ಫೆಬ್ರವರಿ 11ರಿಂದ 14ರವರೆಗೆ ಬೆಂಗಳೂರು ನಗರದಲ್ಲಿ ನಡೆಯಲಿರುವ ಇನ್ವೆಸ್ಟ್ ಕರ್ನಾಟಕ 2025 – ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲಿ 19 ದೇಶಗಳು ಭಾಗವಹಿಸಲಿವೆ ಎಂದು ಕೈಗಾರಿಕಾ ಸಚಿವ ಎಂ. ಬಿ. ಪಾಟೀಲ್ ತಿಳಿಸಿದ್ದಾರೆ.
“ಸಮಾವೇಶದಲ್ಲಿರುವ 9 ಪ್ರತ್ಯೇಕ ಕಂಟ್ರಿ ಪೆವಿಲಿಯನ್‌ಗಳು ಹೂಡಿಕೆ ಅವಕಾಶಗಳು ಮತ್ತು ವಾಣಿಜ್ಯ ಬಾಂಧವ್ಯ ಸಹಯೋಗದ ಅವಕಾಶಗಳನ್ನು ಪ್ರದರ್ಶಿಸಲಿವೆ. ಫ್ರಾನ್ಸ್, ನೆದರ್‌ಲ್ಯಾಂಡ್ಸ್, ಜಪಾನ್, ಥಾಯ್ಲೆಂಡ್, ಮಲೇಷ್ಯಾ, ದಕ್ಷಿಣ ಕೊರಿಯಾ, ಇಸ್ರೇಲ್, ನಾರ್ವೆ, ಸ್ವಿಟ್ಜರ್‌ಲ್ಯಾಂಡ್, ತೈವಾನ್, ಜರ್ಮನಿ, ಆಸ್ಟ್ರೇಲಿಯಾ, ಡೆನ್ಮಾರ್ಕ್, ಪೋಲಂಡ್, ಇಟಲಿ, ಬ್ರಿಟನ್, ಸ್ಲೊವೆನಿಯಾ, ಬಹ್ರೇನ್ ಮತ್ತು ಸಿಂಗಪುರ ಭಾಗವಿಸಲಿವೆ” ಎಂದು ಸಚಿವರು ಮಾಹಿತಿ ನೀಡಿದ್ದಾರೆ.
“ಏರೊಸ್ಪೇಸ್, ನವೀಕರಿಸಬಹುದಾದ ಇಂಧನ, ಎಲೆಕ್ಟ್ರಾನಿಕ್ಸ್, ಸೆಮಿಕಂಡಕ್ಟರ್ ಮತ್ತು ಅತ್ಯಾಧುನಿಕ ತಯಾರಿಕೆ ವಲಯಗಳಲ್ಲಿ ಕರ್ನಾಟಕವು ಬಂಡವಾಳ ಹೂಡಿಕೆಗೆ ಮುಂಚೂಣಿಯಲ್ಲಿ ಇರುವುದನ್ನು ಜಾಗತಿಕ ಉದ್ಯಮ ಜಗತ್ತಿಗೆ ಸಮಾವೇಶದ ಮೂಲಕ ಪರಿಚಯಿಸಲು ಸರ್ವ ಪ್ರಯತ್ನಗಳನ್ನು ಮಾಡಲಾಗುತ್ತಿದ” ಎಂದು ಹೇಳಿದ್ದಾರೆ.
“ಪರಿಸರ ಸ್ನೇಹಿ ವಿದ್ಯುತ್ ಚಾಲಿತ ವಾಹನಗಳು, ಡಿಫೆನ್ಸ್, ಜೈವಿಕ ತಂತ್ರಜ್ಞಾನ, ಸಂಶೋಧನೆ ಹಾಗೂ ಅಭಿವೃದ್ಧಿ ಮತ್ತು ಗರಿಷ್ಠ ನಿಖರತೆಯ ಬಿಡಿಭಾಗ ತಯಾರಿಕಾ ವಲಯಗಳಲ್ಲಿನ ಇತ್ತೀಚಿನ ಬೆಳವಣಿಗೆಯ ಮೇಲೆ ಫ್ಯೂಚರ್ ಆಫ್ ಇನ್ನೊವೇಷನ್ ಎಕ್ಸ್‌ಪೊ ಬೆಳಕು ಚೆಲ್ಲಲಿದೆ. ರಾಜ್ಯದಲ್ಲಿನ ಎಸ್‌ಎಂಇ ಹಾಗೂ ನವೋದ್ಯಮಗಳ ಬೆಳವಣಿಗೆಗೆ ಸಮಾವೇಶವು ವೇಗ ನೀಡಲಿದೆ. ಡಿಜಿಟಲೀಕರಣ ಅಳವಡಿಸಿಕೊಳ್ಳಲು 2,000ಕ್ಕೂ ಹೆಚ್ಚು ಎಸ್‌ಎಂಇಗಳಿಗೆ ಸೂಕ್ತ ತರಬೇತಿ ನೀಡಲಾಗಿದೆ. ಡಿಜಿಟಲ್ ಪರಿವರ್ತನೆಗೆ 100 ಎಸ್‌ಎಂಇಗಳಿಗೆ ಅಗತ್ಯ ನೆರವು ನೀಡಲಾಗಿದೆ” ಎಂದು ತಿಳಿಸಿದ್ದಾರೆ.
