Homeರಾಜಕೀಯಕೊಟ್ಟ ಭರವಸೆ ಈಡೇರಿಸದ ಬಿಜೆಪಿ, ವಚನಭ್ರಷ್ಟ: ಈಶ್ವರ ಖಂಡ್ರೆ

ಕೊಟ್ಟ ಭರವಸೆ ಈಡೇರಿಸದ ಬಿಜೆಪಿ, ವಚನಭ್ರಷ್ಟ: ಈಶ್ವರ ಖಂಡ್ರೆ

ರೈತರ ಆದಾಯ ದುಪ್ಪಟ್ಟು ಮಾಡುವುದಾಗಿ ಹೇಳಿ ಮಾತು ತಪ್ಪಿದ, ವರ್ಷಕ್ಕೆ 2 ಕೋಟಿ ಉದ್ಯೋಗ ನೀಡುವುದಾಗಿ ಹೇಳಿ ಯುವಜನರ ಆಕಾಂಕ್ಷೆಗಳಿಗೆ ತಣ್ಣೀರೆರೆಚಿದ ಬಿಜೆಪಿ ನೇತೃತ್ವದ ಎನ್.ಡಿ.ಎ. ಸರ್ಕಾರ ವಚನಭ್ರಷ್ಟವಾಗಿದೆ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಹೇಳಿದ್ದಾರೆ.

ತಮಿಳುನಾಡು ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಕೃಷ್ಣಗಿರಿಯಲ್ಲಿಂದು ಕಾಂಗ್ರೆಸ್ -ಡಿಎಂಕೆ ಅಭ್ಯರ್ಥಿಗಳ ಪರ ಪ್ರಚಾರ ನಡೆಸಿದ ಅವರು, ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ವಿದೇಶದಿಂದ ಕಪ್ಪುಹಣ ತರುವುದಾಗಿ, 2022ರ ಹೊತ್ತಿಗೆ ಸರ್ವರಿಗೂ ಸೂರು ಎಂದು ಘೋಷಿಸಿದ ಪ್ರಧಾನಿ ನಡುದಂತೆ ನಡೆಯಲೇ ಇಲ್ಲ ಎಂದು ಟೀಕಿಸಿದರು.

ಕೇಂದ್ರ ಬಿಜೆಪಿ ನೇತೃತ್ವದ ಎನ್.ಡಿ.ಎ ಸರ್ಕಾರ, ಸಾಂವಿಧಾನಿಕ ಸ್ವಾಯತ್ತ ಸಂಸ್ಥೆಗಳಾದ ಇ.ಡಿ, ಸಿಬಿಐ, ಐ.ಟಿ. ಮೊದಲಾದ ಇಲಾಖೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ. ದಕ್ಷಿಣ ರಾಜ್ಯಗಳ ಬಗ್ಗೆ ಮಲತಾಯಿ ಧೋರಣೆ ತಳೆದಿದೆ. ದಕ್ಷಿಣ ರಾಜ್ಯಗಳಿಗೆ ಅದರಲ್ಲೂ ಬಿಜೆಪಿಯೇತರ ಸರ್ಕಾರಗಳಿರುವ ರಾಜ್ಯಕ್ಕೆ ತೆರಿಗೆಯ ಪಾಲು, ಅನುದಾನ, ಜಿಎಸ್ಟಿ ಪರಿಹಾರ, ಬರ, ಪ್ರವಾಹ ಪರಿಹಾರ ನೀಡುವಲ್ಲಿ ತಾರತಮ್ಯ ಮಾಡುತ್ತಿದೆ ಎಂದೂ ದೂಷಿಸಿದರು.

ಕೇಂದ್ರ ಬಿಜೆಪಿ ಸರ್ಕಾರ ಕ್ಷೇತ್ರ ಪುನರ್ವಿಂಗಡಣೆಯಲ್ಲಿ ಲೋಕಸಭಾ ಕ್ಷೇತ್ರಗಳ ಸಂಖ್ಯೆಯನ್ನು ಕಡಿತ ಮಾಡುವ ಮೂಲಕ ದಕ್ಷಿಣ ರಾಜ್ಯಗಳಿಗೆ ಅನ್ಯಾಯ ಮಾಡಲು ಸಂಚು ನಡೆಸಿತ್ತು. ಈಗ ದಕ್ಷಿಣ ರಾಜ್ಯಗಳ ಮೇಲೆ ಹಿಂದಿ ಭಾಷೆ ಹೇರುವ ಕೆಲಸ ಮಾಡುತ್ತಿದೆ. ಆ ಮೂಲಕ ಸಾಮಾಜಿಕ ಸಂರಚನೆಯನ್ನೇ ಹಾಳು ಮಾಡುವ ಪ್ರಯತ್ನ ಮಾಡುತ್ತಿದೆ, ಸಮಾಜವನ್ನು ಭಾಷೆ, ಧರ್ಮದ ಹೆಸರಲ್ಲಿ ಒಡೆಯಲು ಪ್ರಯತ್ನಿಸುತ್ತಿದೆ. ಇದು ಸಂವಿಧಾನಕ್ಕೆ ಅಪಾಯಕಾರಿ ಎಂದರು.

ರಾಜಕೀಯ ಲಾಭಕ್ಕಾಗಿ ನಾಟಕ ಮಾಡುವ, ಸುಳ್ಳು ಹೇಳುವ ಭಾರತೀಯ ಜನತಾ ಪಕ್ಷ ಹಾಗೂ ಮಿತ್ರಪಕ್ಷಗಳ ನಿಜಬಣ್ಣ ಈಗ ಬಯಲಾಗಿದೆ. ಜನರು ಜಾಗೃತರಾಗಿದ್ದಾರೆ. ಹೀಗಾಗಿ ತಮಿಳುನಾಡು ಜನತೆ ಸಾಮಾಜಿಕ ನ್ಯಾಯಕ್ಕಾಗಿ, ತಮ್ಮ ನಾಡಿನ ಹಿರಿಮೆ, ಸಂಸ್ಕೃತಿ, ಸಂಪ್ರದಾಯ ಮತ್ತು ಭಾಷೆಯ ರಕ್ಷಣೆಗಾಗಿ ಕಾಂಗ್ರೆಸ್ ಮತ್ತು ಡಿಎಂಕೆ ಮೈತ್ರಿಕೂಟಕ್ಕೆ ಮತನೀಡುತ್ತಾರೆ ಎಂದು ಈಶ್ವರ ಖಂಡ್ರೆ ವಿಶ್ವಾಸ ವ್ಯಕ್ತಪಡಿಸಿದರು.

ಕರ್ನಾಟಕದಲ್ಲಿ 2023ರಲ್ಲಿ ವಿಧಾನಸಭೆ ಚುನಾವಣೆಗೂ ಮುನ್ನ ಕಾಂಗ್ರೆಸ್ ಪಕ್ಷ 5 ಗ್ಯಾರಂಟಿಗಳನ್ನು ಘೋಷಿಸಿತ್ತು. ನಮ್ಮ ಸರ್ಕಾರ ಎಲ್ಲ 5 ಗ್ಯಾರಂಟಿಗಳನ್ನೂ ಯಶಸ್ವಿಯಾಗಿ ಅನುಷ್ಠಾನಕ್ಕೆ ತಂದಿದ್ದು ನುಡಿದಂತೆ ನಡೆದಿದ್ದೇವೆ. ಪ್ರತಿ ವರ್ಷ 53 ಸಾವಿರ ಕೋಟಿ ರೂ.ಗಳನ್ನು ವೆಚ್ಚ ಮಾಡುತ್ತಿದೆ. ಈ ಗ್ಯಾರಂಟಿಗಳಿಂದ 1 ಕೋಟಿ ಕುಟುಂಬಗಳು ಬಡತನ ರೇಖೆಯಿಂದ ಮೇಲೆ ಬಂದಿವೆ. ಮಹಿಳೆಯರ ಆರ್ಥಿಕ ಸಬಲೀಕರಣವಾಗಿದೆ. ಕರ್ನಾಟಕದ ತಲಾದಾಯ ದೇಶದಲ್ಲೇ ಅತ್ಯುತ್ತಮವಾಗಿರುವುದಕ್ಕೆ ಈ ಗ್ಯಾರಂಟಿಗಳು ಕಾರಣ ಎಂದರು.
ರಾಜಕೀಯ ಸ್ವಾರ್ಥಕ್ಕಾಗಿ ಸಮಾಜದ ಸ್ವಾಸ್ಥ್ಯ ಕದಡುವ ಶಕ್ತಿಗಳನ್ನು ತಮಿಳುನಾಡು ಜನತೆ ದೂರ ಇಡುತ್ತಾರೆ. ದೆಹಲಿಯಿಂದ ಪರೋಕ್ಷವಾಗಿ ಆಡಳಿತ ನಡೆಸುವ ವ್ಯವಸ್ಥೆ ಅವರಿಗೆ ಬೇಕಿಲ್ಲ. ಈ ಬಾರಿ ಮತ್ತೆ ಡಿಎಂ.ಕೆ, ಕಾಂಗ್ರೆಸ್ ಮೈತ್ರಿ ಸರ್ಕಾರ ರಚನೆಯಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕೃಷ್ಣಗಿರಿ ಕಾಂಗ್ರೆಸ್ ಅಭ್ಯರ್ಥಿ ಚಲ್ಲಕುಮಾರ್, ಹಿರಿಯ ನಾಯಕರಾಗಿದ್ದು, ಸಂಸತ್ ಸದಸ್ಯರಾಗಿ ಅದ್ಭುತ ಕಾರ್ಯ ಮಾಡಿದ್ದಾರೆ. ರೈಲ್ವೆ, ಹೆದ್ದಾರಿ, ಸೇತುವೆ ಮೊದಲಾದ ಮೂಲಸೌಕರ್ಯ ಅಭಿವೃದ್ಧಿಗೆ ಶ್ರಮಿಸಿದ್ದಾರೆ. ಪ್ರಾಮಾಣಿಕತೆ, ದಕ್ಷತೆಗೆ ಹೆಸರಾದ ಚಲ್ಲಕುಮಾರ್ ಗೆಲ್ಲಿಸಿ ಎಂದರು.

ಸುದ್ದಿಗೋಷ್ಠಿಯಲ್ಲಿ ಅಭ್ಯರ್ಥಿ ಚಲ್ಲಕುಮಾರ್, ರೇಣುಕಾಪ್ರಸನ್ನ ಮತ್ತಿತರರು ಭಾಗಿಯಾಗಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments