- ಬಿಜೆಪಿ ಶಾಸಕರೇ ಕಸ ಇಟ್ಟುಕೊಳ್ಳಲಿ, ಜನ ಅವರಿಗೆ ಉಗಿಯುತ್ತಾರೆ
- ಸಾರಿಗೆ ನೌಕರರು ಹಿಂಬಾಕಿ ಇಷ್ಟು ಕೊಟ್ಟಿರುವುದಕ್ಕೆ ಸಂತೋಷ ಪಡಬೇಕು
- ಪ್ರಿಯಾಂಕಾ ಗಾಂಧಿ ಅವರ ಜೊತೆ ಚುನಾವಣೆ ಪ್ರಚಾರಕ್ಕೆ ಅಸ್ಸಾಂ ಭೇಟಿ
ಬಿಜೆಪಿ ನಾಯಕರುಗಳು ಕಸ ವಿಲೇವಾರಿಗೆ ಬಿಡುವುದು ಬೇಡ. ಅವರೇ ಕಸವನ್ನು ಇಟ್ಟುಕೊಳ್ಳಲಿ. ಯಾರು ಬಿಡುವುದಿಲ್ಲವೋ ಅವರ ಕ್ಷೇತ್ರದಲ್ಲಿ ಕಸವನ್ನೇ ತೆಗೆಯುವುದಿಲ್ಲ, ತೆಗೆಸುವುದಿಲ್ಲ. ಆಗ ಜನರೇ ಅವರಿಗೆ ಉಗಿಯುತ್ತಾರೆ. ಮೈಕ್ ಹಾಕಿ ಪ್ರಚಾರ ಮಾಡಿಸುತ್ತೇನೆ. ಕಾಲನ್ನು ಕಟ್ಟಿಕೊಳ್ಳಲು ಆಗುತ್ತದೆಯೇ? ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಆಕ್ರೋಶ ವ್ಯಕ್ತಪಡಿಸಿದರು.
ಅಸ್ಸಾಂ ರಾಜ್ಯಕ್ಕೆ ತೆರಳುವುದಕ್ಕೆ ಮುಂಚಿತವಾಗಿ ಸದಾಶಿವನಗರದ ನಿವಾಸದ ಬಳಿ ಮಾಧ್ಯಮಗಳ ಪ್ರಶ್ನೆಗಳಿಗೆ ಗುರುವಾರದಂದು ಪ್ರತಿಕ್ರಿಯೆ ನೀಡಿದರು.
ಏನಾದರೂ ಕಸ ವಿಲೇವಾರಿಗೆ ಬಿಡುವುದಿಲ್ಲ ಎನ್ನುವ ಬಿಜೆಪಿ ನಾಯಕರ ಹೇಳಿಕೆ ಬಗ್ಗೆ ಕೇಳಿದಾಗ, “ಕಸವನ್ನು ಎಲ್ಲಾದರೂ ಒಂದು ಕಡೆ ಹಾಕಬೇಕಲ್ಲವೇ? ಕಸ ಯಾರದ್ದು ಅದು ಜನರ ಕಸ. ಮೊದಲಿನಿಂದಲೂ ಹೇಗೆ ಸಂಪ್ರದಾಯವಿತ್ತೋ ಅದೇ ರೀತಿ ಮಾಡಿಕೊಂಡು ಬರುತ್ತಿದ್ದೇವೆ. ಬಿಜೆಪಿ ಹಾಗೂ ನಮ್ಮ ಸಮಯದಲ್ಲಿ ತೀರ್ಮಾನ ಮಾಡಿದ್ದು ಇದೇ ರೀತಿ” ಎಂದರು.
“ನಾವು ಅಭಿವೃದ್ಧಿಗೆ ಹಣ ಕೊಟ್ಟಿದ್ದೇವೆ. ಸಾವಿರಾರು ಕೋಟಿಯನ್ನು ಎಷ್ಟು ಎಂದು ಕೊಡಲು ಆಗುತ್ತದೆ. 20, 30 ಕೋಟಿ ಸೇರಿದಂತೆ 50- 100 ಕೋಟಿ ಹಣವನ್ನು ಅಭಿವೃದ್ಧಿಗೆ ಕೊಡುತ್ತಾ ಬಂದಿದ್ದೇವೆ. ನಾವು ಕೊಡುತ್ತೇವೆ. ಅವರು ಅರ್ಥ ಮಾಡಿಕೊಳ್ಳಬೇಕು. ಮಹದೇವಪುರದಲ್ಲಿ ಕಸ ವಿಲೇವಾರಿ ನಿಲ್ಲಿಸಲಾಗಿದೆ. ನಾವು ಸಹ ಅಲ್ಲಿನ ಕಸ ಮೂರು ದಿನ ತೆಗೆಯಬೇಡಿ ಎಂದರೆ ಏನಾಗಬಹುದು” ಎಂದು ಹೇಳಿದರು.
“ಕಸ ವಿಲೇವಾರಿಗೆ ನಾಲ್ಕು ಕಡೆ ಜಮೀನುಗಳನ್ನು ನೋಡಿದ್ದೆವು. ಭೂಮಿ ಸಮಸ್ಯೆ ಬಂದ ಕಾರಣಕ್ಕೆ ಎರಡು ಕಡೆ ಅಂತಿಮ ಮಾಡಿದ್ದೇವೆ. ಟೆಂಡರ್ ಕೂಡ ಕರೆಯಲಾಗಿದೆ. ನಮ್ಮ ಕೆಲಸವನ್ನು ನಾವು ಮಾಡುತ್ತಿದ್ದೇವೆ” ಎಂದರು.
ಸಾರಿಗೆ ನೌಕರರು ಇಷ್ಟು ಕೊಟ್ಟಿರುವುದಕ್ಕೆ ಸಂತೋಷ ಪಡಬೇಕು
ಸಾರಿಗೆ ನೌಕರರ ಬೇಡಿಕೆಗಿಂತ ಕಡಿಮೆ ಹಿಂಬಾಕಿ ನೀಡಿರುವ ಬಗ್ಗೆ ಕೇಳಿದಾಗ, “ಸದ್ಯ ಅಷ್ಟು ಕೊಟ್ಟಿರುವುದಕ್ಕೆ ಸಂತೋಷ ಪಡಬೇಕು. ಸರ್ಕಾರದ ಪರಿಸ್ಥಿತಿಯನ್ನು ಅವರು ಅರ್ಥ ಮಾಡಿಕೊಳ್ಳಬೇಕು. ದಯವಿಟ್ಟು ಸಾರಿಗೆ ನೌಕರರು ಸಹಕಾರ ನೀಡಬೇಕು ಎಂದು ಮನವಿ ಮಾಡುತ್ತೇನೆ” ಎಂದು. ತಿಳಿಸಿದರು.
ಪ್ರಿಯಾಂಕಾ ಗಾಂಧಿ ಅವರ ಜೊತೆ ಅಸ್ಸಾಂ ಭೇಟಿ
ಪ್ರಿಯಾಂಕಾ ಗಾಂಧಿ ಅವರು, ನಾನು, ಭೂಪೇಶ್ ಬಘೇಲ ಅವರು ಹಾಗೂ ತಂಡ ಅಸ್ಸಾಂಗೆ ತೆರಳುತ್ತಿದ್ದೇವೆ. ಹಲವು ವಿಚಾರಗಳ ಕುರಿತು ಸರಣಿ ಸಭೆಗಳನ್ನು ನಡೆಸುತ್ತೇವೆ. ಅಸ್ಸಾಂ ಚುನಾವಣೆ ವಿಚಾರವಾಗಿ ದೆಹಲಿಯಲ್ಲಿ 3-4 ಸಭೆಗಳನ್ನು ನಡೆಸಿದ್ದೇವೆ. ಬೇಕಾದ ಮಾಹಿತಿಗಳನ್ನು ಪಡೆದುಕೊಂಡಿದ್ದೇವೆ. ತಂತ್ರಗಾರಿಕೆ ಸೇರಿದಂತೆ ಇನ್ನಿತರೇ ವಿಚಾರಗಳ ಬಗ್ಗೆ ಚರ್ಚೆ ನಡೆಸಲಾಗಿದೆ. ಈ ಬಾರಿ ಅಸ್ಸಾಂನಲ್ಲಿ ಬದಲಾವಣೆ ಆಗುತ್ತದೆ ಎನ್ನುವ ಭರವಸೆಯಿದೆ. ಕಾಮಾಕ್ಯ ದೇವಿ ದೇವಾಲಯಕ್ಕೂ ಭೇಟಿ ನೀಡುತ್ತೇನೆ. ಎರಡು ದಿನಗಳ ಪ್ರವಾಸ ಇದಾಗಿದೆ” ಎಂದು ಹೇಳಿದರು.


