ಮೂವರು ಬಿಜೆಪಿ ಸಂಸದರು ಕಾಂಗ್ರೆಸ್ ಸೇರಲು ಬಯಸಿದ್ದು, ನಮ್ಮೊಂದಿಗೆ ಸಂಪರ್ಕದಲ್ಲಿದ್ದಾರೆ ಎಂದು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಹೇಳಿದರು.
ಸರ್ಕಾರದ ಗ್ಯಾರಂಟಿ ಸಮಾವೇಶದಲ್ಲಿ ಭಾಗವಹಿಸಲು ಕಲಬುರಗಿ ನಗರಕ್ಕೆ ಬಂದಿರುವ ಅವರು ಐವಾನ್ ಇ ಶಾಹಿ ಅತಿಥಿ ಗೃಹದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.
“ಕಾಂಗ್ರೆಸ್ ಸೇರುವ ಸಂಸದರು ಯಾರು ಎಂಬುದನ್ನು ಸದ್ಯಕ್ಕೆ ಬಹಿರಂಗಪಡಿಸಲಾಗದು. ಇನ್ನೂ ಹಲವು ಮುಖಂಡರು ಪಕ್ಷಕ್ಕೆ ಸೇರ್ಪಡೆಯಾಗಲಿದ್ದಾರೆ” ಎಂದರು.
ಜಯದೇವ ಆಸ್ಪತ್ರೆಯ ನಿವೃತ್ತ ನಿರ್ದೇಶಕ ಡಾ.ಸಿ ಎನ್ ಮಂಜುನಾಥ್ ಅವರು ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಸ್ಪರ್ಧಿಸುವ ಬಗ್ಗೆ ಪ್ರತಿಕ್ರಿಯಿಸಿ, ಎಚ್ ಡಿ ದೇವೇಗೌಡ ಹಾಗೂ ಕುಮಾರಸ್ವಾಮಿ, ಅವರ ಮನೆಯವರು, ಅವರ ಮಗನ ಸ್ಪರ್ಧೆಯನ್ನೂ ನೋಡಿದ್ದೇವೆ. ಡಿ ಕೆ ಸುರೇಶ್ ಬರೀ ಸಂಸದ ಅಲ್ಲ. ಪಂಚಾಯಿತಿ ಸದಸ್ಯರಾಗಿಯೂ ಕೆಲಸ ಮಾಡಿದ್ದಾರೆ. ಅವರಿಗೆ ಚುನಾವಣೆ ಎದುರಿಸುವುದು ಗೊತ್ತಿದೆ” ಎಂದರು.
“ಸಿ ಎನ್ ಮಂಜುನಾಥ್ ಅವರನ್ನು ನಮ್ಮ ಸರ್ಕಾರವೂ ಜಯದೇವದಲ್ಲಿ ನಿರ್ದೇಶಕರನ್ನಾಗಿ ಮುಂದುವರೆಸಿತ್ತು. ಅವರು ಸ್ಪರ್ಧಿಸಿದರೆ ಸ್ವಾಗತ. ನಮ್ಮ ಗ್ಯಾರಂಟಿಗಳನ್ನು ಬಿಜೆಪಿಯವರು ನಕಲು ಮಾಡಿ ಮೋದಿ ಗ್ಯಾರಂಟಿ ಎಂದು ಕರೆದುಕೊಳ್ಳುತ್ತಿದ್ದಾರೆ” ಎಂದು ಕುಟುಕಿದರು.
ಬಿಜೆಪಿಯ ಡಿ ವಿ ಸದಾನಂದಗೌಡ ಅವರು ಬೆಂಗಳೂರಿನ ಕ್ಷೇತ್ರವೊಂದರಿಂದ ಕಾಂಗ್ರೆಸ್ ಟಿಕೆಟ್ ಮೂಲಕ ಸ್ಪರ್ಧಿಸುವ ಸಾಧ್ಯತೆ ಇದೆಯಾ ಎಂದು ಪತ್ರಕರ್ತರು ಪ್ರಶ್ನಿಸಿದಾಗ, ಶಿವಕುಮಾರ್ ಈ ಬಗ್ಗೆ ಯಾವುದೇ ಹೇಳಿಕೆ ನೀಡಲಿಲ್ಲ.