Homeಕರ್ನಾಟಕಪ್ರಾರ್ಥನೆಯಿಂದ ಮುಖ್ಯಮಂತ್ರಿ ಗಾದಿವರೆಗೆ; ಇಂದಿನಿಂದ ಡಿ ಕೆ ಶಿವಕುಮಾರ್ ಹೊಸ ಅಧ್ಯಾಯ ಆರಂಭ

ಪ್ರಾರ್ಥನೆಯಿಂದ ಮುಖ್ಯಮಂತ್ರಿ ಗಾದಿವರೆಗೆ; ಇಂದಿನಿಂದ ಡಿ ಕೆ ಶಿವಕುಮಾರ್ ಹೊಸ ಅಧ್ಯಾಯ ಆರಂಭ

ಪ್ರಾರ್ಥನೆಯಿಂದ ಮುಖ್ಯಮಂತ್ರಿ ಗಾದಿವರೆಗೆ…

ಕರ್ನಾಟಕ ರಾಜಕೀಯದಲ್ಲಿ ಅನೇಕರು ಅಧಿಕಾರಕ್ಕಾಗಿ ಹೋರಾಡಿದ್ದಾರೆ. ಆದರೆ ಪಕ್ಷವನ್ನು ಉಳಿಸಲು, ಸಂಕಷ್ಟದ ಕ್ಷಣಗಳಲ್ಲಿ ಹೆಗಲು ನೀಡಲು ತಮ್ಮ ಬದುಕನ್ನೇ ಸಮರ್ಪಿಸಿದ ನಾಯಕರು ವಿರಳ. ಅಂತಹ ಅಪರೂಪದ ರಾಜಕಾರಣಿಯೇ ಡಿ.ಕೆ.ಶಿವಕುಮಾರ್.

ಅವರ ಪಯಣ ಕೇವಲ ಮುಖ್ಯಮಂತ್ರಿ ಗಾದಿಯವರೆಗೆ ತಲುಪಿದ ಕಥೆಯಲ್ಲ; ಅದು ನಿಷ್ಠೆ, ತಾಳ್ಮೆ, ಶ್ರಮ ಮತ್ತು ಪ್ರಾರ್ಥನೆಯ ವಿಜಯಗಾಥೆ. ಹಲವು ಬಾರಿ ಅವಕಾಶ ಕೈತಪ್ಪಿತು, ಹಲವು ಬಾರಿ ರಾಜಕೀಯ ಲೆಕ್ಕಾಚಾರಗಳು ವಿರುದ್ಧ ನಿಂತವು. ಆದರೂ ಅವರು ಕುಗ್ಗಲಿಲ್ಲ. ಪಕ್ಷ ಸಂಕಷ್ಟದಲ್ಲಿದ್ದಾಗ ಟ್ರಬಲ್ ಶೂಟರ್ ಆಗಿ ನಿಂತರು, ಸಂಘಟಕರಾಗಿ ಪಕ್ಷವನ್ನು ಬಲಪಡಿಸಿದರು, ಕಾರ್ಯಕರ್ತರ ವಿಶ್ವಾಸವನ್ನು ಗಳಿಸಿದರು.

“ಪ್ರಯತ್ನಗಳು ವಿಫಲವಾಗಬಹುದು, ಆದರೆ ಪ್ರಾರ್ಥನೆಗಳು ಎಂದಿಗೂ ವ್ಯರ್ಥವಾಗುವುದಿಲ್ಲ” ಎಂಬ ನಂಬಿಕೆಯನ್ನು ಬದುಕಿನುದ್ದಕ್ಕೂ ಹೊತ್ತು ನಡೆದ ಅವರು, ಅಧಿಕಾರಕ್ಕಿಂತ ಪಕ್ಷ ನಿಷ್ಠೆಗೆ ಹೆಚ್ಚಿನ ಮೌಲ್ಯ ನೀಡಿದರು. ಜನಸ್ನೇಹಿ ನಾಯಕನಾಗಿ, ಅದ್ಭುತ ಸಂಘಟಕರಾಗಿ, ಸಾವಿರಾರು ಕಾರ್ಯಕರ್ತರ ಆಶಾಕಿರಣವಾಗಿ ಬೆಳೆದ ಅವರ ಪಯಣ ಇಂದು ಮುಖ್ಯಮಂತ್ರಿ ಗಾದಿಯೊಂದಿಗೆ ಹೊಸ ಅಧ್ಯಾಯಕ್ಕೆ ಕಾಲಿಟ್ಟಿದೆ.

2023ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬಂದಾಗ, ಅದರ ಹಿಂದೆ ದೊಡ್ಡ ಮಟ್ಟದ ಸಂಘಟನಾ ಶಕ್ತಿ ಕೆಲಸ ಮಾಡಿತ್ತು. ಆ ಶಕ್ತಿಯ ಕೇಂದ್ರದಲ್ಲಿ ಡಿ.ಕೆ. ಶಿವಕುಮಾರ್ ಇದ್ದರು. ಬಿಜೆಪಿ ಸರ್ಕಾರದ ವಿರುದ್ಧ ಜನಾಭಿಪ್ರಾಯ ರೂಪಿಸುವುದು, ಕಾರ್ಯಕರ್ತರನ್ನು ಒಗ್ಗೂಡಿಸುವುದು, ಅಭ್ಯರ್ಥಿಗಳ ನಡುವೆ ಸಮನ್ವಯ ಸಾಧಿಸುವುದು, ಆರ್ಥಿಕವಾಗಿ ಪಕ್ಷವನ್ನು ಬಲಪಡಿಸುವುದು- ಎಲ್ಲ ಹಂತದಲ್ಲೂ ಅವರು ಮುಂಚೂಣಿಯಲ್ಲಿದ್ದರು.

ಚುನಾವಣಾ ಫಲಿತಾಂಶ ಬಂದಾಗ ಕಾಂಗ್ರೆಸ್ ಕಾರ್ಯಕರ್ತರ ಬಹುಪಾಲು “ಡಿಕೆ ಸಿಎಂ” ಎಂಬ ಘೋಷಣೆ ಕೂಗಿದರು. ಆದರೆ ಅಂತಿಮವಾಗಿ ಹೈಕಮಾಂಡ್ ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಸ್ಥಾನಕ್ಕೆ ಆಯ್ಕೆ ಮಾಡಿತು. ಆ ಕ್ಷಣ ಡಿ.ಕೆ. ಶಿವಕುಮಾರ್ ಅವರ ಜೀವನದ ಅತ್ಯಂತ ಭಾವನಾತ್ಮಕ ಕ್ಷಣಗಳಲ್ಲಿ ಒಂದಾಗಿತ್ತು.

ಅವರು ಬಯಸಿದ್ದ ಹುದ್ದೆ ಕೈತಪ್ಪಿತ್ತು. ಆದರೆ ಅವರು ಪಕ್ಷದ ವಿರುದ್ಧ ಒಂದು ಮಾತು ಆಡಲಿಲ್ಲ. ಮುಖದಲ್ಲಿ ನೋವಿದ್ದರೂ, ಮಾತಿನಲ್ಲಿ ನಿಷ್ಠೆ ಇತ್ತು. “ಪಕ್ಷದ ತೀರ್ಮಾನವೇ ಅಂತಿಮ” ಎಂದು ಹೇಳಿ ಉಪಮುಖ್ಯಮಂತ್ರಿ ಸ್ಥಾನ ಸ್ವೀಕರಿಸಿದರು. ಇದೇ ಅವರ ರಾಜಕೀಯ ವ್ಯಕ್ತಿತ್ವವನ್ನು ಬೇರೆ ನಾಯಕರಿಗಿಂತ ವಿಭಿನ್ನಗೊಳಿಸುತ್ತೆ.

ಅಧಿಕಾರ ಸಿಗದಾಗ ಪಕ್ಷ ಬಿಟ್ಟುಹೋಗುವ ಕಾಲದಲ್ಲಿ, ಅಧಿಕಾರಕ್ಕಾಗಿ ಬಂಡಾಯ ಮಾಡುವ ರಾಜಕೀಯದ ನಡುವೆ, ಡಿ.ಕೆ. ಶಿವಕುಮಾರ್ ಮಾತ್ರ “ಪಕ್ಷವೇ ದೊಡ್ಡದು” ಎಂದು ನಿಂತರು. ಇದೇ ಕಾರಣಕ್ಕೆ ಕಾಂಗ್ರೆಸ್ ಹೈಕಮಾಂಡ್‌ನ ವಿಶ್ವಾಸವನ್ನು ಅವರು ನಿಧಾನವಾಗಿ ಸಂಪಾದಿಸಿದರು.

