ದೇಶದ ಹೆಚ್ಚುತ್ತಿರುವ ಇಂಧನ ಬೇಡಿಕೆಯನ್ನು ಪೂರೈಸಲು ಹಾಗೂ ಸ್ವಚ್ಛ ಇಂಧನ ಪರಿವರ್ತನೆಗೆ ಉತ್ತೇಜನ ನೀಡಲು ಪರಮಾಣು ವಿದ್ಯುತ್ ಉತ್ಪಾದನಾ ಸಾಮರ್ಥ್ಯವನ್ನು ಹಂತ ಹಂತವಾಗಿ ವಿಸ್ತರಿಸಲಾಗುತ್ತಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.
ದಾವಣಗೆರೆ ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರು ಅಣುಶಕ್ತಿ ಕಾರ್ಯಕ್ರಮದಡಿ ಪರಮಾಣು ವಿದ್ಯುತ್ ಉತ್ಪಾದನೆ ಕುರಿತು ಕೇಳಿದ ಪ್ರಶ್ನೆಗೆ ಕೇಂದ್ರ ಸರ್ಕಾರ ಈ ಮಾಹಿತಿ ನೀಡಿದೆ.
ಕರ್ನಾಟಕ ಸೇರಿದಂತೆ ದೇಶದಲ್ಲಿ ಪರಮಾಣು ವಿದ್ಯುತ್ ಉತ್ಪಾದನೆ ವಿಸ್ತರಣೆಗೆ ಕೈಗೊಂಡ ಕ್ರಮಗಳು, ಪ್ರಸ್ತುತ ಸ್ಥಾಪಿತ ಸಾಮರ್ಥ್ಯ, ಒಟ್ಟು ವಿದ್ಯುತ್ ಉತ್ಪಾದನೆಯಲ್ಲಿ ಪರಮಾಣು ಶಕ್ತಿಯ ಪಾಲು, ನಿರ್ಮಾಣ ಮತ್ತು ಪ್ರಸ್ತಾವಿತ ಹಂತದಲ್ಲಿರುವ ಯೋಜನೆಗಳು, ಸುರಕ್ಷತಾ ಕ್ರಮಗಳು ಹಾಗೂ ಭವಿಷ್ಯದ ಮಾರ್ಗಸೂಚಿ ಕುರಿತು ಡಾ. ಪ್ರಭಾ ಮಲ್ಲಿಕಾರ್ಜುನ್ ಮಾಹಿತಿ ಕೇಳಿದ್ದರು.
ದೇಶದಲ್ಲಿ ಪ್ರಸ್ತುತ 24 ಪರಮಾಣು ವಿದ್ಯುತ್ ಸ್ಥಾವರಗಳಿದ್ದು, ಒಟ್ಟು 8,780 ಮೆಗಾವ್ಯಾಟ್ ಸ್ಥಾಪಿತ ಸಾಮರ್ಥ್ಯ ಹೊಂದಿವೆ. 2025–26ರಲ್ಲಿ ದೇಶದ ಒಟ್ಟು ವಿದ್ಯುತ್ ಉತ್ಪಾದನೆಯಲ್ಲಿ ಪರಮಾಣು ಶಕ್ತಿಯ ಪಾಲು ಶೇ 3.1ರಷ್ಟಿತ್ತು ಎಂದು ಸರ್ಕಾರ ತಿಳಿಸಿದೆ.
ಕರ್ನಾಟಕದ ಕೈಗಾ ಪರಮಾಣು ವಿದ್ಯುತ್ ಸ್ಥಾವರದ 1ರಿಂದ 4ನೇ ಘಟಕಗಳು ತಲಾ 220 ಮೆಗಾವ್ಯಾಟ್ ಸಾಮರ್ಥ್ಯದೊಂದಿಗೆ ಕಾರ್ಯನಿರ್ವಹಿಸುತ್ತಿವೆ. ತಲಾ 700 ಮೆಗಾವ್ಯಾಟ್ ಸಾಮರ್ಥ್ಯದ ಕೈಗಾ–5 ಮತ್ತು 6ನೇ ಘಟಕಗಳು ನಿರ್ಮಾಣ ಹಂತದಲ್ಲಿವೆ ಎಂದು ಉತ್ತರದಲ್ಲಿ ತಿಳಿಸಲಾಗಿದೆ.
