ವಿಶ್ವಗುರು ಬಸವಣ್ಣನವರನ್ನು ಕರ್ನಾಟಕದ ಸಾಂಸ್ಕೃತಿಕ ನಾಯಕರೆಂದು ಘೋಷಿಸಿದ ಚಾರಿತ್ರಿಕ ಸಂಗತಿಗಾಗಿ 160 ಮಂದಿ ಶರಣ ಸ್ವಾಮೀಜಿಗಳು, ಗುರುಗಳು ಹಾಗೂ ವೀರಶೈವ- ಲಿಂಗಾಯತ ಮಠಾಧೀಶರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಅಭೂತಪೂರ್ವ ಸನ್ಮಾನ ಮಾಡಿದರು.
ವಿಶ್ವ ಬಸವ ಧರ್ಮ ಟ್ರಸ್ಟ್, ಅನುಭವ ಮಂಟಪ – ಬಸವಕಲ್ಯಾಣ, ಅಖಿಲ ಭಾರತ ವೀರಶೈವ-ಲಿಂಗಾಯತ ಮಹಾಸಭಾ ಹಾಗೂ ಲಿಂಗಾಯತ ಮಠಾಧಿಪತಿಗಳ ಒಕ್ಕೂಟ ಬಸವಕಲ್ಯಾಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಗುರುವಾರ ಸಿದ್ದರಾಮಯ್ಯ ಅವರು ಬೃಹತ್ ಸನ್ಮಾನ ಸ್ವೀಕರಿಸಿದರು.
ಹುಬ್ಬಳ್ಳಿಯ ಮೂರುಸಾವಿರ ಮಠದ ಗುರುಸಿದ್ದರಾಜಯೋಗೀಂದ್ರ ಸ್ವಾಮೀಜಿ , ಬಸವಜಯಮೃತ್ಯುಂಜಯ ಸ್ವಾಮೀಜಿ, ಡಾ.ಮಾತೆ ಗಂಗಾದೇವಿ, ಸಿದ್ದರಾಮೇಶ್ವರ ಸ್ವಾಮೀಜಿ, ರಾಜೇಶ್ವರ ಶಿವಾಚಾರ್ಯ ಶ್ರೀ ಸೇರಿ 160 ಮಂದಿ ಶರಣ ಗುರುಗಳು ಭಾಗವಹಿಸಿದ್ದರು.
ಅಖಿಲ ಭಾರತ ವೀರಶೈವ ಮಹಾಸಭಾದ ಅಧ್ಯಕ್ಷರು ಹಾಗೂ ಶಾಸಕ ಡಾ. ಶಾಮನೂರು ಶಿವಶಂಕರಪ್ಪ ಕಾರ್ಯಕ್ರಮ ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ಬೀದರ್ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ್ ಖಂಡ್ರೆ ವಹಿಸಿದ್ದರು.
ಬಸವ ತತ್ವದ ಆಧಾರದಲ್ಲಿ ಭಾಗ್ಯಗಳು
ಅನುಭವ ಮಂಟಪದ ಅಧ್ಯಕ್ಷ ನಾಡೋಜ ಡಾ.ಬಸವಲಿಂಗ ಪಟ್ಟದೇವರು ಮಾತನಾಡಿ, “ಸರ್ಕಾರಿ ಕಚೇರಿಗಳಲ್ಲಿ ಬಸವಣ್ಣನವರ ಭಾವಚಿತ್ರ ಕಡ್ಡಾಯಗೊಳಿಸಿದ್ದು, ಮಹಿಳಾ ವಿವಿಗೆ ಅಕ್ಕ ಮಹಾದೇವಿ ಹೆಸರಿಟ್ಟಿದ್ದು, ಬಸವ ತತ್ವದ ಆಧಾರದಲ್ಲಿ ಅನ್ನ ಭಾಗ್ಯ ಸೇರಿ ಹಲವು ಭಾಗ್ಯಗಳನ್ನು ಕೊಟ್ಟಿದ್ದೇನೆ ಎಂದು ಸಾರಿದವರು ಸಿದ್ದರಾಮಯ್ಯ” ಎಂದು ಬಣ್ಣಿಸಿದರು.
“ಅನುಭವ ಮಂಟಪದಲ್ಲಿ 12 ನೇ ಶತಮಾನದಲ್ಲಿ ಲಿಂಗಾಯತ ಸ್ವತಂತ್ರ ಧರ್ಮ ಎಂದು ಬಸವಣ್ಣನವರು ಘೋಷಿಸಿದರು. ಬಸವಣ್ಣನವರು ಮಾಡಿದ ಘೋಷಣೆಗೆ ಆಧುನಿಕ ಕರ್ನಾಟಕದಲ್ಲಿ ಲಿಂಗಾಯತ ಧರ್ಮ ಸ್ವತಂತ್ರ ಧರ್ಮ ಎಂದು ಮುದ್ರೆ ಒತ್ತಿದ ಏಕೈಕ ನಾಯಕ ಬಸವಣ್ಣನವರ ಅಪ್ಪಟ ಅನುಯಾಯಿ ಸಿದ್ದರಾಮಯ್ಯ” ಎಂದರು.
ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಗೌರವಾಧ್ಯಕ್ಷ ಗೋ.ರೂ.ಚ ಮಾತನಾಡಿ, “ಸಮಾಜದಲ್ಲಿ ಧರ್ಮ, ದೇವರ ಹೆಸರಲ್ಲಿ ಅಂದಶ್ರದ್ದೆ, ದ್ವೇಷದ ವಾತಾವರಣ ಹೆಚ್ಚಿಸುತ್ತಿರುವುದು ಬೇಸರದ ಸಂಗತಿ. ಸಿದ್ದರಾಮಯ್ಯ ಅವರು ನಾಡಿನ ಇತಿಹಾಸದಲ್ಲಿ ಅಪೂರ್ವ ಘೋಷಣೆ ಮಾಡಿ ಬಸವಣ್ಣನವರನ್ನು ಕರ್ನಾಟಕದ ಸಾಂಸ್ಕೃತಿಕ ನಾಯಕ ಎಂದು ಘೋಷಿಸಿದರು” ಎಂದರು.
“ಬಸವ ಸಿದ್ದಾಂತದಲ್ಲಿ ಸಿದ್ದರಾಮಯ್ಯ ಅವರು ಇಟ್ಟಿರುವ ಬದ್ಧತೆ ಕಾರಣಕ್ಕೆ, ಸಾಮಾಜಿಕ ನ್ಯಾಯದ ಪರ ಇವರು ಬದ್ಧತೆ ಕಾರಣಕ್ಕೆ ಸಿದ್ದರಾಮಯ್ಯ ಅವರ ದಿಟ್ಟತನಕ್ಕಾಗಿ ನಮಗೆ ಇವರ ಬಗ್ಗೆ ಹೆಮ್ಮೆ ಇದೆ” ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.