ವಿದ್ಯಾರ್ಥಿನಿ ನೇಹಾ ಕೊಲೆ ಖಂಡಿಸಿ ವಿವಿಧ ಮಠಾಧೀಶರು ಹುಬ್ಬಳ್ಳಿಯ ಚನ್ನಮ್ಮ ವೃತ್ತದಲ್ಲಿ ಶನಿವಾರ ಪ್ರತಿಭಟನೆ ನಡೆಸಿ, ಆಕ್ರೋಶ ವ್ಯಕ್ಯಪಡಿಸಿದರು.
ರಾಜ್ಯದಲ್ಲಿ ಮಹಿಳೆಯರಿಗೆ, ವಿದ್ಯಾರ್ಥಿನಿಯರಿಗೆ ರಕ್ಷಣೆ ಸಿಗಬೇಕಿದೆ. ಇಂತಹ ಹೀನ ಕೃತ್ಯ ಎಸಗುವ ಆರೋಪಿಗಳಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಸ್ವಾಮೀಜಿಗಳು ಒಕ್ಕೊರಲಿನಿಂದ ಆಗ್ರಹಿಸಿದರು.
ಪ್ರತಿಭಟನೆಯ ನೇತೃತ್ವ ವಹಿಸಿದ್ದ ಫಕೀರ ದಿಂಗಾಲೇಶ್ವರ ಸ್ವಾಮೀಜಿ ಮಾತನಾಡಿ, “‘ಬಿಜೆಪಿ ಈ ಪ್ರಕರಣವನ್ನು ರಾಜಕೀಯಕ್ಕೆ ಬಳಸಿಕೊಳ್ಳುತ್ತಿರುವುದು ನೀಚತನದ ಪರಮಾವಧಿ. ಮಾನವೀಯತೆ ತಲೆ ತಗ್ಗಿಸುವಂಥ ಕೆಲಸವಾಗಿದೆ” ಎಂದರು.
“ಬಹುಸಂಖ್ಯಾತ ರಾಜಕಾರಣಿಗಳು ನೇಹಾ ಕೊಲೆಯನ್ನು ತಮ್ಮ ಸ್ವಾರ್ಥಕ್ಕೆ ಬಳಸಿಕೊಳ್ಳುತ್ತಿದ್ದಾರೆ. ಇದರ ಹಿಂದೆ ಯಾರೆಲ್ಲ ಇದ್ದಾರೆ ಎಂದು ತನಿಖೆಯಾಗಬೇಕು. ಯಾವುದೇ ಸರ್ಕಾರ ಇಂಥ ಪ್ರಕರಣಗಳನ್ನು ಹಗುರವಾಗಿ ತೆಗೆದುಕೊಳ್ಳಬಾರದು” ಎಂದು ಹೇಳಿದರು.
“ಜವಾಬ್ದಾರಿಯಿಂದ ಸರ್ಕಾರಗ ವರ್ತಿಸಬೇಕು. ಒಂದು ಪಕ್ಷ ಲವ್ ಜಿಹಾದ್ ಎಂದರೆ, ಮತ್ತೊಂದು ಪಕ್ಷ ವೈಯಕ್ತಿಕ ಎನ್ನುತ್ತಿದೆ. ನೀವು ನೈತಿಕವಾಗಿ ನಿಮ್ಮ ನಿಮ್ಮ ಸ್ಥಾನದಲ್ಲಿ ಇರಲು ಯೋಗ್ಯರೇ’ ಎಂದು ಪರೋಕ್ಷವಾಗಿ ಜೋಶಿ ವಿರುದ್ಧ ಕುಟುಕಿದರು.
“ಇಂತಹ ಪ್ರಕರಣಗಳನ್ನು ಯಾರಾದರೂ ಚುನಾವಣೆ ಅಸ್ತ್ರವಾಗಿ ಬಳಸಿಕೊಂಡರೆ, ಅವರ ದಿಕ್ಕು ಬದಲಿಸಬೇಕಾಗುತ್ತದೆ. ಹೇಳಿಕೆ ನೀಡುವ ನಾಯಕರ ಮನೆಯ ಮಗಳಾಗಿದ್ದರೆ ಏನಾಗುತ್ತಿತ್ತು? ವಿದ್ಯಾರ್ಥಿನಿಯ ನಡತೆ ಸರಿ ಇಲ್ಲ ಎನ್ನುವ ಮಾತುಗಳನ್ನು ಕೆಲವರು ಆಡುತ್ತಿದ್ದಾರೆ. ಇದು ಅಕ್ಷಮ್ಯ” ಎಂದು ಗುಡುಗಿದರು.
ಸವಣೂರಿನ ಚನ್ನಬಸವ ಸ್ವಾಮೀಜಿ ಮಾತನಾಡಿ, “ನೇಹಾ ಕೊಲೆ ರಾಜಕೀಯ ಪಕ್ಷಗಳು ತಮ್ಮ ಲಾಭಕ್ಕೆ ಬಳಸಿಕೊಳ್ಳಬಾರದು. ಕಾನೂನು ವ್ಯಾಪ್ತಿಗೆ ಬಿಟ್ಟು ಬಿಡಬೇಕು. ಯಾವುದೇ ವ್ಯಕ್ತಿ ಸ್ವಪ್ರತಿಷ್ಠೆಗೆ ಬಳಸಿಕೊಳ್ಳಬಾರದು. ಆರೋಪಿಗೆ ಶೀಘ್ರ ಶಿಕ್ಷೆ ವಿಧಿಸಬೇಕು” ಎಂದರು.
“ಕಾನೂನಿನ ಎಲ್ಲ ಅಂಶಗಳನ್ನು ಉಪಯೋಗಿಸಿ ಆರೋಪಿಗೆ ಉಗ್ರ ಶಿಕ್ಷೆ ವಿಧಿಸಬೇಕು. ಅಪರಾಧಿಯ ಶಿಕ್ಷೆಗೋಸ್ಕರ ಬಳಸಬೇಕೇ ಹೊರತ, ರಾಜಕೀಯಕ್ಕೆ ಬಳಸಬಾರದು. ಯಾವ ಧರ್ಮದಲ್ಲಿದ್ದರೂ ಅಪರಾಧಿ ಅಪರಾಧಿಯೇ! ಮಾನವೀಯತೆ, ಬಸವ ಸಂಸ್ಕೃತಿ ಎತ್ತಿ ಹಿಡಿಯಲು ನಾವೆಲ್ಲರೂ ಹೋರಾಡಬೇಕು. ರಾಜಕೀಯ ಬಣ್ಣ ಬಳಿಯಬಾರದು” ಎಂದು ವಕೀಲ ಕೋರೆಶೆಟ್ಟರ್ ವಿನಂತಿಸಿದರು.
ಸಿಗ್ಗಾವಿಯ ಸಂಗನ ಬಸವ, ಧಾರವಾಡದ ಮುರುಘಾಮಠದ ಸ್ವಾಮೀಜಿ, ಕುಂದಗೋಳದ ಬಸವಣ್ಣಜ್ಜ ಹಾಗೂ ಹಾವೇರಿ, ಗದಗ, ಧಾರವಾಡ ಭಾಗದ ವಿವಿಧ ಮಠಾಧೀಶರು ಪಾಲ್ಗೊಂಡಿದ್ದರು.