ಪ್ರಸ್ತುತ ನಿರ್ಮಾಣ, ಕಾರ್ಯಾರಂಭ ಮತ್ತು ಯೋಜನಾ ಪೂರ್ವ ಚಟುವಟಿಕೆಗಳ ವಿವಿಧ ಹಂತಗಳಲ್ಲಿರುವ ಯೋಜನೆಗಳು ಪೂರ್ಣಗೊಂಡ ಬಳಿಕ ದೇಶದ ಪರಮಾಣು ವಿದ್ಯುತ್ ಸಾಮರ್ಥ್ಯವು 2031–32ರ ವೇಳೆಗೆ ಸುಮಾರು 22 ಗಿಗಾವ್ಯಾಟ್‌ಗೆ ತಲುಪುವ ನಿರೀಕ್ಷೆಯಿದೆ. 2031–32ರ ವೇಳೆಗೆ ಸುಮಾರು 22,380 ಮೆಗಾವ್ಯಾಟ್ ಹಾಗೂ 2047ರ ವೇಳೆಗೆ 100 ಗಿಗಾವ್ಯಾಟ್ ಪರಮಾಣು ವಿದ್ಯುತ್ ಸಾಮರ್ಥ್ಯ ಸಾಧಿಸುವ ದೀರ್ಘಾವಧಿಯ ಗುರಿ ಹೊಂದಲಾಗಿದೆ.
ದೊಡ್ಡ ಸಾಮರ್ಥ್ಯದ ಪರಮಾಣು ರಿಯಾಕ್ಟರ್‌ಗಳ ಜೊತೆಗೆ ದೇಶೀಯವಾಗಿ ಅಭಿವೃದ್ಧಿಪಡಿಸಲಾದ ಸಣ್ಣ ಮಾಡ್ಯುಲರ್ ರಿಯಾಕ್ಟರ್‌ಗಳನ್ನು (SMRs) ಬಳಸುವ ಯೋಜನೆಯೂ ಇದೆ. ದಕ್ಷಿಣ ಭಾರತದಲ್ಲಿ ಕರ್ನಾಟಕದ ಕೈಗಾ, ತಮಿಳುನಾಡಿನ ಕುಡಂಕುಳಂ ಮತ್ತು ಕಲ್ಪಾಕ್ಕಂ ಹಾಗೂ ಆಂಧ್ರಪ್ರದೇಶದ ಕೋವ್ವಾಡ ಪ್ರಮುಖ ಪರಮಾಣು ವಿದ್ಯುತ್ ಯೋಜನಾ ಸ್ಥಳಗಳಾಗಿವೆ.
ಪರಮಾಣು ವಿದ್ಯುತ್ ಸ್ಥಾವರಗಳ ಸ್ಥಳ ಆಯ್ಕೆ, ವಿನ್ಯಾಸ, ನಿರ್ಮಾಣ, ಕಾರ್ಯಾರಂಭ ಹಾಗೂ ಕಾರ್ಯಾಚರಣೆಯ ಪ್ರತಿಯೊಂದು ಹಂತದಲ್ಲೂ ಸುರಕ್ಷತೆಗೆ ಅತ್ಯುನ್ನತ ಆದ್ಯತೆ ನೀಡಲಾಗಿದೆ. ಅಣುಶಕ್ತಿ ನಿಯಂತ್ರಣ ಮಂಡಳಿ (AERB) ಮೂಲಕ ಸ್ಥಾವರಗಳ ಸುರಕ್ಷತೆಯನ್ನು ನಿರಂತರವಾಗಿ ಮೇಲ್ವಿಚಾರಣೆ ಮತ್ತು ಪರಿಶೀಲನೆ ಮಾಡಲಾಗುತ್ತಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.
ಇದಲ್ಲದೆ, SHANTI Act, 2025 ಮೂಲಕ ಪರವಾನಗಿ ಪಡೆದ ಭಾರತೀಯ ಖಾಸಗಿ ಕಂಪನಿಗಳು ಹಾಗೂ ಜಂಟಿ ಉದ್ಯಮಗಳು ಪರಮಾಣು ಇಂಧನ ಕ್ಷೇತ್ರದಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ಲೋಕಸಭೆಗೆ ನೀಡಿದ ಉತ್ತರದಲ್ಲಿ ತಿಳಿಸಲಾಗಿದೆ.