ಪಕ್ಷಕ್ಕಿಂತ ಹುದ್ದೆ ದೊಡ್ಡದಲ್ಲ

ಭಾರತೀಯ ರಾಜಕಾರಣದಲ್ಲಿ ಹುದ್ದೆಗಾಗಿ ಪಕ್ಷ ಬದಲಿಸುವುದು, ಅಧಿಕಾರಕ್ಕಾಗಿ ಬಂಡಾಯ ಏಳುವುದು, ಅವಕಾಶ ಸಿಗದಿದ್ದರೆ ನಾಯಕತ್ವದ ವಿರುದ್ಧವೇ ತಿರುಗಿಬೀಳುವುದು ಹೊಸ ವಿಷಯವಲ್ಲ. ಇಂತಹ ರಾಜಕೀಯ ವಾತಾವರಣದಲ್ಲಿ ಪಕ್ಷಕ್ಕಾಗಿ ತನ್ನ ವೈಯಕ್ತಿಕ ಮಹತ್ವಾಕಾಂಕ್ಷೆಯನ್ನು ಹಲವು ಬಾರಿ ಬದಿಗಿಟ್ಟು, ಸಂಕಷ್ಟದ ಸಂದರ್ಭದಲ್ಲಿ ಪಕ್ಷದ ಬೆನ್ನಿಗೆ ನಿಂತ ನಾಯಕರು ಅಪರೂಪ. ಕರ್ನಾಟಕ ಕಾಂಗ್ರೆಸ್‌ನ ಇಂದಿನ ಶಕ್ತಿಕೇಂದ್ರವಾಗಿರುವ ಡಿ.ಕೆ. ಶಿವಕುಮಾರ್ ಅವರ ರಾಜಕೀಯ ಬದುಕು ಇದೇ ಕಾರಣಕ್ಕೆ ವಿಶಿಷ್ಟವಾಗಿ ಕಾಣಿಸುತ್ತದೆ.

ರಾಜಕೀಯದಲ್ಲಿ ಯಾರೂ ತ್ಯಾಗಮೂರ್ತಿಗಳಲ್ಲ. ಪ್ರತಿಯೊಬ್ಬರಿಗೂ ತಮ್ಮದೇ ಆದ ಕನಸುಗಳು, ಗುರಿಗಳು ಮತ್ತು ಅಧಿಕಾರದ ಆಶಯಗಳು ಇರುತ್ತವೆ. ಆದರೆ ಆ ಆಶಯಗಳನ್ನು ಯಾವ ಸಂದರ್ಭದಲ್ಲಿ ಹೇಗೆ ನಿರ್ವಹಿಸುತ್ತಾರೆ ಎಂಬುದೇ ನಾಯಕತ್ವದ ಗುಣಮಟ್ಟವನ್ನು ನಿರ್ಧರಿಸುತ್ತದೆ. ಡಿ.ಕೆ. ಶಿವಕುಮಾರ್ ಅವರ ರಾಜಕೀಯ ಜೀವನವನ್ನು ಗಮನಿಸಿದರೆ, ಅವರಲ್ಲೂ ಮುಖ್ಯಮಂತ್ರಿ ಆಗಬೇಕೆಂಬ ಕನಸು ಇತ್ತು. ಆದರೆ ಆ ಕನಸಿನ ನಡುವೆ ಪಕ್ಷದ ಹಿತಾಸಕ್ತಿ ಮತ್ತು ಸಂಘಟನೆಯ ಸ್ಥಿರತೆಯನ್ನು ಮೊದಲ ಆದ್ಯತೆಯಾಗಿ ಪರಿಗಣಿಸಿದ ಹಲವು ಸಂದರ್ಭಗಳು ಕಂಡುಬರುತ್ತವೆ.

ಕಾಂಗ್ರೆಸ್ ಪಕ್ಷ ಕರ್ನಾಟಕದಲ್ಲಿ ಅಧಿಕಾರ ಕಳೆದುಕೊಂಡು ಸಂಕಷ್ಟದ ದಿನಗಳನ್ನು ಎದುರಿಸುತ್ತಿದ್ದಾಗ, ಕಾರ್ಯಕರ್ತರಲ್ಲಿ ಆತ್ಮವಿಶ್ವಾಸ ಕುಸಿದಿದ್ದಾಗ, ಪಕ್ಷದ ಸಂಘಟನೆ ದುರ್ಬಲವಾಗಿದ್ದಾಗ ಅದನ್ನು ಪುನಃ ಕಟ್ಟುವ ಜವಾಬ್ದಾರಿಯನ್ನು ಹೊತ್ತ ಕೆಲವೇ ನಾಯಕರಲ್ಲಿ ಡಿ.ಕೆ. ಶಿವಕುಮಾರ್ ಪ್ರಮುಖರು. ಅವರು ಕೇವಲ ಚುನಾವಣಾ ರಾಜಕಾರಣ ಮಾಡಲಿಲ್ಲ; ಕಾರ್ಯಕರ್ತರನ್ನು ಒಗ್ಗೂಡಿಸುವ ಕೆಲಸ ಮಾಡಿದರು. ಜಿಲ್ಲೆಯಿಂದ ರಾಜ್ಯ ಮಟ್ಟದವರೆಗೆ ಪಕ್ಷದ ಜಾಲವನ್ನು ಬಲಪಡಿಸಲು ಶ್ರಮಿಸಿದರು. ಈ ಕಾರಣಕ್ಕಾಗಿಯೇ ಅವರು ಸಾಮಾನ್ಯ ರಾಜಕಾರಣಿಯಿಂದ ಪ್ರಭಾವಿ ಸಂಘಟಕರಾಗಿ ರೂಪುಗೊಂಡರು.

ರಾಜಕೀಯದಲ್ಲಿ ಹುದ್ದೆಗಳು ಸಾಮಾನ್ಯವಾಗಿ ಚುನಾವಣಾ ಗೆಲುವಿನಿಂದ ದೊರೆಯುತ್ತವೆ. ಆದರೆ ಕೆಲವು ನಾಯಕರು ಹುದ್ದೆ ಪಡೆಯುವ ಮುನ್ನವೇ ತಮ್ಮ ಪ್ರಭಾವವನ್ನು ಸಾಬೀತುಪಡಿಸುತ್ತಾರೆ. ಡಿ.ಕೆ. ಶಿವಕುಮಾರ್ ಅವರ ಪ್ರಭಾವವೂ ಅಂತಹದ್ದೇ. ಅವರು ಕಾಂಗ್ರೆಸ್ ಪಕ್ಷದ ಸಂಘಟನಾ ಬಲವನ್ನು ಹೆಚ್ಚಿಸುವಲ್ಲಿ ನಿರ್ವಹಿಸಿದ ಪಾತ್ರದಿಂದಲೇ ರಾಷ್ಟ್ರೀಯ ಮಟ್ಟದಲ್ಲಿ “ಟ್ರಬಲ್‌ಶೂಟರ್” ಎಂಬ ಹೆಸರನ್ನು ಪಡೆದರು. ಸಂಕಷ್ಟದ ಸಮಯದಲ್ಲಿ ಸಮಸ್ಯೆ ಪರಿಹರಿಸುವ ನಾಯಕ ಎಂಬ ವಿಶ್ವಾಸವನ್ನು ಅವರು ಪಕ್ಷದ ನಾಯಕತ್ವದಲ್ಲಿ ಮೂಡಿಸಿದರು.

ಜೈಲು, ಆರೋಪಗಳು ಮತ್ತು ಕಣ್ಣೀರಿನ ರಾತ್ರಿ

ಡಿ.ಕೆ. ಶಿವಕುಮಾರ್ ಅವರ ರಾಜಕೀಯ ಬದುಕು ಕೇವಲ ಜಯಗಳ ಸರಮಾಲೆಯಲ್ಲ. ಅದು ನೋವುಗಳಿಂದ ಕೂಡಿದ ಹಾದಿ. ಜಾರಿ ನಿರ್ದೇಶನಾಲಯದ ತನಿಖೆಗಳು, ಬಂಧನ, ಜೈಲು ಜೀವನ, ರಾಜಕೀಯ ದಾಳಿಗಳು- ಇವೆಲ್ಲವನ್ನೂ ಅವರು ಎದುರಿಸಿದರು.
ಆ ದಿನಗಳಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಕಣ್ಣೀರು ಹಾಕಿದ್ದರು. “ಪಕ್ಷಕ್ಕಾಗಿ ಹೋರಾಡಿದ ನಾಯಕನನ್ನು ಗುರಿಯಾಗಿಸಲಾಗಿದೆ” ಎಂಬ ಭಾವನೆ ಕಾರ್ಯಕರ್ತರಲ್ಲಿ ಗಟ್ಟಿಯಾಗಿತ್ತು. ಜೈಲಿನಿಂದ ಹೊರಬಂದಾಗ ಡಿಕೆ ಶಿವಕುಮಾರ್ ಭಾವುಕರಾಗಿ ಮಾತನಾಡಿದ್ದ ಕ್ಷಣ ಇನ್ನೂ ಅನೇಕರ ಮನದಲ್ಲಿ ಉಳಿದಿದೆ.

ಅವರ ಕಣ್ಣೀರಿನಲ್ಲಿ ನೋವಿತ್ತು; ಆದರೆ ಅದಕ್ಕಿಂತ ಹೆಚ್ಚು ಪಕ್ಷದ ಮೇಲಿನ ಬದ್ಧತೆ ಇತ್ತು. “ನಾನು ಕುಗ್ಗುವುದಿಲ್ಲ” ಎಂಬ ಸಂದೇಶ ಇತ್ತು. ರಾಜಕೀಯವಾಗಿ ಅವರನ್ನು ಮಣಿಸಲು ನಡೆದ ಪ್ರಯತ್ನಗಳು, ಅವರನ್ನು ಇನ್ನಷ್ಟು ಗಟ್ಟಿಯಾದ ನಾಯಕನನ್ನಾಗಿಸಿತು.

ದೇವಾಲಯಗಳಲ್ಲಿ ಕಂಡ ನೆಮ್ಮದಿ

ರಾಜಕೀಯದ ಒತ್ತಡ, ಅಧಿಕಾರದ ನಿರೀಕ್ಷೆ, ಆಂತರಿಕ ಸಂಘರ್ಷ – ಇವೆಲ್ಲದರ ನಡುವೆ ಡಿ.ಕೆ. ಶಿವಕುಮಾರ್ ದೇವರಲ್ಲಿ ನೆಮ್ಮದಿ ಹುಡುಕಿದರು. ದೇವಾಲಯಗಳಿಂದ ದೇವಾಲಯಗಳಿಗೆ ಅವರ ಪಯಣ ರಾಜಕೀಯ ಚರ್ಚೆಯಾಗಿದ್ದರೂ, ಅದು ಅವರ ವೈಯಕ್ತಿಕ ನಂಬಿಕೆಯ ಪ್ರತಿಬಿಂಬವೂ ಆಗಿತ್ತು.

ಮಹಾಕಾಳೇಶ್ವರ ಜ್ಯೋತಿರ್ಲಿಂಗದಿಂದ ತಿರುಪತಿಯವರೆಗೆ, ಕಾಮಾಕ್ಯದಿಂದ ಶೃಂಗೇರಿ ಶಾರದಾ ಪೀಠದವರೆಗೆ- ಎಲ್ಲೆಡೆ ಅವರು ಪ್ರಾರ್ಥಿಸಿದರು. ಅವರ ರಾಜಕೀಯ ಬದುಕಿನಲ್ಲಿ ದೇವಾಲಯಗಳು ಕೇವಲ ಧಾರ್ಮಿಕ ಸ್ಥಳಗಳಾಗಿರಲಿಲ್ಲ; ಅವು ಮನಸ್ಸಿಗೆ ಧೈರ್ಯ ತುಂಬಿದ ತಾಣಗಳಾಗಿದ್ದವು. ಅನೇಕ ಬಾರಿ ಮುಖ್ಯಮಂತ್ರಿ ಹುದ್ದೆ ದೂರ ಸರಿದಾಗಲೂ ಅವರು ನಂಬಿಕೆ ಕಳೆದುಕೊಳ್ಳಲಿಲ್ಲ. “ದೇವರು ನೋಡಿಕೊಳ್ಳುತ್ತಾನೆ” ಎಂಬ ವಿಶ್ವಾಸ ಹಿಡಿದುಕೊಂಡೇ ಮುಂದೆ ನಡೆದರು.

ಕೊನೆಗೂ ತೆರೆದ ಅಧಿಕಾರದ ಬಾಗಿಲು

ರಾಜಕೀಯದಲ್ಲಿ ಕೆಲವು ಗೆಲುವುಗಳು ತಕ್ಷಣ ಸಿಗುತ್ತವೆ. ಆದರೆ ಕೆಲವು ಗೆಲುವುಗಳು ದಶಕಗಳ ತಾಳ್ಮೆ ಕೇಳುತ್ತವೆ. ಡಿ.ಕೆ. ಶಿವಕುಮಾರ್ ಅವರ ಮುಖ್ಯಮಂತ್ರಿ ಸ್ಥಾನವೂ ಅಂತಹ ದೀರ್ಘ ನಿರೀಕ್ಷೆಯ ಫಲ. ಇದು ಕೇವಲ ಒಬ್ಬ ವ್ಯಕ್ತಿಯ ಜಯವಲ್ಲ. ಇದು ಕಾಂಗ್ರೆಸ್ ಕಾರ್ಯಕರ್ತರ ಭಾವನೆಗಳ ಗೆಲುವು. “ಪಕ್ಷಕ್ಕಾಗಿ ದುಡಿದವರಿಗೆ ಒಂದು ದಿನ ನ್ಯಾಯ ಸಿಗುತ್ತದೆ” ಎಂಬ ನಂಬಿಕೆಯ ಗೆಲುವು. ಅಧಿಕಾರಕ್ಕಾಗಿ ಮಾತ್ರ ರಾಜಕೀಯ ಮಾಡದೆ, ಪಕ್ಷದ ಸಂಕಷ್ಟದ ದಿನಗಳಲ್ಲೂ ಕೈಬಿಡದೆ ನಿಂತ ನಾಯಕನಿಗೆ ಸಿಕ್ಕ ಪ್ರತಿಫಲ.

ಮುಖ್ಯಮಂತ್ರಿ ಆಗುವುದು ಒಂದು ಕನಸಿನ ಪೂರ್ಣತೆ. ಆದರೆ ಜನರ ಹೃದಯದಲ್ಲಿ ಮುಖ್ಯಮಂತ್ರಿ ಆಗಿ ಉಳಿಯುವುದು ಇನ್ನೂ ದೊಡ್ಡ ಸವಾಲು. ಈಗ ಡಿ.ಕೆ. ಶಿವಕುಮಾರ್ ಅವರ ಮುಂದೆ ಆಡಳಿತದ ದೊಡ್ಡ ಹೊಣೆಗಾರಿಕೆ ಇದೆ. ಅವರು ಕೇವಲ ಕಾಂಗ್ರೆಸ್ ನಾಯಕನಾಗಿಯೇ ಉಳಿಯುವರಾ? ಅಥವಾ ರಾಜ್ಯದ ಎಲ್ಲ ವರ್ಗಗಳ ನಾಯಕನಾಗಿ ಹೊರಹೊಮ್ಮುವರಾ? ಎಂಬ ಪ್ರಶ್ನೆಗೆ ಉತ್ತರ ಮುಂದಿನ ಆಡಳಿತ ನೀಡಲಿದೆ.

ಆದರೆ ಇಂದಿನ ಕ್ಷಣದಲ್ಲಿ ಒಂದು ಸಂಗತಿ ಮಾತ್ರ ಸ್ಪಷ್ಟ; ವರ್ಷಗಳ ಪ್ರಾರ್ಥನೆ, ಅನೇಕ ಅವಮಾನಗಳು, ಅಸಂಖ್ಯ ರಾಜಕೀಯ ಹೋರಾಟಗಳು, ಪಕ್ಷದ ಮೇಲಿನ ಅಚಲ ನಿಷ್ಠೆ ಮತ್ತು ಕಾರ್ಯಕರ್ತರ ಮೇಲಿನ ಪ್ರೀತಿ… ಇವೆಲ್ಲವೂ ಸೇರಿ ಡಿ.ಕೆ. ಶಿವಕುಮಾರ್ ಅವರನ್ನು ಮುಖ್ಯಮಂತ್ರಿ ಗಾದಿವರೆಗೆ ಕರೆತಂದಿವೆ. ಪ್ರಾರ್ಥನೆ ಕೊನೆಗೂ ಫಲಿಸಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments