Homeಕರ್ನಾಟಕರಾಜ್ಯದಲ್ಲಿ ಪಕ್ಷಾತೀತವಾಗಿ ಶಾಸಕರು ಕಮಿಷನ್​​​ ದಂಧೆಕೋರರಾಗಿದ್ದಾರೆ: ಗುತ್ತಿಗೆದಾರರ ಸಂಘದ ಅಧ್ಯಕ್ಷ ಮಂಜುನಾಥ್‌ ಆರೋಪ

ರಾಜ್ಯದಲ್ಲಿ ಪಕ್ಷಾತೀತವಾಗಿ ಶಾಸಕರು ಕಮಿಷನ್​​​ ದಂಧೆಕೋರರಾಗಿದ್ದಾರೆ: ಗುತ್ತಿಗೆದಾರರ ಸಂಘದ ಅಧ್ಯಕ್ಷ ಮಂಜುನಾಥ್‌ ಆರೋಪ

ರಾಜ್ಯದಲ್ಲಿ ಪಕ್ಷಾತೀತವಾಗಿ ಶಾಸಕರು ಕಮಿಷನ್​​​ ದಂಧೆಕೋರರಾಗಿದ್ದಾರೆ. ಶೇ 30 ರಿಂದ 40ರಷ್ಟು ಶಾಸಕರಂತೂ ಇದರಲ್ಲಿ ನೇರವಾಗಿ ಶಾಮೀಲಾಗಿದ್ದಾರೆ. ಇದನ್ನು ಮುಖ್ಯಮಂತ್ರಿಗಳ ಗಮನಕ್ಕೂ ತಂದಿದ್ದೇವೆ. ಅದರ ಭಾಗವಾಗಿಯೇ ಶಿರಹಟ್ಟಿ ಶಾಸಕರು ಸಿಕ್ಕಿಬಿದ್ದಿದ್ದಾರೆ ಎಂದು ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಆರ್‌.ಮಂಜುನಾಥ್‌ ಆರೋಪಿಸಿದ್ದಾರೆ.

ಬಾಕಿ ಬಿಲ್​ ಪಾವತಿಗೆ ಆಗ್ರಹಿಸಿ ಮಾರ್ಚ್​ 6 ರಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ನಡೆಸಲಿರುವ ಮುಷ್ಕರ ಪ್ರಯುಕ್ತ ಜಿಲ್ಲಾ ಪ್ರವಾಸದಲ್ಲಿರುವ ಅವರು ಭಾನುವಾರ ಹೊಸಪೇಟೆ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಕಾಮಗಾರಿ ಮುಗಿದ ನಂತರ ಬಿಲ್ ಪಾವತಿ ವೇಳೆ ಕಮಿಷನ್ ಪಡೆಯುವ ಕಾಲ ಈಗ ಹೊರಟು ಹೋಗಿದೆ. ಮೊದಲೇ ಕಮಿಷನ್​ ನೀಡಬೇಕಾಗಿದೆ. ಗುದ್ದಲಿ ಪೂಜೆ ಮಾಡುವ ಹಂತದಲ್ಲೇ ಶಾಸಕರಿಗೆ ಕಮಿಷನ್​​ ನೀಡಬೇಕಾಗುತ್ತದೆ. ಅಧಿಕಾರಿಗಳು ಇಲ್ಲಿ ಮಧ್ಯವರ್ತಿಗಳಾಗಿ ವರ್ತಿಸಿ ಗುತ್ತಿಗೆದಾರರನ್ನು ಇಕ್ಕಟ್ಟಿಗೆ ಸಿಲುಕಿಸುತ್ತಿದ್ದಾರೆ ಎಂದರು.

ಶೇ 60ರಷ್ಟು ಕಮಿಷನ್ ಎಂದು ಹೇಳಿಲ್ಲ!

ಹಿಂದಿನ ಸರ್ಕಾರದಲ್ಲಿ ಶೇ 40 ರಷ್ಟು ಕಮಿಷನ್ ಇತ್ತು, ಈ ಸರ್ಕಾರದಲ್ಲಿ ಶೇ 60ರಷ್ಟು ಕಮಿಷನ್ ದಂಧೆ ಇದೆ ಎಂದು ನಾನು ಹೇಳಿಲ್ಲ. ನನ್ನ ಮಾತನ್ನು ತಿರುಚಲಾಗಿದೆ. ಆದರೆ ಈ ಹಿಂದಿನ ಅಧ್ಯಕ್ಷರ ಹೇಳಿಕೆಯನ್ನು ಕಾಂಗ್ರೆಸ್ ಪಕ್ಷ ಚೆನ್ನಾಗಿ ಬಳಸಿಕೊಂಡಿದ್ದು ನಿಜ. ಆದರೆ ನಾವು ಸಹ ಅದೇ ಹಾದಿ ತುಳಿದಿಲ್ಲ. ಗುತ್ತಿಗೆದಾರರ ಬಾಕಿ ಬಿಲ್‌ ಮೊತ್ತ ₹37 ಸಾವಿರ ಕೋಟಿಯನ್ನು ತಕ್ಷಣ ಕೊಡಿ ಎಂಬುದಷ್ಟೇ ನಮ್ಮ ಬೇಡಿಕೆ ಎಂದು ಹೇಳಿದರು.

ಇಲಾಖೆಗಳ ಪೈಕಿ ಲೋಕೋಪಯೋಗಿ ಮತ್ತು ಬಿಬಿಎಂಪಿ ಉಸ್ತುವಾರಿ ಸಚಿವರಿಗೆ ಒಂದಿಷ್ಟು ಸ್ಪಂದಿಸುವ ಗುಣ ಇದೆ. ಉಳಿದ ಇಲಾಖೆಗಳಲ್ಲಿ ಸ್ಪಂದನವೇ ಇಲ್ಲ. ಮುಖ್ಯಮಂತ್ರಿ ಅವರೂ ಸ್ಪಂದಿಸದೇ ಇರುವುದೇ ದೊಡ್ಡ ತಲೆನೋವಾಗಿದೆ. ಗುತ್ತಿಗೆದಾರರ ಜತೆಗೆ ಸಭೆ ಕರೆಯುವುದನ್ನು ಅವರು ಮುಂದೂಡುತ್ತಲೇ ಇದ್ದಾರೆ ಎಂದು ಅವರು ದೂರಿದರು.

ಮಾರ್ಚ್‌ 6ಕ್ಕೆ ಮುಷ್ಕರ

ಬೇಡಿಕೆ ಈಡೇರಿಸಲು ಆಗ್ರಹಿಸಿ ಮಾರ್ಚ್‌ 6 ರಿಂದ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ರಾಜ್ಯದ ಎಲ್ಲ 31 ಜಿಲ್ಲೆಗಳಿಂದ ಬರಲಿರುವ ಗುತ್ತಿಗೆದಾರರ ಸಹಿತ ಒಂದು ದಿನದ ಮುಷ್ಕರ ನಡೆಸಲಾಗುವುದು. ಅಂದು ರಾಜ್ಯದೆಲ್ಲೆಡೆ ಕಾಮಗಾರಿಗಳು ಸ್ಥಗಿತಗೊಂಡಿರುತ್ತವೆ. ಸರ್ಕಾರ ಅಗಲೂ ಸ್ಪಂದಿಸದಿದ್ದರೆ ಏಪ್ರಿಲ್‌ನಿಂದ ಅನಿರ್ದಿಷ್ಟಾವಧಿ ಮುಷ್ಕರ ನಡೆಸಲಾಗುವುದು ಎಂದು ಮಂಜುನಾಥ್‌ ಎಚ್ಚರಿಸಿದರು.

ವಿಜಯನಗರ ಜಿಲ್ಲೆಯಲ್ಲಿರುವ ವಿವಿಧ ಇಲಾಖೆಗಳು ಗುತ್ತಿಗೆದಾರರಿಗೆ ₹1,200 ಕೋಟಿ ಬಿಲ್‌ ಪಾವತಿ ಬಾಕಿ ಉಳಿಸಿಕೊಂಡಿವೆ. ಈ ಜಿಲ್ಲೆಯೂ ಒಳಗೊಂಡಂತೆ ರಾಜ್ಯದಾದ್ಯಂತ ₹37,000 ಕೋಟಿ ಬಿಲ್‌ ಪಾವತಿ ಬಾಕಿ ಇದೆ. ಗುತ್ತಿಗೆದಾರರು ಬಹಳ ಕಷ್ಟದಲ್ಲಿದ್ದಾರೆ, ಆತ್ಮಹತ್ಯೆಯ ಹಾದಿ ತುಳಿಯುವ ಹಂತಕ್ಕೆ ಬಂದಿದ್ದಾರೆ. ಸರ್ಕಾರ ಇನ್ನಷ್ಟು ತಾಳ್ಮೆ ಪರೀಕ್ಷೆ ಮಾಡಬಾರದು ಎಂದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments