ಹುಬ್ಬಳ್ಳಿಯಲ್ಲಿ ಶ್ರೀಕಾಂತ್ ಪೂಜಾರಿ ಬಂಧನ ಖಂಡಿಸಿ “ನಾನೊಬ್ಬ ಕರಸೇವಕ, ನನ್ನನ್ನೂ ಬಂಧಿಸಿ…” ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ವಿ.ಸುನಿಲ್ ಕುಮಾರ್ ಅಭಿಯಾನ ಆರಂಭಿಸಿ, ಬೆಂಗಳೂರಿನ ಸದಾಶಿವನಗರ ಪೊಲೀಸ್ ಠಾಣೆ ಎದುರು ಗುರುವಾರ ಬೆಳಿಗ್ಗೆ ಏಕಾಂಗಿಯಾಗಿ ಪ್ರತಿಭಟನೆ ನಡೆಸಿದರು.
‘ನನ್ನನ್ನೂ ಬಂಧಿಸಿ’ ಎಂಬ ಬರಹವುಳ್ಳ ಕರಪತ್ರ ಹಿಡಿದು ಪ್ರತಿಭಟನೆ ನಡೆಸುತ್ತ, ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದರು. ಸ್ಥಳಕ್ಕೆ ಆಗಮಿಸಿದ ಪೊಲೀಸರು ವಿ.ಸುನಿಲ್ ಕುಮಾರ್ ಅವರನ್ನು ವಶಕ್ಕೆ ಪಡೆದುಕೊಂಡರು.
ಈ ವೇಳೆ ಮಾಧ್ಯಮ ಪ್ರತಿನಿಧಿಗಳ ಜೊತೆಗೆ ಮಾತನಾಡಿದ ಅವರು, “ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಿಂದೂ ವಿರೋಧಿ ವರ್ತನೆ ಮುಂದುವರಿಸಿದ್ದಾರೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇತ್ತ ರಾಜ್ಯ ಬಿಜೆಪಿ ಘಟಕ ಈ ಬಗ್ಗೆ ಎಕ್ಸ್ ತಾಣದಲ್ಲಿ ಪೋಸ್ಟ್ ಮಾಡಿ, “ಶಾಂತಿಯುತವಾಗಿ ಪ್ರತಿಭಟಿಸುವವರನ್ನು ಬಂಧಿಸುವುದೇ ಸರ್ವಾಧಿಕಾರಿ ಕಾಂಗ್ರೆಸ್ ಸರ್ಕಾರದ ನಿಜಗುಣ.
ಕರಸೇವಕರನ್ನು ಬಂಧಿಸಿರುವ ವಿರುದ್ಧ ಶಾಂತಿಯುತವಾಗಿ ಪ್ರತಿಭಟಿಸುತ್ತಿದ್ದ ಮಾಜಿ ಸಚಿವರಾದ ಸುನಿಲ್ ಕುಮಾರ್ ಅವರನ್ನು ಏಕಾಏಕಿ ಬಂಧಿಸಿದ ತುಘಲಕ್ ಸರ್ಕಾರಕ್ಕೆ ಧಿಕ್ಕಾರ” ಎಂದು ಟೀಕಿಸಿದೆ.
“ಅಯೋಧ್ಯೆಯಲ್ಲಿ 1992ರಲ್ಲಿ ಭಾಗಿಯಾದ ಕರಸೇವಕರನ್ನು ದ್ವೇಷದ ರಾಜಕಾರಣಕ್ಕಾಗಿ ಬಂಧಿಸುತ್ತಿರುವ ಸಿಎಂ ಸಿದ್ದರಾಮಯ್ಯ ಅವರೇ, ಕರಸೇವೆಯಲ್ಲಿ ಭಾಗಿಯಾದ ಎಲ್ಲ ಕರಸೇವಕರನ್ನು ಬಂಧಿಸುವ ತಾಕತ್ತು ನಿಮ್ಮ ನಿರ್ವೀರ್ಯ ಕಾಂಗ್ರೆಸ್ ಸರ್ಕಾರಕ್ಕೆ ಸರ್ಕಾರಕ್ಕೆ ಇದೆಯೇ” ಎಂದು ಪ್ರಶ್ನಿಸಿದೆ.