“ತಯಾರಿಕೆ ಹಾಗೂ ಪರಿಸರ ಸ್ನೇಹಿ ನವೋದ್ಯಮಗಳಿಗೆ ಉತ್ತೇಜನ ನೀಡಲು, ಜಾಗತಿಕ ನವೋದ್ಯಮ ಸವಾಲಿನ – ವೆಂಚುರೈಸ್‌ನ 2ನೇ ಆವೃತ್ತಿಯು ಸಮಾವೇಶದ ಇನ್ನೊಂದು ಆಕರ್ಷಣೆ ಆಗಿರಲಿದೆ. ಮೂಲ ಸಲಕರಣೆ ತಯಾರಿಸುವ (ಒಇಎಂ) ದೊಡ್ಡ ಕಂಪನಿಗಳ ಜೊತೆಗೆ ವಹಿವಾಟು ಕುದುರಿಸಿಕೊಳ್ಳುವುದಕ್ಕೆ ಎಸ್‌ಎಂಇ-ಗಳಿಗೆ ನೆರವಾಗಲು ಕೃತಕ ಬುದ್ಧಿಮತ್ತೆ ಆಧಾರಿತ ಎಸ್‌ಎಂಇ ಕನೆಕ್ಟ್ ಅಂತರ್ಜಾಲ ತಾಣ ಅಭಿವೃದ್ಧಿಪಡಿಸಲಾಗಿದೆ. ರಾಜ್ಯದ ಕೈಗಾರಿಕಾ ಮುನ್ನೋಟ ಕಾರ್ಯಗತಗೊಳಿಸಲು ಹೊಸ ಕೈಗಾರಿಕಾ ನೀತಿ (2024-29) ಜಾರಿಗೊಳಿಸಲಾಗುತ್ತಿದೆ. ಹಣಕಾಸು ಹಾಗೂ ಹಣಕಾಸೇತರ ಉತ್ತೇಜನಾ ಕ್ರಮಗಳ ಮೂಲಕ ರಾಜ್ಯಕ್ಕೆ ಕಂಪನಿಗಳನ್ನು ಆಹ್ವಾನಿಸಲು ಇದು ನೆರವಾಗಲಿದೆ” ಎಂದು ಸಚಿವರು ಮಾಹಿತಿ ನೀಡಿದ್ದಾರೆ.
“ಬಂಡವಾಳ ಹೂಡಿಕೆ ಸುಲಲಿತಗೊಳಿಸಲು ಕೃತಕ ಬುದ್ಧಿಮತ್ತೆ ನೆರವಿನ ಏಕಗವಾಕ್ಷಿ ವ್ಯವಸ್ಥೆ ಅಭಿವೃದ್ಧಿಪಡಿಸಲಾಗಿದೆ. ಇದು ಭೂಮಿ ಹಂಚಿಕೆ, ಹೂಡಿಕೆದಾರರ ಕುಂದುಕೊರತೆ ನಿವಾರಣೆಗೆ ನೆರವಾಗಲಿದ್ದು, ಬಹುಭಾಷಾ ಚಾಟ್‌ಬೋಟ್ ಸೌಲಭ್ಯ ಒಳಗೊಂಡಿರಲಿದೆ. ಆನಂದ ಮಹೀಂದ್ರಾ, ಕುಮಾರ್ ಮಂಗಳಂ ಬಿರ್ಲಾ, ಕಿರಣ್ ಮಜುಂದಾರ್ ಶಾ, ಮಾರ್ಟಿನ್ ಲುಂಡ್‌ಸ್ಟೆಡ್ಟ್, ಜಾರ್ಜ್ ಪಪಂಡ್ರೆವು, ಆನ್ ಡಂಕಿನ್ ಮತ್ತು ಒಡೆ ಅಬೊಷ್ ಅವರು ಉದ್ದಿಮೆ, ತಂತ್ರಜ್ಞಾನ ಮತ್ತು ಕೈಗಾರಿಕಾ ಪರಿವರ್ತನೆ ಬಗ್ಗೆ ಒಳನೋಟಗಳನ್ನು ಹಂಚಿಕೊಳ್ಳಲಿದ್ದಾರೆ. ಜಾಗತಿಕ ಪ್ರಮುಖ ಉದ್ದಿಮೆಗಳು ಮತ್ತು ವಿದೇಶಿ ಸರ್ಕಾರಗಳ ಪಾಲ್ಗೊಳ್ಳುವಿಕೆಯ ಫಲವಾಗಿ ರಾಜ್ಯದಲ್ಲಿ ವಿಪುಲ ಉದ್ಯೋಗ ಅವಕಾಶಗಳಿಗೆ ಉತ್ತೇಜನ ದೊರೆಯಲಿದೆ. ದುಡಿಯುವ ವರ್ಗದ ಕೌಶಲ ಅಭಿವೃದ್ಧಿಯಾಗಲಿದೆ. ತಂತ್ರಜ್ಞಾನವು ಸುಲಭವಾಗಿ ವರ್ಗಾವಣೆಯಾಗಲಿದೆ. ಇವೆಲ್ಲವುಗಳ ಫಲವಾಗಿ ಜಾಗತಿಕ ನಾವೀನ್ಯತಾ ಕ್ಷೇತ್ರದ ಜೊತೆಗಿನ ಕರ್ನಾಟಕದ ಬಾಂಧವ್ಯ ಗಮನಾರ್ಹವಾಗಿ ವೃದ್ಧಿಯಾಗಲಿದೆ” ಎಂದೂ ಸಚಿವ ಪಾಟೀಲ್ ವಿವರಿಸಿದ್ದಾರೆ.
ಸಮಾವೇಶದ ಬಗ್ಗೆ ಮಾಹಿತಿ ಹಾಗೂ ಹೆಸರು ನೋಂದಾಯಿಸಲು https://investkarnataka.co.in/gim2025/ ಅಂತರ್ಜಾಲ ತಾಣಕ್ಕೆ ಭೇಟಿ ನೀಡಿ.