ಜಾಗತಿಕವಾಗಿ ಶರವೇಗದಲ್ಲಿ ಬೆಳವಣಿಗೆಯಾಗುತ್ತಿರುವ ಕೃತಕ ಬುದ್ದಿಮತ್ತೆ ಸೇರಿದಂತೆ ಅತ್ಯಾಧುನಿಕ ತಂತ್ರಜ್ಞಾನ ಬಳಸಿಕೊಂಡು ರೈತ ಸಮೂಹ ಎಲ್ಲಾ ಹಂತದಲ್ಲೂ ಪ್ರಗತಿ ಕಾಣಬೇಕು ಎಂದು ಕೃಷಿ ಸಚಿವ ಎನ್. ಚೆಲುವರಾಯ ಸ್ವಾಮಿ ಕರೆ ನೀಡಿದ್ದಾರೆ.
ಬೆಂಗಳೂರು ದೂರದರ್ಶನ ಚಂದನವಾಹಿನಿಯಲ್ಲಿ ರೈತರ ರಿಯಾಲಿಟಿ ಶೋ “ರೈತ ರತ್ನ” ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಕೃಷಿ ಕ್ಷೇತ್ರದಲ್ಲಿ ಇಂದು ಅಗಾಧ ಪರಿವರ್ತನೆಗಳಾಗುತ್ತಿವೆ. ಆದರೆ ರೈತರ ಬದಕಿನಲ್ಲಿ ಪ್ರಗತಿಯಾಗುತ್ತಿಲ್ಲ. ಪ್ರತಿ ಎರಡು ವರ್ಷಗಳಿಗೊಮ್ಮೆ ಒಂದೊಂದು ರೀತಿಯ ನೈಸರ್ಗಿಕ ವಿಪತ್ತುಗಳನ್ನು ಎದುರಿಸುವ ಸನ್ನಿವೇಶ ಸೃಷ್ಟಿಯಾಗುತ್ತಿದೆ. ಬೆಳೆ ಕೈಗೆ ಬರುವಾಗ ಏನಾದರೊಂದು ಸಮಸ್ಯೆ ಸೃಷ್ಟಿಯಾಗಿ ರೈತರು ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ. ಇಂತಹ ಎಲ್ಲಾ ವಿಪತ್ತುಗಳಿಂದ ಹೊರ ಬಂದು ರೈತ ಸಮುದಾಯ ಕೃಷಿಯಲ್ಲಿ ಆಧುನಿಕ ತಂತ್ರಜ್ಞಾನವನ್ನು ಅಡಕಗೊಳಿಸಿಕೊಳ್ಳಬೇಕು. ಇದಕ್ಕಾಗಿ ಸರ್ಕಾರ ಎಲ್ಲಾ ರೀತಿಯಲ್ಲಿ ಪ್ರೋತ್ಸಾಹ ನೀಡಲಿದೆ ಎಂದರು.
ಬೆಂಗಳೂರು ದೂರದರ್ಶನ ಕೇಂದ್ರ ಕೃಷಿಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದು, ರೈತರ ಬದುಕಿಗೆ ಪೂರಕವಾಗಿ ಕಾರ್ಯನಿರ್ವಹಿಸುತ್ತಿದೆ. ದೂರದರ್ಶನದಲ್ಲಿ ಹೆಚ್ಚಿನ ಕಾರ್ಯಕ್ರಮಗಳನ್ನು ನಡೆಸುವಂತೆ ಪ್ರತಿ ಸಂದರ್ಭದಲ್ಲೂ ಅಧಿಕಾರಿಗಳಿಗೆ ಸೂಚನೆ ನೀಡುತ್ತಿರುತ್ತೇನೆ. ರೈತರ ಬೆಳವಣಿಗೆಗೆ ಪೂರಕವಾಗಿರುವ, ರೈತರಲ್ಲಿ ಆತ್ಮ ವಿಶ್ವಾಸ ಮೂಡಿಸುವ ಇಂತಹ ಕಾರ್ಯಕ್ರಮಗಳು ಮತ್ತಷ್ಟು ಮೂಡಿ ಬರಲಿ ಎಂದು ಕೃಷಿ ಸಚಿವ ಎನ್. ಚೆಲುವರಾಯ ಸ್ವಾಮಿ ಆಶಿಸಿದರು.
ಹಿರಿಯ ಸಾಹಿತಿ, ನಾಡೋಜ ಡಾ. ಎಂ. ಬರಗೂರು ರಾಮಚಂದ್ರಪ್ಪ ಮಾತನಾಡಿ, ರಿಯಾಲಿಟಿ ಅಲ್ಲದ ಶೋಗಳನ್ನು ರಿಯಾಲಿಟಿ ಶೋಗಳೆಂದು ಬಿಂಬಿಸುವ ಈಗಿನ ಸಂದರ್ಭದಲ್ಲಿ ರೈತರ ನಿಜ ಬದುಕನ್ನು ನೈಜವಾಗಿ ಚಿತ್ರಿಸಿ, ರೈತರಿಗಾಗಿ ನಡೆಸುತ್ತಿರುವ “ರೈತ ರತ್ನ” ನಿಜವಾದ ರಿಯಾಲಿಟಿ ಶೋ ಆಗಿದೆ. ಕೃಷಿ ಇಂದು ಉದ್ಯಮ ಸ್ವರೂಪ ಪಡೆದುಕೊಂಡಿದೆ. ರೈತ ಬೆಳೆಯುವ ಆಹಾರ ಮಾರುಕಟ್ಟೆ ಕೇಂದ್ರಿತವಾಗಿದೆ. ಸಣ್ಣ, ಅತಿ ಸಣ್ಣ ರೈತರಿಗೆ ಸೂಕ್ತ ಪ್ರಮಾಣದಲ್ಲಿ ಸಾಲ, ಸೌಲಭ್ಯ ದೊರೆಯುತ್ತಿಲ್ಲ. ಈ ಎಲ್ಲಾ ಸವಾಲುಗಳ ನಡುವೆ ರೈತರಿಗಾಗಿ ಉತ್ತಮ ಕಾರ್ಯಕ್ರಮ ರೂಪಿಸಿರುವುದು ಶ್ಲಾಘನೀಯ ಎಂದರು.
ಡಾ. ವೇಮಗಲ್ ನಾರಾಯಣ ಸ್ವಾಮಿ ಸಾಂಸ್ಕೃತಿಕ ಮತ್ತು ಸೇವಾ ಪ್ರತಿಷ್ಠಾನದ ಅಧ್ಯಕ್ಷ ಡಾ. ವೇಮಗಲ್ ನಾರಾಯಣ ಸ್ವಾಮಿ ಮಾತನಾಡಿ, ಜಗತ್ತಿನ ಪ್ರಮುಖ ದೇಶಗಳು ಇಂದು ಸಂಘರ್ಷದಲ್ಲಿ ತೊಡಗಿದ್ದು, ಪೈಪೋಟಿಗೆ ಬಿದ್ದಿವೆ. ಕೃಷಿ, ನೀರಾವರಿಯಲ್ಲಿ ವೈಜ್ಞಾನಿಕ ವಿಧಾನಗಳನ್ನು ಅಳವಡಿಸಿಕೊಳ್ಳುತ್ತಿಲ್ಲ. ಕಡಿಮೆ ಪ್ರಮಾಣದ ಹೂಡಿಕೆಯಿಂದ ಕೃಷಿ ಕ್ಷೇತ್ರಕ್ಕೆ ಧಕ್ಕೆಯಾಗುತ್ತಿದೆ ಎಂದರು.
ದೂರದರ್ಶನ ಕೇಂದ್ರದ ಕಾರ್ಯಕ್ರಮ ವಿಭಾಗದ ಮುಖ್ಯಸ್ಥರಾದ ಎಚ್.ಎನ್. ಆರತಿ ಮಾತನಾಡಿ, ಸಾಮಾಜಿಕ ಜಾಲತಾಣಗಳ ಅತಿಯಾದ ಬಳಕೆಯಿಂದ ಸಮಾಜದ ಸ್ವಾಸ್ಥ್ಯ ಹಾಳಾಗುತ್ತಿರುವುದನ್ನು ಮನಗಂಡು ರೈತರಿಗಾಗಿ ಉತ್ತಮ ಕಾರ್ಯಕ್ರಮ ರೂಪಿಸಿದ್ದೇವೆ. ಇಂದು ಅಗಾಧ ಪ್ರಮಾಣದಲ್ಲಿ ಆಹಾರ ಪದಾರ್ಥಗಳನ್ನು ವ್ಯರ್ಥ ಮಾಡುತ್ತಿದ್ದು, ಹಶಿವು ಆಗದವರ ಕಣ್ತೆರೆಸುವ ಕಾರ್ಯಕ್ರಮವಾಗಿ “ರೈತರತ್ನ” ಮೂಡಿ ಬರಲಿದೆ ಎಂದು ಆಶಿಸಿದರು.
ಬೆಂಗಳೂರು ಕೃಷಿ ವಿವಿ ಕುಲಪತಿ ಡಾ. ಎಸ್.ವಿ. ಸುರೇಶ್, ಕೆಪೆಕ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ಸಿ.ಎನ್. ಶಿವಪ್ರಕಾಶ್, ಬೆಂಗಳೂರು ದೂರದರ್ಶನ ಕೇಂದ್ರದ ಉಪ ಮಹಾನಿರ್ದೇಶಕರಾದ ಹನುಮಂತ್, ಕಾರ್ಯಕ್ರಮ ನಿರ್ಮಾಪಕರಾದ ಎಚ್.ಎನ್. ಗೋಪಿನಾಥ್ ಮತ್ತಿತರರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.


