ಚಂದನವನದ ಸ್ಟಾರ್ ನಟ ಯಶ್ ಅವರ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಅವರಿಗೆ ಶುಭಕೋರುವ ಬ್ಯಾನರ್ ಕಟೌಟ್ ಕಟ್ಟುವಾಗ ವಿದ್ಯುತ್ ಸ್ಪರ್ಶಿಸಿ ಮೂವರು ಯುವಕರು ಮೃತಪಟ್ಟ ಘಟನೆಗೆ ಸರ್ಕಾರ ಪರಿಹಾರ ಘೋಷಿಸಿದೆ.
ಮೃತಪಟ್ಟವರ ಕುಟುಂಬಕ್ಕೆ ತಲಾ 2 ಲಕ್ಷ ರೂ. ಪರಿಹಾರ ಮತ್ತು ಗಾಯಾಳುಗಳಿಗೆ ತಲಾ 50 ಸಾವಿರ ರೂ. ಪರಿಹಾರವನ್ನು ಸರ್ಕಾರ ಘೋಷಿಸಿದೆ ಎಂದು ಗದಗ ಜಿಲ್ಲಾ ಉಸ್ತುವಾರಿ ಸಚಿವ ಹೆಚ್ ಕೆ ಪಾಟೀಲ್ ತಿಳಿಸಿದ್ದಾರೆ. ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಕೂಡ ಟ್ವೀಟ್ ಮಾಡಿದ್ದಾರೆ.
ಟ್ವೀಟ್‌ನಲ್ಲಿ, “ಗದಗ ಜಿಲ್ಲೆ ಲಕ್ಷ್ಮೇಶ್ವರ ತಾಲೂಕಿನ ಸೂರಣಗಿ ಗ್ರಾಮದಲ್ಲಿ ಫ್ಲೆಕ್ಸ್ ಕಟ್ಟುವ ವೇಳೆ ವಿದ್ಯುತ್ ಪ್ರವಹಿಸಿ ಮೂವರು ಯುವಕರು ಮೃತಪಟ್ಟ ಸುದ್ದಿ ತಿಳಿದು ಬೇಸರವಾಯಿತು. ಮೃತರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸುತ್ತೇನೆ. ಬದುಕಿ ಬಾಳಬೇಕಿದ್ದ ಹುಡುಗರು ಹೀಗೆ ಅಚಾತುರ್ಯದಿಂದ ಸಾವಿಗೀಡಾಗಿದ್ದಾರೆ. ಅವರನ್ನು ನಂಬಿದ್ದ ಕುಟುಂಬವೀಗ ಸಂಕಷ್ಟಕ್ಕೆ ಸಿಲುಕಿದ್ದು, ಆ ಕುಟುಂಬಗಳಿಗೆ ನೆರವಾಗುವ ದೃಷ್ಟಿಯಿಂದ ತಲಾ 2 ಲಕ್ಷ ರೂಪಾಯಿಗಳ ಪರಿಹಾರ ನೀಡುವಂತೆ ಆದೇಶಿಸಿದ್ದೇನೆ” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಮೃತಪಟ್ಟ ಅಭಿಮಾನಿಗಳ ಮನೆಗೆ ಇಂದು (ಜ.8) ಸಂಜೆ 4 ಗಂಟೆಗೆ ನಟ ಯಶ್ ಭೇಟಿ ನೀಡಲಿದ್ದಾರೆ ಎಂದು ವರದಿಯಾಗಿದೆ.
ಕನ್ನಡ ಚಿತ್ರರಂಗದ ನಟ ರಾಕಿಂಗ್ ಸ್ಟಾರ್ ಯಶ್ ಜನ್ಮದಿನ(ಜ.8) ಹಿನ್ನೆಲೆ ಹುಟ್ಟಹಬ್ಬದ ಶುಭಾಶಯ ಕೋರುವ 20 ಅಡಿ ಎತ್ತರದ ಬ್ಯಾನರ್ ಕಟ್ಟುವಾಗ ವಿದ್ಯುತ್ ಪ್ರವಹಿಸಿ ಮೂವರು ಅಭಿಮಾನಿಗಳು ಮೃತಪಟ್ಟ ಘಟನೆ ಗದಗ ಜಿಲ್ಲೆ ಲಕ್ಷ್ಮೇಶ್ವರ ತಾಲೂಕಿನ ಸೂರಣಗಿ ಗ್ರಾಮದಲ್ಲಿ ನಡೆದಿದೆ.
ಹನಮಂತ ಮಜ್ಜುರಪ್ಪ ಹರಿಜನ (21), ಮುರಳಿ ನೀಲಪ್ಪ ನಡವಿನಮನಿ (20) ಹಾಗೂ ನವೀನ್ ಗಾಜಿ (19) ಮೃತ ಯುವಕರು ಎಂದು ಗುರುತಿಸಲಾಗಿದೆ. ಘಟನೆಯಲ್ಲಿ ಮಂಜುನಾಥ್ ಹರಿಜನ, ದೀಪಕ ಹರಿಜನ, ಪ್ರಕಾಶ ಮ್ಯಾಗೇರಿ ಎಂಬ ಮೂವರಿಗೆ ಗಂಭೀರ ಗಾಯಗಳಾಗಿವೆ. ಕಟೌಟ್‌ನಲ್ಲಿ ಕಬ್ಬಿಣದ ಫ್ರೇಮ್ ಇದ್ದಿದ್ದರಿಂದ ಅದನ್ನು ಎಲ್ಲರೂ ಒಟ್ಟಿಗೆ ಸೇರಿ ಮೇಲೆತ್ತುವಾಗ ವಿದ್ಯುತ್ ತಂತಿ ತಗುಲಿ ಈ ದುರಂತ ಸಂಭವಿಸಿದೆ.