Homeಕರ್ನಾಟಕಹೂಡಿಕೆ, ಪ್ರತಿಭೆ, ಅವಕಾಶಗಳಿಗೆ ಸೂಕ್ತ ಪರಿಸರ ರೂಪಿಸುತ್ತೇವೆ: ಸಿದ್ದರಾಮಯ್ಯ ಭರವಸೆ

ಹೂಡಿಕೆ, ಪ್ರತಿಭೆ, ಅವಕಾಶಗಳಿಗೆ ಸೂಕ್ತ ಪರಿಸರ ರೂಪಿಸುತ್ತೇವೆ: ಸಿದ್ದರಾಮಯ್ಯ ಭರವಸೆ

  • 26ನೇ ಬೆಂಗಳೂರು ತಂತ್ರಜ್ಞಾನ ಶೃಂಗಕ್ಕೆ ಮುಖ್ಯಮಂತ್ರಿ ಸಿದ್ದರಾನಯ್ಯ ಚಾಲನೆ
  • ಜೈವಿಕ ತಂತ್ರಜ್ಞಾನ ಕಾರ್ಯನೀತಿ ಪರಿಷ್ಕೃತ ಕರಡು ಬಿಡುಗಡೆ ಮಾಡಿದ ಎಂ ಬಿ ಪಾಟೀಲ

ರಾಜ್ಯದಲ್ಲಿ ಮುಂದಿನ ಹಂತದ ತಂತ್ರಜ್ಞಾನ ನಾವೀನ್ಯತೆಯ ಬೆಳವಣಿಗೆಗೆ ಅಗತ್ಯವಿರುವ ಮೂಲಸೌಕರ್ಯ ಅಭಿವೃದ್ಧಿಗೆ ಹೂಡಿಕೆಗಳನ್ನು ಮುಂದುವರಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಘೋಷಿಸಿದರು.

ಬೆಂಗಳೂರು ಅರಮನೆಯಲ್ಲಿ ‘ಬ್ರೇಕಿಂಗ್ ದಿ ಬೌಂಡರೀಸ್’ ಘೋಷವಾಕ್ಯದ 26ನೇ ‘ಬೆಂಗಳೂರು ತಂತ್ರಜ್ಞಾನ ಶೃಂಗ–2023’ ಉದ್ಘಾಟಿಸಿ ಮತ್ತು ಸರ್ಕಾರದ ಎವಿಜಿಸಿ ಕರಡು ಮುನ್ನೋಟ ಮತ್ತು ಜೈವಿಕ ತಂತ್ರಜ್ಞಾನ ಕಾರ್ಯನೀತಿಯ ಪರಿಷ್ಕೃತ ಕರಡನ್ನು ಬಿಡುಗಡೆಗೊಳಿಸಿ ಮಾತನಾಡಿದರು.

“ಮಾಹಿತಿ ತಂತ್ರಜ್ಞಾನ ಮತ್ತು ಅದಕ್ಕೆ ಸಂಬಂಧಿಸಿದ ಒಟ್ಟು 5,500ಕ್ಕೂ ಹೆಚ್ಚಿನ ಕಂಪನಿಗಳಿಗೆ ಕರ್ನಾಟಕವು ನೆಲೆಯಾಗಿದೆ. ಅಲ್ಲದೆ, ಅಂದಾಜು 750 ಬಹುರಾಷ್ಟ್ರೀಯ ಕಂಪನಿಗಳು ಇಲ್ಲಿ ಕಾರ್ಯಾಚರಣೆ ನಡೆಸುತ್ತಿವೆ. ದೇಶದ ರಫ್ತಿಗೆ ರಾಜ್ಯದ ಐ.ಟಿ. ವಲಯದ ಕೊಡುಗೆಯು 85 ಬಿಲಿಯನ್ ಡಾಲರ್‌ನಷ್ಟು ಇದೆ” ಎಂದರು.

“ಡಿಜಿಟಲ್ ಕೌಶಲ ಹೊಂದಿರುವ ಪ್ರತಿಭಾವಂತರ ದಂಡು, ಹೊಸತನ ಹಾಗೂ ನವೋದ್ಯಮಗಳಿಗೆ ಪೂರಕವಾಗಿರುವ ವಾತಾವರಣ ಮತ್ತು ಸರ್ಕಾರದ ಕಾರ್ಯನೀತಿಗಳು ಇದಕ್ಕೆ ಅನುಕೂಲಕರವಾಗಿವೆ” ಎಂದು ವಿವರಿಸಿದರು.

“ಉದ್ಯಮಕ್ಕೆ ಅನುಕೂಲಕರವಾದ ನಮ್ಮ ಕಾರ್ಯನೀತಿಗಳು ಇಲ್ಲಿನ ಕಾನೂನು ಪ್ರಕ್ರಿಯೆಗಳನ್ನು ಸರಳೀಕರಿಸುವ ವಿಚಾರದಲ್ಲಿ ನಾವು ಹೊಂದಿರುವ ಬದ್ಧತೆಯನ್ನು ತೋರಿಸುತ್ತಿವೆ. ಪ್ರಮಾಣಪತ್ರ ಆಧಾರಿತ ಅನುಮೋದನಾ ವ್ಯವಸ್ಥೆಯಿಂದ ಆರಂಭಿಸಿ ಜಮೀನು ಪಡೆಯುವ ಪ್ರಕ್ರಿಯೆಯಲ್ಲಿ ಸುಧಾರಣೆಯನ್ನು ತರುವಲ್ಲಿಯವರೆಗೆ ನಾವು ಕೈಗೊಂಡಿರುವ ಪ್ರತಿಯೊಂದು ಕ್ರಮ ಕೂಡ ಕೈಗಾರಿಕಾ ಸ್ನೇಹಿ ವಾತಾವರಣವನ್ನು ಪ್ರೋತ್ಸಾಹಿಸುವ ಉದ್ದೇಶ ಹೊಂದಿದೆ” ಎಂದು ಮುಖ್ಯಮಂತ್ರಿ ಹೇಳಿದರು.

ಹೊಸತನ ಮೂಡಿದೆ: ಎಂ ಬಿ ಪಾಟೀಲ

ಜೈವಿಕ‌ ತಂತ್ರಜ್ಞಾನ ಕುರಿತ ಕರಡು‌ ನೀತಿಯನ್ನು‌ ಬಿಡುಗಡೆ ಮಾಡಿದ ಬೃಹತ್ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ಅವರು, “ಕರ್ನಾಟಕವು ಬಹಳ ಹಿಂದಿನಿಂದಲೂ ಹೊಸತನ ಮತ್ತು ಬೆಳವಣಿಗೆಗೆ ಹೆಸರಾಗಿದೆ. ಸುಲಲಿತ ವಾಣಿಜ್ಯ- ವಹಿವಾಟು ಸೂಚ್ಯಂಕದಲ್ಲಿ ಕರ್ನಾಟಕವು ಮುಂಚೂಣಿ ಸ್ಥಾನದಲ್ಲಿದೆ. ಹಲವು ಸುಧಾರಣೆಗಳನ್ನು ಜಾರಿಗೆ ತಂದ ಪರಿಣಾಮವಾಗಿ ಇದು ಸಾಧ್ಯವಾಗಿದೆ. ದೇಶದ ಐ.ಟಿ. ರಫ್ತಿನಲ್ಲಿ ಕರ್ನಾಟಕದ ಪಾಲು ಶೇಕಡ 40ರಷ್ಟು ಇದೆ” ಎಂದರು.

“ಸರ್ಕಾರವು ಕೈಗೊಳ್ಳಬಹುದಾದ ಕ್ರಮಗಳು ಯಾವುದಿರಬೇಕು ಎಂಬುದನ್ನು ತಿಳಿಯಲು ನಾವು ಉದ್ಯಮದ ಪ್ರಮುಖರು, ಅಕಾಡೆಮಿಕ್ ವಲಯದ ಪ್ರಮುಖರು ಹಾಗೂ ಸರ್ಕಾರದ ಪಾಲುದಾರರ ಜೊತೆ ನಿರಂತರವಾಗಿ ಮಾತುಕತೆ ನಡೆಸುತ್ತೇವೆ” ಎಂದು ಪಾಟೀಲ ಹೇಳಿದರು.

ಐ.ಟಿ. ಮತ್ತು ಬಿ.ಟಿ. ಸಚಿವ ಪ್ರಿಯಾಂಕ್ ಖರ್ಗೆ ಮಾತನಾಡಿ, “ತಂತ್ರಜ್ಞಾನ ಉದ್ಯಮಗಳ ಬೆಳವಣಿಗೆಗೆ ಪೂರಕವಾದ ಕಾರ್ಯಪರಿಸರ ಉಂಟುಮಾಡಲು ಸರ್ಕಾರವು ಆದ್ಯತೆ ಮುಂದುವರಿಸಲಿದೆ” ಎಂದರು

“ಗ್ರಾಮೀಣ ಕರ್ನಾಟಕಕ್ಕೆ ಹೊಸ ಶಿಕ್ಷಣ ವ್ಯವಸ್ಥೆ ರೂಪಿಸುವಲ್ಲಿ ತೊಡಗಿದ್ದೇವೆ. ಕಂಪನಿಗಳು ತಮ್ಮ ಸಿಎಸ್‌ಆರ್‌ ಹಣವನ್ನು ಅದಕ್ಕಾಗಿ ವೆಚ್ಚ ಮಾಡಿದರೆ ಗ್ರಾಮೀಣ ಭಾಗಗಳ ವಿದ್ಯಾರ್ಥಿಗಳು ಕೂಡ ಹೆಚ್ಚು ಸ್ಪರ್ಧಾತ್ಮಕವಾಗಿ ರೂಪುಗೊಳ್ಳಲು ಸಾಧ್ಯವಾಗುತ್ತದೆ” ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.

“ರಾಜ್ಯದ ಮಾಹಿತಿ ತಂತ್ರಜ್ಞಾನ ವಿಷನ್ ಗ್ರೂಪ್‌ನ ಅಧ್ಯಕ್ಷ ಕ್ರಿಸ್ ಗೋಪಾಲಕೃಷ್ಣನ್ ಅವರು, ‘ಕಳೆದ ವರ್ಷದಲ್ಲಿ ಐ.ಟಿ. ಉದ್ಯಮವು ಶೇಕಡ 9ರಷ್ಟು ಬೆಳವಣಿಗೆ ಸಾಧಿಸಿದೆ. ಜಾಗತಿಕ ಆರ್ಥಿಕ ವ್ಯವಸ್ಥೆಯು ಮಂದಗತಿಯಲ್ಲಿದ್ದರೂ, ಮಧ್ಯಮಾವಧಿಯಿಂದ ದೀರ್ಘಾವಧಿಯಲ್ಲಿ ಈ ಉದ್ಯಮವು 350 ಬಿಲಿಯನ್ ಡಾಲರ್‌ ಗಾತ್ರಕ್ಕೆ ಬೆಳೆಯುವ ನಿರೀಕ್ಷೆ ಇದೆ’ ಎಂದರು. ಮಾಹಿತಿ ತಂತ್ರಜ್ಞಾನ ಉದ್ಯಮದಲ್ಲಿ ರಾಜ್ಯವು ಹೊಂದಿರುವ ನಾಯಕತ್ವವನ್ನು ಕಾಯ್ದುಕೊಳ್ಳಬೇಕು ಎಂದಾದರೆ ಅದಕ್ಕೆ ಸೂಕ್ತವಾದ ಕಾರ್ಯತಂತ್ರ ರೂಪಿಸಬೇಕು” ಎಂದು ಅವರು ಸಲಹೆ ನೀಡಿದರು.

ರಾಜ್ಯದ ಉದ್ಯಮ ವಲಯದ ಪ್ರಮುಖರಾದ ಎಎಂಡಿ ಸಂಸ್ಥೆಯ ಕಾರ್ಯನಿರ್ವಾಹಕ ಉಪಾಧ್ಯಕ್ಷ ಮಾರ್ಕ್ ಪೇಪರ್ ಮಾಸ್ಟರ್, ವಿಪ್ರೊ ಸಂಸ್ಥೆಯ ಕಾರ್ಯನಿರ್ವಾಹಕ ಅಧ್ಯಕ್ಷ ರಿಷದ್ ಪ್ರೇಮ್‌ಜಿ, ಕಿರಣ್ ಮಜುಂದಾರ್ ಶಾ, ಸ್ಟಾರ್ಟ್ ಅಪ್ ವಿಷನ್ ಗ್ರೂಪ್ ಅಧ್ಯಕ್ಷ ಪ್ರಶಾಂತ್ ಪ್ರಕಾಶ್ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ‌ಶರ್ಮಾ, ಐಟಿ‌ ಕಾರ್ಯದರ್ಶಿ ಏಕ್ ರೂಪ್‌ ಕೌರ್, ಐಟಿ ನಿರ್ದೇಶಕ ದರ್ಶನ ಮತ್ತಿತರರು ಇದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments