Homeದೇಶಪ್ರಧಾನಿ ಮೋದಿಯಿಂದ ಸಂಸದೀಯ ವ್ಯವಸ್ಥೆಗೆ ಅಪಚಾರ: ವಿ ಎಸ್‌ ಉಗ್ರಪ್ಪ ಕಿಡಿ

ಪ್ರಧಾನಿ ಮೋದಿಯಿಂದ ಸಂಸದೀಯ ವ್ಯವಸ್ಥೆಗೆ ಅಪಚಾರ: ವಿ ಎಸ್‌ ಉಗ್ರಪ್ಪ ಕಿಡಿ

ದೇಶದಲ್ಲಿ ಆಡಳಿತ ಪಕ್ಷವು ಪ್ರಜಾಪ್ರಭುತ್ವ ವ್ಯವಸ್ಥೆ ಮೇಲೆ ದಾಳಿ ಮಾಡುತ್ತಿದೆ. ರಾಜ್ಯಸಭೆ ಮತ್ತು ಲೋಕಸಭೆಯ 140ಕ್ಕೂ ಸಂಸದರನ್ನು ಅಮಾನತು ಮಾಡಲಾಗಿದೆ. ಮೂರ್ನಾಲ್ಕು ಜನರ ಮೇಲೆ ಪ್ರಿವಿಲೋಜ್ ಕಮಿಟಿಗೆ ಶಿಫಾರಸ್ಸು ಮಾಡಿದ್ದಾರೆ. ತೃಣಮೂಲ ಕಾಂಗ್ರೆಸ್ ಸಂಸದರನ್ನು ಅನರ್ಹಗೊಳಿಸಿದರೋ ಅದೇ ರೀತಿ ಇವರನ್ನೂ ಅನರ್ಹಗೊಳಿಸಲು ಹುನ್ನಾರ ನಡೆಯುತ್ತಿದೆ ಎಂದು ಮಾಜಿ ಸಂಸದ ವಿ ಎಸ್ ಉಗ್ರಪ್ಪ ಆರೋಪಿಸಿದರು.

ಕೆಪಿಸಿಸಿ ಕಚೇರಿಯಲ್ಲಿ ನಡೆದ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, “ಸರ್ಕಾರದ ವೈಫಲ್ಯವನ್ನು ಪ್ರಶ್ನೆ ಮಾಡುವ ಹಕ್ಕು ಸಂಸದರಿಗೆ ಇರುತ್ತದೆ. ಡಿ.13, 2001ರಲ್ಲಿ ಸದನದ ಹೊರಗೆ ದಾಳಿ ಆಗಿತ್ತು. ಈ ಬಾರಿ ಸದನದ ಒಳಗೆ ದಾಳಿ ಆಗಿದೆ. ಈ ಭದ್ರತಾ ವೈಫಲ್ಯದ ಬಗ್ಗೆ ಪ್ರಧಾನಮಂತ್ರಿಗಳು ಸದನದಲ್ಲಿ ಪ್ರತಿಕ್ರಿಯೆ ನೀಡದೇ, ಪತ್ರಿಕೆಯೊಂದಕ್ಕೆ ಹೇಳಿಕೆ ನೀಡಿ ಸಂಸತ್ತಿನ ಮೇಲೆ ದಾಳಿ ಆಘಾತಕಾರಿ ಎಂದಿದ್ದಾರೆ. ಸದನ ನಡೆಯುವಾಗ ಅವರು ಸದನದಲ್ಲಿ ತಮ್ಮ ಹೇಳಿಕೆ ದಾಖಲಿಸಬೇಕು. ಅದರ ಹೊರತಾಗಿ ಹೊರಗಡೆ ಹೇಳಿಕೆ ನೀಡುವುದು ಸಂಸದೀಯ ವ್ಯವಸ್ಥೆಗೆ ಮಾಡುವ ಅಪಚಾರವಾಗುತ್ತದೆ” ಎಂದು ಟೀಕಿಸಿದ್ದಾರೆ.

“ಇಂತಹವರಿಗೆ ಪಾಸ್ ನೀಡಿದ್ದೇಕೆ ಎಂದು ಚರ್ಚೆ ಮಾಡಬೇಕು ಎಂದು ವಿರೋಧ ಪಕ್ಷದ ಸಂಸದರು ಪ್ರಸ್ತಾಪಕ್ಕೆ ಪ್ರಯತ್ನಕ್ಕೆ ಮುಂದಾದಾಗ ಅವರನ್ನು ಅಮಾನತುಗೊಳಿಸಿದ್ದಾರೆ. ದೇಶದ ಹಿತದೃಷ್ಟಿಯಿಂದ ಸಂಸತ್ ಸದಸ್ಯರು ಈ ಕಾನೂನು ಉಲ್ಲಂಘನೆ ಬಗ್ಗೆ ಪ್ರಸ್ತಾಪ ಮಾಡಿದರೆ ಅವರನ್ನು ಅಮಾನತು ಮಾಡಿದ್ದಾರೆ. ಸ್ಪೀಕರ್ ಅವರು ಯಾವುದಾದರೂ ಸದಸ್ಯರು ಅನುಚಿತ ವರ್ತನೆ, ಕೆಟ್ಟ ಪದಗಳನ್ನು ಬಳಸಿದರೆ ಆ ಸದಸ್ಯರನ್ನು ಅಮಾನತುಗೊಳಿಸುವ ಅಧಿಕಾರವಿದೆ. ಆದರೆ ಈಗ ಅಮಾನತು ಆಗಿರುವ 92 ಸದಸ್ಯರ ಪೈಕಿ ಯಾರಾದರೂ ಈ ರೀತಿ ನಡೆದುಕೊಂಡಿದ್ದಾರಾ” ಎಂದು ಪ್ರಶ್ನಿಸಿದರು.

“2001ರ ದಾಳಿ ನಡೆದ ಸಂದರ್ಭದಲ್ಲಿ ಸೋನಿಯಾ ಗಾಂಧಿ ಅವರು ಈ ದಾಳಿಯ ವಿಚಾರ ಪ್ರಸ್ತಾಪ ಮಾಡಿದ್ದರು. ಆಗ ಅಂದಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಉತ್ತರ ನೀಡಿದ್ದಾರೆ. ಅದು ನಿಜವಾದ ಸಂಸದೀಯ ನಡೆ” ಎಂದು ಹೇಳಿದರು.

“ಈಗಿನ ಪ್ರಧಾನಮಂತ್ರಿಗಳು ಸದನದ ಹೊರಗೆ ಹೇಳಿಕೆ ನೀಡುತ್ತಿರುವಾಗ ಸದನದ ಒಳಗೆ ಯಾಕೆ ಹೇಳಿಕೆ ನೀಡುತ್ತಿಲ್ಲ. ಈ ವಿಚಾರವಾಗಿ ಗೃಹ ಸಚಿವರು ಯಾಕೆ ಹೇಳಿಕೆ ನೀಡುತ್ತಿಲ್ಲ. ಇದಕ್ಕೆ ಕಾರಣ ಅವರ ವೈಫಲ್ಯ. ಇದರ ನೇರಹೊಣೆಯನ್ನು ಪ್ರಧಾನಮಂತ್ರಿ ಹಾಗೂ ಗೃಹಸಚಿವರು ಹೊರಬೇಕು. ಸಂಸತ್ತಿನ ಐದು ಭದ್ರತಾ ವ್ಯವಸ್ಥೆ ದಟಿ ದಾಳಿ ನಡೆದಿರುವುದರ ಹೊಣೆಯನ್ನು ಸ್ಪೀಕರ್ ಅವರು ಹೊರಬೇಕಾಗುತ್ತದೆ” ಎಂದು ತಿಳಿಸಿದರು.

“ಇದಕ್ಕೆ ಮೂಲವಾಗಿರುವ ಮೈಸೂರಿನ ಸಂಸದರು ಈ ದಾಳಿಕೋರರ ಬಗ್ಗೆ ಯಾವುದೇ ಹೇಳಿಕೆ ನೀಡದೆ ತಲೆಮರೆಸಿಕೊಂಡಿದ್ದಾರೆ. ಅವರ ಈ ನಡೆ ಅವರು ತಪ್ಪಿತಸ್ಥರು ಎಂಬುದನ್ನು ಸಾಬೀತುಪಡಿಸುತ್ತಿದೆ. ಮೈಸೂರು ಸಂಸದ, ಪ್ರಧಾನಮಂತ್ರಿ ಹಾಗೂ ಗೃಹಸಚಿವರು ಹಾಗೂ ಸ್ಪೀಕರ್ ಅವರ ರಾಜೀನಾಮೆ ನೀಡಬೇಕು ಎಂದು ರಾಷ್ಟ್ರಪತಿಗಳ ಗಮನ ಸೆಳೆಯಲು ಬಯಸುತ್ತೇವೆ” ಎಂದರು.

ಕಾರ್ಯಾಧ್ಯಕ್ಷ ಬಿ ಎನ್ ಚಂದ್ರಪ್ಪ ಮಾತನಾಡಿ, “ಬಿಜೆಪಿಯವರಿಗೆ ಸಂವಿಧಾನದ ಬಗ್ಗೆ ಅರಿವಿಲ್ಲ ಎಂದು ಎಲ್ಲರಿಗೂ ಗೊತ್ತಿದೆ. ಪವಿತ್ರವಾದ ಸಂಸತ್ತನ್ನು ಬಿಜೆಪಿಯ ಕಚೇರಿಯಂತೆ ಬಳಸುತ್ತಿರುವುದನ್ನು ದೇಶದ ಪ್ರತಿಯೊಬ್ಬ ಪ್ರಜೆ ಖಂಡಿಸಬೇಕು. ಇಂತಹ ಪ್ರಧಾನಿಯನ್ನು ದೇಶ ಪಡೆದಿರುವುದು ದೇಶದ ದೌರ್ಭಾಗ್ಯ.
ಸಂಸತ್ ಸದಸ್ಯರಿಗೆ ಭದ್ರತೆ ನೀಡಲಾಗದ ಸರ್ಕಾರ ಇದು” ಎಂದು ಟೀಕಿಸಿದರು.

“2 ಕೋಟಿ ಉದ್ಯೋಗವಿಲ್ಲ, ಖಾತೆಗಳಿಗೆ 15 ಲಕ್ಷ ಹಣವೂ ಇಲ್ಲ. ಯಾರಿಗೆಲ್ಲ ಅವರ ಮಾತಿನಂತೆ ಹಣ ಬಂದಿದೆ, ಉದ್ಯೋಗ ಸಿಕ್ಕಿದೆ ಅವರು ಬಿಜೆಪಿಗೆ ಮತ ಹಾಕಲಿ. ನಿರುದ್ಯೋಗದಿಂದ ಬೇಸತ್ತು ಬಿಜೆಪಿ ಬೆಂಗಲಿಗರೇ ಸಂಸತ್ ಮೇಲೆ ದಾಳಿ ಮಾಡಿದ್ದಾರೆ. ಮೋದಿ ಅವರ ಮೇಲೆ ಅಪಾರ ನಿರೀಕ್ಷೆ ಹೊಂದಿದ್ದರೋ ಅವರಿಗೆ ಭ್ರಮನಿರಸನಾಗಿ ಮೈಸೂರು ಸಂಸದ ಪ್ರತಾಪ್ ಸಿಂಹ್ ಅವರ ಪಾಸ್ ಮೂಲಕ ಪ್ರಧಾನಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ” ಎಂದರು.

ಹೆಚ್ ಎಂ ರೇವಣ್ಣ ಮಾತನಾಡಿ, “ದೇಶದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಕಗ್ಗೊಲೆ ಮಾಡಲಾಗುತ್ತಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸ್ವಾಯತ್ತ ಸಂಸ್ಥೆಗಳನ್ನು ತಮ್ಮ ನಿಯಂತ್ರಣಕ್ಕೆ ತೆಗೆದುಕೊಳ್ಲುವ ಕಾರ್ಯ ನಡೆಯುತ್ತಿದೆ. ಆ ಮೂಲಕ ದೇಶದಲ್ಲಿ ಏಕಚಕ್ರಾಧಿಪತ್ಯ ನಡೆಯುತ್ತಿದೆ. ಸಂಸತ್ತನ್ನು ನಿಷ್ಕ್ರಿಯ ಮಾಡಿ ಜನಪ್ರತಿನಿಧಿಗಳ ಪ್ರಶ್ನೆ ಹತ್ತಿಕ್ಕುವ ಕೆಲಸ ಆಗುತ್ತಿದೆ” ಎಂದು ಆರೋಪಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments