ಸತ್ಯ ಯಾವುದು ಅಸತ್ಯ ಯಾವುದು ಎಂಬುದನ್ನು ಗುರುತಿಸುವ ಕೆಲಸ ಮಾಡಬೇಕು. ನಾವು ನಮ್ಮ ಸರ್ಕಾರದಲ್ಲಿ ʼಮೌಢ್ಯಗಳ ನಿಷೇಧ ಕಾಯ್ದೆʼ ಜಾರಿ ಮಾಡಿದ್ದೇವೆ. ಬಸವಣ್ಣನವರು ಬದುಕಿದ್ದಷ್ಟು ದಿನ ಮೌಢ್ಯಗಳನ್ನು ತಿರಸ್ಕಾರ ಮಾಡಿದರು. ವಚನ ಸಾಹಿತ್ಯವನ್ನು ನಿರ್ಮಾಣ ಮಾಡಿದರು. ಹೀಗಿದ್ದರೂ ಮೌಢ್ಯಗಳು ಇನ್ನೂ ಜೀವಂತವಾಗಿದೆ. ಇದಕ್ಕೆ ಮನುವಾದಿಗಳೇ ಕಾರಣ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದರು.
ನಿವೃತ್ತ ನ್ಯಾಯಮೂರ್ತಿ ಹೆಚ್.ಎನ್. ನಾಗಮೋಹನ್ ದಾಸ್ ಅವರು ಬರೆದಿರುವ “ಮೆಮೋರೆಬಲ್ ಟ್ರಯಲ್ಸ್ – ಅವಿಸ್ಮರಣೀಯ ಪ್ರಕರಣಗಳು” ಕೃತಿಯ ಕನ್ನಡ ಹಾಗೂ ಇಂಗ್ಲೀಷ್ ಆವೃತ್ತಿಯನ್ನು ಶುಕ್ರವಾರ ಲೋಕಾರ್ಪಣೆಗೊಳಿಸಿ, ಮಾತನಾಡಿದರು.
ವಿದ್ಯಾವಂತರೇ ಮೌಢ್ಯಯಗಳನ್ನು ಆಚರಿಸುತ್ತಾರೆ. ಪಟ್ಟಭದ್ರ ಹಿತಾಸಕ್ತಗಳ ವಿರುದ್ಧ ಮಾತನಾಡಿದರೆ ನಮ್ಮ- ನಿಮ್ಮ ಮೇಲೆ ಪ್ರಕರಣ ದಾಖಲಿಸುತ್ತಾರೆ. ಪ್ರಕರಣ ದಾಖಲಿಸಿದರು ಪರವಾಗಿಲ್ಲ. ಆ ನಿಟ್ಟಿನಲ್ಲಿ ನಾವೆಲ್ಲ ಪ್ರಯತ್ನ ಪಡಬೇಕು. ವೈಜ್ಞಾನಿಕತೆ ಶಿಕ್ಷಣದಲ್ಲಿ ಬರದೆ ಹೋದರೆ ಈ ಮೌಢ್ಯಗಳು ಹಾಗೆ ಮುಂದುವರಿಯುವಂತ ಕೆಲಸಗಳು ನಡೆಯುತ್ತದೆ ಎಂದರು. ಸಮಾಜ ಮೌಢ್ಯಗಳಿಂದ ದೂರ ಇರಬೇಕಂದರೆ ನಾವೆಲ್ಲರೂ ಕೂಡ ಮೌಢ್ಯಗಳನ್ನು ಆಚರಣೆ ಮಾಡುವಂತ ಕೆಲಸವನ್ನು ಬಿಡಬೇಕು ಎಂದು ತಿಳಿಸಿದರು. ಹಾಗೆ ಮಾಡಿದರೆ ಮಾತ್ರ ಜಾತಿ ವ್ಯವಸ್ಥೆ ಹೋಗಲಾಡಿಸಲು ಸಾಧ್ಯ ಎಂದರು. ಅನೇಕ ದಾರ್ಶನಿಕರು, ಸಾಧು ಸಂತರು ಬಂದು ಹೋಗಿದ್ದಾರೆ ಆದರೆ ಜಾತಿ ವ್ಯವಸ್ಥೆ ಮಾತ್ರ ಇಂದೂ ಜೀವಂತವಾಗಿದೆ” ಎಂದರು.
“ಹೈಕೋರ್ಟ್‌ನ ಮಾಜಿ ನ್ಯಾಯಮೂರ್ತಿಗಳಾದ ನಾಗಮೋಹನ್ ದಾಸ್ ಅವರು ನಿವೃತ್ತ ಜೀವನದಲ್ಲಿದ್ದರೂ ಇಂದಿಗೂ ಅತ್ಯಂತ ಕ್ರಿಯಾಶೀಲರಾಗಿದ್ದಾರೆ. ಸಮಾಜಮುಖಿ ವಿಚಾರಗಳ ಕುರಿತು ಕನ್ನಡ ಹಾಗೂ ಇಂಗ್ಲಿಷ್ ಭಾಷೆಗಳಲ್ಲಿ ಹಲವು ಕೃತಿಗಳನ್ನು ರಚಿಸಿರುವ ಅವರು, 2018ರಲ್ಲಿ ‘ಸಂವಿಧಾನ ಓದು’ ಕೃತಿಯನ್ನು ಪ್ರಕಟಿಸಿದರು. ಈ ಕೃತಿಯ ಮೂಲಕ ಯುವಜನತೆ ಮತ್ತು ವಿದ್ಯಾರ್ಥಿಗಳಲ್ಲಿ ಸಂವಿಧಾನದ ಕುರಿತು ಅರಿವು ಮೂಡಿಸುವ ಮಹತ್ವದ ಪ್ರಯತ್ನ ಮಾಡಿದ್ದಾರೆ. ಅಲ್ಲದೆ, ಸಂವಿಧಾನದ ಮೌಲ್ಯಗಳು ಮತ್ತು ಆಶಯಗಳ ಕುರಿತು ಅಧ್ಯಯನ ಹಾಗೂ ಜಾಗೃತಿ ಕಾರ್ಯಕ್ರಮಗಳನ್ನು ನಿರಂತರವಾಗಿ ಹಮ್ಮಿಕೊಳ್ಳುತ್ತಿದ್ದಾರೆ” ಎಂದು ತಿಳಿಸಿದರು.
“ಎಲ್ಲಿಯವರೆಗೆ ಎಲ್ಲಾ ವರ್ಗದವರಿಗೆ ನಾವು ಆರ್ಥಿಕ, ಸಮಾಜಿಕ ಶಕ್ತಿಯನ್ನು ನಾವು ಕೊಡುವುದಿಲ್ಲವೋ ಅಲ್ಲಿಯವರೆಗೆ ಅಸಮಾನತೆ ಹೋಗುವುದಿಲ್ಲ ಎಂದು ಅಂಬೇಡ್ಕರ್ ಅವರ ಮಾತನ್ನು ನೆನಪಿಸಿಕೊಂಡರು. ನಾಗಮೋಹನ್ ದಾಸ್ ಅವರು ಅನೇಕ ಅವಿಸ್ಮರಣೀಯ ಪ್ರಕರಣಗಳನ್ನು ಆಯ್ಕೆ ಮಾಡಿಕೊಂಡು ಅದರಲ್ಲಿ 21 ಘಟನೆಯ ಪ್ರಕರಣಗಳನ್ನು ಮೆಮೋರೆಬಲ್ ಟ್ರಯಲ್ಸ್ – ಅವಿಸ್ಮರಣೀಯ ಪ್ರಕರಣಗಳು ಪುಸ್ತಕದಲ್ಲಿ ಬರೆದಿದ್ದಾರೆ. ಈ ದೇಶದಲ್ಲಿ ಹೋರಾಡಿದವರ, ಜನಸಮಾನ್ಯರ ಸಮಸ್ಯೆಗಳನ್ನು ಕೈಗೆತ್ತಿಕೊಂಡು ಹೋರಾಡಿದವರ ಬಗ್ಗೆ ಹಾಗೂ ದೇಶಕ್ಕಾಗಿ ಬಲಿದಾನ, ತ್ಯಾಗ ಮಾಡಿದವವ ಕುರಿತು ಬಹಳ ಸ್ಪಷ್ಟವಾಗಿ ಈ ಪುಸ್ತಕದಲ್ಲಿ ತಿಳಿಸಿದ್ದಾರೆ” ಎಂದರು.
ಸಮಾರಂಭದಲ್ಲಿ ಬಹುಭಾಷಾ ನಟ ಪ್ರಕಾಶ್ ರಾಜ್, ಲೇಖಕಿ ತಸ್ರಿಮ್ ಮುಲ್ಲಾ, ಇಂಗ್ಲಿಷ್ ಆವೃತ್ತಿಯ ಅನುವಾದಕರಾದ ಬಿ.ಎಸ್.ಲೋಕೇಶ್‌ಚಂದ್ರ, ಜನ ಸಂಸ್ಕೃತಿ ಅಧ್ಯಯನ ಮತ್ತು ಪ್ರಕಾಶನದ ಬಿ.ರಾಜಶೇಖರಮೂರ್ತಿ ಅವರು ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.


