು ಸಕಾರಾತ್ಮಕವಾಗಿ ನೋಡಬೇಕು ಎಂದರು.


