ಪ್ರಸಕ್ತ ಬೆಲೆ ಏರಿಕೆ ಸರಿದೂಗಿಸಲು ಕಾರ್ಮಿಕರ ರಾಜ್ಯ ಸರ್ಕಾರ ಕನಿಷ್ಠ ವೇತನವನ್ನು ಹೆಚ್ಚಿಸಲು ತೀರ್ಮಾನಿಸಿದ್ದು, ಈ ಹಿಂದಿನ ಮನ್ರೇಗಾದ ಹೊಸ ರೂಪವಾದ ವಿಕ್ಷಿತ್ ಭಾರತ್-ಜಿ ರಾಮ್ ಜಿ ಯ ಕನಿಷ್ಠ ವೇತನವನ್ನು ಹೆಚ್ಚಿಸಬೇಕು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ ಖಂಡ್ರೆ ಕೇಂದ್ರ ಸಚಿವರನ್ನು ಆಗ್ರಹಿಸಿದ್ದಾರೆ.
ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವ ಶಿವರಾಜ್ ಸಿಂಗ್ ಚವ್ಹಾಣ್ ಅಧ್ಯಕ್ಷತೆಯಲ್ಲಿ ಎಲ್ಲ ರಾಜ್ಯಗಳ ಗ್ರಾಮೀಣಾಭಿವೃದ್ಧಿ ಸಚಿವರೊಂದಿಗೆ ಇಂದು ನಡೆದ ವಿಡಿಯೋ ಕಾನ್ಫರೆನ್ಸ್ ನಲ್ಲಿ ಭಾಗಿಯಾಗಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಈಗಾಗಲೇ ಕಾರ್ಮಿಕರ ಕನಿಷ್ಠ ವೇತನ ಹೆಚ್ಚಳಕ್ಕೆ ಅನುಮೋದನೆ ನೀಡಿದ್ದು, ಇದೇ ಪ್ರಕಾರವಾಗಿ ಕೇಂದ್ರ ಸರ್ಕಾರವೂ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಹಣ ಹೆಚ್ಚಿಸಬೇಕು ಎಂದು ಆಗ್ರಹಿಸಿದರು.
ಈ ವರ್ಷ ಜುಲೈ 1ರಿಂದ ಜಾರಿಯಾಗಬೇಕಿರುವ ಮನ್ರೇಗಾ- ವಿಕ್ಷಿತ್ ಭಾರತ್-ಜಿ ರಾಮ್ ಜಿ ಅಡಿಯಲ್ಲಿ ಕರ್ನಾಟಕಕ್ಕೆಕೇಂದ್ರ ಸರ್ಕಾರ 60:40ರ ಅನುಪಾತದಲ್ಲಿ 5709.90 ಕೋಟಿ ರೂ. ಮಧ್ಯಂತರ ಹಂಚಿಕೆ ಮಾಡಿದ್ದು, ಇದಕ್ಕೆ ರಾಜ್ಯ ಸರ್ಕಾರ 40ರ ಅನುಪಾತದಲ್ಲಿ 3806.60 ಕೋಟಿ ನೀಡಬೇಕಾಗಿದೆ, ಈ ಯೋಜನೆ ಅನುಷ್ಠಾನಕ್ಕಾಗಿ ಹಣಕಾಸು ಸಚಿವರೂ ಆದ ಮಾನ್ಯ ಮುಖ್ಯಮಂತ್ರಿಗಳಿಗೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದರು.
ಈ ಹಿಂದೆ ಯುಪಿಎ ಅಧಿಕಾರಾವಧಿಯಲ್ಲಿ ಅನುಷ್ಠಾನಕ್ಕೆ ತಂದ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಮನ್ರೇಗಾವನ್ನು ರಾಜ್ಯ ಸರ್ಕಾರ ಅತ್ಯಂತ ಯಶಸ್ವಿಯಾಗಿ ಜಾರಿ ಮಾಡಿದ್ದು, ಗ್ರಾಮೀಣ ಭೂರಹಿತ ಕೂಲಿ ಕಾರ್ಮಿಕರು, ರೈತರು, ಮಹಿಳೆಯರು, ಪರಿಶಿಷ್ಟ ಜಾತಿ, ಪಂಗಡದವರು, ಹಿಂದುಳಿದವರಿಗೆ ಒಳಿತಾಗುವ ರೀತಿಯಲ್ಲಿ ಹಾಗೂ ಗ್ರಾಮೀಣ ಜನರ ಬದುಕು ಹಸನಾಗಿಸಲು ಶ್ರಮಿಸಲಾಗುವುದು ಎಂದು ತಿಳಿಸಿದರು.
ಬರುವ 28 ಹಾಗೂ 29ರಂದು ನವದೆಹಲಿಯಲ್ಲಿ ವಿಕ್ಷಿತ್ ಭಾರತ್ ಜೀ ರಾಮ್ ಜೀ ಯೋಜನೆ ಅನುಷ್ಠಾನದ ಬಗ್ಗೆ ಎಲ್ಲ ರಾಜ್ಯಗಳ ಗ್ರಾಮೀಣಾಭಿವೃದ್ಧಿ ಸಚಿವರ ಸಭೆ ಕರೆಯಲಾಗಿದ್ದು ತಾವು ಈ ಸಭೆಯಲ್ಲಿ ಭಾಗಿಯಾಗಿ, ರಾಜ್ಯದ ಬೇಡಿಕೆಗಳನ್ನು ಮಂಡಿಸುವುದಾಗಿ ಈಶ್ವರ ಖಂಡ್ರೆ ಹೇಳಿದರು.
ಸಭೆಯಲ್ಲಿ ಇಲಾಖೆಯ ಕಾರ್ಯದರ್ಶಿ ಸಮೀರ್ ಶುಕ್ಲ ಮತ್ತಿತರರು ಭಾಗಿಯಾಗಿದ್ದರು.


