Homeಕರ್ನಾಟಕಮೆಟ್ರೋ ನಿಲ್ದಾಣಕ್ಕೆ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಹೆಸರು, ಸಚಿವ ಸಂಪುಟದಲ್ಲಿ ಚರ್ಚಿಸಿ ತೀರ್ಮಾನ: ಸಿಎಂ

ಮೆಟ್ರೋ ನಿಲ್ದಾಣಕ್ಕೆ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಹೆಸರು, ಸಚಿವ ಸಂಪುಟದಲ್ಲಿ ಚರ್ಚಿಸಿ ತೀರ್ಮಾನ: ಸಿಎಂ

ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಅವರ ಹೆಸರನ್ನು ಮೆಟ್ರೋ ನಿಲ್ದಾಣಕ್ಕೆ ಇಡುವ ಸಂಬಂಧ ಕ್ಯಾಬಿನೆಟ್‌ನಲ್ಲಿ ಚರ್ಚಿಸಿ ತೀರ್ಮಾನಿಸಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಭರವಸೆ ನೀಡಿದರು.

ಕರ್ನಾಟಕ ಸರ್ಕಾರವು ಬೆಂಗಳೂರಿನಲ್ಲಿ ಏಳು ಎಕರೆ ಭೂಮಿ ಮಂಜೂರು ಮಾಡಿರುವ ಹಿನ್ನೆಲೆಯಲ್ಲಿ ಕೊಡವ ಸಮಾಜದವರು ವಸಂತ ನಗರದಲ್ಲಿ ಭಾನುವಾರ ಏರ್ಪಡಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.

“ಕೊಡವ ಸಮಾಜ ಸಂಖ್ಯೆಯಲ್ಲಿ ಅಲ್ಪಸಂಖ್ಯಾತರಾದರೂ ದೇಶ ಸೇವೆಯಲ್ಲಿ ಇವರಿಗೆ ಸರಿಸಮಾನವಾದವರು ಬೇರೆ ಇಲ್ಲ. ಸಂಸ್ಕೃತಿ, ಶಿಸ್ತಿನಲ್ಲಿ ಕೊಡವರು ಮುಂಚೂಣಿಯಲ್ಲಿದ್ದಾರೆ. ಸೈನ್ಯಕ್ಕೆ, ದೇಶ ರಕ್ಷಣೆಗೆ, ಕ್ರೀಡೆಗೆ, ರಾಜಕಾರಣಕ್ಕೆ ಕೊಡವರ ಕೊಡವರ ಕೊಡುಗೆ ಅಪಾರ” ಎಂದು ಮೆಚ್ಚುಗೆ ಸೂಚಿಸಿದರು.

“ಪೊನ್ನಣ್ಣ ಅವರಿಗೆ ಉತ್ತಮ‌ ಭವಿಷ್ಯವಿದೆ. ಇವರನ್ನು ಬೆಂಬಲಿಸಿ ಪೊನ್ನಣ್ಣ ರಾಜ್ಯದ ಆಸ್ತಿ ಆಗ್ತಾರೆ. ಕೊಡವ ಸಮಾಜದ ಆಸ್ತಿ ಆಗಿದ್ದಾರೆ. “ಎ.ಕೆ.ಸುಬ್ಬಯ್ಯ ಮ ಮತ್ತು ಎಂ.ಸಿ.ನಾಣಯ್ಯ ಉತ್ತಮ ಸಂಸದೀಯ ಪಟುಗಳು. ಇವರು ಸದನದಲ್ಲಿ ಸಮಾಜಮುಖಿಯಾಗಿ ಮಾತನಾಡಿದ ಫೈರ್ ಬ್ರಾಂಡ್ ಗಳು. ಪೊನ್ನಣ್ಣ ಅವರಿಗೂ ಫೈರ್ ಬ್ರಾಂಡ್ ಆಗುವ ಎಲ್ಲ ಲಕ್ಷಣಗಳೂ ಇವೆ” ಎಂದು ಹೇಳಿದರು.

“ಯಾವುದೇ ಸಮುದಾಯಗಳು ಜಾಗ ಕೇಳಿದರೂ ಗೈಡೆನ್ಸ್ ಬೆಲೆಯಲ್ಲಿ ಶೇ10 ರಷ್ಟು ಬೆಲೆಗೆ ಕೊಡಬೇಕು ಎಂದು ಕಂದಾಯ ಸಚಿವರಿಗೆ ಸೂಚಿಸಿದ್ದೇನೆ. ಅದರಂತೆ ಕೊಡವ ಸಮಾಜಕ್ಕೂ ನೀಡಿದ್ದೇವೆ. ನಾವೆಲ್ಲರೂ ಭಾರತೀಯರು ಮತ್ತು ಕನ್ನಡಿಗರು. ದೇಶ ರಕ್ಷಣೆಯಲ್ಲಿ ಮುಂಚೂಣಿಯಲ್ಲಿರುವ ಕೊಡವರು ಜಾತಿ-ಧರ್ಮ ಮಾಡುವವರಲ್ಲ. ಎಲ್ಲರನ್ನೂ ಭಾರತೀಯರು ಎಂದು ಗೌರವಿಸುವವರು” ಎಂದರು.

ಕಾರ್ಯಪ್ಪ ಅವರ ಹೆಸರಿಡುವುದು ನಮ್ಮ ಭಾಗ್ಯ: ಡಿಕೆಶಿ

“ಮೆಟ್ರೋ ನಿಲ್ದಾಣಕ್ಕೆ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಅವರ ಹೆಸರಿಡುವ ಬಗ್ಗೆ ನಾನು ಹಾಗೂ ಮುಖ್ಯಮಂತ್ರಿಗಳು ಚರ್ಚೆ ಮಾಡಿ ತೀರ್ಮಾನಿಸುತ್ತೇವೆ. ಕಾರ್ಯಪ್ಪ ಅವರ ಹೆಸರಿಡುವುದು ನಮ್ಮ ಭಾಗ್ಯ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಹೇಳಿದರು.

“ಮನುಷ್ಯನಿಗೆ ಮುತ್ತುರತ್ನ ಶೋಭೆ ತರುವಂತೆ ಇಡೀ ದೇಶಕ್ಕೆ ಕೊಡಗು ಹಾಗೂ ಕೊಡವರು ಆಭರಣವಿದ್ದಂತೆ. ಇತಿಹಾಸ ನೋಡಿದಾಗ ನಿಮಗೆ ಯಾವುದೇ ಜವಾಬ್ದಾರಿ ಕೊಟ್ಟರೂ ಅದನ್ನು ಸಮರ್ಥವಾಗಿ ನಿಭಾಯಿಸಿದ್ದೀರಿ. ರಾಜಕೀಯ ಮಾತ್ರವಲ್ಲ ಕ್ರೀಡೆ, ಕಾನೂನು ವ್ಯವಸ್ಥೆ, ಸೇನೆ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲಿ ಕೊಡವರ ಕೊಡುಗೆ ಅಪಾರ. ದೇಶದ ಸ್ವಾತಂತ್ರ್ಯ ಹೋರಾಟಕ್ಕೂ ನಿಮ್ಮ ಕೊಡುಗೆ ಇದೆ” ಎಂದು ಬಣ್ಣಿಸಿದರು.

“ಕಾಂಗ್ರೆಸ್ ಸರ್ಕಾರಗಳು ಈ ಹಿಂದಿನಿಂದಲೂ ಹೃದಯ ಶ್ರೀಮಂತಿಕೆಯಿಂದ ಸಣ್ಣ ಸಮಾಜಗಳಿಗೆ ಸಹಾಯ ಮಾಡಿಕೊಂಡು ಬಂದಿವೆ. ನಮ್ಮ ಸರ್ಕಾರ ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ಮಾಡಿ ನಿಮಗೆ ಈ ಭೂಮಿ ನೀಡಲು ತೀರ್ಮಾನಿಸಿದೆ” ಎಂದರು.

ಸಚಿವರಾದ ಕೆ.ಜೆ.ಜಾರ್ಜ್, ಬೈರತಿ ಸುರೇಶ್, ಕೃಷ್ಣಬೈರೇಗೌಡ ಹಾಗೂ ಶಾಸಕರೂ ಮತ್ತು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಪೊನ್ನಣ್ಣ ಹಾಗೂ ಶಾಸಕ ಮಂಥರ್ ಗೌಡ ಅವರು ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments