Homeಕರ್ನಾಟಕಪಕ್ಷ ನೀಡುವ ಜವಾಬ್ದಾರಿ ನಿಭಾಯಿಸಲು ಸಿದ್ಧ, ನಮ್ಮ ಸಮುದಾಯಕ್ಕೆ ಸೂಕ್ತ ಸ್ಥಾನ ಸಿಗಲಿ: ಈಶ್ವರ ಖಂಡ್ರೆ

ಪಕ್ಷ ನೀಡುವ ಜವಾಬ್ದಾರಿ ನಿಭಾಯಿಸಲು ಸಿದ್ಧ, ನಮ್ಮ ಸಮುದಾಯಕ್ಕೆ ಸೂಕ್ತ ಸ್ಥಾನ ಸಿಗಲಿ: ಈಶ್ವರ ಖಂಡ್ರೆ

ತಾವು ಪಕ್ಷದ ನಿಷ್ಠಾವಂತ ಕಾರ್ಯಕರ್ತರಾಗಿದ್ದು, ಪಕ್ಷ ನೀಡುವ ಯಾವುದೇ ಜವಾಬ್ದಾರಿ ನಿಭಾಯಿಸಲು ಸಿದ್ಧ ಎಂದು ಮಾಜಿ ಸಚಿವ ಈಶ್ವರ ಬಿ ಖಂಡ್ರೆ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿಂದು ತಮ್ಮನ್ನು ಭೇಟಿ ಮಾಡಿದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಾವು ಈ ಹಿಂದೆ ಪೌರಾಡಳಿತ ಸಚಿವನಾಗಿ ಹಲವು ಸುಧಾರಣೆ ತಂದಿದ್ದು, ಸಮ್ಮಿಶ್ರ ಸರ್ಕಾರದ ಸಮಯದಲ್ಲಿ ಮತ್ತು ಬಿಜೆಪಿ ಆಡಳಿತ ಇದ್ದಾಗ 5 ವರ್ಷಗಳ ಕಾಲ ಕೆಪಿಸಿಸಿ ಕಾರ್ಯಾಧ್ಯಕ್ಷನಾಗಿ ಪಕ್ಷ ಸಂಘಟನೆಗಾಗಿ ಶ್ರಮಿಸಿದ್ದೇನೆ. ವರಿಷ್ಠರು ಕೈಗೊಳ್ಳುವ ನಿರ್ಧಾರಕ್ಕೆ ತಾವು ಬದ್ಧ ಎಂದರು.

ಎಲ್ಲರೂ ದೆಹಲಿಗೆ ಹೋಗಿದ್ದಾರೆ ನೀವು ಇಲ್ಲೇ ಇದ್ದೀರಲ್ಲ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ನಾಳೆ ಸಂಜೆ ಶಾಸಕಾಂಗ ಪಕ್ಷದ ಸಭೆ ಇದ್ದು, ಬೆಂಗಳೂರಿನಲ್ಲಿರುವಂತೆ ವರಿಷ್ಠರು ತಿಳಿಸಿದ್ದಾರೆ ಹೀಗಾಗಿ ತಾವು ಇಲ್ಲೇ ಇದ್ದು, ನಾಳೆ ಸಭೆಯ ಬಳಿಕ ಪಕ್ಷದ ವರಿಷ್ಠರನ್ನು ಭೇಟಿ ಮಾಡುವುದಾಗಿ ತಿಳಿಸಿದರು.

ಪಕ್ಷ ನಿಷ್ಠರು ಮತ್ತು ದಕ್ಷತೆಯಿಂದ ಕೆಲಸ ಮಾಡಿದವರನ್ನು ಕಾಂಗ್ರೆಸ್ ಪಕ್ಷ ಸದಾ ಗುರುತಿಸಿ, ಸ್ಥಾನಮಾನ ನೀಡಿದೆ. ನಾನು ಪ್ರಸ್ತುತ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷನೂ ಆಗಿದ್ದು, ತಮ್ಮ ಸಮುದಾಯಕ್ಕೆ ಸೂಕ್ತ ಸ್ಥಾನ ಮಾನ ದೊರಕಬೇಕು. ಹೆಚ್ಚಿನ ಶಾಸಕರಿಗೆ ಸಂಪುಟದಲ್ಲಿ ಪ್ರಾತಿನಿಧ್ಯ ಸಿಗಬೇಕು ಎಂಬುದು ತಮ್ಮ ಆಶಯ ಎಂದು ಹೇಳಿದರು.

ಕೆಪಿಸಿಸಿ ಅಧ್ಯಕ್ಷ ಸ್ಥಾನ ನಿಮಗೆ ದೊರಕಬಹುದೇ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು ಪಕ್ಷ ಯಾವುದೇ ಜವಾಬ್ದಾರಿ ನೀಡಿದರೂ ಕಾಯ, ವಾಚ, ಮನಸಾ ಹಾಗೂ ಶ್ರದ್ಧೆಯಿಂದ ಕೆಲಸ ಮಾಡುತ್ತೇನೆ ಎಂದು ಹೇಳಿದರು.

ನಿಮ್ಮ ಹೆಸರು ಉಪ ಮುಖ್ಯಮಂತ್ರಿ ಹುದ್ದೆಗೂ ಕೇಳಿ ಬರುತ್ತಿದೆ. ನೀವು ವರಿಷ್ಠರ ಮುಂದೆ ಈ ಬೇಡಿಕೆ ಇಟ್ಟಿದ್ದೀರಾ ಎಂಬ ವರದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಈಶ್ವರ ಖಂಡ್ರೆ, ವರಿಷ್ಠರು ಡಿಸಿಎಂ ಹುದ್ದೆ ಬಗ್ಗೆ ನಿರ್ಧರಿಸಿದ್ದಾರೋ ಇಲ್ಲವೋ ತಿಳಿದಿಲ್ಲ. ಆದರೆ ತಾವು ಕಳೆದ 3 ವರ್ಷಗಳ ಕಾಲ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವನಾಗಿ ಉತ್ತಮ ಕಾರ್ಯ ಮಾಡಿದ್ದೇನೆ, ಇಲಾಖೆಗೆ ಕಾಯಕಲ್ಪ ನೀಡಿದ್ದೇನೆ ಮತ್ತು ಈ ಹಿಂದೆ ಆಗದ ಹಲವು ಸುಧಾರಣೆ ತಂದ ತೃಪ್ತಿ ನನಗಿದೆ ಎಂದರು.

ಸಿದ್ದರಾಮಯ್ಯ ಅವರ ರಾಜೀನಾಮೆ ಪಡೆದದ್ದು ಅನ್ಯಾಯವಲ್ಲವೇ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಸಿದ್ದರಾಮಯ್ಯನವರು ತಾವು ಸ್ವಇಚ್ಛೆಯಿಂದ ರಾಜೀನಾಮೆ ನೀಡಿರುವುದಾಗಿ ಹೇಳಿದ್ದಾರೆ. ಜೊತೆಗೆ ರಾಜ್ಯ ರಾಜಕಾರಣದಲ್ಲೇ ಇದ್ದು ಪಕ್ಷ ಬೆಳೆಸುವುದಾಗಿ ತಿಳಿಸಿದ್ದಾರೆ. ಕಳೆದ 3 ವರ್ಷಗಳಲ್ಲಿ ಅವರು ಪಂಚ ಗ್ಯಾರಂಟಿಗಳನ್ನು ಜಾರಿ ಮಾಡಿ ಉತ್ತಮವಾಗಿ ಸರ್ಕಾರ ಕೊಟ್ಟಿದ್ದಾರೆ. ಅವರ ಹೆಗಲಿಗೆ ಹೆಗಲು ಕೊಟ್ಟು ಡಿ.ಕೆ. ಶಿವಕುಮಾರ್ ಅವರು ಉಪ ಮುಖ್ಯಮಂತ್ರಿಗಳಾಗಿ ಉತ್ತಮ ಕಾರ್ಯ ಮಾಡಿದ್ದಾರೆ. ಉಪ ಚುನಾವಣೆಗಳಲ್ಲಿ ಪಕ್ಷ ಜಯಭೇರಿ ಬಾರಿಸಿದೆ. ತಾವೂ ಕೂಡ ಉಪ ಚುನಾವಣೆಗಳಲ್ಲಿ ಪಕ್ಷದ ಪರ ಪ್ರಚಾರ ಮಾಡಿದ್ದೇನೆ ಎಂದ ಅವರು ಕಳೆದ ಸಚಿವ ಸಂಪುಟದಲ್ಲಿದ್ದ ಎಲ್ಲ ಸಚಿವರೂ ತಮ್ಮ ಜವಾಬ್ದಾರಿ ನಿಭಾಯಿಸಿದ್ದಾರೆ. ಎಲ್ಲರ ಸಂಘಟಿತ ಪ್ರಯತ್ನದಿಂದ ಪಕ್ಷಕ್ಕೆ ಹೆಚ್ಚಿನ ಬಲ ಬರಲಿದೆ ಎಂದು ತಿಳಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments