ಶಿವಮೊಗ್ಗ ನಗರದ ಸಮೀಪದ ಊರುಗಡೂರಿನಲ್ಲಿ ಶಾಲಾ ವಿದ್ಯಾರ್ಥಿಯನ್ನು ಥಳಿಸಿ, ಹತ್ಯೆಗೈದಿರುವುದನ್ನು ತೀವ್ರವಾಗಿ ಖಂಡಿಸುತ್ತೇನೆ. ಕೊಲೆಯ ಹಿಂದಿನ ಉದ್ದೇಶವೇನೇ ಇರಲಿ, ಕೊಲೆಗೈದವರು ಯಾರೇ ಆಗಿರಲಿ, ಅವರನ್ನು ಕಾನೂನಿನ ಮೂಲಕ ಹೆಡೆಮುರಿ ಕಟ್ಟುತ್ತೇವೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಎಕ್ಸ್ ಖಾತೆಯಲ್ಲಿ ಈ ಬಗ್ಗೆ ಬರೆದುಕೊಂಡಿರುವ ಅವರು, “ಭವಿಷ್ಯದಲ್ಲಿ ಇಂತಹ ಕೃತ್ಯಗಳನ್ನು ಎಸಗುವ ಮುನ್ನ ನೂರು ಬಾರಿ ಯೋಚಿಸಬೇಕಾದಂತಹ ಸ್ಥಿತಿ ನಿರ್ಮಾಣ ಮಾಡುವಂತೆ ಪೊಲೀಸ್ ಇಲಾಖೆಗೆ ಸೂಚನೆ ನೀಡಿದ್ದೇನೆ” ಎಂದಿದ್ದಾರೆ.
“ಮೃತ ವಿದ್ಯಾರ್ಥಿಯ ಕುಟುಂಬಕ್ಕೆ ನೆರವಾಗುವುದರ ಜೊತೆಗೆ, ಕೃತ್ಯದಲ್ಲಿ ಭಾಗಿಯಾದ ಪ್ರತಿಯೊಬ್ಬ ಅಪರಾಧಿಗೂ ಕಾನೂನಿನ ಮೂಲಕ ತಕ್ಕ ಶಿಕ್ಷೆಯಾಗುವಂತೆ ಕ್ರಮವಹಿಸಿ, ಆತನ ಸಾವಿಗೆ ನ್ಯಾಯ ಕೊಡಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಿದ್ದೇವೆ” ಎಂದು ತಿಳಿಸಿದ್ದಾರೆ.
“ಕೊಲೆಯಲ್ಲಿ ಭಾಗಿಯಾದವರು ಇನ್ನೂ ಚಿಕ್ಕಪ್ರಾಯದ ಹುಡುಗರು ಎಂದು ಕೇಳಿ ದಿಗ್ಭ್ರಮೆಯಾಯಿತು.
ಚೆನ್ನಾಗಿ ಓದಿ, ಭವಿಷ್ಯ ರೂಪಿಸಿಕೊಂಡು, ಕುಟುಂಬಕ್ಕೆ ಆಸರೆಯಾಗಬೇಕಿದ್ದ ಮಕ್ಕಳು ದುಶ್ಚಟಗಳಿಗೆ ಬಲಿಯಾಗಿ, ಹೀಗೆ ಕಾನೂನುಬಾಹಿರ ಕೃತ್ಯಗಳಲ್ಲಿ ತೊಡಗುವುದು ದುರದೃಷ್ಟಕರ” ಎಂದಿದ್ದಾರೆ.


