Homeಕರ್ನಾಟಕದುರಾಡಳಿತದ ಬಳುವಳಿಯಾಗಿದ್ದ ಎಸಿ ಕೋರ್ಟ್ ಕೇಸ್ ಶೇ.90 ರಷ್ಟು ವಿಲೇ: ಕೃಷ್ಣ ಬೈರೇಗೌಡ

ದುರಾಡಳಿತದ ಬಳುವಳಿಯಾಗಿದ್ದ ಎಸಿ ಕೋರ್ಟ್ ಕೇಸ್ ಶೇ.90 ರಷ್ಟು ವಿಲೇ: ಕೃಷ್ಣ ಬೈರೇಗೌಡ

–  ಬಾಕಿ ಪ್ರಕರಣ 73,624 ರಿಂದ 7,490ಕ್ಕೆ ಇಳಿಕೆ
– ಎಲ್ಲಾ ಅಧಿಕಾರಿಗಳಿಗೂ ಧನ್ಯವಾದ ಅರ್ಪಿಸಿದ ಸಚಿವರು
– ಸಭೆಯಲ್ಲಿ ಬೆಂ.ಉತ್ತರ ಎಸಿ ವಿರುದ್ಧ ಆಕ್ರೋಶ

ಹತ್ತಾರು ವರ್ಷಗಳ ದುರಾಡಳಿತದ ಬಳುವಳಿಯಾಗಿದ್ದ ಉಪ ವಿಭಾಗಾಧಿಕಾರಿಗಳ (ಎಸಿ) ನ್ಯಾಯಾಲಯ ಬಾಕಿ ತಕರಾರು ಪ್ರಕರಣಗಳ ಪೈಕಿ ಶೇ.90ಕ್ಕೂ ಹೆಚ್ಚು ಪ್ರಕರಣಗಳನ್ನು ಕಳೆದ ಮೂರು ವರ್ಷಗಳಲ್ಲಿ ಇತ್ಯರ್ಥಪಡಿಸಲಾಗಿದೆ ಎಂದು ಸಚಿವ ಕೃಷ್ಣ ಬೈರೇಗೌಡ ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

ಗುರುವಾರ ವಿಕಾಸಸೌಧದಿಂದ ವಿಡಿಯೋ ಕಾನ್ಫರೆನ್ಸ್ ಮೂಲಕ ರಾಜ್ಯದ ಎಲ್ಲಾ ಉಪ ವಿಭಾಗಾಧಿಕಾರಿಗಳ ಜೊತೆ ಮಾಸಿಕ ಪ್ರಗತಿ ಪರಿಶೀಲನಾ ಸಭೆ ನಡೆಸಿ ಮಾತನಾಡಿದ ಅವರು, “ಮೂರು ವರ್ಷದ ಹಿಂದೆ ನಾವು ಕಂದಾಯ ಇಲಾಖೆ ಜವಾಬ್ದಾರಿ ಸ್ವೀಕರಿಸಿದ್ದಾಗ ರಾಜ್ಯಾದ್ಯಂತ ಸುಮಾರು 73,624 ಅವಧಿ ಮೀರಿದ ತಕರಾರು ಪ್ರಕರಣಗಳು ಬಾಕಿ ಇದ್ದವು. ಪರಿಣಾಮ ಜನ ಸಾಮಾನ್ಯರು ಅನಗತ್ಯವಾಗಿ ಸರ್ಕಾರಿ ಕಚೇರಿ ಅಲೆಯುವಂತಾಗಿತ್ತು. ಆದರೆ, ಆ ಸಂಖ್ಯೆಯನ್ನು ಇದೀಗ ಕೇವಲ 7,490ಕ್ಕೆ ಇಳಿಸಿದಂತಾಗಿದೆ. ಆ ಮೂಲಕ ಶೇ.90ಕ್ಕೂ ಹೆಚ್ಚು ಪ್ರಕರಣಗಳಿಗೆ ಮುಕ್ತಿ ನೀಡಿದಂತಾಗಿದೆ. ಮುಂದಿನ ದಿನಗಳಲ್ಲಿ ಈ ಪ್ರಕರಣಗಳನ್ನೂ ಶೀಘ್ರ ಇತ್ಯರ್ಥಪಡಿಸಬೇಕು” ಎಂದು ಸೂಚಿಸಿದರು.

“ನಾವು ಇಲಾಖೆಯ ಜವಾಬ್ದಾರಿ ಸ್ವೀಕರಿಸಿದ ಸಂದರ್ಭದಲ್ಲಿ, ಸರ್ಕಾರಿ ಕಚೇರಿಗಳಿಗೆ ಜನರ ಅನಗತ್ಯ ಓಡಾಟಕ್ಕೆ ಬ್ರೇಕ್ ನೀಡುವ ಸಲುವಾಗಿಯೇ ಮೊದಲು ಈ ಎಲ್ಲಾ ಬಾಕಿ ಪ್ರಕರಣಗಳ ಇತ್ಯರ್ಥಕ್ಕೆ ಮೊದಲ ಆದ್ಯತೆ ನೀಡಲಾಗಿತ್ತು. ಅಧಿಕಾರಿಗಳ ಸಹಕಾರ ಇಲ್ಲದಿದ್ದರೆ ಈ ಕೆಲಸ ಸಾಧ್ಯವಾಗುತ್ತಿರಲಿಲ್ಲ. ಹೀಗಾಗಿ ಅತ್ಯುತ್ತಮವಾಗಿ ಕೆಲಸ ನಿರ್ವಹಿಸುತ್ತಿರುವ ಎಲ್ಲಾ ಅಧಿಕಾರಿಗಳಿಗೂ ಧನ್ಯವಾದಗಳು” ಎಂದು ಅಭಿನಂದಿಸಿದರು.

ಬೆಂಗಳೂರು ಉತ್ತರ ಜಿಲ್ಲೆ ಎಸಿ ವಿರುದ್ಧ ಗರಂ

“ಅತಿಹೆಚ್ಚು ಪ್ರಕರಣಗಳು ಬಾಕಿ ಇದ್ದ ತುಮಕೂರು, ದೊಡ್ಡಬಳ್ಳಾಪುರ, ತರೀಕೆರೆ, ಕೋಲಾರ ಸೇರಿದಂತೆ ಹಲವು ಎಸಿ ವಲಯಗಳು ಪ್ರಸ್ತುತ ಸುಧಾರಣೆ ಕಂಡಿವೆ. ಆದರೆ, ಸ್ವತಃ ನಾನು ಪ್ರತಿನಿಧಿಸುವ ಬೆಂಗಳೂರು ಉತ್ತರ ಜಿಲ್ಲೆಯಲ್ಲಿ ಸಾಕಷ್ಟು ಪ್ರಕರಣಗಳು ಬಾಕಿ ಇವೆ” ಎಂದು ಸಚಿವ ಕೃಷ್ಣ ಬೈರೇಗೌಡ ಅವರು ಸಭೆಯಲ್ಲಿ ಅಸಮಾಧಾನ ಹೊರಹಾಕಿದರು.

ಉತ್ತರ ಜಿಲ್ಲೆಯ ವಿಶೇಷ ಉಪ ವಿಭಾಗಾಧಿಕಾರಿಗಳು ನಿಜಕ್ಕೂ ತಮಗೆ ನೀಡಿದ ಜವಾಬ್ದಾರಿಯನ್ನು ಅತ್ಯುತ್ತಮವಾಗಿ ನಿರ್ವಹಿಸುತ್ತಿದ್ದಾರೆ. ಆದರೆ, ರೆಗ್ಯುಲರ್ ಉಪ ವಿಭಾಗಾಧಿಕಾರಿಗಳಾದ ಕಿರಣ್ ಅವರು ಆದೇಶಕ್ಕಾಗಿ ಕಾಯ್ದಿರಿಸಿದ ಪ್ರಕರಣಗಳನ್ನೂ ವಿಲೇ ಮಾಡುತ್ತಿಲ್ಲ. ಪರಿಣಾಮ ಜನ ಸಾಮಾನ್ಯರು ಪ್ರತಿನಿತ್ಯ ನನ್ನ ಗೃಹ ಕಚೇರಿಗೆ ಆಗಮಿಸಿ ನನ್ನನ್ನು ಪ್ರಶ್ನಿಸುತ್ತಿದ್ದಾರೆ. ಯಾರೋ ಒಬ್ಬ ಅಧಿಕಾರಿ ಮಾಡುವ ತಪ್ಪಿಗೆ ಜನರ ಎದುರು ನಾನು ತಲೆ ತಗ್ಗಿಸುವಂತಾಗಿದೆ. ಅಲ್ಲದೆ, ಇಂತಹ ಅಧಿಕಾರಿಗಳಿಂದ ಒಳ್ಳೆಯ ಕೆಲಸ ಮಾಡುವ ಇತರೆ ಅಧಿಕಾರಿಗಳಿಗೂ ಕೆಟ್ಟ ಹೆಸರು” ಎಂದು ವಿಷಾಧಿಸಿದರು.

“ಅಧಿಕಾರಿಗಳ ಸಹಕಾರದಿಂದಾಗಿ ಕಳೆದ ಮೂರು ವರ್ಷದಲ್ಲಿ ಕೋರ್ಟ್ ಕೇಸ್, ಫೌತಿಖಾತೆ, ಪೋಡಿ ದುರಸ್ಥಿ, ಆರ್ಆರ್ಟಿ ಕರೆಕ್ಷನ್, ಆಧಾರ್ ಸೀಡಿಂಗ್, ಇ-ಆಫೀಸ್ ಸೇರಿದಂತೆ ಕಂದಾಯ ಇಲಾಖೆಯಲ್ಲಿ ಸಾಕಷ್ಟು ಪ್ರಗತಿಯಾಗಿದೆ. ಆದರೆ, ಆಗಬೇಕಾದ ಕೆಲಸ ಇನ್ನಷ್ಟು ಬಾಕಿ ಇದೆ. ಹೀಗಾಗಿ ಅಧಿಕಾರಿಗಳು ಮತ್ತಷ್ಟು ಜನಪರವಾಗಿ ಕೆಲಸ ನಿರ್ವಹಿಸಬೇಕು ಎಂದು ಕರೆ ನೀಡಿದ ಸಚಿವರು, ಮೇ.19 ರಂದು ತುಮಕೂರಿನಲ್ಲಿ ನಡೆಯಲಿರುವ “3ನೇ ವರ್ಷದ ಸಾಧನೆಯ ಸಂಭ್ರಮ” ಕಾರ್ಯಕ್ರಮದಲ್ಲಿ 1,41,908 ಫಲಾನುಭವಿಗಳಿಗೆ ಏಕ ಕಾಲದಲ್ಲಿ ಹಕ್ಕುಪತ್ರ ನೀಡಲಿದ್ದು, ಸಾಧ್ಯವಾದರೆ ಎಲ್ಲಾ ಉಪ ವಿಭಾಗಾಧಿಕಾರಿಗಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕು” ಎಂದು ಆಹ್ವಾನಿಸದರು.

ಸಭೆಯಲ್ಲಿ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ (ಕಂದಾಯ ಇಲಾಖೆ) ರಾಜೇಂದ್ರ ಕುಮಾರ್ ಕಟಾರಿಯಾ, ಬೆಂಗಳೂರು ವಿಭಾಗದ ಪ್ರಾದೇಶಿಕ ಆಯುಕ್ತರಾದ ಆಮ್ಲನ್ ಆದಿತ್ಯ ಬಿಸ್ವಾಸ್, ಕಂದಾಯ ಆಯುಕ್ತರು (ಪ್ರಬಾರ) ಮುಲ್ಲೈ ಮುಗಿಲನ್ ಹಾಗೂ ಸಂಬಂಧಿತ ಅಧಿಕಾರಿಗಳು ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments