ರಾಯಚೂರು ಜಿಲ್ಲೆಯಲ್ಲಿ ಸಮರ್ಪಕ ನೀರು ಪೂರೈಕೆ ನಿಗಾ ವಹಿಸಿ: ಸಚಿವ ಶರಣಪ್ರಕಾಶ ಪಾಟೀಲ
– ಕುಡಿಯುವ ನೀರಿನ ಸಮಸ್ಯೆ ಇದ್ದರೆ ಅಧಿಕಾರಿಗಳು ತಕ್ಷಣ ಸ್ಪಂದಿಸಿ : ಡಾ.ಪಾಟೀಲ ಖಡಕ್ ಸೂಚನೆ
– ರಾಯಚೂರು ಜಿಲ್ಲಾಡಳಿತ ಭವನದಲ್ಲಿ ಕುಡಿಯುವ ನೀರಿನ ಸಮಸ್ಯೆ, ಪೂರೈಕೆ ಸಭೆ
ಸಮರ್ಪಕ ಕುಡಿಯುವ ನೀರು ಒದಗಿಸಲು ಅಧಿಕಾರಿಗಳು ಖುದ್ದು ಗ್ರಾಮೀಣ ಪ್ರದೇಶಗಳಿಗೆ ಭೇಟಿ ನೀಡಿ ವರದಿ ಸಲ್ಲಿಸಬೇಕು. ಕುಂಟು ನೆಪ ಹೇಳುವಂತಿಲ್ಲ ಎಂದು ರಾಯಚೂರು ಉಸ್ತುವಾರಿ ಸಚಿವ ಡಾ.ಶರಣಪ್ರಕಾಶ ಪಾಟೀಲ ಹೇಳಿದರು.
ಮಾನ್ವಿ ತಾಲೂಕಿನ 15 ಕೆರೆಗಳಲ್ಲಿ ಕೇವಲ 5 ಕೆರೆಗಳು ಮಾತ್ರ ಹೆಚ್ಚು ನೀರಿರುವುದು ಮುಂದಿನ ದಿನಗಳಲ್ಲಿ ಟ್ಯಾಂಕ್ ಮೂಲಕ ಮಾನ್ಬಿ ತಾಲೂಕಿನ ಗ್ರಾಮಗಳಿಗೆ ನೀರು ಪೂರೈಸಬೇಕು. ಬೋರ್ ವೆಲ್ ಮುಖಾಂತರ ನೀರಿನ ಸೋರ್ಸ್ ಕಂಡು ಹಿಡಿದು ಸಮಸ್ಯೆಯಾಗದಂತೆ ಸಮನ್ವಯತೆ ಮಾಡಿಕೊಳ್ಳಿ ಎಂದರು.
ಮಾನ್ವಿ ಹಾಗೂ ಸಿಂಧನೂರು ಕಡೆಗಳಲ್ಲಿ ಕೆರೆ ತುಂಬಿಸುವ ಯೋಜನೆ ತ್ವರಿತಗತಿಯಲ್ಲಿ ಸಾಗಬೇಕಿದೆ. ಸರಕಾರಿ ಅಂಕಿಅಂಶಗಳ ಜೊತೆ ಸ್ಥಳಕ್ಕೆ ಭೇಟಿ ನೀಡಿ ಅಲ್ಲಿ ವ್ಯವಸ್ಥೆ ಬಗ್ಗೆ ವರದಿ ಸಲ್ಲಿಸಿ, ತಹಶಿಲ್ದಾರ ಜವಾಬ್ದಾರಿಯುತವಾಗಿ ಕುಡಿಯುವ ನೀರಿನ ಬಗ್ಗೆ ಮಾಹಿತಿ ಪಡೆದುಕೊಂಡು ತಿಳಿಸಬೇಕೆಂದು ಹೇಳಿದರು.
ಕುಡಿಯುವ ನೀರಿನ ಸಮಸ್ಯೆ ಸೇರಿದಂತೆ ಯಾವುದೇ ಸಮಸ್ಯೆ ಇದ್ದಲ್ಲಿ, ಅವಶ್ಯಕತೆ ಕುರಿತಂತೆ ತಕ್ಷಣವಾಗಿ ಅಧಿಕಾರಿಗಳು ಸ್ಪಂದಿಸಬೇಕು. ಅನೇಕ ಕಡೆ ಕುಡಿಯುವ ನೀರಿನ ಅಭಾವ ಕಂಡು ಬರುವ ಲಕ್ಷಣ ಎದುರಾದಾಗ ಸಭೆ ತೆಗೆದುಕೊಂಡು ಪ್ರತಿ ಸೋಮಗಾರ ಸ್ಥಳಕ್ಕೆ ಭೇಟಿ ನೀಡಿ. ಶಾಸಕರ ಸಲಹೆ ಹಾಗೂ ಜನರ ಸಮಸ್ಯೆಗಳನ್ನು ಅರಿತು ಕಾರ್ಯ ನಿರ್ವಹಿಸಿ ಎಂದರು.


