ಭಾರತರತ್ನ, ಮಾಜಿ ಪ್ರಧಾನಿ ರಾಜೀವ್ ಗಾಂಧಿಯವರು ರಾಷ್ಟ್ರದ ಏಳಿಗೆಗೆ ಹಗಲಿರುಳು ದುಡಿದರು. ಹಾಗೆಯೇ ದೇವರಾಜ ಅರಸು ಅವರು ರಾಜ್ಯದ ಏಳಿಗೆಗೆ ದುಡಿದವರು ಎಂದು ಕೆಪಿಸಿಸಿ ಅಧ್ಯಕ್ಷರಾದ ಬಿ ಕೆ ಹರಿಪ್ರಸಾದ್ ಅವರು ಹೇಳಿದರು.
ಭಾರತರತ್ನ, ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹಾಗೂ ಮಾಜಿ ಸಿಎಂ ದೇವರಾಜ ಅರಸು ಅವರ ಜನ್ಮದಿನದ ಅಂಗವಾಗಿ ಫ್ರೀಡಂ ಪಾರ್ಕ್ ನಲ್ಲಿ ಗುರುವಾರ ನಡೆದ ಸದ್ಭಾವನಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
“ಜಾತ್ಯಾತೀತ ತತ್ವ ಉಳಿಬೇಕು ಎಂದು ಕಾಂಗ್ರೆಸ್ ಪಕ್ಷ ಹೋರಾಟ ಮಾಡುತ್ತ ಬಂದಿದ್ದು, ನಾವೆಲ್ಲರು ಜಾತ್ಯಾತೀತ ತತ್ವ ಉಳಿವಿಗಾಗಿ ಹೋರಾಡಬೇಕು ಜಾತ್ಯಾತೀತ ತತ್ವ ಕಾಪಾಡಲು ಹೋದ ಗಾಂಧಿಯವರನ್ನು ಚಡ್ಡಿದಾರಿಯೊಬ್ಬ ಕೊಲೆ ಮಾಡಿದ್ದಾನೆ, ಈ ದೇಶದ ಐಕ್ಯತೆಗೆ ದಕ್ಕೆಯಾದಾಗ ಇಂದಿರಾಗಾಂಧಿ ಅವರು ತಮ್ಮ ಪ್ರಾಣವನ್ನೇ ನೀಡಿದರು. ಹಾಗೆಯೇ ರಾಜೀವ್ ಗಾಂಧಿ ಅವರು ಸಹ ಈ ದೇಶಕ್ಕಾಗಿ ಪ್ರಾಣ ನೀಡಿದರು ಅವರೆಲ್ಲರ ತ್ಯಾಗವನ್ನು ನಾವು ಸ್ಮರಿಸಿಕೊಂಡು ಅವರು ನಡೆದ ದಾರಿಯಲ್ಲಿ ನಡೆಯೋಣ”ಎಂದರು.
“ದೇಶಕ್ಕೆ ಹೋರಾಟ ಮಾಡಿದ ಒಬ್ಬನೇ ಒಬ್ಬ ಬಿಜೆಪಿ ನಾಯಕರ ಹೆಸರು ಇದೆಯೇ? ದೇಶದ ಬದಲು ರಾಮನಿಗಾಗಿ ಪ್ರಾಣ ಕೊಟ್ಟ ಇತಿಹಾಸವಿದೆಯೇ? ರಾಮನಿಗೆ ಪ್ರಾಣ ಕೊಟ್ಟವರು ಈ ದೇಶದ ಶೂದ್ರ, ದಲಿತ, ಹಿಂದುಳಿದ ವರ್ಗದ ಜನರು. ಹುಂಡಿ ಕಳ್ಳತನ ಮಾಡುವ ಜನರು ನಮಗೆ ದೇಶಭಕ್ತಿ ಪಾಠ, ಧರ್ಮದ ಬಗ್ಗೆ ಗೌರವ ಹೇಳಿಕೊಡುವ ಕೆಲಸ ಮಾಡುತ್ತಿದ್ದಾರೆ” ಎಂದು ಬಿಜೆಪಿಯನ್ನು ಟೀಕಿಸಿದರು.
ಸಿದ್ದರಾಮಯ್ಯರವರು, ನಾನು ಸೇರಿದಂತೆ ಅನೇಕ ಹಿಂದುಳಿದ ವರ್ಗದ ನಾಯಕರು ಇಷ್ಟು ಎತ್ತರಕ್ಕೆ ಬೆಳೆಯಲು ದೇವರಾಜ ಅರಸು ಅವರೇ ಕಾರಣ. ನಾನು ಅರಸು ಅವರ ಜೊತೆ ಕೆಲಸ ಮಾಡಿದವನು. ನಾವು ಅವರಿಗೆ ಎಷ್ಟೇ ನೋವು ಮಾಡಿದ್ದರೂ ಸಹ ನಮ್ಮ ಬಗ್ಗೆ ಬೇದ ಭಾವ ಮಾಡಲಿಲ್ಲ. ನಮ್ಮ ಹಿತಚಿಂತಕರಾಗಿ ನಮ್ಮನ್ನು ಕಾಪಾಡಿದ್ದಾರೆ. ಹಲವಾರು ಜನಪರ ಯೋಜನೆಗಳನ್ನು ತಂದು ರಕ್ತ ರಹಿತ ಕ್ರಾಂತಿ ಮಾಡಿದವರು. ಅವರು ಹಾವನೂರು ಆಯೋಗದ ವರದಿ ತಂದಾಗ ಅದನ್ನು ವಿಧಾನಸೌಧದಲ್ಲಿಯೇ ಕೆಲವರು ಸುಡುವ ಯತ್ನ ಮಾಡಿದ್ದರು. ಆದರೂ ಇವರು ಯಾವುದಕ್ಕೂ ಅಂಜದೆ ಹಿಂದುಳಿದ ವರ್ಗಗಳ ಪರ ಕೆಲಸ ಮಾಡಿದರು ಎಂದರು.
ರಾಜೀವ್ ಗಾಂಧಿ ಅವರ ಚಿಂತನೆ ಸಾಮಾಜಿಕ ನ್ಯಾಯದ ಜೊತೆಗೆ ಸಮಾನ ಅವಕಾಶ ನೀಡುವುದು. ಬಡವರನ್ನು ಮುಖ್ಯ ವಾಹಿನಿಗೆ ಕರೆದುಕೊಂಡು ಬರುವುದಾಗಿತ್ತು ಅವರು ಎಂದಿಗೂ ದ್ವೇಷದ ರಾಜಕೀಯ ಮಾಡಿದವರಲ್ಲ. ನಾನು ರಾಜೀವ್ ಗಾಂಧಿ, ಸಂಜಯ್ ಗಾಂಧಿ ಅವರ ಜೊತೆ ಕೆಲಸ ಮಾಡಿದವನು. ಅವರ ದೂರದೃಷ್ಟಿ ಅದ್ಬುತವಾಗಿತ್ತು. 21 ನೇ ಶತಮಾನದ ಯುವಕರಿಗೆ ಏನು ನೀಡಬೇಕು? ಎಂಬುದು ರಾಜೀವ್ ಗಾಂಧಿ ಅವರಿಗೆ ಮೊದಲೇ ಗೊತ್ತಿತ್ತು ಎಂದು ಹೇಳಿದರು.


