ಇರಾನ್ ಮೇಲೆ ವಿನಾಶಕಾರಿ ದಾಳಿ ನಡೆಸಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ನೀಡಿದ್ದ ಗಡುವು ಮುಗಿಯಲು ಕೇವಲ ಎರಡು ಗಂಟೆಗಳಿರುವಾಗ ಪಾಕಿಸ್ತಾನ ಮಧ್ಯಸ್ಥಿಕೆಯಲ್ಲಿ ಅಮೆರಿಕಾ ಮತ್ತು ಇರಾನ್ ನಡುವೆ 2 ವಾರಗಳ ಕಾಲ ಕದನ ವಿರಾಮ ಒಪ್ಪಂದವಾಗಿದೆ.
ಒಪ್ಪಂದಂತೆ ಉಭಯ ರಾಷ್ಟ್ರಗಳು ಸೇನಾ ಕಾರ್ಯಾಚರಣೆಗಳನ್ನು ನಿಲ್ಲಿಸಲು ಮತ್ತು ಮುಂದಿನ ಶಾಂತಿ ಮಾತುಕತೆಗಳಿಗೆ ಅವಕಾಶ ಸೃಷ್ಟಿಸಲು ಒಪ್ಪಿಕೊಂಡಿವೆ. ಒಪ್ಪಂದದಲ್ಲಿ ಪ್ರಮುಖ ಇರಾನ್ ಹಾರ್ಮುಜ್ ಜಲಸಂಧಿಯನ್ನು ಸಂಪೂರ್ಣವಾಗಿ ಸುರಕ್ಷಿತವಾಗಿ ತೆರೆಯಲು ಒಪ್ಪಿಕೊಂಡಿದೆ.
ಹಾರ್ಮುಜ್ ಜಲಸಂಧಿ ಜಾಗತಿಕ ತೈಲ ಸಾಗಣೆ ಮಾರ್ಗಗಳಲ್ಲಿ ಪ್ರಮುಖ ಸ್ಥಾನ ಪಡೆದಿದ್ದು, ಈ ಮಾರ್ಗ ಬಂದ್ ಆಗಿದ್ದರಿಂದ ಜಾಗತಿಕ ತೈಲ ಬೆಲೆಗಳು ಹೆಚ್ಚಾಗಿದ್ದವು. ಜಲಸಂಧಿಯ ಪುನರ್ ತೆರವಿನಿಂದ ಜಾಗತಿಕ ಸರಬರಾಜು ಸುಧಾರಿಸಲಿದೆ. ಈ ಕದನ ವಿರಾಮ ಒಪ್ಪಂದವು ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಶರೀಫ್ ಮತ್ತು ಸೇನಾಪ್ರಮುಖ ಫೀಲ್ಡ್ ಮ್ಯಾಷಲ್ ಅಸೀಂ ಮುನೀರ್ ಮಧ್ಯಸ್ಥಿಕೆಯಲ್ಲಿ ನಡೆದಿದೆ. ಇಸ್ರೇಲ್ ಸಹ ಸೇನಾ ಕಾರ್ಯಗಳನ್ನು ತಾತ್ಕಾಲಿಕವಾಗಿ ನಿಲ್ಲಿಸಲು ಸಮ್ಮತಿಸಿದೆ.
ಶಹಬಾಜ್ ಷರೀಫ್ ಮತ್ತು ಅಸಿಮ್ ಮುನೀರ್ ಅವರ ಮನವಿಯ ನಂತರ ಇರಾನ್ ಮೇಲಿನ ದಾಳಿಯನ್ನು ಎರಡು ವಾರಗಳ ಕಾಲ ನಿಲ್ಲಿಸಲು ಅಮೆರಿಕ ನಿರ್ಧರಿಸಿದೆ. ಪಾಕಿಸ್ತಾನವು ಎರಡೂ ದೇಶಗಳ ನಡುವಿನ ಮಾತುಕತೆಗೆ ದಾರಿ ಮಾಡಿಕೊಟ್ಟಿದೆ ಎಂದು ಇರಾನ್ ಸಹ ದೃಢಪಡಿಸಿದೆ.
ಎರಡೂ ದೇಶಗಳ ನಡುವಿನ ಔಪಚಾರಿಕ ಮಾತುಕತೆಗಳು ಏಪ್ರಿಲ್ 10 ರಂದು ಇಸ್ಲಾಮಾಬಾದ್‌ನಲ್ಲಿ ಪ್ರಾರಂಭವಾಗಲಿವೆ ಎಂದು ತಿಳಿದುಬಂದಿದೆ. ಈ ಕುರಿತು ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್ ಅವರು ಸಾಮಾಜಿಕ ಜಾಲಾತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದು, ಪಶ್ಚಿಮ ಏಷ್ಯಾ ಸಂಘರ್ಷದ ಮಧ್ಯೆ ಅಮೆರಿಕ ಮತ್ತು ಇರಾನ್ ತಮ್ಮ ಮಿತ್ರರಾಷ್ಟ್ರಗಳೊಂದಿಗೆ ತಕ್ಷಣದ ಕದನ ವಿರಾಮಕ್ಕೆ ಒಪ್ಪಿಕೊಂಡಿವೆ ಎಂದು ಘೋಷಿಸಿದ್ದಾರೆ.
ಏಪ್ರಿಲ್ 10 ರಂದು ಶುಕ್ರವಾರ ಇಸ್ಲಾಮಾಬಾದ್‌ನಲ್ಲಿ ಮಾತುಕತೆ ನಡೆಯಲಿದೆ ಎಂದೂ ಅದು ದೃಢಪಡಿಸಿದೆ. ಕದನ ವಿರಾಮ ಕೋರಿ ಇರಾನ್‌ಗೆ ಅಮೆರಿಕ 15 ಅಂಶಗಳ ಪ್ರಸ್ತಾವನೆಯನ್ನು ಕಳುಹಿಸಿತ್ತು. ಮಾತುಕತೆಗೆ ಆಧಾರವಾಗಿ ಇರಾನ್ ಕಳುಹಿಸಿದ ಪರಿಷ್ಕೃತ 10 ಅಂಶಗಳ ಪ್ರಸ್ತಾವನೆಯನ್ನು ಸ್ವೀಕರಿಸಿತ್ತು.


