ತಮಿಳುನಾಡಿನಲ್ಲಿ ಡಿಎಂಕೆ ಜೊತೆ ಇದ್ದ ಕಾಂಗ್ರೆಸ್, ನಟ ವಿಜಯ್ ನೇತೃತ್ವದ ಟಿವಿಕೆ ಪಕ್ಷ ಹೆಚ್ಚಿನ ಸ್ಥಾನ ಪಡೆದ ಕೂಡಲೇ ರಾತ್ರೋರಾತ್ರಿ ಆ ಪಕ್ಷದ ಮುಂದೆ ಹೋಗಿ ಸಚಿವ ಸ್ಥಾನಕ್ಕೆ ಭಿಕ್ಷೆ ಬೇಡುತ್ತಿದೆ. ಡಿಎಂಕೆ ಸಖ್ಯ ಬಿಟ್ಟು ಕಾಂಗ್ರೆಸ್ ಸ್ಥಿತಿ ಭಿಕ್ಷುಕರ ರೀತಿ ಆಗಿದೆ ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣ ಸ್ವಾಮಿ ಅವರು ವ್ಯಂಗ್ಯವಾಡಿದ್ದಾರೆ.
ರಾಜ್ಯ ಬಿಜೆಪಿ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಷ್ಟ್ರೀಯ ಪಕ್ಷ ಕಾಂಗ್ರೆಸ್ಗೆ ಇಂತಹ ಹೀನಾಯ ಸ್ಥಿತಿ ಬಂದಿದೆ. ಪಂಚರಾಜ್ಯ ಚುನಾವಣೆಯಲ್ಲಿ ಕಾಂಗ್ರೆಸ್ಗೆ ಮುಸ್ಲಿಮರು ಸಾಕಷ್ಟು ಬೆಂಬಲ ನೀಡಿದ್ದಾರೆ. ಕಾಂಗ್ರೆಸ್ಗೆ ಮುಸ್ಲಿಮರು ಇಲ್ಲದಿದ್ದರೆ ತಿಪ್ಪೆಗುಂಡಿಗೆ ಹಾಕುವ ಕಸಕ್ಕೆ ಸಮ ಎಂದರು.
ಪಂಚ ರಾಜ್ಯಗಳ ಚುನಾವಣೆಯಲ್ಲಿ ಬಿಜೆಪಿಗೆ ಅಭೂತಪೂರ್ವವಾದ ಜಯ ಸಿಕ್ಕಿದೆ. ಪಶ್ಚಿಮ ಬಂಗಾಳದಲ್ಲಿ ಬಿಜೆಪಿಗೆ ದೊಡ್ಡ ಮಟ್ಟದಲ್ಲಿ ಆಶೀರ್ವಾದ ಮಾಡಿದ್ದಾರೆ. ಆ ರಾಜ್ಯದಲ್ಲಿ ಟಿಎಂಸಿ ಆಡಳಿತದಲ್ಲಿ ಜನರು ನರಕಯಾತನೆ ಅನುಭವಿಸುತ್ತಿದ್ದರು. ಆ ನರಕದಿಂದ ಮೋದಿ ಅವರು ಜನರನ್ನು ಹೊರತಂದಿದ್ದಾರೆ. ಈ ಬಾರಿಯೂ ಬಿಜೆಪಿ ಗೆಲ್ಲದೇ ಇದ್ದಿದ್ದರೆ ಅಲ್ಲಿನ ಜನರ ಸ್ಥಿತಿ ಏನಾಗುತ್ತಿತ್ತು ಎಂದು ಊಹಿಸಿ ಎಂದು ಹೇಳಿದರು.
ಪಶ್ಚಿಮ ಬಂಗಾಳದಲ್ಲಿ ಗೆದ್ದ ಶಾಸಕರು ಯಾವುದಾದರೂ ರಸ್ತೆಗೆ ಈಗ ಬಂದರೆ ಹೆಣ್ಣು ಮಕ್ಕಳು ಕೈ ಮುಗಿದು ನಮ್ಮನ್ನು ರಕ್ಷಿಸಿ ಎಂದು ಮನವಿ ಮಾಡುತ್ತಿದ್ದಾರೆ. ಮಮತಾ ಅವರ ಆಡಳಿತದಲ್ಲಿ ನಾವು ನರಕ ಅನುಭವಿಸಿದ್ದೇವೆ ಇನ್ನು ಮುಂದೆ ಇಂತಹ ಸ್ಥಿತಿ ಬರದಿರಲಿ ಎಂದು ಹೇಳುತ್ತಿದ್ದಾರೆ. ಅಂದರೆ ಅಲ್ಲಿ ಯಾವ ಸ್ಥಿತಿ ಇತ್ತು ಎಂದು ಯೋಚಿಸಿ ಎಂದರು.
ಅಸ್ಸಾಂ ಮತ್ತು ಪುದುಚೇರಿಯಲ್ಲಿ ನಮ್ಮ ಪಕ್ಷಕ್ಕೆ ಜನ ಬೆಂಬಲ ನೀಡಿದ್ದಾರೆ. ತಮಿಳುನಾಡು ಮತ್ತು ಕೇರಳದಲ್ಲಿ ನಮ್ಮ ಪಕ್ಷದ ಕಾರ್ಯಕರ್ತರ ಬೆಂಬಲದಿಂದ ಮತಬ್ಯಾಂಕ್ ಹೆಚ್ಚಿಸಿಕೊಂಡಿದ್ದೇವೆ. ಇನ್ನೂ ಅಲ್ಲಿ ಮುಂದಿನ ಚುನಾವಣೆಯಲ್ಲಿ ಎಲ್ಲಾ ಪಕ್ಷಗಳಂತೆ ಬಿಜೆಪಿ ಶಕ್ತಿ ಹೆಚ್ಚಲಿದೆ. ಸ್ವತಂತ್ರ ಸರ್ಕಾರ ಮಾಡುವ ಶಕ್ತಿಯನ್ನು ಜನರು ಕೊಡ್ತಾರೆ. ಕೇರಳದಲ್ಲಿ ಕಾಂಗ್ರೆಸ್ ಯುಡಿಎಫ್ ಏಳು ಪಕ್ಷಗಳ ಜೊತೆಗೂಡಿದೆ. ತುಂಡು ತುಂಡು ಪಕ್ಷ ಸೇರಿ ಖಿಚಡಿ ಪಕ್ಷ ಆಗಿದೆ ಎಂದು ಗೇಲಿ ಮಾಡಿದರು.
ಬಿಜೆಪಿ ಜೊತೆ ನಿಂತ ಪರಿಶಿಷ್ಟ ಜಾತಿ ವರ್ಗದ ಜನ
ಪಂಚರಾಜ್ಯ ಚುನಾವಣೆಯಲ್ಲಿ ಪರಿಶಿಷ್ಟ ಜಾತಿ ವರ್ಗದ ಜನ ಹೆಚ್ಚಿನ ಪ್ರಮಾಣದಲ್ಲಿ ಬಿಜೆಪಿಗೆ ಬೆಂಬಲ ನೀಡಿದ್ದಾರೆ. ಆದರೆ ಕಾಂಗ್ರೆಸ್ಗೆ ಮುಸ್ಲಿಮರು ಸಾಕಷ್ಟು ಬೆಂಬಲ ಕೊಟ್ಟಿದ್ದಾರೆ. ಅಸಾಂನಲ್ಲಿ 19 ಜನ ಕಾಂಗ್ರೆಸ್ನಿಂದ ಗೆದ್ದಿದ್ದಾರೆ ಇದರಲ್ಲಿ ಒಂದು ಎಸ್ಸಿ ಇನ್ನು ಉಳಿದವರು ಮುಸ್ಲಿಮರು. ಕಾಂಗ್ರೆಸ್ ಮುಸ್ಲಿಮರನ್ನು ದಾರಿ ತಪ್ಪಿಸಿ ಬಿಜೆಪಿ ಗುಮ್ಮ ತೋರಿಸುತ್ತಾ ಬಂದಿದೆ. ಮುಸ್ಲಿಮರು ಇಲ್ಲದಿದ್ದರೆ ಕಾಂಗ್ರೆಸ್ ಇಲ್ಲ. ಪಶ್ಚಿಮ ಬಂಗಾಳದಲ್ಲೂ ಬಿಜೆಪಿ ಪರಿಶಿಷ್ಟ ಜಾತಿ ಮತ್ತು ವರ್ಗಗಳಿಗೆ ಅವಕಾಶ ನೀಡಿದೆ ಎಂದರು.
ಅಹಿಂದ ನಾಯಕರು ಎನ್ನುವವರು ಒಂದು ಸಾರಿ ನೋಡಿ…
ಮಾತೆತ್ತಿದರೆ ನಾವು ಅಹಿಂದ ನಾಯಕರು ಎನ್ನುವವರು ಅಹಿಂದ ವರ್ಗಗಳಿಗೆ ಚುನಾವಣೆಯಲ್ಲಿ ಅವಕಾಶ ನೀಡಲಿಲ್ಲ. ಪ್ರಧಾನಿ ನರೇಂದ್ರ ಮೋದಿ ಅವರೂ ಅಹಿಂದ ವರ್ಗದವರು. ಹಿಂದುಳಿದ ವರ್ಗದಿಂದ ಪ್ರಧಾನಿಯಾದವರು. 25 ವರ್ಷಗಳಿಂದ ಸೋಲದೇ ಒಂದು ದಿನವೂ ರಜೆ ಪಡೆಯದೇ ಕೆಲಸ ಮಾಡುತ್ತಿದ್ದಾರೆ. ಮೋದಿಜಿ ಅವರ ನಾಯಕತ್ವಕ್ಕೆ ಅಹಿಂದ ವರ್ಗದವರು ಬೆಂಬಲ ವ್ಯಕ್ತಪಡಿಸುತ್ತಾ ಇದ್ದಾರೆ. ಇಡೀ ದೇಶದಲ್ಲಿ ಬಿಜೆಪಿಯನ್ನು ಅಹಿಂದ ವರ್ಗಗಳು ಬೆಂಬಲಿಸುತ್ತಿವೆ. ಇದನ್ನು ಇಲ್ಲಿನ ನಾಯಕರು ಅರ್ಥ ಮಾಡಿಕೊಳ್ಳಬೇಕು. ಅಹಿಂದ ನಾಯಕನ ಕೈಲಿ ಬಿಜೆಪಿ ಇಡೀ ದೇಶ ಕೊಟ್ಟಿದೆ ಎಂದು ಹೇಳಿದರು.
ಈಗೇನಾದರೂ ಜಿಬಿಎ ಚುನಾವಣೆ ನಡೆದರೆ ಕಾಂಗ್ರೆಸ್ ಮುಖಕ್ಕೆ ಬೆಂಗಳೂರಿನ ಜನ ಸರಿಯಾದ ಮಂಗಳಾರತಿ ಮಾಡಲಿದ್ದಾರೆ. ಮತ್ತೆ ಮಳೆಗಾಲ ಬಂದಿದೆ. ಇಡೀ ಜೀವನವೆಲ್ಲ ಗುಂಡಿ ಮತ್ತು ನೀರಿನಲ್ಲೇ ಇರಬೇಕು. ಇದೆಲ್ಲ ಗೊತ್ತಿದ್ದರೂ ಟೆಂಡರ್ ಅಂಗೀಕರಿಸಲು ಇಂದಿನ ಸಂಪುಟದ ಮುಂದೆ ತಂದಿದ್ದಾರೆ. ಒಂದು ವೇಳೆ ಸಂಪುಟ ಅನುಮೋದನೆ ನೀಡಿದರೆ ಚುನಾವಣೆಗೆ ಆಗುವಷ್ಟು ಹಣ ಬಂದಿದೆ ಎಂದಿದೆ ಅರ್ಥ. ಟೆಂಡರ್ ಗೆ ಸರಿಯಾದ ಕ್ರಮವನ್ನು ಮುಖ್ಯಮಂತ್ರಿಗಳು ಅನುಸರಿಸಬೇಕು. ಕಡಿಮೆ ಕೋಟ್ ಮಾಡಿದವರಿಗೆ ಕೊಡಬೇಕು ಎಂದು ಆಗ್ರಹಿಸಿದರು.


