ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದಿಂದ ಕೋಟ್ಯಂತರ ರೂ.ಗಳನ್ನು ಲೂಟಿ ಮಾಡಲು ನಕಲಿ ಹುದ್ದೆಯನ್ನೇ ಸೃಷ್ಟಿಸಿರುವುದು ಜಾರಿ ನಿರ್ದೇಶನಾಲಯ (ಇಡಿ)ಅಧಿಕಾರಿಗಳು ನಡೆಸಿರುವ ತನಿಖೆಯಲ್ಲಿ ಪತ್ತೆಯಾಗಿದೆ.
ವಾಲ್ಮೀಕಿ ಅಭಿವೃದ್ಧಿ ನಿಗಮ ಬಹುಕೋಟಿ ಹಗರಣ ಬಗೆದಷ್ಟು ಬಯಲಾಗುತ್ತಿದ್ದು,ಕೋಟ್ಯಂತರ ರೂ.ಗಳ ಹಣವನ್ನು ಲೂಟಿ ಮಾಡಲು ವ್ಯವಸ್ಥಾಪಕ ನಿರ್ದೇಶಕ ಪದ್ಮನಾಭ್ ನಕಲಿ ವ್ಯಕ್ತಿಯನ್ನೇ ಸೃಷ್ಟಿಸಿ ನಿಗಮದಲ್ಲಿ ಹುದ್ದೆ ಸಹ ನೀಡಿರುವುದು ಬೆಳಕಿಗೆ ಬಂದಿದೆ.
ನಕಲಿ ವ್ಯಕ್ತಿಯು 45 ಕೋಟಿ ರೂ ಹಣ ವ್ಯವಹಾರ ಮಾಡಿದ ವಿಚಾರ ಪತ್ತೆಯಾಗುತ್ತಿದ್ದಂತೆ ಇಡಿ ಅಧಿಕಾರಿಗಳು ತನಿಖೆಯನ್ನು ಮತ್ತಷ್ಟು ತೀವ್ರಗೊಳಿಸಿದ್ದಾರೆ
ಲೂಟಿಗಾಗಿ ನಕಲಿ ಹುದ್ದೆ
ಕೋಟ್ಯಂತರ ಹಣ ಲೂಟಿ ಹೊಡೆಯಲು ಪದ್ಮನಾಭ್ ಜ್ಯೂನಿಯರ್ ಅಕೌಂಟೆಂಟ್ ಹುದ್ದೆಯನ್ನು ಸೃಷ್ಟಿಸಿ ಆ ಹುದ್ದೆಗೆ ಶಿವಕುಮಾರ್ ಹೆಸರಿನಲ್ಲಿ ಉದ್ಯೋಗಿಯನ್ನು ನೇಮಕ ಮಾಡಲಾಗಿತ್ತು.
ಜ್ಯೂನಿಯರ್ ಅಕೌಂಟೆಂಟ್ ಎಂದು ಗುರುತಿನ ಪತ್ರ ನೀಡಿ ಹಣಕಾಸು ವ್ಯವಹಾರ ನೋಡಿಕೊಳ್ಳುವ ಅಧಿಕಾರ ನೀಡಲಾಗಿತ್ತು. ಅಸಲಿಗೆ ಶಿವಕುಮಾರ್ ಹೆಸರಿನ ವ್ಯಕ್ತಿಯೇ ಇರಲಿಲ್ಲ.
ಹಣಕ್ಕೆ ಕನ್ನ ಹಾಕಲು ಎಂಜಿ ರಸ್ತೆಯ ಯೂನಿಯನ್ ಬ್ಯಾಂಕ್‌ನಲ್ಲಿ ಫೆ. 21ರಂದು 034123030001619 ಖಾತೆ ತೆರೆಯಲಾಗುತ್ತದೆ.ಈ ಶಿವಕುಮಾರ್ ಖಾತೆಗೆ ನಿಗಮದಿಂದ 187 ಕೋಟಿ ರೂ. ವರ್ಗಾವಣೆಗೆ ಮನವಿ ಹೋಗುತ್ತದೆ.
ಮನವಿ ಮೇರೆಗೆ ನಿಗಮದಿಂದ ಮಾ 5ರಿಂದ ಮೇ 6 ರವರೆಗೆ 187 ಕೋಟಿ ರೂ. ಹಣ ವರ್ಗಾವಣೆಯಾಗುತ್ತದೆ. ಶಿವಕುಮಾರ್ ಖಾತೆಯಿಂದ ಹೈದರಾಬಾದ್‌ನ ಆರ್‌ಬಿಎಲ್ ಬ್ಯಾಂಕ್‌ಗೆ ಹಣ ವರ್ಗಾವಣೆ ಆಗುತ್ತದೆ. ಪದ್ಮನಾಭ್ ಕೃತ್ಯಕ್ಕೆ ಯೂನಿಯನ್ ಬ್ಯಾಂಕ್ ಸಿಬ್ಬಂದಿ ಸಾಥ್ ನೀಡಿದ್ದರಿಂದ ಇಷ್ಟೊಂದು ಹಣವನ್ನು ಲೂಟಿ ಮಾಡಲಾಗಿದೆ.