ಶಿಕ್ಷಕರ ಕೊರತೆ ಇರುವ ಸರ್ಕಾರಿ ಶಾಲೆಗಳನ್ನು ನಗರ ಪ್ರದೇಶದ ಅತ್ಯುತ್ತಮ ಖಾಸಗಿ ಶಾಲೆಗಳು ದತ್ತು ಪಡೆದು ಶಿಕ್ಷಕರನ್ನು ನಿಯೋಜಿಸಿ, ತಮ್ಮ ಶಾಲೆಗಳ ಗುಣಮಟ್ಟದ ಶಿಕ್ಷಣವನ್ನು ಗ್ರಾಮೀಣ ಭಾಗದ ಮಕ್ಕಳಿಗೆ ನೀಡಬೇಕು ಎಂದು ಸಿಎಂ ಡಿ ಕೆ ಶಿವಕುಮಾರ್ ತಿಳಿಸಿದರು.
ಹಿರಿಯೂರಿನ ವೇದಾವತಿ ವಿಜ್ಞಾನ ಕಾಲೇಜು ಕ್ರೀಡಾಂಗಣದಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ ಶಿವಕುಮಾರ್ ಅವರು ಶನಿವಾರ ಪ್ರತಿಕ್ರಿಯೆ ನೀಡಿದರು.
ಸರ್ಕಾರಿ ಶಾಲೆಗಳನ್ನು ಖಾಸಗಿ ಶಾಲೆಗಳು ದತ್ತು ತೆಗೆದುಕೊಳ್ಳಬೇಕು ಎನ್ನುವ ಬಗ್ಗೆ ಆಕ್ಷೇಪ ವ್ಯಕ್ತವಾಗಿರುವ ಬಗ್ಗೆ ಕೇಳಿದಾಗ, “ಖಾಸಗಿ ಶಾಲೆಗಳು ಇದರ ಬಗ್ಗೆ ನನ್ನ ಬಳಿ ಹೇಳಲಿ ಆ ನಂತರ ನಾನು ಪ್ರತಿಕ್ರಿಯೆ ನೀಡುತ್ತೇನೆ. ಇದು ನನಗೂ ಅವರಿಗೂ ಇರುವ ಒಪ್ಪಂದ. ಖಾಸಗಿ ಶಾಲೆಗಳು ಎಂದರೆ ಎಲ್ಲಾ ಶಾಲೆಗಳು ದತ್ತು ತೆಗೆದುಕೊಳ್ಳುವುದಲ್ಲ. ಇದಕ್ಕೆ ಕೆಲವು ಮಾನದಂಡಗಳಿವೆ. ಅತ್ಯುತ್ತಮ ಶಾಲೆಗಳು ಗ್ರಾಮೀಣ ಭಾಗದ ಶಾಲೆಗಳನ್ನು ತಮ್ಮ ಶಾಲೆಗಳ ಮಟ್ಟಕ್ಕೆ ಕೊಂಡೊಯ್ಯಲು ದತ್ತು ತೆಗೆದುಕೊಳ್ಳುವುದು. ಸಿಎಸ್ ಆರ್ ಹಣವನ್ನು ಹೀಗೆ ಖರ್ಚು ಮಾಡಿದರೆ ಪ್ರಾಥಮಿಕ ಶಿಕ್ಷಣ ಬಲಗೊಳ್ಳುತ್ತದೆ. ಹಳ್ಳಿ ಮಕ್ಕಳು ನಗರಗಳಿಗೆ ಶಿಕ್ಷಣಕ್ಕಾಗಿ ವಲಸೆ ಬರುವುದು ತಪ್ಪಬೇಕು. ಅವರಿಗೂ ಬೆಂಗಳೂರು ಮಟ್ಟದ ಶಿಕ್ಷಣ ದೊರೆಯಬೇಕು ಎಂಬುದು ನನ್ನ ಅಭಿಲಾಷೆ. ಸರ್ಕಾರ 1.40 ಲಕ್ಷ ರೂಪಾಯಿಯನ್ನು ಒಂದು ಮಗುವಿನ ಮೇಲೆ ಖರ್ಚು ಮಾಡುತ್ತಿದೆ. ಆದರೂ ಸಹ ಗುಣಮಟ್ಟದ ಶಿಕ್ಷಣ ನೀಡಲು ತೊಡಕಾಗುತ್ತಿದೆ. ಅದಕ್ಕಾಗಿ ನಾನು ಖಾಸಗಿ ಅವರ ಬಳಿ ಮಾತುಕತೆ ನಡೆಸಿದ್ದೇನೆ” ಎಂದು ಹೇಳಿದರು.
ಕೆಪಿಎಸ್ ಸಿ ಅಧ್ಯಕ್ಷರನ್ನು ನೇಮಿಸಿದ್ದೇ ಬಿಜೆಪಿ
ಬಿಜೆಪಿಯವರು ಕಾಂಗ್ರೆಸ್ ಕಚೇರಿಗಳ ಮುಂದೆ ಪ್ರತಿಭಟನೆ ನಡೆಸುತ್ತಿರುವ ಬಗ್ಗೆ ಕೇಳಿದಾಗ, “ಬಿಜೆಪಿಯವರಿಗೆ ಅವಮಾನ ತಡೆಯಲು ಆಗುತ್ತಿಲ್ಲ. ಪ್ರಧಾನಮಂತ್ರಿಯವರು ಈಗ ಕಣ್ತೆರೆದಿದ್ದಾರೆ. ನಾವು ಸಂಸತ್ತಿನಲ್ಲಿ ಚರ್ಚೆ ಮಾಡಿ ಎಂದು ಆಗ್ರಹಿಸಿದ್ದೇವೆ. ವಿದ್ಯಾರ್ಥಿಗಳ ಮೇಲೆ ಪ್ರಕರಣ ವಾಪಸ್ ಪಡೆಯಬೇಕು. ಶಿಕ್ಷಣ ಸಚಿವರು ರಾಜಿನಾಮೆ ನೀಡಬೇಕು ಎಂದು ಆಗ್ರಹಿಸಿದ್ದೇವೆ. ಮಕ್ಕಳಿಗೆ ಏಟು ನೀಡಿದ ಬಿಜೆಪಿಯವರ ಮೇಲೆ ಇಡೀ ಸಮೂಹ ದೇಶದಾದ್ಯಂತ ದಂಗೆ ಎದ್ದಿದೆ. ಅದನ್ನ ನೋಡಿ ತಡೆದುಕೊಳ್ಳಲು ಅವರಿಗೆ ಆಗುತ್ತಿಲ್ಲ. ಅದಕ್ಕೆ ಹೀಗೆ ಮಾಡುತ್ತಿದ್ದಾರೆ” ಎಂದರು.
“ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಭಟನೆ ಮಾಡುವುದನ್ನು ಬೇಡ ಎಂದು ಹೇಳಲು ಆಗುತ್ತದೆಯೇ? ನನ್ನ ವಿರುದ್ಧ ಪ್ರತಿಭಟನೆ ಮಾಡುವವರನ್ನು ನಾನು ಬೇಡ ಎನ್ನಲು ಸಾಧ್ಯವೇ? ಮಾಧ್ಯಮದವರೂ ಪ್ರತಿಭಟನೆ ಮಾಡುತ್ತಾರೆ. ಇದನ್ನು ಬೇಡ ಎನ್ನಲು ಆಗುತ್ತದೆಯೇ? ಕೆಪಿಎಸ್ ಸಿ ಅಧ್ಯಕ್ಷನನ್ನ ನಾವು ಮಾಡಿದ್ದಲ್ಲ. ಬಿಜೆಪಿಯವರೇ ಆಯ್ಕೆ ಮಾಡಿದ್ದು. ಈಗ ಅವರೇ ಸಿಲುಕಿಕೊಂಡಿದ್ದಾರೆ. ಅದಕ್ಕೆ ಅವರೇ ಮುಂಚಿತವಾಗಿ ಪತ್ರ ಬರೆದು ವಜಾ ಮಾಡಬೇಕು ಎಂದಿದ್ದಾರೆ. ರಾಜ್ಯಪಾಲರು ಕಳಿಸಿದ್ದನ್ನು ನಾವು ಅಂಗೀಕಾರ ಮಾಡಿದ್ದೇವೆ. ತನಿಖೆ ನಡೆಸುತ್ತೇವೆ. ಕಾನೂನು ಕ್ರಮ ಕೈಗೊಳ್ಳುತ್ತೇವೆ” ಎಂದು ಸ್ಪಷ್ಟಪಡಿಸಿದರು.
ಯಾರಿಗೂ ತೊಂದರೆ ನೀಡುವುದಿಲ್ಲ
ಬಿಡದಿ ರೈತರ ವಿರುದ್ಧದ ಪ್ರಕರಣ ಹಿಂಪಡೆಯುತ್ತೀರಾ ಎಂದು ಕೇಳಿದಾಗ, “ಅವರೆಲ್ಲರೂ ನಮ್ಮ ರೈತರೇ. ನಾವು ಯಾರ ಮೇಲೂ ಒತ್ತಡ ಹಾಕುವುದಿಲ್ಲ, ತೊಂದರೆ ನೀಡುವುದಿಲ್ಲ ಎಂದು ಹೇಳಿದ್ದೇನೆ. ಅವರು ನಮ್ಮ ಜನ. ಅವರನ್ನು ಬಿಟ್ಟು ನಾವು, ನಮ್ಮನ್ನು ಬಿಟ್ಟು ಅವರು ಬದುಕಲು ಸಾಧ್ಯವಿಲ್ಲ. ನಾವು ತೀರ್ಮಾನ ಮಾಡುತ್ತೇವೆ” ಎಂದು ತಿಳಿಸಿದರು.
ಮಳೆ ಕೊರತೆ ಪ್ರದೇಶಗಳಿಗೆ ಭೇಟಿ ಕೊಟ್ಟು ಪರಿಶೀಲನೆ
“ಬೆಂಗಳೂರಿನಲ್ಲಿ ಬರ ಪರಿಸ್ಥಿತಿ ಹಾಗೂ ಪ್ರಗತಿ ಪರಿಶೀಲನೆ ಮಾಡುವ ಬದಲು, ಚಿತ್ರದುರ್ಗದಲ್ಲಿ ನಡೆಸೋಣ ಎಂದು ಬಂದಿದ್ದೇನೆ. ಈಗಾಗಲೇ ಜಿಲ್ಲಾಧಿಕಾರಿಗಳು ಹಾಗೂ ಸಿಇಓಗಳ ಸಭೆಯನ್ನು ಈಗಾಗಲೇ ನಡೆಸಿದ್ದೇನೆ. ಈಗ ತುಮಕೂರು, ಶಿವಮೊಗ್ಗ, ಚಿತ್ರದುರ್ಗ, ದಾವಣಗೆರೆ ಭಾಗಗಳಿಗೆ ಅನುಕೂಲವಾಗಲಿದೆ. ಆದ ಕಾರಣ ಸಭೆ ನಡೆಸುತ್ತಿದ್ದೇನೆ. ಇಂದು ಕೆಲವು ಪ್ರದೇಶಗಳಿಗೆ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸುತ್ತೇನೆ” ಎಂದು ತಿಳಿಸಿದರು.
“ಬೆಳಗಾವಿಯಲ್ಲಿ ನಡೆದ ಪ್ರಗತಿ ಪರಿಶೀಲನೆ ಸಭೆ ವೇಳೆ ಯಾವುದೇ ಕಾರಣಕ್ಕೂ ಕುಡಿಯುವ ನೀರಿಗೆ ತೊಂದರೆಯಾಗಬಾರದು ಎಂದು ತೀರ್ಮಾನ ಮಾಡಿದ್ದೇವೆ. ಆಲಮಟ್ಟಿ ಅಣೆಕಟ್ಟು ಹೊರತಾಗಿ ರಾಜ್ಯದ ಬೇರೆ ಯಾವ ಭಾಗದಲ್ಲೂ ಉತ್ತಮ ಮಳೆ ಇಲ್ಲ. ರಾಜ್ಯದಲ್ಲಿ ಬರ ಇನ್ನೂ ಹೆಚ್ಚಾಗುತ್ತಲೇ ಇದೆ. ಬರ ಪರಿಸ್ಥಿತಿ ಬಗ್ಗೆ ಅಧಿಕಾರಿಗಳು ಈಗಾಗಲೇ ಮಾಹಿತಿ ಪಡೆದುಕೊಂಡಿದ್ದು, ಅವರ ಜೊತೆ ಜನಪ್ರತಿನಿಧಿಗಳೊಂದಿಗೆ ಚರ್ಚೆ ನಡೆಸುತ್ತೇನೆ. ಭಾನುವಾರ ದಿವಂಗತ ಸುಧಾಕರ್ ಅವರ ನುಡಿನಮನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಹೀಗಾಗಿ ನಾಳೆಯೂ ಚಿತ್ರದುರ್ಗಕ್ಕೆ ಆಗಮಿಸಲಿದ್ದೇನೆ” ಎಂದು ತಿಳಿಸಿದರು.
ಸಚಿವ ಸಂಪುಟ ವಿಸ್ತರಣೆ ಯಾವಾಗ ಎಂದು ಕೇಳಿದಾಗ, “ಮುಂದಿನ ವಾರ ನಡೆಯಲಿದೆ” ಎಂದರು.


