ಇಸ್ರೇಲ್ ಮತ್ತು ಇರಾನ್ ಸಂಘರ್ಷ ಐದನೇ ದಿನವಾದ ಮಂಗಳವಾರ ಸಹ ಮುಂದುವರಿದಿದ್ದು, ಈ ನಡುವೆ ‘ತಕ್ಷಣವೇ ಟೆಹರಾನ್ ತೊರೆಯುವಂತೆ’ ಜನರಿಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕರೆ ನೀಡಿದ್ದಾರೆ.
“ಪರಮಾಣು ಶಸ್ತ್ರಾಸ್ತ್ರಗಳ ಅಭಿವೃದ್ಧಿ ತಡೆಯುವ ಒಪ್ಪಂದವನ್ನು ಇರಾನ್ ತಿರಸ್ಕರಿಸಿದೆ. ನಾನು ಹೇಳಿದ ಒಪ್ಪಂದಕ್ಕೆ ಇರಾನ್ ಸಹಿ ಹಾಕಬೇಕಿತ್ತು. ಇದು ಎಂತಹ ಅವಮಾನ. ಸರಳವಾಗಿ ಹೇಳುವುದಾದರೆ ಇರಾನ್ ಪರಮಾಣು ಶಸ್ತ್ರಾಸ್ತ್ರವನ್ನು ಹೊಂದಲು ಸಾಧ್ಯವಿಲ್ಲ. ನಾನು ಅದನ್ನು ಮತ್ತೆ ಮತ್ತೆ ಹೇಳಿದ್ದೇನೆ. ಟೆಹರಾನ್ ಜನತೆ ತಕ್ಷಣವೇ ಟೆಹ್ರಾನ್ ಅನ್ನು ತೊರೆಯಬೇಕು” ಎಂದು ಟ್ರಂಪ್ ಆಗ್ರಹಿಸಿದ್ದಾರೆ.
ಟ್ರಂಪ್ ಅವರ ಈ ಹೇಳಿಕೆಯಿಂದಾಗಿ ಇರಾನ್ ಜನ ತಮ್ಮ ಮೇಲೆ ದೊಡ್ಡ ದಾಳಿ ನಡೆಯುವ ಸಾಧ್ಯತೆ ಇರಬಹುದು ಎಂದು ಆತಂಕಗೊಂಡಿದ್ದಾರೆ. ಟ್ರಂಪ್ ಅವರು ಎಕ್ಸ್ ತಾಣದಲ್ಲಿ ಬೆಳಿಗ್ಗೆ 4 ಗಂಟೆಗೆ ಟ್ವೀಟ್ ಮಾಡಿ, 1 ಕೋಟಿ ಜನಸಂಖ್ಯೆ ಇರುವ ಇರಾನಿನ ರಾಜಧಾನಿ ಟೆಹ್ರಾನ್ ತೊರೆಯಲು ಸೋಶಿಯಲ್ ಮೀಡಿಯಾ ಮೂಲಕ ಸಂದೇಶ ಕೊಟ್ಟಿದ್ದಾರೆ.
ಈ ಪೋಸ್ಟ್ ಮೂಲಕ ಅಮೆರಿಕ ಅಧ್ಯಕ್ಷ ಇರಾನ್ಗೆ ಬೆದರಿಕೆ ಹಾಕಿದ್ದಾರೆ ಮತ್ತು ಇರಾನ್ ತಾನು ಹೇಳಿದ ಒಪ್ಪಂದಕ್ಕೆ ಸಹಿ ಹಾಕಬೇಕಿತ್ತು ಎಂದು ಹೇಳಿದ್ದಾರೆ. ಡೊನಾಲ್ಡ್ ಟ್ರಂಪ್ ಕೆನಡಾದಲ್ಲಿ ನಡೆಯುತ್ತಿರುವ ಜಿ7 ಶೃಂಗಸಭೆಯಲ್ಲಿ ಭಾಗವಹಿಸುತ್ತಿರುವ ಹೊತ್ತಲ್ಲಿ ಈ ಪೋಸ್ಟ್ ಮಾಡಿದ್ದಾರೆ.