ಅಭೂತಪೂರ್ವ ಜನಾಶೀರ್ವಾದದೊಂದಿಗೆ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಸರ್ಕಾರವು ಜನರು ಇಟ್ಟಿರುವ ನಂಬಿಕೆ, ಭರವಸೆಗಳನ್ನು ಉಳಿಸಿಕೊಂಡು ಬಂದಿದೆ, ಮುಂದೆಯೂ ನಾಡಿನ ಜನರು ನೀಡಿರುವ ಬೆಂಬಲಕ್ಕೆ ಚ್ಯುತಿ ಬರದಂತೆ ಸಮರ್ಥ ಆಡಳಿತವನ್ನು ಮುಂದುವರೆಸಿಕೊಂಡು ಹೋಗುತ್ತೇವೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸಚಿವ ಪ್ರಿಯಾಂಕ್ ಖರ್ಗೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಸರ್ಕಾರಕ್ಕೆ ಮೂರು ವರ್ಷ ತುಂಬಿದ ಹಿನ್ನೆಲೆಯಲ್ಲಿ ಟ್ವೀಟ್ ಮಾಡಿರುವ ಅವರು, “ಬುದ್ಧ, ಬಸವ, ಅಂಬೇಡ್ಕರ್ ಅವರ ತಾತ್ವಿಕತೆಯ ಮಾರ್ಗದರ್ಶನದಲ್ಲಿ, ಸಾಮಾಜಿಕ ನ್ಯಾಯದ ಹಾದಿಯಲ್ಲಿ ಮುನ್ನಡೆಯುತ್ತಿರುವ ನಮ್ಮ ಸರ್ಕಾರವು ರಾಜ್ಯವನ್ನು ಪ್ರಗತಿಯ ಹಾದಿಯಲ್ಲಿ ಮುನ್ನಡೆಸುವುದರಲ್ಲಿ ಬದ್ಧತೆಯೊಂದಿಗೆ ಹೆಜ್ಜೆ ಹಾಕುತ್ತಿದೆ” ಎಂದಿದ್ದಾರೆ.
ಈ ಮೂರು ವರ್ಷದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯು ಹಲವು ಪ್ರಥಮಗಳಿಗೆ, ಹಲವು ಸಾಧನೆಗಳಿಗೆ, ಹಲವು ಜನಪರ ಕಾರ್ಯಕ್ರಮಗಳಿಗೆ ಸಾಕ್ಷಿಯಾಗಿದೆ ಎಂದು ವಿವರಿಸಿದ್ದಾರೆ.
◆ ಪಂಚಾಯತ್ ರಾಜ್ ವಿಕೇಂದ್ರೀಕರಣದಲ್ಲಿ ಕರ್ನಾಟಕವು ದೇಶದಲ್ಲೇ ಪ್ರಥಮ ಸ್ಥಾನವನ್ನು ಅಲಂಕರಿಸಿದೆ.
◆ ಪರಿಣಾಮಕಾರಿ ಕ್ರಮಗಳಿಂದಾಗಿ ಗ್ರಾಮ ಪಂಚಾಯತಿಗಳ ತೆರಿಗೆ ಸಂಗ್ರಹದಲ್ಲಿ ದಾಖಲೆ ನಿರ್ಮಿಸಲಾಗಿದೆ, 2025-26ನೇ ಸಾಲಿನಲ್ಲಿ ₹1392 ಕೋಟಿ ತೆರಿಗೆ ಸಂಗ್ರಹವಾಗಿದೆ.
◆ ಗ್ರಾಮೀಣ ಆಡಳಿತಕ್ಕೆ ಡಿಜಿಟಲ್ ಸ್ಪರ್ಶ ನೀಡುವ ಪಂಚಮಿತ್ರ ಸಹಾಯವಾಣಿ ಮತ್ತು ಪೋರ್ಟಲ್ ಯಶಸ್ವಿಯಾಗಿ ಮುನ್ನಡೆಯುತ್ತಿದೆ.
◆ ಇ – ಸ್ವತ್ತು ಕಾರ್ಯಕ್ರಮದ ಮೂಲಕ ಗ್ರಾಮೀಣ ಆಸ್ತಿಗಳಿಗೆ ಭದ್ರತೆ ಒದಗಿಸುವ ಕ್ರಮ ಕೈಗೊಳ್ಳಲಾಗಿದೆ.
◆ ಪ್ರಗತಿ ಪಥ ಯೋಜನೆಯ ಮೂಲಕ ₹5,200 ಕೋಟಿ ಮೊತ್ತದಲ್ಲಿ ರಾಜ್ಯದ 7110 ಕಿ.ಮೀ ಗ್ರಾಮೀಣ ರಸ್ತೆ ನಿರ್ಮಾಣ, ಕಲ್ಯಾಣ ಪಥ ಯೋಜನೆಯಡಿಯಲ್ಲಿ ₹1000 ಕೋಟಿ ಮೊತ್ತದಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ 1,150 ಕಿ. ಮೀ ರಸ್ತೆ ಅಭಿವೃದ್ಧಿ
◆ ಕೂಸಿನ ಮನೆ, ಅರಿವು ಕೇಂದ್ರಗಳು, ಪಂಚತಂತ್ರ ಪೋರ್ಟಲ್.
ಹೀಗೆ ಗ್ರಾಮೀಣಾಭಿವೃದ್ಧಿಗೆ ಪೂರಕವಾಗುವ ಹಲವಾರು ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಮತ್ತು ಪರಿಣಾಮಕಾರಿಯಾಗಿ ಅನುಷ್ಠಾನ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ.
ನಾಡಿನ ಜನತೆ ಅಪಾರ ಪ್ರೀತಿ, ಅಭಿಮಾನ ಹಾಗೂ ನಂಬಿಕೆಯಿಂದ ಚುನಾಯಿಸಿದ ಗ್ಯಾರಂಟಿ ಸರ್ಕಾರಕ್ಕೆ ಈಗ ಮೂರು ವರ್ಷ. ಜನರ ವಿಶ್ವಾಸ, ಭರವಸೆಗಳನ್ನು ಈಡೇರಿಸುವ ಮೂಲಕ ಅವರ ವೈಯಕ್ತಿಕ ಹಾಗೂ ಸಮುದಾಯಗಳ ಅಭಿವೃದ್ಧಿಗೆ ಶ್ರಮಿಸಿದ ಸಾರ್ಥಕ ವರ್ಷಗಳಿವು. ನುಡಿದಂತೆ ನಡೆಯುವುದು ಕಾಂಗ್ರೆಸ್ ಪಕ್ಷದ ನೀತಿ. ಅದು ಚುನಾವಣಾಪೂರ್ವ ಗ್ಯಾರಂಟಿ ಭರವಸೆಗಳ ಈಡೇರಿಕೆಯಲ್ಲಿ ಮತ್ತೊಮ್ಮೆ ಪ್ರತಿಫಲಿತವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.


