- ಶಿವಮೊಗ್ಗದ ನೆಹರು ಕ್ರೀಡಾಂಗಣದಲ್ಲಿ ಶನಿವಾರ ನಡೆದ 80ನೇ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಧ್ವಜಾರೋಹಣ ನೆರವೇರಿಸಿದ ಸಚಿವ ಮಧು ಬಂಗಾರಪ್ಪ
- 10,000 ‘ಭಾರತ್ ಜೋಡೋ ಯುವಕ ಸಂಘ’ | ಯುವಕರು ಸಮಾಜ ನಿರ್ಮಾಣದ ಸಕ್ರಿಯ ಭಾಗವಾಗಬೇಕು: ಸಚಿವ ಮಧು ಬಂಗಾರಪ್ಪ ಕರೆ
- ’ಶಿವಮೊಗ್ಗದ ಈಸೂರು ಕೇವಲ ಒಂದು ಗ್ರಾಮವಲ್ಲ. ಗ್ರಾಮೀಣ ಭಾರತದ ಸ್ವಾತಂತ್ರ್ಯ ಹೋರಾಟದ ಬಹುದೊಡ್ಡ ತ್ಯಾಗದ ಸಂಕೇತ’
- ’ರಾಜ್ಯದ ಯುವ ಜನರ ಭದ್ರ ಭವಿಷ್ಯ ನಿರ್ಮಾಣಕ್ಕೆ ಬದ್ಧವಾಗಿರುವ ಸರ್ಕಾರ, ಮುಂದಿನ ದಿನಗಳಲ್ಲಿ 72,000 ಸರ್ಕಾರಿ ಹುದ್ದೆಗಳ ಭರ್ತಿಗೆ ಮಹತ್ವದ ಹೆಜ್ಜೆ’
- ’ಸರ್ಕಾರಿ ಶಾಲೆಗಳ ಗುಣಮಟ್ಟ ಬಲಪಡಿಸಲು 15,000 ಶಿಕ್ಷಕರ ನೇರ ನೇಮಕಾತಿಗೆ ಈಗಾಗಲೇ ಅಧಿಸೂಚನೆ’
ಹಿರಿಯರು ಯಾವ ಭಾರತಕ್ಕಾಗಿ ಹೋರಾಡಿದರೋ, ಆ ಭಾರತವನ್ನು ನಿರ್ಮಿಸುವ ಸಂಕಲ್ಪ ಮಾಡುವುದು ನಮ್ಮ ಕರ್ತವ್ಯ. ನಮ್ಮ ಮುಂದೆ ಹೊಸ ಸವಾಲುಗಳಿವೆ. ಬಡತನ, ಹಸಿವು, ಅನಕ್ಷರತೆ, ನಿರುದ್ಯೋಗ, ಅನ್ಯಾಯದ ವಿರುದ್ಧ ನಮ್ಮ ಹೊಸ ಸ್ವಾತಂತ್ರ್ಯ ಹೋರಾಟ ಇರಬೇಕು. ಜಾತಿ–ಧರ್ಮದ ಹೆಸರಿನಲ್ಲಿ ಜನರನ್ನು ಬೇರ್ಪಡಿಸುವ ಮನಸ್ಥಿತಿಯ ವಿರುದ್ಧ ನಮ್ಮ ಹೋರಾಟ ಇರಲಿ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆಯ ಸಚಿವರು ಮತ್ತು ಶಿವಮೊಗ್ಗ ಜಿಲ್ಲೆಯ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಕರೆ ನೀಡಿದರು.
ಶಿವಮೊಗ್ಗ ಜಿಲ್ಲಾ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಶಿವಮೊಗ್ಗದ ನೆಹರು ಕ್ರೀಡಾಂಗಣದಲ್ಲಿ ಶನಿವಾರ ನಡೆದ 80ನೇ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಧ್ವಜಾರೋಹಣ ನೆರವೇರಿಸಿ, ಶಿವಮೊಗ್ಗ ಜಿಲ್ಲೆಯ ನಾಗರಿಕ ಬಂಧುಗಳಿಗೂ ಮತ್ತು ನಾಡಿನ ಸಮಸ್ತೆ ಜನತೆಗೂ ಭಾರತದ 80ನೇ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳನ್ನು ತಿಳಿಸಿ ಮಾತನಾಡಿದರು.
“ಯುವಕರಿಗಾಗಿ ರಾಜ್ಯಾದ್ಯಂತ 10,000 “ಭಾರತ್ ಜೋಡೋ ಯುವಕ ಸಂಘ”ಗಳನ್ನು ಸ್ಥಾಪಿಸಲು ಮಾರ್ಗಸೂಚಿ ಹೊರಡಿಸಲಾಗಿದೆ. ಪ್ರತಿ ಸಂಘಕ್ಕೆ ಸರ್ಕಾರ ವಾರ್ಷಿಕ ₹10 ಲಕ್ಷ ಅನುದಾನವನ್ನು ಮೂರು ಕಂತುಗಳಲ್ಲಿ ನೀಡಲಿದೆ. ಯುವಕರು ಸಮಾಜ ನಿರ್ಮಾಣದ ಸಕ್ರಿಯ ಭಾಗವಾಗಬೇಕು” ಎಂದು ತಿಳಿಸಿದರು.
“ಇಂದು ಇಡೀ ದೇಶವೇ ಹೆಮ್ಮೆಯಿಂದ, ದೇಶಭಕ್ತಿಯ ಭಾವನೆಯೊಂದಿಗೆ 80ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸುತ್ತಿದೆ. ಅಸಂಖ್ಯಾತ ದೇಶಭಕ್ತರ ತ್ಯಾಗ, ಹೋರಾಟ ಹಾಗೂ ಬಲಿದಾನ ಫಲದಿಂದ ಭಾರತವು ಶತಮಾನಗಳ ದಾಸ್ಯದಿಂದ ಮುಕ್ತವಾಗಿದೆ. ಮಹಾತ್ಮ ಗಾಂಧೀಜಿ, ಬಾಲಗಂಗಾಧರ ತಿಲಕ್, ಬಿಪಿನ್ ಚಂದ್ರಪಾಲ್, ಜವಹರಲಾಲ್ ನೆಹರು, ಸರ್ದಾರ್ ವಲ್ಲಭಭಾಯಿ ಪಟೇಲ್ ಸೇರಿದಂತೆ ಅನೇಕ ಮಹನೀಯರ ಹೋರಾಟದ ಫಲವಾಗಿ ನಮಗೆ ಸ್ವಾತಂತ್ರ್ಯ ದೊರೆತಿದೆ. ಅವರೆಲ್ಲರಿಗೂ ಇಂದು ಕೋಟಿ ಕೋಟಿ ನಮನ ಸಲ್ಲಿಸೋಣ” ಎಂದರು.
“ನಾವು ನಿಂತಿರುವ ಶಿವಮೊಗ್ಗ ನೆಲ ಸಾಮಾನ್ಯವಲ್ಲ. ಇದು ಹೋರಾಟದ ನೆಲ. ಸ್ವಾಭಿಮಾನದ ನೆಲ. ಸ್ವಾತಂತ್ರ್ಯ ಹೋರಾಟದಲ್ಲಿ ನಮ್ಮ ಜಿಲ್ಲೆಯ ಅನೇಕರು ಭಾಗವಹಿಸಿದ್ದರು. ವಿಶೇಷವಾಗಿ ಶಾಂತವೇರಿ ಗೋಪಾಲಗೌಡರು, ಕಡಿದಾಳ್ ಮಂಜಪ್ಪನವರು ಹಾಗೂ ಬ್ರಿಟಿಷರ ವಿರುದ್ಧ ಹೋರಾಡಿದ ಈಸೂರಿನ ಸ್ವಾತಂತ್ರ್ಯ ಹೋರಾಟಗಾರರ ನೆನಪು ನಮ್ಮಲ್ಲಿ ಸದಾ ಜೀವಂತ” ಎಂದು ಸ್ಮರಿಸಿದರು.
ಈಸೂರು : ಗ್ರಾಮೀಣ ಭಾರತದ ಸ್ವಾತಂತ್ರ್ಯ ಹೋರಾಟದ ಬಹುದೊಡ್ಡ ತ್ಯಾಗದ ಸಂಕೇತ
“ಈಸೂರು ಕೇವಲ ಒಂದು ಗ್ರಾಮವಲ್ಲ. ಗ್ರಾಮೀಣ ಭಾರತದ ಸ್ವಾತಂತ್ರ್ಯ ಹೋರಾಟದ ಬಹುದೊಡ್ಡ ತ್ಯಾಗದ ಸಂಕೇತವಾಗಿದೆ. ದೊಡ್ಡ ಸೇನೆ, ಶಸ್ತ್ರಾಸ್ತ್ರ ಯಾವುದೂ ಇಲ್ಲದೆ ಧೈರ್ಯ ಮತ್ತು ಸ್ವಾತಂತ್ರ್ಯದ ಹಂಬಲದಿಂದ ಬ್ರಿಟಿಷರ ವಿರುದ್ಧ ನಿಂತ ಜನರ ನೆಲ” ಎಂದು ಬಣ್ಣಿಸಿದರು.
“ಸ್ವಾತಂತ್ರ್ಯ ಎಂದರೆ ಕೇವಲ ಧ್ವಜ ಹಾರಿಸುವುದಲ್ಲ. ಪ್ರತಿಯೊಬ್ಬ ಮನುಷ್ಯ ಗೌರವದಿಂದ ಬದುಕುವ ಪರಿಸ್ಥಿತಿ ನಿರ್ಮಿಸುವುದೇ ನಿಜವಾದ ಸ್ವಾತಂತ್ರ್ಯ. ಬಡತನದಿಂದ ಯಾವ ಮಗುವೂ ತನ್ನ ಕನಸನ್ನು ಕಳೆದುಕೊಳ್ಳಬಾರದು. ಯಾರೂ ಹಸಿವಿನಿಂದ ಮಲಗಬಾರದು. ಮಹಿಳೆಯರು ಗೌರವದಿಂದ ಬದುಕಬೇಕು. ರೈತನ ಶ್ರಮಕ್ಕೆ ಗೌರವ, ಕಾರ್ಮಿಕನ ದುಡಿಮೆಗೆ ನ್ಯಾಯ ಸಿಗಬೇಕು. ಜಾತಿ, ಧರ್ಮ, ಭಾಷೆಯ ಹೆಸರಿನಲ್ಲಿ ಯಾರನ್ನೂ ಬೇರ್ಪಡಿಸಬಾರದು. ಇದೇ ಸ್ವಾತಂತ್ರ್ಯದ ಕನಸು. ಇದೇ ಸಂವಿಧಾನದ ಕನಸು” ಎಂದು ಆಶಯ ವ್ಯಕ್ತಪಡಿಸಿದರು.
“ನಮ್ಮ ಸಂವಿಧಾನ ಕೇವಲ ಪುಸ್ತಕವಲ್ಲ. ಅದು ಬಡವನಿಗೆ, ರೈತನಿಗೆ, ಕಾರ್ಮಿಕನಿಗೆ, ಮಹಿಳೆಗೆ, ದಲಿತರಿಗೆ, ಅಲ್ಪಸಂಖ್ಯಾತರಿಗೆ, ವಿದ್ಯಾರ್ಥಿಗೆ ಹಾಗೂ ಪ್ರತಿಯೊಬ್ಬ ಭಾರತೀಯನಿಗೂ ಬದುಕುವ ಭರವಸೆ” ಎಂದು ನುಡಿದರು.
“ಪ್ರೀತಿಯ ಯುವ ಗೆಳೆಯರೇ, ನಿಮ್ಮ ಅಂಗೈಯಲ್ಲೇ ಜಗತ್ತು ಇದೆ. ಅದುವೇ ಮೊಬೈಲ್. ನಿಮ್ಮ ಒಂದು ಪೋಸ್ಟ್ ಸಾವಿರಾರು ಜನರನ್ನು ತಲುಪುತ್ತೆ. ನಿಮ್ಮ ಒಂದು ಧ್ವನಿ ಹೊಸ ಚಳವಳಿಗೆ ಶಕ್ತಿ ನೀಡುತ್ತೆ. ಇಂದು ಯುವಕರು ಉದ್ಯೋಗ, ಶಿಕ್ಷಣ, ಅನ್ಯಾಯ ಮತ್ತು ತಮ್ಮ ಭವಿಷ್ಯದ ಬಗ್ಗೆ ಪ್ರಶ್ನೆ ಎತ್ತುತ್ತಿದ್ದಾರೆ. ಈ ಪ್ರಶ್ನಿಸುವ ಮನೋಭಾವವನ್ನು ನಾನು ಗೌರವಿಸುತ್ತೇನೆ. ಯುವಕರು ಸರ್ಕಾರವನ್ನು ಪ್ರಶ್ನಿಸಬೇಕು. ಸಮಾಜವನ್ನು ಪ್ರಶ್ನಿಸಬೇಕು. ನಮ್ಮನ್ನೂ ಪ್ರಶ್ನಿಸಬೇಕು” ಎಂದು ತಿಳಿಸಿದರು.
“ಸ್ನೇಹಿತರೇ, ಕಳೆದ ಮೂರು ವರ್ಷಗಳಲ್ಲಿ ಮಾಜಿ ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿ ಹಲವು ಅಭಿವೃದ್ಧಿ ಕಾರ್ಯಗಳು ನಡೆದಿವೆ. ಮುಂದಿನ ಅವಧಿಯಲ್ಲಿ ನೂತನ ಮುಖ್ಯಮಂತ್ರಿ ಮಾನ್ಯ ಶ್ರೀ ಡಿ.ಕೆ. ಶಿವಕುಮಾರ್ ಅವರ ನೇತೃತ್ವದಲ್ಲಿ ಅಭಿವೃದ್ಧಿಗೆ ಮತ್ತಷ್ಟು ವೇಗ ದೊರೆಯಲಿದೆ” ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಬದುಕಿಗೆ ನೆರವಾದ ಪಂಚ ಗ್ಯಾರಂಟಿ ಯೋಜನೆಗಳು
– ನಮ್ಮ ಪಂಚ ಗ್ಯಾರಂಟಿ ಯೋಜನೆಗಳು ಜನರ ಬದುಕಿಗೆ ನೆರವಾಗುತ್ತಿವೆ. ಗೃಹಲಕ್ಷ್ಮೀ ಯೋಜನೆಯಡಿ ಶಿವಮೊಗ್ಗ ಜಿಲ್ಲೆಯ 3.78 ಲಕ್ಷಕ್ಕೂ ಅಧಿಕ ಫಲಾನುಭವಿಗಳಿಗೆ 2,363 ಕೋಟಿ ರೂ.ಗಳನ್ನು ನೇರ ಜಮಾ ಮಾಡಲಾಗಿದೆ.
– ಅನ್ನಭಾಗ್ಯ ಯೋಜನೆಯಡಿ 3.76 ಲಕ್ಷ ಪಡಿತರ ಕಾರ್ಡುದಾರರಿಗೆ 2,45,290 ಕ್ವಿಂಟಾಲ್ ಅಕ್ಕಿ ಹಂಚಿಕೆ ಮಾಡಲಾಗಿದೆ.
– ಶಕ್ತಿ ಯೋಜನೆಯಡಿ 8.25 ಕೋಟಿ ಮಹಿಳೆಯರು ಪ್ರಯಾಣಿಸಿ ಲಾಭ ಪಡೆದಿದ್ದಾರೆ.
– ಗೃಹ ಜ್ಯೋತಿ ಯೋಜನೆಯಡಿ 4.77 ಲಕ್ಷ ಕುಟುಂಬಗಳು ಸೌಲಭ್ಯ ಪಡೆಯುತ್ತಿದ್ದು, ವಿದ್ಯುತ್ ಸಬ್ಸಿಡಿಗಾಗಿ ಸರ್ಕಾರ 752 ಕೋಟಿ ರೂ. ವೆಚ್ಚ ಮಾಡಿದೆ.
– ಯುವ ನಿಧಿ ಯೋಜನೆಯಡಿ 12,969 ವಿದ್ಯಾರ್ಥಿಗಳಿಗೆ 36 ಕೋಟಿ ರೂ. ಅವರ ಖಾತೆಗಳಿಗೆ ಜಮಾ ಮಾಡಲಾಗಿದೆ.
– ಶಾಲಾ–ಕಾಲೇಜು ಮಕ್ಕಳಿಗೆ ಉಚಿತ ಬಸ್ ಪಾಸ್ ವ್ಯವಸ್ಥೆಯೂ ಇದೆ.
“ರೈತರ ಹಿತಾಸಕ್ತಿ ಸರ್ಕಾರದ ಪ್ರಮುಖ ಆದ್ಯತೆ. ಮುಂಗಾರು ಮಳೆಯ ಏರುಪೇರು ಮತ್ತು ಅತಿವೃಷ್ಟಿಯಿಂದ ಸಂಕಷ್ಟದಲ್ಲಿರುವ ರೈತರು ಹಾಗೂ ಗ್ರಾಮೀಣ ಜನರಿಗೆ ಶುದ್ಧ ಕುಡಿಯುವ ನೀರು, ಬೆಳೆ ಹಾನಿಗೆ ತ್ವರಿತ ಪರಿಹಾರ ನೀಡಲು ಕ್ರಮ ಕೈಗೊಳ್ಳಲಾಗಿದೆ. ಏಪ್ರಿಲ್–ಮೇ ತಿಂಗಳ ಮಳೆಯಿಂದ ಹಾನಿಗೊಳಗಾದ ತೋಟಗಾರಿಕಾ ಬೆಳೆಗಳಿಗೆ ವಿಶೇಷ ಪರಿಹಾರ ಪ್ಯಾಕೇಜ್ ನೀಡುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಮನೆ ಹಾನಿಗೊಳಗಾದ ಕುಟುಂಬಗಳಿಗೆ ಪರಿಹಾರ ವಿತರಿಸಲಾಗುತ್ತಿದೆ” ಎಂದು ಹೇಳಿದರು.

ರಾಜ್ಯದಲ್ಲಿ 2,000ಕ್ಕೂ ಹೆಚ್ಚು ಕೆಪಿಎಸ್ ಶಾಲೆ ಆರಂಭಿಸಲು ಕ್ರಮ
“ಶಿಕ್ಷಣ ಕ್ಷೇತ್ರಕ್ಕೆ ಸರ್ಕಾರ ವಿಶೇಷ ಆದ್ಯತೆ ನೀಡಿದೆ. ರಾಜ್ಯದಲ್ಲಿ 2,000ಕ್ಕೂ ಹೆಚ್ಚು ಕೆಪಿಎಸ್ ಶಾಲೆಗಳನ್ನು ಆರಂಭಿಸಲು ಕ್ರಮ ಕೈಗೊಳ್ಳಲಾಗಿದೆ. ರಾಜ್ಯಮಟ್ಟದ ಕೆಪಿಎಸ್ ಉದ್ಘಾಟನಾ ಕಾರ್ಯಕ್ರಮವನ್ನು ಶಿವಮೊಗ್ಗದಲ್ಲಿಯೇ ಆಯೋಜಿಸುವ ಉದ್ದೇಶವಿದೆ. ಜಿಲ್ಲೆಯಲ್ಲಿ ಎಲ್ಕೆಜಿಯಿಂದ ದ್ವಿತೀಯ ಪಿಯುಸಿವರೆಗೆ ಒಂದೇ ಸೂರಿನಡಿ ಶಿಕ್ಷಣ ನೀಡುವ 11 ಕೆಪಿಎಸ್ ಶಾಲೆಗಳು ನಡೆಯುತ್ತಿವೆ. ಈ ಶೈಕ್ಷಣಿಕ ಸಾಲಿನಲ್ಲಿ ಹೊಸದಾಗಿ 59 KPS ಶಾಲೆಗಳು ಜಿಲ್ಲೆಗೆ ಮಂಜೂರಾಗಿವೆ. 222 ಸರ್ಕಾರಿ ಶಾಲೆಗಳಲ್ಲಿ ಪೂರ್ವ ಪ್ರಾಥಮಿಕ ಶಾಲೆಗಳು ನಡೆಯುತ್ತಿವೆ. ಶಾಲಾ ಕೊಠಡಿ ದುರಸ್ತಿಗೆ 319 ಲಕ್ಷ ರೂ. ಮತ್ತು ನೂತನ ಕೊಠಡಿಗಳಿಗೆ 1,180 ಲಕ್ಷ ಅನುದಾನ ಮಂಜೂರಾಗಿದೆ” ಎಂದು ತಮ್ಮ ಇಲಾಖೆಯ ಸಾಧನೆ ವಿವರಿಸಿದರು.
“ರಾಜ್ಯದಲ್ಲಿ ಈ ಬಾರಿಯ ಎಸ್ಎಸ್ಎಲ್ಸಿ ಮತ್ತು ಪಿಯುಸಿಯಲ್ಲಿ ದೇಶದಲ್ಲೇ ಚಾರಿತ್ರಿಕ ಫಲಿತಾಂಶ ನನ್ನ ಅವಧಿಯಲ್ಲಿ ದಾಖಲಾಗಿದೆ. ರಾಜ್ಯದಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ 98.08 ಮತ್ತು ಪಿಯುಸಿಯಲ್ಲಿ 92.25 ಫಲಿತಾಂಶ ದಾಖಲಾಗಿದೆ. ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಶಿವಮೊಗ್ಗ ಜಿಲ್ಲೆ ಶೇ.96.5 ಫಲಿತಾಂಶ ದಾಖಲಿಸಿದ್ದು, ಹಿಂದಿಗಿಂತ ಶೇ.14ರಷ್ಟು ಏರಿಕೆಯಾಗಿದೆ. ದ್ವಿತೀಯ ಪಿಯುಸಿವರೆಗೆ ವಿದ್ಯಾರ್ಥಿಗಳಿಗೆ ಉಚಿತ ಪಠ್ಯಪುಸ್ತಕ ವಿತರಣೆಗೆ ಇದೇ ಮೊದಲ ಬಾರಿಗೆ ಸರ್ಕಾರ ಆದೇಶಿಸಿದೆ” ಎಂದು ಹೆಮ್ಮೆ ವ್ಯಕ್ತಪಡಿಸಿದರು.
*72,000 ಸರ್ಕಾರಿ ಹುದ್ದೆಗಳ ಭರ್ತಿಗೆ ಮಹತ್ವದ ಹೆಜ್ಜೆ*
“ರಾಜ್ಯದ ಯುವ ಜನರ ಭದ್ರ ಭವಿಷ್ಯ ನಿರ್ಮಾಣಕ್ಕೆ ಬದ್ಧವಾಗಿರುವ ಸರ್ಕಾರ, ಮುಂದಿನ ದಿನಗಳಲ್ಲಿ 72,000 ಸರ್ಕಾರಿ ಹುದ್ದೆಗಳ ಭರ್ತಿಗೆ ಮಹತ್ವದ ಹೆಜ್ಜೆ ಇಟ್ಟಿದೆ. ಇದರ ಭಾಗವಾಗಿ ಸರ್ಕಾರಿ ಶಾಲೆಗಳ ಗುಣಮಟ್ಟ ಬಲಪಡಿಸಲು 15,000 ಶಿಕ್ಷಕರ ನೇರ ನೇಮಕಾತಿಗೆ ಈಗಾಗಲೇ ಅಧಿಸೂಚನೆ ಹೊರಡಿಸಲಾಗಿದೆ. ಹಾಗೆಯೇ ಯುವಕರ ಉದ್ಯೋಗಕ್ಕಾಗಿ “ಯುವ ಉದ್ಯೋಗ ಸೇತು” ಯೋಜನೆ ಜಾರಿಗೆ ಬಂದಿದೆ. ಖಾಸಗಿ ವಲಯದಲ್ಲಿ ಉದ್ಯೋಗ ಬಯಸುವ ಯುವಕರು ಮತ್ತು ಉದ್ಯೋಗದಾತರ ನಡುವೆ ಸಂಪರ್ಕ ಕಲ್ಪಿಸುವ AI ಆಧಾರಿತ ಆಧುನಿಕ ಉದ್ಯೋಗ ವಿನಿಮಯ ವೇದಿಕೆ ಇದಾಗಿದೆ” ಎಂದು ತಿಳಿಸಿದರು.
“ವಿದ್ಯಾರ್ಥಿಗಳಿಗಾಗಿ ಕಳೆದ ಮೂರು ವರ್ಷಗಳಲ್ಲಿ ಜಿಲ್ಲೆಗೆ 9 ಮೆಟ್ರಿಕ್ ನಂತರದ ವಿದ್ಯಾರ್ಥಿನಿಲಯಗಳು ಮಂಜೂರಾಗಿದ್ದು, 1,000ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಪ್ರವೇಶ ದೊರೆತಿದೆ. ಮೆಟ್ರಿಕ್ ನಂತರದ ಬಾಲಕಿಯರ ಹಾಸ್ಟೆಲ್ ಕಟ್ಟಡಗಳಿಗೆ ಒಟ್ಟು 24 ಕೋಟಿ ರೂ. ಮಂಜೂರಾಗಿದ್ದು, ಕಾಮಗಾರಿ ಪ್ರಗತಿಯಲ್ಲಿದೆ. ಮಕ್ಕಳ ಪೌಷ್ಟಿಕತೆಗೂ ಆದ್ಯತೆ ನೀಡಲಾಗುತ್ತಿದೆ. ಮೊಟ್ಟೆ, ಬಾಳೆಹಣ್ಣು ಪೌಷ್ಟಿಕ ಆಹಾರ ನೀಡುವ ಕ್ರಮಗಳು ಮಕ್ಕಳ ಆರೋಗ್ಯವನ್ನು ಬಲಪಡಿಸುತ್ತಿವೆ. ಆರೋಗ್ಯ ಕ್ಷೇತ್ರದಲ್ಲೂ ಜಿಲ್ಲೆಯಲ್ಲಿ ಮೂಲಸೌಕರ್ಯ ಬಲಪಡಿಸಲಾಗುತ್ತಿದೆ. ಮಂಗನ ಕಾಯಿಲೆ ನಿಯಂತ್ರಣಕ್ಕೆ ಲಸಿಕೆ ಸಂಶೋಧನೆಗೆ ಕ್ರಮ ಕೈಗೊಳ್ಳಲಾಗಿದ್ದು, ವರದಿ ನಿರೀಕ್ಷಿಸಲಾಗುತ್ತಿದೆ” ಎಂದರು.
“ಮೆಗ್ಗಾನ್ ಆಸ್ಪತ್ರೆಯ ಮೇಲಿನ ಒತ್ತಡ ಕಡಿಮೆ ಮಾಡಲು ಸಿಮ್ಸ್ ಆಸ್ಪತ್ರೆಯನ್ನು ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯನ್ನಾಗಿ ಮೇಲ್ದರ್ಜೆಗೇರಿಸಿ ಅಗತ್ಯ ಯಂತ್ರೋಪಕರಣ ಮತ್ತು ತಜ್ಞ ವೈದ್ಯಕೀಯ ಸಿಬ್ಬಂದಿ ಒದಗಿಸಲಾಗಿದೆ. ಕಿದ್ವಾಯಿ ಮಾದರಿಯ ಕ್ಯಾನ್ಸರ್ ಆಸ್ಪತ್ರೆ ಕಾಮಗಾರಿ ಈ ವರ್ಷದ ಅಂತ್ಯದೊಳಗೆ ಮುಕ್ತಾಯಗೊಳ್ಳಲಿದೆ” ಎಂದು ತಿಳಿಸಿದರು.
ಜಿಲ್ಲೆಗೆ 250 ಕೋಟಿ ರೂ. ಅನುದಾನ
“ಮುಖ್ಯಮಂತ್ರಿ ಮೂಲಸೌಕರ್ಯ ಅಭಿವೃದ್ಧಿ ಕಾರ್ಯಕ್ರಮದಡಿ ಜಿಲ್ಲೆಗೆ 250 ಕೋಟಿ ರೂ. ಅನುದಾನ ಮಂಜೂರಾಗಿದೆ. ನರೇಗಾದಡಿ 2025-26ರಲ್ಲಿ 19 ಲಕ್ಷ ಮಾನವ ದಿನಗಳನ್ನು ಸೃಜಿಸಿ, ಕೂಲಿ 68.69 ಕೋಟಿ ರೂ. ಹಾಗೂ ಸಾಮಗ್ರಿಗಳಿಗೆ 8.82 ಕೋಟಿ ರೂ. ವೆಚ್ಚ ಮಾಡಲಾಗಿದೆ. ಗ್ರಾಮೀಣ ಕುಡಿಯುವ ನೀರಿಗಾಗಿ ಜಿಲ್ಲೆಯಲ್ಲಿ 12 ಬಹುಗ್ರಾಮ ಯೋಜನೆಗಳನ್ನು 1,505.31 ಕೋಟಿ ರೂ. ವೆಚ್ಚದಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ. ಸಾಗರ ತಾಲ್ಲೂಕಿನ ಆವಿನಹಳ್ಳಿ ಯೋಜನೆ 100.94 ಕೋಟಿ ರೂ. ಅಂದಾಜಿನಲ್ಲಿ ಅನುಷ್ಠಾನಗೊಂಡಿದೆ” ಎಂದು ಹೇಳಿದರು.
“ಜಿಲ್ಲೆಯಲ್ಲಿ ಸಂಪರ್ಕ ರಸ್ತೆಗಳು ಮತ್ತು ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸಿ ಗ್ರಾಮೀಣ–ನಗರ ಸಂಪರ್ಕ ಬಲಪಡಿಸಲಾಗುವುದು. ದಶಕಗಳಿಂದ ಬಾಕಿ ಇರುವ ಶರಾವತಿ ಸಂತ್ರಸ್ತರು ಮತ್ತು ಬಗರ್ ಹುಕುಂ ಸಾಗುವಳಿದಾರರ ಸಮಸ್ಯೆಗಳಿಗೆ ಶಾಶ್ವತ ಪರಿಹಾರಕ್ಕೆ ಸರ್ಕಾರ ವಿಶೇಷ ಗಮನ ನೀಡುತ್ತಿದೆ” ಎಂದರು.
ಶಿವಮೊಗ್ಗ: ಪ್ರಮುಖ ಟೂರಿಸಂ ಹಬ್ ಆಗಿ ರೂಪಿಸುತ್ತೇವೆ
“ಶಿವಮೊಗ್ಗವನ್ನು ಪ್ರಮುಖ ಟೂರಿಸಂ ಹಬ್ ಆಗಿ ರೂಪಿಸುವುದು ನಮ್ಮ ಉದ್ದೇಶ. ಇದರಿಂದ ಯುವಕರಿಗೆ ಉದ್ಯೋಗ ಮತ್ತು ಜಿಲ್ಲೆಯ ಆರ್ಥಿಕ ಚಟುವಟಿಕೆಗಳಿಗೆ ವೇಗ ದೊರೆಯಲಿದೆ. ನಗರದ ಸಂಚಾರ, ಕುಡಿಯುವ ನೀರು, ಒಳಚರಂಡಿ, ಘನತ್ಯಾಜ್ಯ ಮತ್ತು ನಗರ ವಿಸ್ತರಣೆಯ ಸಮಸ್ಯೆಗಳಿಗೆ ಆದ್ಯತೆಯಲ್ಲಿ ಪರಿಹಾರ ಕಂಡುಕೊಳ್ಳಲಾಗುತ್ತಿದೆ. ವಿಮಾನ ನಿಲ್ದಾಣದ ಸದ್ಬಳಕೆ, ಕೈಗಾರಿಕಾ ಅಭಿವೃದ್ಧಿ ಮತ್ತು ಯುವ ಉದ್ಯೋಗಕ್ಕೂ ಒತ್ತು ನೀಡಲಾಗುವುದು. ತುಂಗಾ ಸೇರಿದಂತೆ ಜಲಮೂಲಗಳು, ಅರಣ್ಯ ಮತ್ತು ಪರಿಸರವನ್ನು ಕಾಪಾಡುವುದು ನಮ್ಮೆಲ್ಲರ ಹೊಣೆ” ಎಂದು ಕಿವಿಮಾತು ಹೇಳಿದರು.
ನಾನು ಬಂಗಾರಪ್ಪನವರ ಮಗ ಎಂಬುದು ಹೆಮ್ಮೆ. ಅದಕ್ಕಿಂತ ದೊಡ್ಡದು ಅದು ಹೊಣೆಗಾರಿಕೆ
“ನಾಡು ಮೆಚ್ಚಿದ ನಾಯಕ, ನನ್ನ ತಂದೆಯವರಾದ ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪನವರನ್ನು ನೆನಪಿಸಿಕೊಳ್ಳಲೇಬೇಕು. ಅವರು ಈ ಮಣ್ಣಿನ ಮಗ. ಬಡವರು, ರೈತರು ಮತ್ತು ಹಿಂದುಳಿದವರ ಧ್ವನಿಯಾಗಿ ನಿಂತ ನಾಯಕ. ಅಧಿಕಾರವನ್ನು ಕುರ್ಚಿಯಾಗಿ ಅಲ್ಲ, ಜನರ ಬದುಕು ಬದಲಿಸುವ ಸಾಧನವಾಗಿ ನೋಡಿದ ನಾಯಕ. ಆಶ್ರಯ ಯೋಜನೆಗಳ ಮೂಲಕ ಬಡವರಿಗೆ ಮನೆ, ಗ್ರಾಮೀಣ ಜನರಿಗೆ ಉತ್ತಮ ಬದುಕು ಮತ್ತು ರೈತರಿಗೆ ಬಲ ನೀಡಲು ಅವರು ಕೆಲಸ ಮಾಡಿದರು. ಅವರಿಂದ ನಾನು ಕಲಿತದ್ದು ಒಂದೇ; ಅಧಿಕಾರ ಬರುತ್ತದೆ, ಹೋಗುತ್ತದೆ. ಹುದ್ದೆಗಳು ಬರುತ್ತವೆ, ಹೋಗುತ್ತವೆ. ಆದರೆ ಜನರ ಜೊತೆ ನಿಲ್ಲುವುದು ಮಾತ್ರ ಶಾಶ್ವತ. ನಾನು ಬಂಗಾರಪ್ಪನವರ ಮಗ ಎಂಬುದು ಹೆಮ್ಮೆ. ಅದಕ್ಕಿಂತ ದೊಡ್ಡದು ಅದು ಹೊಣೆಗಾರಿಕೆ. ಜನರ ಪರ, ಬಡವರ ಪರ, ಶೋಷಿತರ ಪರ ಮತ್ತು ಶಿವಮೊಗ್ಗದ ಜನರ ಸೇವೆಯ ಪರಂಪರೆಯನ್ನು ಮುಂದುವರಿಸುವ ಹೊಣೆಗಾರಿಕೆ” ಎಂದು ತಂದೆಯವರನ್ನು ಸ್ಮರಿಸಿದರು..
“1947ರಲ್ಲಿ ಒಂದು ಪೀಳಿಗೆ ನಮಗೆ ಸ್ವಾತಂತ್ರ್ಯ ಕೊಟ್ಟಿದೆ. ಇಂದು ನಮ್ಮ ಸರದಿ. ಮುಂದಿನ ಪೀಳಿಗೆಗೆ ನಾವು ಏನು ಕೊಡುತ್ತೇವೆ? ಕೇವಲ ದೊಡ್ಡ ಕಟ್ಟಡಗಳನ್ನಲ್ಲ. ದೊಡ್ಡ ಮನಸ್ಸಿನ ಭಾರತವನ್ನು ಕೊಡಬೇಕು. ಕೇವಲ ವೇಗದ ಇಂಟರ್ನೆಟ್ ಅಲ್ಲ– ಸತ್ಯವನ್ನು ಗುರುತಿಸುವ ವಿವೇಕ ಕೊಡಬೇಕು. ಕೇವಲ ಉದ್ಯೋಗವಲ್ಲ– ಗೌರವಯುತ ಬದುಕಿನ ಅವಕಾಶ ಕೊಡಬೇಕು. ನ್ಯಾಯಯುತ, ಸಮಾನತೆಯ, ಸಹೋದರತ್ವದ ಮತ್ತು ಸಂವಿಧಾನವನ್ನು ಗೌರವಿಸುವ ಭಾರತವನ್ನು ಕಟ್ಟಬೇಕು” ಎಂದು ಹೇಳಿದರು.
“ಸಾಮಾಜಿಕವಾಗಿ ಹಿಂದುಳಿದವರು ಮತ್ತು ದುರ್ಬಲ ಸಮುದಾಯಗಳನ್ನು ಮುಖ್ಯವಾಹಿನಿಗೆ ತಂದು ಸಾಮಾಜಿಕ ನ್ಯಾಯ ಬಲಪಡಿಸುವುದು ನಮ್ಮ ಧ್ಯೇಯ. ದೇಶದ ಏಕತೆ, ಪ್ರಜಾಪ್ರಭುತ್ವ, ಸಂವಿಧಾನದ ಆಶಯಗಳು, ಕನ್ನಡ ಭಾಷೆ ಮತ್ತು ಸಂಸ್ಕೃತಿಯ ರಕ್ಷಣೆಯೊಂದಿಗೆ ಶಿವಮೊಗ್ಗದ ಸಮಗ್ರ ಅಭಿವೃದ್ಧಿಗೆ ಸರ್ಕಾರ, ಸ್ಥಳೀಯ ಸಂಸ್ಥೆಗಳು, ರೈತರು, ಉದ್ಯಮಿಗಳು, ಯುವಜನರು ಮತ್ತು ಸಾರ್ವಜನಿಕರ ಸಹಕಾರ ಅಗತ್ಯ” ಎಂದು ಮನವಿ ಮಾಡಿದರು.
“ಬನ್ನಿ. ಒಟ್ಟಾಗಿ ನಡೆಯೋಣ. ಒಟ್ಟಾಗಿ ಹೋರಾಡೋಣ. ಒಟ್ಟಾಗಿ ಗೆಲ್ಲೋಣ. ಈಸೂರಿನ ಸ್ವಾಭಿಮಾನವನ್ನು ಉಳಿಸೋಣ. ಕುವೆಂಪು ಅವರ ವಿಶ್ವಮಾನವ ಸಂದೇಶವನ್ನು ಬದುಕಿನಲ್ಲಿ ಅಳವಡಿಸಿಕೊಳ್ಳೋಣ. ಬಂಗಾರಪ್ಪನವರ ಜನಪರ ಕಾಳಜಿಯ ಪರಂಪರೆಯನ್ನು ಮುಂದುವರಿಸೋಣ. ನಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ, ಯುವಕರಿಗೆ ಹೊಸ ಅವಕಾಶ, ರೈತರಿಗೆ ಬಲ ಮತ್ತು ಪ್ರತಿಯೊಬ್ಬರಿಗೂ ಗೌರವಯುತ ಬದುಕು ನೀಡುವ ಹೊಸ ಭಾರತವನ್ನು ಕಟ್ಟೋಣ” ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ವಿಧಾನಪರಿಷತ್ ಸದಸ್ಯರಾದ ಶ್ರೀಮತಿ ಬಲ್ಕೀಸ್ ಬಾನು, ಡಾ. ಧನಂಜಯ ಸರ್ಜಿ, ಡಿ.ಎಸ್. ಅರುಣ್ , ಶಾಸಕರಾದ ಎಸ್. ಎನ್. ಚನ್ನಬಸಪ್ಪ, ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟೆ, ಜಿಲ್ಲಾ ಪಂಚಾಯತ್ನ ಸಿಇಒ ಹೇಮಂತ್, ಜಿಲ್ಲಾ ರಕ್ಷಣಾಧಿಕಾರಿ ನಿಖಿಲ್ ಬಿ. ರಾಜ್ಯ ಜವಳಿ ಮೂಲಸೌಲಭ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಚೇತನ್ ಕೆ. ಗೌಡ, ರಾಜ್ಯ ಅಲೆಮಾರಿ ಮತ್ತು ಅರೆ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಜಿ. ಪಲ್ಲವಿ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.


