ರಾಕಿಂಗ್ ಸ್ಟಾರ್ ಯಶ್ ಗೆ ಹುಟ್ಟುಹಬ್ಬದ ಶುಭ ಕೋರುವ ಬ್ಯಾನರ್ ಕಟ್ಟುತ್ತಿದ್ದಾಗ ವಿದ್ಯುತ್ ಸ್ಪರ್ಶಿಸಿ ಮೂವರು ಯುವಕರು ಸಾವನ್ನಪ್ಪಿರುವ ಹೃದಯ ವಿದ್ರಾವಕ ಘಟನೆ ಲಕ್ಷ್ಮೀಶ್ವರ ತಾಲೂಕಿನ ಸೂರಣಗಿಯಲ್ಲಿ ಭಾನುವಾರ ತಡರಾತ್ರಿ ನಡೆದಿದೆ.
ಸೂರಣಗಿಯ ಹನಮಂತ ಹರಿಜನ (21)ಮುರಳಿ ನಡವಿನಮನಿ (20) ಹಾಗೂ ನವೀನ್ ಗಾಜಿ (19) ಮೃತಪಟ್ಟವರು.
ಸೂರಣಗಿ ಗ್ರಾಮದ ನಿವಾಸಿಗಳಾದ ಯುವಕರು ಇಂದು ರಾಕಿಂಗ್ ಸ್ಟಾರ್ ಯಶ್ ಹುಟ್ಟುಹಬ್ಬದ ಶುಭಕೋರಲು ಬ್ಯಾನರ್ ಕಟ್ಟಲು ಮುಂದಾಗಿದ್ದರು. ಬ್ಯಾನರ್ ಅನ್ನು ಎತ್ತುತ್ತಿದ್ದಾಗ ಮೇಲೆ ಹಾದು ಹೋಗಿದ್ದ ವಿದ್ಯುತ್ ತಂತಿ ಸ್ಪರ್ಶಿಸಿದೆ.
ಈ ವೇಳೆ ಅಲ್ಲೇ ನಿಂತುಕೊಂಡಿದ್ದ ಮಂಜುನಾಥ್ ಹರಿಜನ, ದೀಪಕ ಹರಿಜನ ಹಾಗೂ ಪ್ರಕಾಶ ಮ್ಯಾಗೇರಿ ಎಂಬುವರಿಗೆ ಗಂಭೀರ ಗಾಯಗಳಾಗಿವೆ. ಕೂಡಲೇ ಅವರನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಕ್ಕಳನ್ನು ಕಳೆದುಕೊಂಡ ಹೆತ್ತವರ ಆಕ್ರಂದನ ಮುಗಿಲು ಮುಟ್ಟಿದೆ.
“ಯಶ್ ಹುಟ್ಟುಹಬ್ಬದ ಬ್ಯಾನರ್ ಮಾಡಿಸಿದ್ದೆವು. ಅದನ್ನು ನಿಲ್ಲಿಸುವಾಗ ಮೇಲಿದ್ದ ವಿದ್ಯುತ್ ತಂತಿಗೆ ತಗುಲಿದೆ. ಎಂಟು ಜನ ಸೇರಿಕೊಂಡು ಬ್ಯಾನರ್ ನಿಲ್ಲಿಸುತ್ತಿದ್ದೆವು. ಆಗ ಏಕಾಏಕಿ ಘಟನೆ ಸಂಭವಿಸಿತು. ತಕ್ಷಣ ಎಲ್ಲರನ್ನೂ ಆಸ್ಪತ್ರೆಗೆ ದಾಖಲಿಸಿದೆವು” ಎಂದು ಸ್ಥಳದಲ್ಲಿದ್ದ ಯುವಕ ಸುಬ್ರಹ್ಮಣ್ಯ ಸೂರಣಗಿ ಹೇಳಿದರು.
ಗಾಯಾಳುಗಳನ್ನು ಲಕ್ಷ್ಮೇಶ್ವರ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು ಚಿಕಿತ್ಸೆ ನೀಡಲಾಗುತ್ತಿದೆ. ಗ್ರಾಮದಲ್ಲಿ ಸೂತಕದ ಛಾಯೆ ಮನೆ ಮಾಡಿದೆ. ಈ ಸಂಬಂಧ ಲಕ್ಷ್ಮೇಶ್ವರ ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ತನಿಖೆಯನ್ನು ಕೈಗೊಂಡಿದ್ದಾರೆ.