Homeಕರ್ನಾಟಕಶಾಲು, ಹೂವ ಹಾಕುವ ಬದಲು ಅದೇ ಹಣವನ್ನು ಕಾಂಗ್ರೆಸ್‌ಗೆ ಹಾಕಿ: ಬಿ ಕೆ ಹರಿಪ್ರಸಾದ್ ಮನವಿ

ಶಾಲು, ಹೂವ ಹಾಕುವ ಬದಲು ಅದೇ ಹಣವನ್ನು ಕಾಂಗ್ರೆಸ್‌ಗೆ ಹಾಕಿ: ಬಿ ಕೆ ಹರಿಪ್ರಸಾದ್ ಮನವಿ

ಕಾಂಗ್ರೆಸ್ ಪಕ್ಷದಲ್ಲಿ ಸೌಕರ್ಯವಾಗಿರುವವರು ಇದ್ದರೂ ಕಾಂಗ್ರೆಸ್ ಬಡವರ ಪಕ್ಷ. ಇಡೀ ದೇಶದಲ್ಲಿ ಕಾಂಗ್ರೆಸ್ ಪಕ್ಷದ ಬಳಿ ರುವುದು 700 ಕೋಟಿ ಮಾತ್ರ. ಬಿಜೆಪಿಯಲ್ಲಿ 10 ಸಾವಿರ ಕೋಟಿ ಇದೆ. ನೀವು ನನಗೆ ಶಾಲು ಹೂವ ಹಾಕುವುದಾದರೆ ಅದರ ಬದಲು ಅದೇ ಹಣವನ್ನು ಕಾಂಗ್ರೆಸ್ ಪಕ್ಷಕ್ಕೆ ಹಾಕಿ. ಆ ಮೂಲಕ ಪಕ್ಷದ ಖಜಾನೆ ತುಂಬಲಿ ಎಂದು ಕೆಪಿಸಿಸಿ ನೂತನ ಅಧ್ಯಕ್ಷ ಬಿ ಕೆ ಹರಿಪ್ರಸಾದ್ ಮನವಿ ಮಾಡಿದರು.

ಕೆಪಿಸಿಸಿ ಕಚೇರಿಯಲ್ಲಿ ಕಾರ್ಯಕರ್ತರ ಸಭೆ ನಡೆಸಿದ ಬಳಿಕ ಮಾತನಾಡಿದ ಅವರು, “2001ರಲ್ಲಿ ಬೆಂಗಳೂರು ಪಾಲಿಕೆ ಚುನಾವಣೆ ನಡೆಸಲು ನನಗೆ ಜವಾಬ್ದಾರಿ ನೀಡಿದ್ದರು. ಹೊಟೇಲ್ ವೇಯ್ಟರ್, ಕಸ ಗುಡಿಸುವವರು ಸೇರಿದಂತೆ ಸಣ್ಣ ಸಮುದಾಯದವರಿಗೆ ಟಿಕೆಟ್ ಕೊಟ್ಟಾಗ ಎಲ್ಲರು ಆಶ್ಟರ್ಯವಾಗಿದ್ದರು. ಆಗ ಎಲ್ಲರೂ ಗೆದ್ದಿದ್ದರು. ನಾವು ಕಾಂಗ್ರೆಸ್ ಪಕ್ಷಕ್ಕಾಗಿ ದುಡಿದಿದ್ದೇವೆ, ನಮಗೆ ಅಧಿಕಾರ ಸಿಗುತ್ತೋ ಇಲ್ಲವೋ ಎಂಬ ಭಾವನೆ ಬೇಡ. ಕಾರ್ಯಾಧ್ಯಕ್ಷರಾದ ಚಂದ್ರಶೇಖರ್ ಹಾಗೂ ಮಂಜುನಾಥ್ ಭಂಡಾರಿ ಅವರು ಸಮೀಕ್ಷೆ ಮಾಡಿಸಿದ್ದಾರೆ. ಹೀಗಾಗಿ ಜಿಬಿಎ ಚುನಾವಣೆಯಲ್ಲಿ ಒಳ್ಳೆಯ ಕಾರ್ಯಕರ್ತ ಗೆಲ್ಲುವ ಅರ್ಹತೆ ಇದ್ದರೆ, ಹಣವಿಲ್ಲದಿದ್ದರೂ ನಿಮಗೆ ಟಿಕೆಟ್ ಸಿಗುವುದು ಗ್ಯಾರಂಟಿ” ಎಂದರು.

“ಮುಂದಿನ 2 ವರ್ಷ ಕಾಂಗ್ರೆಸ್ ಕಾರ್ಯಕರ್ತರ ವರ್ಷ. ಈ ಎರಡು ವರ್ಷ ರಾಜ್ಯದ ಚುನಾವಣೆ ಹಾಗೂ ನಂತರದ ಒಂದು ವರ್ಷ ಲೋಕಸಭೆ ಚುನಾವಣೆಯಲ್ಲಿ ನಾವು ಸಕ್ರಿಯವಾಗಿ ಭಾಗವಹಿಸಿ ಬಿಜೆಪಿ ಹಾಗೂ ಆಸ್ ಎಸ್ಎಸ್ ಅನ್ನು ಮಣಿಸಬೇಕಾಗುತ್ತದೆ. ಇದಕ್ಕೆ ನಿಮ್ಮೆಲ್ಲರ ಶಕ್ತಿ ಹಾಗೂ ಸಹಕಾರ ಅಗತ್ಯವಿದೆ. ನಮ್ಮ ಹೋರಾಟ ಮಾಡುತ್ತಿರುವುದು ಸೋನಿಯಾ ಗಾಂಧಿ ಅವರು. ಇಡೀ ಕಾಂಗ್ರೆಸ್ ಪಕ್ಷ ಅವರನ್ನು ಪ್ರಧಾನಮಂತ್ರಿ ಮಾಡಲು ತೀರ್ಮಾನಿಸಿದಾಗಲೂ ಅವರು ನಾನು ಈ ಹುದ್ದೆ ಸ್ವೀಕರಿಸುವುದಿಲ್ಲ, ಮನಮೋಹನ್ ಸಿಂಗ್ ಅವರನ್ನು ಪ್ರಧಾನಮಂತ್ರಿ ಮಾಡಿ ಎಂದು ತ್ಯಾಗ ಮಾಡಿರುವುದು ನಮ್ಮ ಮುಂದೆ ಇದೆ. ಅವರೇ ಕಾಂಗ್ರೆಸ್ ಪಕ್ಷವನ್ನು ಉಳಿಸಲು ತ್ಯಾಗ ಮಾಡಿರುವಾಗ, ನಾವು ಪಕ್ಷವನ್ನು ಬೆಳೆಸಲು ಎಲ್ಲರೂ ಸೇರಿ ಕೆಲಸ ಮಾಡಬೇಕು” ಎಂದು ಕೋರಿದರು.

“ಕಾಂಗ್ರೆಸ್ ಪಕ್ಷದ ಸಂವಿಧಾನ ಹಾಗೂ ಸೋನಿಯಾ ಗಾಂಧಿ ಅವರ ಆಶಯದಂತೆ ಕೆಲಸ ಮಾಡುವೆ. ಮಹಿಳೆಯರಿಗೆ 33% ಅವಕಾಶ ಸಿಕ್ಕೇ ಸಿಗುತ್ತದೆ. ಯಾವುದೇ ಜಾತಿ, ಧರ್ಮ, ಭಾಷೆ ತಾರತಮ್ಯವಿಲ್ಲದೇ ಯುವಕರನ್ನು ಸೇರಿಸಿಕೊಂಡು ಮುಂದೆ ಸಾಗಬೇಕಾಗುತ್ತದೆ” ಎಂದು ಹೇಳಿದರು.

ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಜಿ.ಸಿ. ಚಂದ್ರಶೇಖರ್ ಮಾತನಾಡಿ, “ಕಾಂಗ್ರೆಸ್ ಪಕ್ಷದ ಕಟ್ಟಾಳು, ಸಕ್ರಿಯ ಕಾರ್ಯಕರ್ತ, ದೇವರಾಜ ಅರಸು ಅವರ ಮೊಮ್ಮಗ ಸೂರಜ್ ಹೆಗ್ಡೆ ಅವರ ನಿಧನ ನಮ್ಮೆಲ್ಲರಿಗೂ ದುಃಖ ತರಿಸುವ ವಿಚಾರ. ಅವರು ತಾಳ್ಮೆಗೆ ಮತ್ತೊಂದು ರೂಪವಾಗಿದ್ದರು. ಅಂತಹ ವ್ಯಕ್ತಿ ತಮ್ಮ ಆರೋಗ್ಯ ಸಮಸ್ಯೆ ಇದ್ದರೂ ವೈದ್ಯರ ವಿಶ್ರಾಂತಿ ಸಲಹೆ ಇದ್ದರೂ ತಮಿಳುನಾಡು ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಪರವಾಗಿ ಕೆಲಸ ಮಾಡಲೇಬೇಕು ಎಂದು ಭಾಗವಹಿಸಿದರು. ಇದು ಅವರ ಬದ್ಧತೆಗೆ ಉದಾಹರಣೆ” ಎಂದರು.

ಕೆಪಿಸಿಸಿ ನೂತನ ಅಧ್ಯಕ್ಷರಾಗಿ ನೇಮಕಗೊಂಡಿರುವ ಬಿ.ಕೆ. ಹರಿಪ್ರಸಾದ್ ಅವರು ಜವಾಬ್ದಾರಿ ಸ್ವೀಕಾರಕ್ಕೂ ಮುನ್ನ ಪಕ್ಷದ ಕಚೇರಿಗೆ ಸೌಜನ್ಯ ಭೇಟಿ ನೀಡಿದ್ದಾರೆ. ಕಾರ್ಯಕರ್ತನಾಗಿ, ಪ್ರಧಾನ ಕಾರ್ಯದರ್ಶಿಗಳಾಗಿ ದೇಶದ 19 ರಾಜ್ಯಗಳಿಗೆ ಉಸ್ತುವಾರಿಯಾಗಿ, 4 ಬಾರಿ ರಾಜ್ಯಸಭೆ ಸದಸ್ಯರಾಗಿ, ಎರಡನೇ ಬಾರಿ ವಿಧಾನ ಪರಿಷತ್ ಸದಸ್ಯರಾಗಿ ತಮ್ಮ ಇಡೀ ಜೀವನವನ್ನು ಕಾಂಗ್ರೆಸ್ ಪಕ್ಷಕ್ಕೆ ಸಮರ್ಪಣೆ ಮಾಡಿಕೊಂಡ ಕಾರ್ಯಕರ್ತರು ಎಂದರೆ ಅದು ಬಿ.ಕೆ. ಹರಿಪ್ರಸಾದ್ ಅವರು. ಸಂಘಟನೆ ಮೂಲಕ ಕೆಲಸ ಮಾಡಿಕೊಂಡು ಬಂದವರನ್ನೂ ಪಿಸಿಸಿ ಅಧ್ಯಕ್ಷರನ್ನಾಗಿ ಹೈಕಮಾಂಡ್ ಮಾಡಲಿದೆ ಎಂಬುದಕ್ಕೆ ಹರಿಪ್ರಸಾದ್ ಅವರು ಸ್ಪಷ್ಟ ನಿದರ್ಶನ” ಎಂದು ತಿಳಿಸಿದರು.

“ಜೂ.21ರಂದು ಅರಮನೆ ಮೈದಾನದಲ್ಲಿ ಈ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರು ಆಗಮಿಸಬೇಕು. ಹರಿಪ್ರಸಾದ್ ಅವರ ಮುಂದೆ ಸಾಕಷ್ಟು ಸವಾಲುಗಳಿದ್ದು, 2 ಉಪಚುನಾವಣೆಗಳು, ಜಿಬಿಎ ಪಾಲಿಕೆಗಳು, ಸ್ಥಳೀಯ ಸಂಸ್ಥೆಗಳ ಚುನಾವಣೆ 2 ವರ್ಷಗಳಲ್ಲಿ ವಿಧಾನಸಭೆ ಚುನಾವಣೆ ಎದುರಾಗಲಿದೆ. ಅವರ ಜೊತೆ ಎಲ್ಲಾ ಕಾರ್ಯಕರ್ತರು ನಿಂತು ಅವರನ್ನು ಬೆಂಬಲಿಸಬೇಕು. ಅವರು ನಮ್ಮ ರಾಜ್ಯದಲ್ಲಿ ಮಾತ್ರವಲ್ಲ, ಬೇರೆ ರಾಜ್ಯಗಳಲ್ಲೂ ಸಂಘಟನೆ ಮಾಡಿ ಅಪಾರ ಅನುಭವ ಹೊಂದಿದ್ದಾರೆ. ಅವರ ಕಾರ್ಯ ಯೋಜನೆಗೆ ನಾವು ಸ್ಪಂದಿಸಿ ಪಕ್ಷವನ್ನು ಅಧಿಕಾರಕ್ಕೆ ತರಲು ಇಡೀ ಪಕ್ಷ ಅವರ ಜೊತೆಗಿದೆ” ಎಂದು ಹೇಳಿದರು.

ಆರ್ ಎಸ್ಎಸ್ ನೋಂದಣಿ ವಿಚಾರವಾಗಿ ಸಚಿವ ಪ್ರಿಯಾಂಕ್ ಖರ್ಗೆ ಅವರ ಹೇಳಿಕೆ ಬಗ್ಗೆ ಕೇಳಿದಾಗ, “ಪ್ರಿಯಾಂಕ್ ಖರ್ಗೆ ಅವರು ಗೃಹ ಸಚಿವರು, ಸರ್ಕಾರದ ಭಾಗ, ಸಂವಿಧಾನದ ವ್ಯಾಪ್ತಿಯಲ್ಲಿ ಅವರಿಗೆ ಅಧಿಕಾರವಿದೆ. ಅವರ ಮಾತಿಗೆ ನಾನು ಸಹಮತ ವ್ಯಕ್ತಪಡಿಸುತ್ತೇನೆ” ಎಂದು ಹರಿಪ್ರಸಾದ್ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments