Homeಕರ್ನಾಟಕತುರ್ತಾಗಿ ಉನ್ನತ ಮಟ್ಟದ ಸಭೆ ನಡೆಸಿ, ಬರ ಪರಿಹಾರ ಒದಗಿಸಲು ಒತ್ತಾಯಿಸಿದ್ದೇವೆ: ಸಿಎಂ ಸಿದ್ದರಾಮಯ್ಯ

ತುರ್ತಾಗಿ ಉನ್ನತ ಮಟ್ಟದ ಸಭೆ ನಡೆಸಿ, ಬರ ಪರಿಹಾರ ಒದಗಿಸಲು ಒತ್ತಾಯಿಸಿದ್ದೇವೆ: ಸಿಎಂ ಸಿದ್ದರಾಮಯ್ಯ

ದೆಹಲಿ: ಗೃಹ ಸಚಿವ ಅಮಿತ್ ಶಾ ನೇತೃತ್ವದ ಹೈ ಪವರ್ ಸಮಿತಿ ಸಭೆಯನ್ನು ತುರ್ತಾಗಿ ನಡೆಸಿ, ಶೀಘ್ರ ಬರ ಪರಿಹಾರ ಒದಗಿಸಲು ಪ್ರಧಾನಿ ಮೋದಿ ಅವರಿಗೆ ಒತ್ತಾಯಿಸಿದ್ದೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಪ್ರಧಾನಿ ಮೋದಿ ಅವರ ಭೇಟಿ ಬಳಿಕ ಮಾಧ್ಯಮದವರ ಜತೆ ಮಾತನಾಡಿ ವಿವರ ನೀಡಿದ ಅವರು, “ರಾಜ್ಯಕ್ಕೆ ಬರ ಪರಿಹಾರ ಸಿಗಬೇಕು ಎಂದರೆ ಗೃಹ ಸಚಿವ ಅಮಿತ್ ಶಾ ನೇತೃತ್ವದ ಹೈ ಪವರ್ ಕಮಿತಿ ಸಭೆ ನಡೆಯಬೇಕು. ಆದರೆ ನಾವು ಇದುವರೆಗೂ ಮೂರು ಬಾರಿ ಕೇಂದ್ರಕ್ಕೆ ಮನವಿ ಸಲ್ಲಿಸಿದ್ದರೂ ಪ್ರಾಥಮಿಕ ಸಭೆಯನ್ನೇ ನಡೆಸಿಲ್ಲ. ಆದ್ದರಿಂದ ತುರ್ತಾಗಿ ಸಭೆ ನಡೆಸಿ ಶೀಘ್ರ ಬರ ಪರಿಹಾರ ಬಿಡುಗಡೆಗೊಳಿಸಲು ಸೂಚಿಸಬೇಕು” ಎಂದು ಮನವಿ ಮಾಡಿದ್ದೇವೆ ಎಂದರು.

“ನಾವು ಮುಖ್ಯವಾಗಿ ಐದು ಒತ್ತಾಯಗಳನ್ನು ಮಂಡಸಿ, ಮನವಿ ಮಾಡಿದ್ದೇವೆ. ನಮ್ಮ ಮನವಿಯನ್ನು ಸಮಾಧಾನದಿಂದ ಕೇಳಿಸಿಕೊಂಡು ಪ್ರಧಾನಿ ಅವರು ಸ್ಪಂದಿಸಿದ್ದಾರೆ. ಸ್ಪಂದನೆಗೆ ತಕ್ಕಂತೆ ಶೀಘ್ರ ಪರಿಹಾರವನ್ನು ಅವರಿಂದ ನಿರೀಕ್ಷಿಸಿದ್ದೇವೆ” ಎಂದು ಹೇಳಿದರು.

“ಬರ ಪರಿಹಾರ ಶೀಘ್ರ ಬಿಡುಗಡೆ, ನರೇಗಾ ಕೆಲಸವನ್ನು 150 ದಿನಗಳಗೆ ಹೆಚ್ಚಿಸಬೇಕು, ಭದ್ರಾ ಮೇಲ್ದಂಡೆಗೆ ಕೊಟ್ಟ ಮಾತಿನಂತೆ ಹಣ ಬಿಡುಗಡೆ ಮಾಡಬೇಕು, ಮಹದಾಯಿ ಯೋಜನೆಗೆ ಪರಿಸರ ಕ್ಲಿಯರೆನ್ಸ್ ಶೀಘ್ರವಾಗಿ ನೀಡಬೇಕು ಹಾಗೂ ಮೇಕೆದಾಟು ಯೋಜನೆ ಕಾರ್ಯಾರಂಭಕ್ಕೆ ಅನುಮತಿಸಬೇಕು ಎಂದು ಈ ಐದು ಬೇಡಿಕೆಗಳ ಈಡೇರಿಕೆಗೆ ಮನವಿ ಮಾಡಿದ್ದೇವೆ” ಎಂದು ತಿಳಿಸಿದರು.

“ಬರ ಪರಿಹಾರ ಸಂಬಂಧ ಇವತ್ತಿನವರೆಗೂ ದೊಡ್ಡ ಮೀಟಿಂಗ್ ಮಾಡಿಲ್ಲ. ಇದರಿಂದ ರಾಜ್ಯದ ರೈತರ ಸಂಕಷ್ಟಕ್ಕೆ ಕೇಂದ್ರದಿಂದ ಬರಬೇಕಾದ ಪರಿಹಾರ ಬರುತ್ತಿಲ್ಲ. ಅಮಿತ್ ಶಾ ಅವರಿಗೆ ಸೂಚನೆ ನೀಡಲು ಮನವಿ ಮಾಡಿದ್ದೇವೆ” ಎಂದರು.

“ಮೇಕೆದಾಟು, ಕುಡಿಯುವ ನೀರಿನ ಯೋಜನೆ. ರಾಜ್ಯದ ಗಡಿಯ ಒಳಗೆ ನಿರ್ಮಾಣ ಆಗುವ ಯೋಜನೆ. ತಮಿಳುನಾಡು ಸರ್ಕಾರ ರಾಜಕೀಯ ಕಾರಣಕ್ಕೆ ತಕರಾರು ಮಾಡುತ್ತಿದೆ. ಇದರಿಂದ ತಮಿಳುನಾಡಿಗೆ ಹೆಚ್ಚು ಅನುಕೂಲ. ನಮಗೆ ಕುಡಿಯುವ ನೀರಿನ ಜತೆಗೆ 400 ಮೆಘಾ ವ್ಯಾಟ್ ವಿದ್ಯುತ್ ಉತ್ಪಾದನೆ ಆಗುತ್ತದೆ. ವಿದ್ಯುತ್ ಉತ್ಪಾದನೆ ಬಳಿಕ ಈ ನೀರು ಕೂಡ ತಮಿಳುನಾಡಿಗೇ ಹೋಗುತ್ತದೆ. ಇದರಿಂದಲೂ ಅವರಿಗೆ ಅನುಕೂಲ. ಮೇಕೆದಾಟು ಆದರೆ ಬೆಂಗಳೂರು ಮತ್ತು ರಾಮನಗರ ಜಿಲ್ಲೆಗೆ ಕುಡಿಯುವ ನೀರಿಗೆ ಅನುಕೂಲ ಆಗತ್ತೆ. ಆದ್ದರಿಂದ ಮೇಕೆದಾಟುಗೆ ಬೇಗ ಅನುಮತಿ ಕೊಡಿಸುವಂತೆ ಪ್ರಧಾನಿಗಳ ಗಮನಕ್ಕೆ ತಂದು ಒತ್ತಾಯಿಸಿದ್ದೇವೆ” ಎಂದು ಹೇಳಿದರು.

“ಮಹದಾಯಿ, ಮೇಕೆದಾಟು, ಭದ್ರಾ ಮೇಲ್ಸಂಡೆ ಯೋಜನೆಗಳಿಗಾಗಿ ನಾವು ಸರ್ವ ಪಕ್ಷ ನಿಯೋಗದ ಜತೆ ಕೇಂದ್ರಕ್ಕೆ ಬರಲು ಸಿದ್ದರಿದ್ದೇವೆ. ಆದಷ್ಟು ಬೇಗ ನಿಗಮ ಮಂಡಳಿ ಅಂತಿಮ. ಮೊದಲ ಹಂತದಲ್ಲಿ ಶಾಸಕರು, ನಂತರ ಕಾರ್ಯಕರ್ತರದ್ದು” ಎಂದು ತಿಳಿಸಿದರು.

ಪ್ರಜಾಪ್ರಭುತ್ವ ವಿರೋಧಿ ಕ್ರಮ

“ಸಂಸತ್ತಿನ ಇತಿಹಾದಲ್ಲೇ ಮೊದಲ ಬಾರಿಗೆ 141 ಸಂಸದರನ್ನು ಒಂದೇ ಬಾರಿಗೆ ಅಮಾನತ್ತು ಮಾಡಿದ ಉದಾಹರಣೆ ಇಲ್ಲ. 141 ಮಂದಿ ಸಂಸದರನ್ನು ಅಮಾನತ್ತು ಮಾಡಿರುವುದು ಸರ್ವಾಧಿಕಾರವನ್ನೂ ಮೀರಿದ ಕ್ರಮ. ಇದನ್ನು ಪ್ರಜಾಪ್ರಭುತ್ವ ಅಂತ ಕರೆಯಲು ಸಾಧ್ಯವಿಲ್ಲ. ಚರ್ಚೆ ಪ್ರಜಾಪ್ರಭುತ್ವದ ಮೂಲ. ಒಳ್ಳೆ ಸರ್ಕಾರ ಶಕ್ತಿಯುತ ವಿರೋಧ ಪಕ್ಷ ಇದ್ದಾಗ ಮಾತ್ರ ಸಾಧ್ಯ” ಎಂದರು.

“ಸರ್ಕಾರದ ತಪ್ಪುಗಳನ್ನು ಹೇಳುವಂತಹ ಆರೋಗ್ಯಪೂರ್ಣ ವಾತಾವರಣ ಇರಬೇಕು. ಅವರ ಪಕ್ಷದ ಸಂಸದರನ್ನು ಮಾತ್ರ ಇಟ್ಟುಕೊಂಡು ಸಂಸತ್ ನಡೆಸುವುದು ನಾಚಿಕೆಗೇಡು” ಎಂದು ಟೀಕಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments