Homeಕರ್ನಾಟಕಸಂವಿಧಾನ ಮುಟ್ಟಿದರೆ ರಕ್ತಕ್ರಾಂತಿ ಹೋರಾಟಕ್ಕೂ ಸಿದ್ಧ: ಬಿ ಕೆ ಹರಿಪ್ರಸಾದ್‌ ಎಚ್ಚರಿಕೆ

ಸಂವಿಧಾನ ಮುಟ್ಟಿದರೆ ರಕ್ತಕ್ರಾಂತಿ ಹೋರಾಟಕ್ಕೂ ಸಿದ್ಧ: ಬಿ ಕೆ ಹರಿಪ್ರಸಾದ್‌ ಎಚ್ಚರಿಕೆ

ಸಂವಿಧಾನ ಬದಲಾಯಿಸುತ್ತೇವೆ ಎಂದು ಹೇಳುವ ಈ ಸಂವಿಧಾನ ವಿರೋಧಿಗಳು ಸಂವಿಧಾನಕ್ಕೆ ಪರ್ಯಾಯವಾಗಿ ಯಾವ ಸಿದ್ದಾಂತ ಅಳವಡಿಸಿಕೊಳ್ಳುತ್ತೇವೆ ಎಂದು ಹೇಳುವ ಧೈರ್ಯವಿಲ್ಲ. ಕನಿಷ್ಟ ಪಕ್ಷ ಸಂವಿಧಾನಕ್ಕೆ ಬದಲಾಗಿ ತಮ್ಮ ಮೂಲ ಸಿದ್ದಾಂತವಾದ ಮನುಸ್ಮೃತಿಯನ್ನು ಜಾರಿಗೆ ತರುತ್ತೇವೆ ಎಂದು ಹೇಳುವ ಧೈರ್ಯವೂ ಇಲ್ಲದ ಹೇಡಿಗಳು ಆರ್‌ಎಸ್‌ಎಸ್‌ನವರು ಎಂದು ವಿಧಾನ ಪರಿಷತ್‌ ಸದಸ್ಯ ಬಿ ಕೆ ಹರಿಪ್ರಸಾದ್‌ ಕಿಡಿಕಾರಿದ್ದಾರೆ.

ಸಂವಿಧಾನದ ಪೀಠಿಕೆಯಲ್ಲಿರುವ ‘ಸಮಾಜವಾದಿ’ ಮತ್ತು ಜಾತ್ಯತೀತ ಪದಗಳನ್ನು ತೆಗೆದು ಹಾಕಲು ಆಗ್ರಹಿಸಿರುವ ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್‌ಎಸ್‌ಎಸ್)ದ ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ ಸವಾಲು ಹಾಕಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ್ದಾರೆ.

“ಸಂವಿಧಾನದ ಪ್ರಸ್ತಾವನೆಯ “ಜೀವಾಳ” ಹಾಗೂ “ಹೃದಯವೇ” ಆಗಿರುವ ಜಾತ್ಯಾತೀತ ಹಾಗೂ ಸಮಾಜವಾದಿ ಪದಗಳನ್ನು ತೆಗೆದು ಹಾಕಬೇಕೆಂದು ಆರ್ ಎಸ್ ಎಸ್ ಮತ್ತೆ ಒತ್ತಾಯಿಸಿದೆ. ಸಂವಿಧಾನವನ್ನೆ ಬದಲಾಯಿಸುತ್ತೇವೆ”, “ನಮ್ಮನ್ನ ಗೌರವಿಸುವ ಸಂವಿಧಾನ ಬೇಕು”, “ನಾವು ಅಧಿಕಾರಕ್ಕೆ ಬಂದಿರುವುದೇ ಸಂವಿಧಾನ ಬದಲಾಯಿಸಲು”, “ಲೋಕಸಭಾ ಚುನಾವಣೆಯಲ್ಲಿ 400 ಸ್ಥಾನಗಳನ್ನ ಬಿಜೆಪಿ ಪಡೆದರೆ ಸಂವಿಧಾನ ಬದಲಾಯಿಸುವುದೇ ನಮ್ಮ ಗುರಿ” ಎಂದು ಸಂವಿಧಾನ ವಿರೋಧಿ ನಿಲುವುಗಳನ್ನು ವ್ಯಕ್ತಪಡಿಸಿದ್ದ ಬಿಜೆಪಿಯ ಮನಸ್ಥಿತಿಗಳ ಹಿಂದೆ ಸಂಘ ಪರಿವಾರ ಇರುವುದು ಸ್ಪಷ್ಟ” ಎಂದು ಕುಟುಕಿದ್ದಾರೆ.

“ನೆಹರೂ ಅವರು ಸಂವಿಧಾನವನ್ನು ರಚಿಸಲು ಬಾಬಾ ಸಾಹೇಬರಿಗೆ ಅವಕಾಶ ನೀಡಿದ ಕ್ಷಣದಿಂದ ಹಿಡಿದು ಈ ಕ್ಷಣದವರೆಗೂ ಸಂವಿಧಾನವನ್ನು ಸಂಘಪರಿವಾರ ಎಂದೂ ಒಪ್ಪಿಕೊಳ್ಳಲೇ ಇಲ್ಲ. ಅದಕ್ಕೆ ಇತಿಹಾಸವೇ ಸಾಕ್ಷಿ. ಸ್ವಾತಂತ್ರ್ಯ ಚಳುವಳಿಯಲ್ಲಿ ಎಂದೂ ಭಾಗವಹಿಸದೆ, ಸ್ವಾತಂತ್ರ್ಯ ಸಂಗ್ರಾಮದ ವಿರುದ್ಧ ಪಿತೂರಿ ನಡೆಸುತ್ತಿದ್ದ ಸಂಘ ಪರಿವಾರ ದೇಶದ ಜನರೆದುರು ಕ್ಷಮೆ ಕೇಳುವ ನೈತಿಕತೆಯನ್ನು ಕಳೆದುಕೊಂಡಿದೆ. ನಮ್ಮ ಪೂರ್ವಜರ ತ್ಯಾಗ ಬಲಿದಾನದಿಂದ ಈ ದೇಶಕ್ಕೆ ನೀಡಿದ ಸ್ವಾತಂತ್ರ್ಯ ಹಾಗೂ ಸಂವಿಧಾನದ ಬಗ್ಗೆ ಮಾತುಡುವ ಯಾವ ಹಕ್ಕು ಸಂಘಪರಿವಾರಕ್ಕಿಲ್ಲ” ಎಂದಿದ್ದಾರೆ.

“ಸಂಘದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆಯವರ ಈ ಬದಲಾವಣೆ ಹೇಳಿಕೆಗೂ ನನ್ನ ಸವಾಲಿದೆ. ಜಾತ್ಯಾತೀತ ಹಾಗೂ ಸಮಾಜವಾದಿ ಪದಗಳನ್ನು ಬದಲಾಯಿಸಿದರೆ ಅದರ ಜಾಗದಲ್ಲಿ ಯಾವುದನ್ನು ಸೇರಿಸುತ್ತೀರಿ ಎಂದು ಬಹಿರಂಗವಾಗಿ ಹೇಳುವ ಧೈರ್ಯ ಇದೆಯಾ? ಸಮಾಜವಾದಿ ಜಾಗದಲ್ಲಿ ಬಂಡವಾಳವಾದವನ್ನು, ಜಾತ್ಯಾತೀತ ಜಾಗದಲ್ಲಿ ಜಾತಿಶ್ರೆಷ್ಠವಾದವನ್ನು ಸೇರಿಸುತ್ತೇವೆ ಎಂದು ಹೇಳುವ ಧೈರ್ಯ ಇದೆಯಾ” ಎಂದು ಪ್ರಶ್ನಿಸಿದ್ದಾರೆ.

“ಸಂಘಪರಿವಾರದ ಗುರುಗಳಾದ ಗೋಲ್ವಾಲ್ಕರ್, ಹೆಡ್ಗೆವಾರ್, ಸಾವರ್ಕರ್, ಇಂದ ಹಿಡಿದು ಈಗಿನ ಹೊಸಬಾಳೆ,ರಸಬಾಳೆವರೆಗೂ ಸಂವಿಧಾನವನ್ನು ವಿರೋಧಿಸುತ್ತಲೇ ಬಂದಿದ್ದಾರೆ. ಸಂವಿಧಾನವನ್ನು ಮುಟ್ಟಿದರೆ ರಕ್ತಕ್ರಾಂತಿಗೂ ಸರಿ ಸಂವಿಧಾನವನ್ನು ಉಳಿಸುವ ಹೋರಾಟದಿಂದ ಹಿಂದೆ ಸರಿಯುವುದಿಲ್ಲ. ಕಾಂಗ್ರೆಸ್ ಪಕ್ಷ ಅಂತಹ ಯಾವ ಬೆಲೆ ತೆತ್ತಾದರೂ ಸರಿ ಸಂವಿಧಾನದ ಪೀಠಿಕೆಯನ್ನು ಬದಲಾಯಿಸಲು ಬಿಡುವುದಿಲ್ಲ” ಎಂದು ಎಚ್ಚರಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments