ಡಿ.4ರಿಂದ ಬೆಳಗಾವಿಯಲ್ಲಿ ಅಧಿವೇಶನ ನಡೆಯಲಿದೆ. ವರ್ಗಾವಣೆ ದಂಧೆ ಸೇರಿ ಎಲ್ಲ ಆರೋಪಗಳನ್ನು ಪ್ರಸ್ತಾಪ ಮಾಡಬಹುದು. ನಾವು ಸಮರ್ಥವಾಗಿ ಉತ್ತರ ನೀಡುತ್ತೇವೆ, ಅವರಿಗೆ ಸಮಾಧಾನ ಆಗುವ ರೀತಿಯಲ್ಲೇ ಉತ್ತರ ನೀಡುತ್ತೇವೆ, ನಾವೇನು ಉದ್ವೇಗಕ್ಕೆ ಒಳಗಾಗುವುದಿಲ್ಲ ಎಂದು ಗೃಹ ಸಚಿವ ಡಾ. ಜಿ ಪರಮೇಶ್ವರ್ ಸವಾಲು ಹಾಕಿದರು.
ಬೆಂಗಳೂರಿನಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, “ರಾಜ್ಯ ಸರ್ಕಾರದಲ್ಲಿ ವರ್ಗಾವಣೆ ದಂಧೆ ನಡೆಯುತ್ತಿದೆ ವಿರೋಧ ಪಕ್ಷಗಳು ಆರೋಪಿಸುತ್ತಿವೆ. ಅಧಿವೇಶನದಲ್ಲಿ ಇದರ ಬಗ್ಗೆ ಚರ್ಚೆ ಮಾಡಲಿ. ಹಣ ತೆಗೆದುಕೊಂಡಿರುವ ಬಗ್ಗೆ ದಾಖಲೆ ಇದ್ದರೆ ಪ್ರಸ್ತಾಪ ಮಾಡಲಿ” ಎಂದರು.
“ಮೈಸೂರಿನ ವಿ.ವಿ.ಪುರಂ ಠಾಣೆಗೆ ವಿವೇಕಾನಂದ ಎಂಬ ಅಧಿಕಾರಿ ವರ್ಗಾವಣೆಯಾಗಿರುವುದು, ಯತೀಂದ್ರ ಅವರ ವಿಡಿಯೋದಲ್ಲಿ ವಿವೇಕಾನಂದ ಹೆಸರು ಹೇಳಿರುವುದು ಕಾಕತಾಳೀಯ ಇರಬಹುದು. ಅಧಿಕಾರಿಗಳ ವರ್ಗಾವಣೆ ವಿಷಯದಲ್ಲಿ ನನ್ನ ಮೇಲೆ ಯಾರು ಒತ್ತಡ ಹೇರಿಲ್ಲ. ಯತೀಂದ್ರ ನನ್ನ ಬಳಿ ಯಾವ ಹೆಸರನ್ನು ಹೇಳಿಲ್ಲ, ಪೊಲೀಸ್ ಅಧಿಕಾರಿಗಳ ವರ್ಗಾವಣೆಗೂ ಯತೀಂದ್ರ ಅವರ ವಿಡಿಯೋದಲ್ಲಿನ ಸಂಭಾಷಣೆಗೂ ಸಂಬಂಧ ಇಲ್ಲ” ಎಂದು ಸ್ಪಷ್ಟ ಪಡಿಸಿದರು.
“ಪೊಲೀಸ್ ಇನ್ ಸ್ಪೆಕ್ಟರ್ ವರ್ಗಾವಣೆ ಸ್ವಾಭಾವಿಕ. ಅದಕ್ಕಾಗಿ ಇಲಾಖೆಯಲ್ಲಿ ಮಂಡಳಿ ರಚನೆ ಮಾಡಲಾಗಿದೆ. ಅನೇಕ ಕಾರಣದಿಂದ ವರ್ಗಾವಣೆಗಳಾಗುತ್ತವೆ. ಪೊಲೀಸ್ ಇಲಾಖೆ ಬೇರೆ ಇಲಾಖೆಯಂತಲ್ಲ, ಠಾಣೆಗಳಲ್ಲಿ ಅಧಿಕಾರಿಗಳ ಹುದ್ದೆಗಳನ್ನು ಹೆಚ್ಚು ಸಮಯ ಖಾಲಿ ಇಡಲಾಗಲ್ಲ. ಠಾಣೆಯಲ್ಲಿ ಇನ್ ಸ್ಪೆಕ್ಟರ್ ಇಲ್ಲ ಅಂದರೆ ಮುಂದಿನ ವರ್ಷ ವರ್ಗಾವಣೆ ಸಮಯ ಬರುವವರೆಗೂ ಕಾಯಲು ಆಗಲ್ಲ, ಅದಕ್ಕಾಗಿ ಮಂಡಳಿಯ ಮೂಲಕ ಕಾಲ ಕಾಲಕ್ಕೆ ವರ್ಗಾವಣೆ ಮಾಡುತ್ತಲೇ ಇರುತ್ತೇವೆ. ಕೆಲವೊಮ್ಮೆ ಕಾರ್ಯಧ್ಯಕ್ಷತೆ ಕೊರತೆಯಾದಾಗಲೂ ಬದಲಾವಣೆ ಮಾಡುತ್ತೇವೆ” ಎಂದು ವಿವರಿಸಿದರು.
“ಬಿಜೆಪಿಯಿಂದ ವಿರೋಧ ಪಕ್ಷ ನಾಯಕನಾಗಿ ಆಯ್ಕೆಯಾದ ಆರ್.ಅಶೋಕ್ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಅವರ ಪಕ್ಷ ದೊಡ್ಡ ಜವಾಬ್ದಾರಿ ನೀಡಿದೆ. ಸರ್ಕಾರಕ್ಕೆ ಸಲಹೆ ಕೊಟ್ಟು, ಎಚ್ಚರಿಸುವ ಕೆಲಸ ಮಾಡಲಿ, ವಿರೋಧ ಪಕ್ಷದ ನಾಯಕರಾದ ಮೇಲೆ ಟೀಕೆ ಮಾಡುವುದು, ಸರ್ಕಾರದ ತಪ್ಪು ಹೇಳುವುದು ಸ್ವಾಭಾವಿಕ. ಸತ್ಯಾಸತ್ಯತೆ ಅರಿತು ಮಾತನಾಡಲಿ” ಎಂದು ಸಲಹೆ ಮಾಡಿದರು.