ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಸಂಗ್ರಹದ ಪೆನ್ ಡ್ರೈವ್ ಪ್ರಕರಣ ಬಗ್ಗೆ ಬಿಜೆಪಿ ನಾಯಕರು ತಡವಾಗಿ ಮೌನ ಮುರಿದಿದ್ದಾರೆ.
ಹುಬ್ಬಳ್ಳಿಯಲ್ಲಿ ಬಿಜೆಪಿ ನಾಯಕ ಸಿ ಟಿ ರವಿ ಸೋಮವಾರ ಮಾತನಾಡಿ, “ರಾಜ್ಯದಲ್ಲಿ ಮೊದಲ ಹಂತದ ಚುನಾವಣೆಗೆ ಎರಡು ದಿನ ಬಾಕಿಯಿರುವಾಗ ನಮಗೆ ಈ ವಿಷಯ ಗೊತ್ತಾಯಿತು. ಈ ಬಗ್ಗೆ ಎಚ್ ಡಿ ಕುಮಾರಸ್ವಾಮಿ ಅವರು ಈಗಾಗಲೇ ಹೇಳಿಕೆ ಕೊಟ್ಟಿದ್ದಾರೆ. ನಾವು ಅದನ್ನು ಬೆಂಬಲಿಸುತ್ತೇವೆ” ಎಂದರು.
ಮಾಜಿ ಶಾಸಕರು ಈ ಬಗ್ಗೆ ಪತ್ರ ಬರೆದಿರುವ ವಿಚಾರ ನಮಗೆ ಗೊತ್ತಿಲ್ಲ. ನಮ್ಮ ಪಕ್ಷದ ವೇದಿಕೆಯಲ್ಲಿ ಇಂತಹ ಸಂಗತಿ ಚರ್ಚೆಯಾಗಿಲ್ಲ. ಜೆಡಿಎಸ್‌ನವರು ಎನ್‌ಡಿಎ ಭಾಗವಾಗಿದ್ದಾರೆ. ಟಿಕೆಟ್ ಅವರೇ ನೀಡಿದ್ದಾರೆ. ಕಳೆದ ಬಾರಿ ಕಾಂಗ್ರೆಸ್ ಜೆಡಿಎಸ್‌ಗೆ ಸಪೋರ್ಟ್ ಕೊಟ್ಟಿರಲಿಲ್ವಾ? ಈ ಮೈತ್ರಿಯೂ ಹಾಗೆ. ನಾವು ಟಿಕೆಟ್ ನೀಡಿಲ್ಲ” ಎಂದರು.
ಪ್ರಜ್ವಲ್ ಲೈಂಗಿಕ ಹಗರಣ ಚುನಾವಣೆ ಫಲಿತಾಂಶದ ಮೇಲೆ ಪರಿಣಾಮ ಬೀರುತ್ತಾ ಎಂದು ಪತ್ರಕರ್ತರು ಪ್ರಶ್ನಿಸಿದಾಗ, “ಕೆಟ್ಟ ಸಂಗತಿಗಳು ಸಮಾಜದ ಮೇಲೆ ಪರಿಣಾಮ ಬೀರಲ್ಲ ಎಂದರೆ ಸಮಾಜ ಸಂವೇದನೆ ಕಳೆದುಕೊಂಡಂತೆ. ಒಳ್ಳೆಯ ಸಂಗತಿಗಳು ಹೇಗೆ ಸಮಾಜದ ಮೇಲೆ ಪರಿಣಾಮ ಬೀರುತ್ತವೆಯೋ ಅಷ್ಟೇ ಕೆಟ್ಟ ಸಂಗತಿಗಳು ಕೂಡ ಪರಿಣಾಮ ಬೀರುತ್ತವೆ. ಆದರೆ ಚುನಾವಣೆ ಮೇಲೆ ಪರಿಣಾಮ ಬೀರುತ್ತೆ ಎಂಬುದು ಸುಳ್ಳು” ಎಂದು ಸಿ ಟಿ ರವಿ ಹೇಳಿದರು.
ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಿ: ಆರ್ ಅಶೋಕ್
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ವಿಪಕ್ಷ ನಾಯಕ ಆರ್. ಅಶೋಕ್, “ಕಾನೂನಿನ ಮುಂದೆ ಯಾರೂ ದೊಡ್ಡವರಲ್ಲ. ಎಲ್ಲರೂ ಸಮಾನರು. ಕುಮಾರಸ್ವಾಮಿ ಅವರು ಈ ಪ್ರಕರಣದ ಬಗ್ಗೆ ಮಾತನಾಡಿದ್ದಾರೆ. ಸರ್ಕಾರ ಎಸ್ಐಟಿ ರಚಿಸಿದೆ. ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಿ” ಎಂದು ಆಗ್ರಹಿಸಿದರು.
ಪೆನ್ ಡ್ರೈವ್ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಸಂತ್ರಸ್ತೆಯರಿಗೆ ರಕ್ಷಣೆ ಇಲ್ಲ ಎನ್ನುವ ಡಿ.ಕೆ. ಸುರೇಶ್ ಹೇಳಿಕೆಗೆ ಪ್ರತಿಕ್ರಿಯಿಸಿದ ಆರ್ ಅಶೋಕ್,” ಈಗ ರಾಜ್ಯದಲ್ಲಿ ಅವರದ್ದೇ ಸರ್ಕಾರ ಇದೆಯಲ್ಲ, ರಕ್ಷಣೆ ಕೊಡಲಿ” ಎಂದು ಒತ್ತಾಯಿಸಿದರು.
ಬಿಜೆಪಿಯ ರಾಜ್ಯ ಘಟಕದ ಅಧ್ಯಕ್ಷ ಬಿ ವೈ ವಿಜಯೇಂದ್ರ ಬಾಗಲಕೋಟೆಯಲ್ಲಿ ಈ ಪ್ರಕರಣದ ಬಗ್ಗೆ ಮಾತನಾಡಿ, “ಎಸ್ಐಟಿ ತನಿಖೆ ನಡೆದು ಸತ್ಯಾಸತ್ಯತೆ ಹೊರಬರಲಿ” ಎಂದು ಹೇಳಿದರು.