ಬರುವ ದಿನದಲ್ಲಿ ಬೆಳಗಾವಿ ಗಡಿ ಭಾಗದಿಂದ ಒಬ್ಬರು ಮುಖ್ಯಮಂತ್ರಿ ಆಗುತ್ತಾರೆ. ಪೂರ್ವ ದಿಕ್ಕಿನಲ್ಲಿ ಸೂರ್ಯ ಹುಟ್ಟುವುದು ಎಷ್ಟೋ ಸತ್ಯವೋ ಸತೀಶ್ ಜಾರಕಿಹೊಳಿ ಅಣ್ಣ ಸಿಎಂ ಆಗುವುದು ಕೂಡ ಅಷ್ಟೇ ಸತ್ಯ ಶಾಸಕ ವಿಶ್ವಾಸ್ ವೈದ್ಯ ಹೊಸ ಬಾಂಬ್ ಸಿಡಿಸಿದ್ದಾರೆ.
ಬೆಳಗಾವಿ ಜಿಲ್ಲೆ ಯರಗಟ್ಟಿಯಲ್ಲಿ ಮಾತನಾಡಿದ ವಿಶ್ವಾಸ್ ವೈದ್ಯ, ಮುಂದಿನ ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ನಡುವೆ ಮುಸುಕಿನ ಗುದ್ದಾಟ ನಡುವೆಯೇ ಸತೀಶ್ ಜಾರಕಿಹೊಳಿ ಹೆಸರು ತೇಲಿಬಿಟ್ಟಿದ್ದಾರೆ.
“ಸತೀಶ್ ಜಾರಕಿಹೊಳಿ ಪ್ರಭಾವಿ ನಾಯಕರಾಗಿ ಹೊರ ಹೊಮ್ಮುತ್ತಿದ್ದಾರೆ. ಸತೀಶ್ ಜಾರಕಿಹೊಳಿ ಸಿಎಂ ಆಗುವುದು ನೂರಕ್ಕೆ ನೂರರಷ್ಟು ಸತ್ಯ. ಅವರನ್ನು ಮುಖ್ಯಮಂತ್ರಿ ಆಗಿ ನೋಡಲು ನಮ್ಮ ಭಾಗದ ಜನ ಹೇಳುತ್ತಿದ್ದಾರೆ” ಎಂದರು.
ಕೆಲ ಕಾರಣಾಂತರಗಳಿಂದ ಸತೀಶ್ ಜಾರಕಿಹೊಳಿ ಅಸಮಾಧಾನಗೊಂಡಿದ್ದು, ತಮ್ಮ ರಾಜಕೀಯ ವರಸೆ ತೋರಿಸಲು ಮುಂದಾಗಿದ್ದರು. ಮುಂದುವರಿದು ತಾವೂ ಕೂಡ ಮುಖ್ಯಮಂತ್ರಿ ಆಕಾಂಕ್ಷಿ ಎಂದು ಬಹಿರಂಗವಾಗಿಯೇ ಹೇಳಿದ್ದರು. ಈ ಬೆಳವಣಿಗೆ ಬೆನ್ನಲ್ಲೇ ಸತೀಶ್ ಜಾರಕಿಹೊಳಿ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ವಿಶ್ವಾಸ್ ವೈದ್ಯ ಅಚ್ಚರಿ ಹೇಳಿಕೆ ನೀಡಿದ್ದಾರೆ.