Homeಕರ್ನಾಟಕರಾಮಮಂದಿರ ದೇಣಿಗೆ ಲೂಟಿ | ಪ್ರಧಾನಿ ಮೋದಿ ರಾಜೀನಾಮೆಗೆ ಒತ್ತಾಯಿಸುವ ಕಾಂಗ್ರೆಸ್ ನಿರ್ಣಯ ಹಾಸ್ಯಾಸ್ಪದ: ವಿಜಯೇಂದ್ರ

ರಾಮಮಂದಿರ ದೇಣಿಗೆ ಲೂಟಿ | ಪ್ರಧಾನಿ ಮೋದಿ ರಾಜೀನಾಮೆಗೆ ಒತ್ತಾಯಿಸುವ ಕಾಂಗ್ರೆಸ್ ನಿರ್ಣಯ ಹಾಸ್ಯಾಸ್ಪದ: ವಿಜಯೇಂದ್ರ

ಅಯೋಧ್ಯೆಯ ರಾಮಮಂದಿರ ದೇಣಿಗೆಯ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರ ರಾಜೀನಾಮೆಗೆ ಒತ್ತಾಯಿಸುವ ಕೆಪಿಸಿಸಿಯ ನಿರ್ಣಯ ಅವಿವೇಕತನದ ಪರಮಾವಧಿ ಮತ್ತು ಹಾಸ್ಯಾಸ್ಪದ ನಿರ್ಣಯವಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಹೇಳಿದ್ದಾರೆ.

ಎಕ್ಸ್ ತಾಣದಲ್ಲಿ ಬರೆದುಕೊಂಡಿರುವ ಅವರು, “ಸ್ವಾತಂತ್ರ್ಯ ಯೋಧರ ತ್ಯಾಗ, ಪರಿಶ್ರಮದಿಂದ ಕಟ್ಟಿದ ನ್ಯಾಶನಲ್ ಹೆರಾಲ್ಡ್ ಸಂಸ್ಥೆಯ ಐದು ಸಾವಿರ ಕೋಟಿ ರೂಪಾಯಿ ಆಸ್ತಿ ಪಾಸ್ತಿಗಳನ್ನು ನುಂಗಿ ನೀರು ಕುಡಿದು ಬಂಧನದ ಭೀತಿಯಿಂದ ಜಾಮೀನಿನ ಮೇಲಿರುವ ನಿಮ್ಮ ಅಧಿನಾಯಕಿ ಸೋನಿಯಾ ಗಾಂಧಿಯವರ ರಾಜ್ಯಸಭಾ ಸದಸ್ಯತ್ವಕ್ಕೆ ಹಾಗೂ ಸಾಂವಿಧಾನಿಕ ಹುದ್ದೆ ಲೋಕಸಭೆಯ ವಿರೋಧ ಪಕ್ಷದ ನಾಯಕನ ಸ್ಥಾನದಲ್ಲಿ ಕುಳಿತಿರುವ ನಿಮ್ಮ ನಾಯಕ ರಾಹುಲ್ ಗಾಂಧಿಯವರ ರಾಜೀನಾಮೆಗೆ ಮೊದು ಒತ್ತಾಯಿಸಿ” ಎಂದಿದ್ದಾರೆ.

“ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರದ ಖಜಾನೆಗೇ ಕನ್ನ ಹಾಕಿದ ಹಾಗೂ ಮುಡಾ ನಿವೇಶನಗಳನ್ನು ಲೂಟಿ ಹೊಡೆದ ಕುಖ್ಯಾತಿಯ ಪ್ರಕರಣಗಳಿಗೆ ರಾಹುಲ್ ಗಾಂಧಿಯವರನ್ನು ಹೊಣೆಗಾರರನ್ನಾಗಿಸಬಹುದೇ? ʼಅಯೋಧ್ಯೆ ಶ್ರೀರಾಮ ಜನ್ಮಭೂಮಿ ಟ್ರಸ್ಟ್ʼ ಸ್ವತಂತ್ರ ನಿರ್ವಹಣಾ ಸಂಸ್ಥೆ. ಆದರೆ ಇದರ ದೇಣಿಗೆಗೆ ಕೈಹಾಕಿರುವ ಪ್ರಕರಣ ಹೊರ ಬಂದ ಮರುಕ್ಷಣದಲ್ಲೇ ಮುಖ್ಯಮಂತ್ರಿ ಯೋಗಿ ಆದಿತ್ಯ ನಾಥ್ ಅವರ ನೇತೃತ್ವದ ಉತ್ತರ ಪ್ರದೇಶ ಸರ್ಕಾರ ವಿಷಯವನ್ನು ಗಂಭೀರವಾಗಿ ಕೈಗೆತ್ತಿಕೊಂಡು ತನಿಖೆಗೆ ಮುಂದಾಗಿ ತಪ್ಪಿತಸ್ಥರನ್ನು ಬಂಧಿಸುವ ಪಾರದರ್ಶಕ ನಡೆ ಪ್ರದರ್ಶಿಸಿದೆ” ಎಂದು ಹೇಳಿದ್ದಾರೆ.

“ಸದ್ಯ ಸಂಶಯಕ್ಕೆ ಆಸ್ಪದವಿಲ್ಲದಂತೆ ಕಟ್ಟುನಿಟ್ಟಿನ ತನಿಖೆ ಮುಂದುವರೆದಿದೆ. ಇದನ್ನು ಮುಚ್ಚಿ ಹಾಕುವ ಉದ್ದೇಶವಿದ್ದಿದ್ದರೆ, ದೇಣಿಗೆ ಹಗರಣ ಬಯಲಿಗೆ ಬಂದ ತಕ್ಷಣದಲ್ಲೇ ಉತ್ತರ ಪ್ರದೇಶ ಸರ್ಕಾರ ತನಿಖೆಗೆ ಕೈಗೆತ್ತಿಕೊಳ್ಳುತ್ತಿರಲಿಲ್ಲ. ಆದರೆ ಕರ್ನಾಟಕದಲ್ಲಿ ಗಬ್ಬೆದ್ದು ನಾರುತ್ತಿರುವ ನಿಮ್ಮ ಕಾಂಗ್ರೆಸ್ ಹಗರಣಗಳನ್ನು ಲೆಕ್ಕಕ್ಕೆ ಇಟ್ಟುಕೊಳ್ಳದಂತೆ, ಅದನ್ನು ಮುಚ್ಚಿಹಾಕುವ ಭಂಡತನ ಮೆರೆದಿದ್ದೀರಿ. ಇದನ್ನು ಲಜ್ಜೆ ಇಲ್ಲದೇ ನಿಮ್ಮ ಹೈಕಮಾಂಡ್ ಸಮರ್ಥಿಸಿಕೊಂಡಿದೆ. ಸ್ವಜನ ಪಕ್ಷಪಾತ, ಭ್ರಷ್ಟಾಚಾರ ಹಾಗೂ ರಾಷ್ಟ್ರ ವಿರೋಧಿ ವಿಧ್ವಂಸಕ ಕೃತ್ಯಗಳನ್ನು ಸಮರ್ಥಿಸಿಕೊಳ್ಳುವ ನಿಮ್ಮ ಕಾಂಗ್ರೆಸ್ ದೇಶದ ರಾಜಕೀಯ ಭೂಪಟದಲ್ಲಿ ಬಹುತೇಕ ಮೂಲೋತ್ಪಾಟನೆಯಾಗಿದೆ. ಇಷ್ಟಾದರೂ ನೀವು ಬುದ್ಧಿ ಕಲಿತಂತೆ ಕಾಣುತ್ತಿಲ್ಲ” ಎಂದು ಕಿಡಿಕಾರಿದ್ದಾರೆ.

“ಅಯೋಧ್ಯ ಪ್ರಕಣದಲ್ಲಿ ಸಿಬಿಐ ಮೇಲೆ ಕಾಂಗ್ರೆಸ್ ವಿಪರೀತ ನಂಬಿಕೆ ವ್ಯಕ್ತ ಪಡಿಸಿರುವುದು ಆಶ್ಚರ್ಯ ತರಿಸಿದೆ. ಕರ್ನಾಟಕದಲ್ಲಿ ಮುಡಾ, ವಾಲ್ಮೀಕಿ ನಿಗಮದ ಹಗರಣಗಳ ವಿರುದ್ಧ ತನಿಕೆಗೆ ಮುಂದಾದ ಕೇಂದ್ರಿಯ ತನಿಖಾ ಸಂಸ್ಥೆಗಳಾದ ಇ.ಡಿ., ಸಿಬಿಐ ವಿರುದ್ಧ ಕಾಂಗ್ರೆಸ್ಸಿಗರು ಹೌಹಾರಿದಿರಿ, ಈ ಸಂಸ್ಥೆಗಳು ಪಕ್ಷಪಾತಿಗಳೆಂದು ಕೂಗೆಬ್ಬಿಸಿದಿರಿ ಇದೀಗ ಸಿಬಿಐ ಮೇಲೆ ವಿಶ್ವಾಸ ವ್ಯಕ್ತ ಪಡಿಸುತ್ತಿದ್ದೀರಿ, ಇದು ಕಾಂಗ್ರೆಸ್ ಇಬ್ಬಂದಿ ವರ್ತನೆಯನ್ನು ಅನಾವರಣ ಗೊಳಿಸಿದೆ. ಸಿಬಿಐ ಬಗ್ಗೆ ನಂಬಿಕೆ ಇದ್ದರೆ ಈಗಲೂ ನ್ಯಾಯಾಲಯದಲ್ಲಿ ಮುಡಾ ಹಗರಣದಲ್ಲಿ ಸಿಬಿಐ ತನಿಕೆ ಬೇಡವೆಂದು ಏಕೆ ಹೋರಾಡುತ್ತಿದ್ದೀರಿ” ಎಂದು ಪ್ರಶ್ನಿಸಿದ್ದಾರೆ

“ಇನ್ನೊಬ್ಬರತ್ತ ಬೊಟ್ಟು ಮಾಡಿ ತೋರಿಸುವ ಯಾವ ನೈತಿಕತೆಯನ್ನೂ ಕಾಂಗ್ರೆಸ್ ಉಳಿಸಿಕೊಂಡಿಲ್ಲ. ನಿಮ್ಮ ತಟ್ಟೆಯಲ್ಲಿ ಹೆಗ್ಗಣ ಸತ್ತು ಬಿದ್ದಿದೆ, ಮತ್ತೊಬ್ಬರ ತಟ್ಟೆಯಲ್ಲಿ ನೊಣ ಹುಡುಕಲು ಹೊರಟಿದ್ದೀರಿ. ನೀವೆಷ್ಟೇ ಬೊಬ್ಬೆ ಹೊಡೆದರೂ, ಅಪಪ್ರಚಾರದ ವ್ಯರ್ಥ ಪ್ರಯತ್ನ ನಡೆಸಿದರೂ ಜನಾನುರಾಗದ ಉತ್ತುಂಗ ಶಿಖರದ ಮೇಲೆ ಕುಳಿತಿರುವ ಪ್ರಧಾನಿ ನರೇಂದ್ರ ಮೋದಿಯವರ ಜನಪ್ರಿಯತೆಯನ್ನು ಎಳ್ಳಷ್ಟು ಮುಕ್ಕಾಗಿಸಲು ಸಾಧ್ಯವಿಲ್ಲ” ಎಂದು ಎಚ್ಚರಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments