‘ಸಾಮಾಜಿಕ ನ್ಯಾಯ’ದ ನಾಯಕ ಅರಸು ದಾಖಲೆ ಸರಿಗಟ್ಟಿದ ಸಿದ್ದು
ರಾಜ್ಯದಲ್ಲಿ ನಾಯಕತ್ವ ಬದಲಾವಣೆಯ ಚರ್ಚೆ ಜೋರಾಗಿ ನಡೆಯುತ್ತಿರುವ ಸಂದರ್ಭದಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಳವಾರ, ಜನವರಿ 6 ರಂದು ವಿಶಿಷ್ಠ ದಾಖಲೆ ಬರೆದರು.
ಅತಿ ಹೆಚ್ಚು ಅವಧಿಗೆ ರಾಜ್ಯದ ಮುಖ್ಯಮಂತ್ರಿಯಾಗಿದ್ದ ದೇವರಾಜ ಅರಸು ಅವರ ದಾಖಲೆಯನ್ನು ಸಿಎಂ ಸಿದ್ದರಾಮಯ್ಯ ಮುರಿದಿದ್ದಾರೆ. ಈ ಮೂಲಕ 7 ವರ್ಷ 239 ದಿನಗಳ ಕಾಲ ರಾಜ್ಯದ ಮುಖ್ಯಮಂತ್ರಿಯಾಗಿದ್ದ ದೇವರಾಜ ಅರಸು ಅವರ ದಾಖಲೆಯನ್ನು ಸರಿಗಟ್ಟಿ ಸಿಎಂ ಸ್ಥಾನದಲ್ಲಿ ಮುಂದುವರಿಯುತ್ತಿದ್ದಾರೆ.
ಸಿದ್ದರಾಮಯ್ಯ ಅವರು 2013-2018ರ ಅವಧಿಯಲ್ಲಿ ಮೊದಲ ಬಾರಿಗೆ ಸಿಎಂ ಆಗಿದ್ದಾಗ 1,829 ದಿನಗಳ ಕಾಲ ಅಧಿಕಾರದಲ್ಲಿದ್ದರು. ಈಗ ಎರಡನೇ ಅವಧಿಗೆ ಆಡಳಿತದ ಸೂತ್ರ ಹಿಡಿದಿರುವ ಅವರು, 2023 ಮೇ 23ರಂದು ಎರಡನೇ ಅವಧಿಗೆ ಮುಖ್ಯಮಂತ್ರಿ ಹುದ್ದೆಗೆ ಏರಿ 2026 ಜನವರಿ 6ರಂದು ದೇವರಾಜ ಅರಸರ ದಾಖಲೆಯನ್ನು ಸರಿಗಟ್ಟಿದ್ದಾರೆ.
ಕರ್ನಾಟಕದ ಇತಿಹಾಸದಲ್ಲಿ ಅತಿ ಹೆಚ್ಚು ಅವಧಿಗೆ ಮುಖ್ಯಮಂತ್ರಿಯಾಗಿದ್ದ ಸಿಎಂಗಳಲ್ಲಿ ದೇವರಾಜ ಅರಸು ಅವರ ನಂತರ ಎಸ್ ನಿಜಲಿಂಗಪ್ಪ(7 ವರ್ಷ 175 ದಿನಗಳು), ರಾಮಕೃಷ್ಣ ಹೆಗಡೆ(5 ವರ್ಷ 216 ದಿನಗಳು), ಮತ್ತು ಬಿ.ಎಸ್. ಯಡಿಯೂರಪ್ಪ (5 ವರ್ಷ 82 ದಿನಗಳು) ಇದ್ದರು.
ಸಾಮಾಜಿಕ ನ್ಯಾಯ, ಜಾತ್ಯತೀತತೆ ಹಾಗೂ ಕೋಮುವಾದಿ ವಿರೋಧಿ ನಿಲುವುಗಳನ್ನು ಬಲವಾಗಿ ಪ್ರತಿಪಾದಿಸುತ್ತಲೇ ಬಂದಿರುವ ಸಿದ್ದರಾಮಯ್ಯ, ಅಹಿಂದ ಗುಂಪುಗಳ ಕಡೆಗೆ ವಿಶೇಷ ಪ್ರೀತಿ ತೋರಿದರು. ತಮ್ಮ ಅಧಿಕಾರಾವಧಿಯಲ್ಲಿ ಅನ್ನಭಾಗ್ಯ, ಕ್ಷೀರ ಭಾಗ್ಯ ಸೇರಿದಂತೆ ಹಲವು ‘ಭಾಗ್ಯ’ಗಳ ಜೊತೆಗೆ, ಹಲವು ಸಾಮಾಜಿಕ ಕಲ್ಯಾಣ ಕಾರ್ಯಕ್ರಮಗಳನ್ನು ಸಿದ್ದರಾಮಯ್ಯ ಜಾರಿಗೆ ತಂದಿದ್ದಾರೆ. ಈ ಅವಧಿಯಲ್ಲಿ ಅವರ ನೇತೃತ್ವದ ಕಾಂಗ್ರೆಸ್ ಸರ್ಕಾರ ‘ಪಂಚ ಗ್ಯಾರಂಟಿ’ಗಳನ್ನು ಅನುಷ್ಠಾನ ಮಾಡಿದೆ.
ಬಜೆಟ್ ಮಂಡನೆಯಲ್ಲೂ ದಾಖಲೆ
ರಾಜ್ಯ ಬಜೆಟ್ ಮಂಡನೆಯಲ್ಲೂ ಸಿಎಂ ಸಿದ್ದರಾಮಯ್ಯ ದಾಖಲೆ ಬರೆದಿದ್ದು, ಇದುವರೆಗೂ 16 ಬಜೆಟ್ ಮಂಡಿಸಿದ್ದಾರೆ. ಒಟ್ಟು 13 ಬಜೆಟ್ ಮಂಡಿಸಿರುವ ರಾಮಕೃಷ್ಣ ಹೆಗಡೆ ಎರಡನೇ ಸ್ಥಾನದಲ್ಲಿದ್ದಾರೆ.
ಅತಿ ಹೆಚ್ಚು ಕಾಲ ಸರ್ಕಾರದ ಚುಕ್ಕಾಣಿ ಹಿಡಿದ ಗರಿಮೆಗೆ ಪಾತ್ರರಾದ ಸಿದ್ದರಾಮಯ್ಯ ಅವರ ಸಂತಸವನ್ನು ಸಂಭ್ರಮಿಸಲು ರಾಜ್ಯದಾದ್ಯಂತ ಅವರ ಅಭಿಮಾನಿಗಳು, ಬೆಂಬಲಿಗರು, ಹಿತೈಷಿಗಳು ಸಾಲು ಸಾಲು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದರು. ನೆಲಮಂಗಲದಲ್ಲಿ ಸುಮಾರು 10 ಸಾವಿರ ಜನರಿಗೆ ನಾಟಿಕೋಳಿಯ ಭೋಜನವನ್ನು ಅವರ ಅಭಿಮಾನಿಗಳು ಮಂಗಳವಾರ ಆಯೋಜಿಸಿದ್ದರು. ವಿಜಯಪುರ, ಕಲಬುರಗಿ, ಹಾಸನ, ಮೈಸೂರು ಸೇರಿದಂತೆ ಹಲವೆಡೆ ರಕ್ತದಾನ ಶಿಬಿರ, ಸಮಾವೇಶಗಳು ನಡೆದಿವೆ.
“ನನಗೂ ದೇವರಾಜ ಅರಸು ಅವರಿಗೂ ಹೋಲಿಕೆ ಇಲ್ಲ.ಯಾವುದೇ ದಾಖಲೆ ಶಾಶ್ವತವಲ್ಲ. ಕ್ರಿಕೆಟ್ನಲ್ಲಿ ಸಚಿನ್ ತೆಂಡೂಲ್ಕರ್ ಅವರ ದಾಖಲೆಯನ್ನು ವಿರಾಟ್ ಕೋಹ್ಲಿ ಮುರಿದಿಲ್ಲವೇ? ಮುಂದೆ ಯಾರಾದರೂ ನನ್ನ ದಾಖಲೆಯನ್ನು ಮುರಿಯಬಹುದು. ನನಗಿಂತ ಹೆಚ್ಚಿನ ಬಜೆಟ್ ಮಂಡಿಸುವವರು ಕೂಡ ಬರಬಹುದು. ಹೀಗಾಗಿ ನನ್ನ ದಾಖಲೆಯನ್ನು ಯಾರೂ ಮುರಿಯಲು ಸಾಧ್ಯವಿಲ್ಲ ಎಂದು ನಾನು ಹೇಳುವುದಿಲ್ಲ” ಎಂದಿದ್ದಾರೆ.


