Homeಕರ್ನಾಟಕಮಾನವ-ಆನೆ ಸಂಘರ್ಷ ಕಡಿಮೆ ಮಾಡುವ ನಿಟ್ಟಿನಲ್ಲಿ ವಿಶ್ವ ಆನೆ ದಿನ ಪೂರಕ: ಸಿದ್ದರಾಮಯ್ಯ

ಮಾನವ-ಆನೆ ಸಂಘರ್ಷ ಕಡಿಮೆ ಮಾಡುವ ನಿಟ್ಟಿನಲ್ಲಿ ವಿಶ್ವ ಆನೆ ದಿನ ಪೂರಕ: ಸಿದ್ದರಾಮಯ್ಯ

ವಿಶ್ವ ಆನೆ ದಿನ, ಆನೆಗಳ ನೈಸರ್ಗಿಕ ಆವಾಸಸ್ಥಾನಗಳ ಸಂರಕ್ಷಣೆಯ ಮಹತ್ವವನ್ನು ಮತ್ತು ಆ ಮೂಲಕ ಆನೆಗಳ ಉಳಿವನ್ನು ಖಚಿತಪಡಿಸುವ ಮಹತ್ವವನ್ನು ನಮಗೆ ನೆನಪಿಸುತ್ತದೆ. ಮಾನವ-ಆನೆ ಸಂಘರ್ಷ ಕಡಿಮೆ ಮಾಡುವ ನಿಟ್ಟಿನಲ್ಲಿ ವಿಶ್ವ ಆನೆ ದಿನ ಪೂರಕವಾಗಲಿ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

ಬೆಂಗಳೂರು ಗಾಂಧಿ ಕೃಷಿ ವಿಜ್ಞಾನ ಕೇಂದ್ರ (ಜಿಕೆವಿಕೆ)ದಲ್ಲಿ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಇಲಾಖೆ ವಿಶ್ವ ಆನೆ ದಿನದಂದು ಆಯೋಜಿಸಿದ್ದ ಮಾನವ-ಆನೆ ಸಂಘರ್ಷ ನಿರ್ವಹಣೆ ಕುರಿತ ಅಂತಾರಾಷ್ಟ್ರೀಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.

“ಜನರು ಸಾವಿರಾರು ವರ್ಷಗಳಿಂದ ಆನೆಗಳೊಂದಿಗೆ ಸಹಬಾಳ್ವೆ ನಡೆಸುತ್ತಿದ್ದಾರೆ. ಆದರೆ ಪರಸ್ಪರ ವಾಸಿಸುತ್ತಿರುವ ಗಡಿಗಳು, ಅಭಿವೃದ್ಧಿ ಚಟುವಟಿಕೆಗಳು, ಹವಾಮಾನ ಮತ್ತು ನೈಸರ್ಗಿಕ ಸಂಪನ್ಮೂಲಗಳು ಬದಲಾಗುತ್ತಿರುವ ಕಾರಣ, ಮಾನವ ಮತ್ತು ಆನೆಗಳ ಮೇಲೆ ಒತ್ತಡ ಹೆಚ್ಚಾಗುತ್ತಿದೆ” ಎಂದರು.

“ನಗರೀಕರಣ, ಕೃಷಿ, ಅರಣ್ಯ ನಾಶ, ಹೆದ್ದಾರಿಗಳು ಅಥವಾ ಗಣಿಗಾರಿಕೆಯಂತಹ ಕೈಗಾರಿಕಾ ಬೆಳವಣಿಗೆಯಿಂದ ಆನೆಗಳು ತಮ್ಮ ಆವಾಸಸ್ಥಾನಗಳನ್ನು ಕಳೆದುಕೊಂಡಿವೆ. ಬೇಲಿಗಳು ಮತ್ತು ರೈಲು ಹಳಿಗಳಂತಹ ಅಡೆತಡೆಗಳಿಂದಾಗಿ ಆನೆಗಳು ಬಹುದೂರ ಪಯಣಿಸುವ ಆ ಮೂಲಕ ಅಪಾಯಗಳಿಗೆ ಸಿಲುಕುವ ಸಾಧ್ಯತೆಗಳೂ ಹೆಚ್ಚಾಗುತ್ತಿವೆ. ಈ ಹಿಂದೆ ಆನೆಗಳು ವಿಹರಿಸುತ್ತಿದ್ದ ಭೂ ಪ್ರದೇಶ, ಈಗ ಮಾನವ ಕೃಷಿಯ ನೆಲೆಯಾಗಿದೆ ಮತ್ತು ಅವುಗಳು ತಮ್ಮ ನೀರನ್ನು ಅರಿಸಿ ಬರುತ್ತಿರುವುದರಿಂದ ಗ್ರಾಮಸ್ಥರಿಗೆ ಅಪಾಯ ಎದುರಾಗುವ ಸಾಧ್ಯತೆಗಳನ್ನು ಹೆಚ್ಚಿಸಿದೆ” ಎಂದು ಹೇಳಿದರು.

“ನಮ್ಮ ದೇಶದಲ್ಲಿ2017 ರ ಜನಗಣತಿಯ ಪ್ರಕಾರ ಸುಮಾರು 30ಸಾವಿರ ಆನೆಗಳಿದ್ದು, ಇದು ಜಾಗತಿಕವಾಗಿ ಅತಿದೊಡ್ಡ ಸಂಖ್ಯೆಯಾಗಿದೆ. ಕರ್ನಾಟಕದಲ್ಲಿ 6,395 ಆನೆಗಳಿದ್ದು, ಅತಿ ಹೆಚ್ಚು ಆನೆಗಳನ್ನು ಹೊಂದಿರುವ ರಾಜ್ಯವಾಗಿದೆ, ಇದು ರಾಷ್ಟ್ರದ ಒಟ್ಟು ಆನೆಗಳ ಸಂಖ್ಯೆಯ ಸರಿಸುಮಾರು 25% ರಷ್ಟಿದೆ” ಎಂದರು.

“ಕರ್ನಾಟಕವು ನಿರ್ದಿಷ್ಟವಾಗಿ ಮಾನವ-ವನ್ಯಜೀವಿ ಸಂಘರ್ಷ ಪರಿಹರಿಸಲು ಮೀಸಲಾದ ಬಜೆಟ್ ಹೆಡ್ ಅನ್ನು ನಿಗದಿಪಡಿಸಿದೆ. ವಾರ್ಷಿಕವಾಗಿ, ಮಾನವ-ಆನೆ ಸಂಘರ್ಷಗಳನ್ನು ತಗ್ಗಿಸಲು ₹150 ಕೋಟಿಗೂ ಹೆಚ್ಚು ಹಣವನ್ನು ವೆಚ್ಚ ಮಾಡಲಾಗುತ್ತಿದೆ. ಈ ಅನುದಾನವನ್ನು, 300 ಕಿಲೋಮೀಟರ್‌ಗಿಂತಲೂ ಹೆಚ್ಚು ರೈಲ್ವೇ ಬ್ಯಾರಿಕೇಡ್‌ಗಳು, 800 ಕಿಲೋಮೀಟರ್‌ಗಳಷ್ಟು ವ್ಯಾಪಿಸಿರುವ ಸೌರ ಬೇಲಿಗಳು, ಸೌರ ಟೆಂಟಕಲ್ ಬೇಲಿಗಳು ಮತ್ತು ಆನೆ ತಡೆ ಕಂದಕಗಳನ್ನು ನಿರ್ಮಿಸಲು ಬಳಸಲಾಗುತ್ತಿದೆ” ಎಂದು ಹೇಳಿದರು.

“ಅರಣ್ಯದಲ್ಲಿ ಪ್ರವಾಸೋದ್ಯಮಕ್ಕೆ ಹೆಚ್ಚಿನ ಅವಕಾಶವಿದೆ. ಪ್ರಕೃತಿಯ ಸೊಬಗಿನ ಮುಂದೆ ಬೇರೊಂದಿಲ್ಲ. ತಂತ್ರಜ್ಞಾನ ಬಳಸಿಕೊಂಡು, ಸಂಪನ್ಮೂಲಗಳನ್ನು ಕ್ರೂಢೀಕರಿಸಿಕೊಂಡು ಈ ಸಮಸ್ಯೆ ಬಗೆಹರಿಸಿಕೊಳ್ಳಬೇಕು. ರೈತರಿಗೆ ಆಗುವ ಬೆಳೆ ನಷ್ಟ ತಡೆಯಬೇಕು. ಆನೆ ದಾಳಿಯಿಂದ ಪ್ರಾಣಹಾನಿಯಾದರೆ ಅವರಿಗೆ ಸೂಕ್ತ ಪರಿಹಾರ ಸಿಗುವಂತಾಗಬೇಕು. ಈ ವಿಚಾರವಾಗಿ ಕರ್ನಾಟಕದಲ್ಲಿ ನಡೆಯುತ್ತಿರುವ ಸಮ್ಮೇಳನ ಇಡೀ ದೇಶದ ಕಣ್ತೆರೆಸುವಂತೆ ಮಾಡಬೇಕು. ನಾವೆಲ್ಲರೂ ಸೇರಿ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳೋಣ” ಎಂದು ಡಿಸಿಎಂ ಡಿ ಕೆ ಶಿವಕುಮಾರ್‌ ತಿಳಿಸಿದರು.

“ಇದು ಕೇವಲ ಕರ್ನಾಟಕ ಅಥವಾ ಭಾರತದ ಯಾವುದೋ ಒಂದು ರಾಜ್ಯದ ಸಮಸ್ಯೆಯಲ್ಲ ಬದಲಾಗಿ ಜಾಗತಿಕ ಸಮಸ್ಯೆಯಾಗಿದೆ. ಮಾನವ-ಆನೆ ಸಂಘರ್ಷವು ಪರಿಸರ, ಸಾಮಾಜಿಕ ಮತ್ತು ಆರ್ಥಿಕ ಅಂಶಗಳನ್ನು ಒಳಗೊಂಡ ಒಂದು ಸಂಕೀರ್ಣ ಸಮಸ್ಯೆಯಾಗಿದೆ. ಅಮೂಲ್ಯವಾದ ಜೀವ ಹಾನಿ, ಬೆಳೆ ಹಾನಿಗೆ ಕಾರಣವಾಗುತ್ತಿರುವ ಈ ಸಮಸ್ಯೆಗೆ ಸುಸ್ಥಿರ ಪರಿಹಾರಗಳನ್ನು ಕಂಡುಕೊಳ್ಳಲು ನಮ್ಮ ಸಂಘಟಿತ ಮತ್ತು ಸಹಯೋಗದ ಪ್ರಯತ್ನಗಳು ಅಗತ್ಯ ಮತ್ತು ಅನಿವಾರ್ಯ ಎಂದು ನಾನು ಭಾವಿಸುತ್ತೇನೆ” ಎಂದು ಅರಣ್ಯ ಸಚಿವ ಈಶ್ವರ್‌ ಖಂಡ್ರೆ ಹೇಳಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments