ಬೆಂಗಳೂರು ನಗರದ ಬಳ್ಳಾರಿ ರಸ್ತೆಯ ಪ್ಯಾಲೇಸ್ ಗುಟ್ಟಹಳ್ಳಿ ಜಂಕ್ಷನ್ನಲ್ಲಿ ನಿಗದಿತ ಮಾನದಂಡಗಳನ್ನು ಪಾಲಿಸದೆ ಅವೈಜ್ಞಾನಿಕವಾಗಿ ವಿದ್ಯುತ್ ಕಂಬಗಳನ್ನು ಅಳವಡಿಸಿರುವ ಹಿನ್ನೆಲೆಯಲ್ಲಿ ಸಂಬಂಧಪಟ್ಟ ಯೋಜನಾ ಸಮಾಲೋಚಕರು ಹಾಗೂ ಗುತ್ತಿಗೆದಾರರಿಗೆ ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ಒಟ್ಟು ₹3 ಲಕ್ಷ ದಂಡ ವಿಧಿಸಿದೆ.
ಜುಲೈ 31ರಂದು ಬಳ್ಳಾರಿ ರಸ್ತೆಯಲ್ಲಿ ಸಂಚರಿಸುತ್ತಿದ್ದ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅವರು ಪ್ಯಾಲೇಸ್ ಗುಟ್ಟಹಳ್ಳಿ ಜಂಕ್ಷನ್ನಲ್ಲಿ ನಡೆಯುತ್ತಿದ್ದ ವಿದ್ಯುತ್ ಕಂಬಗಳ ಅಳವಡಿಕೆ ಕಾಮಗಾರಿಯನ್ನು ಪರಿಶೀಲಿಸಿದ್ದರು. ಈ ವೇಳೆ ವಿದ್ಯುತ್ ಕಂಬಗಳ ನಡುವಿನ ಅಂತರವನ್ನು ಯಾವುದೇ ನಿಗದಿತ ಮಾನದಂಡವಿಲ್ಲದೆ ಅಳವಡಿಸುತ್ತಿರುವುದು ಸಚಿವರ ಗಮನಕ್ಕೆ ಬಂದಿತ್ತು.
ಕಾಮಗಾರಿಯನ್ನು ನಿಯಮಾನುಸಾರ ಹಾಗೂ ವೈಜ್ಞಾನಿಕವಾಗಿ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದ್ದ ಸಚಿವರು, ಈ ಕುರಿತು ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದರು.
ಸಚಿವರ ಸೂಚನೆ ಹಿನ್ನೆಲೆಯಲ್ಲಿ ಸೆಪ್ಟೆಂಬರ್ 3ರಂದು ಜಿಬಿಎ ವ್ಯಾಪ್ತಿಯ ಸಂಬಂಧಪಟ್ಟ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದರು. ಈ ವೇಳೆ ವಿದ್ಯುತ್ ಕಂಬಗಳನ್ನು ನಿಗದಿತ ವಿನ್ಯಾಸ ಹಾಗೂ ತಾಂತ್ರಿಕ ವಿವರಣೆಗೆ ವಿರುದ್ಧವಾಗಿ ಅಳವಡಿಸಿರುವುದು ಕಂಡುಬಂದಿದೆ.
ಈ ಹಿನ್ನೆಲೆಯಲ್ಲಿ ಸಂಬಂಧಪಟ್ಟ ಸಹಾಯಕ ಕಾರ್ಯಪಾಲಕ ಅಭಿಯಂತರರು ಹಾಗೂ ಸಹಾಯಕ ಅಭಿಯಂತರರಿಗೆ ಸೆಪ್ಟೆಂಬರ್ 4ರಂದು ಕಾರಣ ಕೇಳಿ ನೋಟಿಸ್ ಜಾರಿ ಮಾಡಲಾಗಿದೆ.
ಕಾಮಗಾರಿಯ ಗುಣಮಟ್ಟ ಹಾಗೂ ನಿಯಮಾನುಸರಣೆಯಲ್ಲಿ ಲೋಪ ಕಂಡುಬಂದ ಹಿನ್ನೆಲೆಯಲ್ಲಿ ಯೋಜನಾ ಸಮಾಲೋಚಕರಾದ ಮೆ|| ಸಿದ್ಧಿಶಕ್ತಿ ಪ್ರೈ. ಲಿ. ಅವರಿಗೆ ₹1 ಲಕ್ಷ ಹಾಗೂ ಗುತ್ತಿಗೆದಾರರಾದ ಮೆ|| ಜೆ.ಎಂ.ಸಿ. ಕನ್ಸ್ಟ್ರಕ್ಷನ್ಸ್ ಅವರಿಗೆ ₹2 ಲಕ್ಷ ದಂಡ ವಿಧಿಸಲಾಗಿದೆ.
ಅವೈಜ್ಞಾನಿಕವಾಗಿ ಹಾಗೂ ನಿಗದಿತ ತಾಂತ್ರಿಕ ಮಾನದಂಡಗಳಿಗೆ ವಿರುದ್ಧವಾಗಿ ಅಳವಡಿಸಿರುವ ವಿದ್ಯುತ್ ಕಂಬಗಳನ್ನು ತಕ್ಷಣವೇ ಸರಿಪಡಿಸಿ, ನಿಗದಿತ ಮಾನದಂಡಗಳಂತೆ ಮರುಅಳವಡಿಸುವಂತೆ ಸಂಬಂಧಪಟ್ಟವರಿಗೆ ಜಿಬಿಎ ಕಟ್ಟುನಿಟ್ಟಿನ ಸೂಚನೆ ನೀಡಿದೆ.
ನಗರದ ಪ್ರಮುಖ ರಸ್ತೆಗಳು ಹಾಗೂ ಮೂಲಸೌಕರ್ಯ ಕಾಮಗಾರಿಗಳಲ್ಲಿ ಗುಣಮಟ್ಟ, ಸುರಕ್ಷತೆ ಮತ್ತು ತಾಂತ್ರಿಕ ಮಾನದಂಡಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಜಿಬಿಎ ಕ್ರಮ ಕೈಗೊಳ್ಳಲಿದೆ. ನಿಯಮ ಉಲ್ಲಂಘಿಸುವವರ ವಿರುದ್ಧ ಮುಂದೆಯೂ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಪ್ರಾಧಿಕಾರ ತಿಳಿಸಿದೆ.


